*10 ಲಕ್ಷ ಬ್ಯಾರಲ್ ಖರೀದಿಗೆ ಎಂಆರ್‌ಪಿಎಲ್ ಟೆಂಡರ್ ಆಹ್ವಾನ
*20 ಲಕ್ಷ ಬ್ಯಾರಲ್ ಕಚ್ಚಾ ತೈಲ ಖರೀದಿಸಿದ ಎಚ್‌ಪಿಸಿಎಲ್
ನವದೆಹಲಿ (ಮಾ. 18): ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೋರೇಷನ್ (ಐಒಸಿ), ರಷ್ಯಾದಿಂದ ಅಗ್ಗದ ದರದಲ್ಲಿ 30 ಲಕ್ಷ ಬ್ಯಾರಲ್ ಕಚ್ಚಾ ತೈಲ ಖರೀದಿಸಿದ ಬೆನ್ನಲ್ಲೇ, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಡೆಡ್ (ಎಚ್‌ಪಿಸಿಎಲ್) ಸಹ 20 ಲಕ್ಷ ಬ್ಯಾರಲ್ ತೈಲ ಖರೀದಿ ಮಾಡಿದೆ. ಮತ್ತೊಂದೆಡೆ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ (ಎಂಆರ್‌ಪಿಎಲ್) ಸಹ 10 ಲಕ್ಷ ಬ್ಯಾರಲ್ ಖರೀದಿ ಮಾಡಲು ಟೆಂಡರ್ ಆಹ್ವಾನಿಸಿದೆ.
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ನಡೆಸಿದ ನಂತರ ಬಹಳಷ್ಟುಪಾಶ್ಚಿಮಾತ್ಯ ರಾಷ್ಟ್ರಗಳ ರಷ್ಯಾದ ತೈಲ ಖರೀದಿಯ ಮೇಲೆ ನಿರ್ಬಂಧ ವಿಧಿಸಿವೆ. ಇದು ರಷ್ಯಾದ ಕಚ್ಚಾ ತೈಲ ಅಗ್ಗದ ಬೆಲೆಗೆ ದೊರೆಯುವಂತಹ ಅವಕಾಶಕ್ಕೆ ಎಡೆ ಮಾಡಿಕೊಟ್ಟಿದೆ. ಇದರ ಭರಪೂರ ಲಾಭ ಪಡೆದುಕೊಳ್ಳಲು ಮುಂದಾಗಿರುವ ಭಾರತದ ಕಂಪನಿಗಳು ರಷ್ಯಾದಿಂದ ಅಗ್ಗದ ದರದಲ್ಲಿ ತೈಲ ಖರೀದಿ ಮಾಡುತ್ತಿವೆ.
ಬ್ರೆಂಟ್ ಕಚ್ಚಾ ತೈಲಕ್ಕೆ ಹೋಲಿಸಿದರೆ ಶೇ.20-25ರಷ್ಟುರಿಯಾಯಿತಿ ದರದಲ್ಲಿ ಐಒಸಿ ಕಳೆದ ವಾರ ರಷ್ಯಾದಿಂದ 30 ಲಕ್ಷ ಬ್ಯಾರಲ್ ಕಚ್ಚಾ ತೈಲ ಖರೀದಿಸಿದೆ. ಜೊತೆಗೆ ಒಎನ್‌ಜಿಸಿ ಸಹ 10 ಲಕ್ಷ ಬ್ಯಾರಲ್ ಖರೀದಿಗೆ ಟೆಂಡರ್ ಸಲ್ಲಿಸಿದೆ. ಆದರೆ ಅಮೆರಿಕದಲ್ಲಿ ತನ್ನ ದೊಡ್ಡ ಉದ್ಯಮ ಪಾಲು ಹೊಂದಿರುವ ರಿಲಯನ್ಸ್, ರಷ್ಯಾದ ಇಂಧನವನ್ನು ಖರೀದಿಸದೇ ಇರಬಹುದು ಎನ್ನಲಾಗಿದೆ.
ಇದನ್ನೂ ಓದಿ: SBI Customers Alert:ಮಾರ್ಚ್ 31ರೊಳಗೆ ನೀವು ಈ ಕೆಲ್ಸ ಮಾಡದಿದ್ರೆ ಬ್ಯಾಂಕಿಂಗ್ ಸೇವೆ ಸ್ಥಗಿತ!
ಕಚ್ಚಾತೈಲ ದರ 140 ಡಾಲರ್‌ನಿಂದ 99 ಡಾಲರ್‌ಗೆ ಇಳಿಕೆ: ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ ಎರಡು ವಾರಗಳಿಂದ ಭಾರೀ ಏರಿಕೆ ಕಂಡಿದ್ದ ಪ್ರತಿ ಬ್ಯಾರೆಲ್ ಕಚ್ಚಾ ತೈಲ ದರ ಮಂಗಳವಾರ (ಫೆ. 15) 99.84 ಡಾಲರ್‌ಗೆ ಇಳಿಕೆಯಾಗಿದೆ. 8 ದಿನದಲ್ಲಿ 40 ಡಾಲರ್‌ನಷ್ಟುಇಳಿದಿದ್ದು ಗಮನಾರ್ಹ.
