*ಏಕರೂಪದ ಐಟಿಆರ್ ಅರ್ಜಿ ನಮೂನೆ ಪರಿಚಯಿಸಲು ಮುಂದಾಗಿರುವ ಐಟಿ ಇಲಾಖೆ
*ಐಟಿಆರ್-7 ಹೊರತುಪಡಿಸಿ ಉಳಿದ ಎಲ್ಲ ಐಟಿಆರ್ ಅರ್ಜಿ ನಮೂನೆಗಳನ್ನು ಒಗ್ಗೂಡಿಸುವ ಉದ್ದೇಶ
*ಹೊಸ ಅರ್ಜಿ ನಮೂನೆ ಬಗ್ಗೆ ಡಿಸೆಂಬರ್ 15ರೊಳಗೆ ಸಾರ್ವಜನಿಕ ಪ್ರತಿಕ್ರಿಯೆ ಸಲ್ಲಿಕೆಗೆ ಅವಕಾಶ
ನವದೆಹಲಿ (ನ.3): ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆ ಮಾಡುವಾಗ ನಿಮಗೆ ಬಹು ನಮೂನೆಯ ಅರ್ಜಿಗಳನ್ನು ಭರ್ತಿ ಮಾಡೋದು ದೊಡ್ಡ ತಲೆನೋವಾಗಿ ಕಾಡಿರಬಹುದು. ಅಲ್ಲದೆ, ಯಾವ ಐಟಿಆರ್ ಫಾರ್ಮ್ ಭರ್ತಿ ಮಾಡಬೇಕು ಎಂಬ ಗೊಂದಲವೂ ಕಾಡಿರಬಹುದು. ಈ ಎಲ್ಲ ಸಮಸ್ಯೆಗಳಿಗೆ ಶೀಘ್ರದಲ್ಲೇ ತೆರೆ ಬೀಳಲಿದೆ. ಹೌದು, ಐಟಿಆರ್-7 ಹೊರತುಪಡಿಸಿ ಈಗಿರುವ ಎಲ್ಲ ಆದಾಯ ರಿಟರ್ನ್ ಅರ್ಜಿ ನಮೂನೆಗಳನ್ನು ಒಗ್ಗೂಡಿಸಿ ಏಕರೂಪದ ಐಟಿಆರ್ ಅರ್ಜಿ ನಮೂನೆ ಪರಿಚಯಿಸಲು ಆದಾಯ ತೆರಿಗೆ ಇಲಾಖೆ ಮುಂದಾಗಿದೆ. ಐಟಿಆರ್-7 ಧಾರ್ಮಿಕ ಸಂಸ್ಥೆಗಳು, ಉದ್ಯಮ ಟ್ರಸ್ಟ್ ಗಳು, ಹೂಡಿಕೆ ನಿಧಿಗಳು ಇತ್ಯಾದಿಗೆ ಮಾತ್ರ ಅನ್ವಯಿಸುತ್ತದೆ. ಪ್ರಸ್ತುತ ತೆರಿಗೆದಾರರು ತಮ್ಮ ಆದಾಯ ತೆರಿಗೆ ರಿಟರ್ನ್ ಮಾಹಿತಿಯನ್ನು ಕಾನೂನು ವಿಂಗಡಣೆ ಹಾಗೂ ಆದಾಯದ ಸ್ವರೂಪದ ಆಧಾರದಲ್ಲಿ ಐಟಿಆರ್-1ರಿಂದ ಐಟಿಆರ್-7 ತನಕದ ಅರ್ಜಿ ನಮೂನೆಗಳಲ್ಲಿ ಸಲ್ಲಿಕೆ ಮಾಡಬೇಕು. ಐಟಿಆರ್ ಹೊಸ ಅರ್ಜಿ ನಮೂನೆ ಬಗ್ಗೆ ಡಿಸೆಂಬರ್ 15ರೊಳಗೆ ಸಾರ್ವಜನಿಕ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ತಿಳಿಸಿದೆ. ಈ ಪ್ರಸ್ತಾವಿತ ಐಟಿಆರ್ ಅರ್ಜಿ ಟ್ರಸ್ಟ್ ಗಳು ಹಾಗೂ ಎನ್ ಜಿಒಗಳನ್ನು ಹೊರತುಪಡಿಸಿ ಉಳಿದೆಲ್ಲ ತೆರಿಗೆದಾರರಿಗೆ ಅನ್ವಯಿಸುತ್ತದೆ.
ಪ್ರಸ್ತುತ ಬಹುತೇಕ ಸಣ್ಣ ಹಾಗೂ ಮಧ್ಯಮ ತೆರಿಗೆದಾರರು ಐಟಿಆರ್ ಫಾರಂ 1 ಮತ್ತು ಐಟಿಆರ್ ಫಾರಂ 4 ಅನ್ನು ಬಳಸುತ್ತಿದ್ದಾರೆ. ಹೊಸ ಏಕರೂಪದ ಐಟಿಆರ್ ಫಾರ್ಮ್ ಜೊತೆಗೆ ಹಳೆಯ ಫಾರ್ಮ್ ಗಳಾದ ಐಟಿಆರ್-1 ಹಾಗೂ ಐಟಿಆರ್ -4 ಕೂಡ ಲಭ್ಯವಿರಲಿದೆ. ಹೀಗಾಗಿ ಐಟಿಆರ್-1 ಹಾಗೂ ಐಟಿಆರ್-4 ವರ್ಗಕ್ಕೆ ಸೇರುವ ತೆರಿಗೆದಾರರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಹಳೆಯ ಅಥವಾ ಹೊಸ ಫಾರ್ಮ್ ಆಯ್ಕೆ ಮಾಡಿಕೊಳ್ಳಲು ಅವಕಾಶವಿರಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಆದರೆ, ಐಟಿಆರ್-2, ಐಟಿಆರ್-3, ಐಟಿಆರ್-5 ಹಾಗೂ ಐಟಿಆರ್-6ನಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡುತ್ತಿರುವ ತೆರಿಗೆದಾರರಿಗೆ ಈ ಅವಕಾಶವಿರೋದಿಲ್ಲ ಎಂದು ಹೇಳಲಾಗಿದೆ.
ಕೇಂದ್ರ ಸರ್ಕಾರಿ ಪಿಂಚಣಿದಾರರ ಡಿಆರ್ ಶೇ.396ಕ್ಕೆ ಹೆಚ್ಚಳ; ಆದ್ರೆ ಇವರಿಗೆ ಮಾತ್ರ ಅನ್ವಯ
ಐಟಿಆರ್ (ITR) ಫೈಲ್ (File) ಮಾಡುವಾಗ ತೆರಿಗೆದಾರರು (taxpayers) ತಮಗೆ ಸಂಬಂಧಿಸದ ಶೆಡ್ಯೂಲ್ಸ್ (schedules) ನೋಡಬೇಕಾದ ಅಗತ್ಯವಿಲ್ಲ. ಹೀಗಾಗಿ ಇದು