ಇದರಿಂದಾಗಿ, ಕಚ್ಚಾ ವಸ್ತುಗಳ ಬೆಲೆ ಏರಿಕೆ ನಡುವೆಯೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದ ತೈಲ ಕಂಪನಿಗಳಿಗೆ ಇದು ಕೊಂಚ ಸಮಾಧಾನ ನೀಡಿದೆ. ಅಲ್ಲದೆ, ಈಗಾಗಲೇ 100 ರು. ದಾಟಿದ್ದ ಪೆಟ್ರೋಲ್ ದರ ಭಾರೀ ಏರಿಕೆ ಆಗಬಹುದು ಎಂಬ ಜನರ ಆತಂಕ ದೂರವಾಗಬಹುದು ಎಂದು ಭಾವಿಸಲಾಗಿದೆ.
ಯುದ್ಧ ಆರಂಭವಾದ 4 ದಿನದ ನಂತರ ಫೆ.28ರಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ 100 ಡಾಲರ್ ಗಿಂತ ಹೆಚ್ಚಾಗಿತ್ತು. ಮಾ.7ರಂದು ಮತ್ತೆ 139 ಡಾಲರ್‌ಗೆ ತಲುಪುವ ಮೂಲಕ 14 ವರ್ಷಗಳ ಗರಿಷ್ಠಕ್ಕೆ ಏರಿಕೆಯಾಗಿತ್ತು. ಆದರೆ ಮಂಗಳವಾರ ಏಕಾಏಕಿ ಶೇ.7ರಷ್ಟುದರ ತಗ್ಗಿದೆ. ಭಾರತದಲ್ಲಿ ಕಳೆದ 131 ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಸ್ಥಿರವಾಗಿದೆ.
ದಾಖಲೆಯ 13 ಲಕ್ಷ ಕೋಟಿ ರು. ತೆರಿಗೆ ಸಂಗ್ರಹ: ಕೋವಿಡ್ ಸಂಕಷ್ಟಸ್ಥಿತಿ ಇದ್ದರೂ, ಪ್ರಸಕ್ತ ಹಣಕಾಸು ವರ್ಷದಲ್ಲಿ 13.41 ಲಕ್ಷ ಕೋಟಿ ರು. ನೇರ ತೆರಿಗೆ ಸಂಗ್ರಹವಾಗಿದೆ. ತನ್ಮೂಲಕ ಆದಾಯ ತೆರಿಗೆ ಇಲಾಖೆ ಇತಿಹಾಸದಲ್ಲಿಯೇ ಅತಿ ಹೆಚ್ಚು ತೆರಿಗೆ ಸಂಗ್ರಹವಾದಂತಾಗಿದೆ.
ಇದನ್ನೂ ಓದಿ: ಡಾಲರ್ ಗೆ ಯುವಾನ್ ಟಕ್ಕರ್; ಚೀನಾಕ್ಕೆ ಕಚ್ಚಾ ತೈಲ ಡಾಲರ್ ಬದಲು ಯುವಾನ್ ನಲ್ಲಿ ಮಾರಾಟಕ್ಕೆ ಸೌದಿ ಸಿದ್ಧತೆ!
ಇದಕ್ಕೂ ಮೊದಲು 2018-19ರಲ್ಲಿ 11.18 ಲಕ್ಷ ಕೋಟಿ ರು., 2019-20ರಲ್ಲಿ 10.28 ಲಕ್ಷ ಕೋಟಿ ಮತ್ತು 2020-21ರಲ್ಲಿ 9.24 ಲಕ್ಷ ಕೋಟಿ ಸಂಗ್ರಹವಾಗಿತ್ತು. ಆದರೆ ಮಾ.16ರ ವರೆಗೆ 2021-22ನೇ ಸಾಲಿನಲ್ಲಿ ಒಟ್ಟಾರೆ ಸಂಗ್ರಹವಾದ ನೇರ ಆದಾಯ ತೆರಿಗೆ 13.63 ಲಕ್ಷ ಕೋಟಿಗೆ ಏರಿಕೆಯಾಗುವ ಮೂಲಕ ಶೇ.48.4ರಷ್ಟುಹೆಚ್ಚು ತೆರಿಗೆ ಸಂಗ್ರಹವಾಗಿದೆ. ಕಳೆದ 4 ವರ್ಷಗಳಿಂದ ಪ್ರತಿ ವರ್ಷವೂ ನೇರ ತೆರಿಗೆ ಸಂಗ್ರಹದಲ್ಲಿ ಏರಿಕೆ ಕಂಡುಬರುತ್ತಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಅಧ್ಯಕ್ಷ ಜೆ.ಬಿ.ಮೊಹಪತ್ರ ಗುರುವಾರ ತಿಳಿಸಿದ್ದಾರೆ.
ನೇರ ಆದಾಯ ತೆರಿಗೆಯು ವೈಯಕ್ತಿಕ ಆದಾಯದ ಮೇಲಿನ ತೆರಿಗೆ, ಕಂಪನಿಗಳ ಲಾಭದ ಮೇಲಿನ ಕಾರ್ಪೊರೇಷನ್ ತೆರಿಗೆ, ಆಸ್ತಿ ತೆರಿಗೆ, ಪಿತ್ರಾರ್ಜಿತ ತೆರಿಗೆ ಮತ್ತು ಉಡುಗೊರೆಗಳಿಂದ ಸಂಗ್ರಹಿಸಲಾದ ತೆರಿಗೆಯಾಗಿದೆ.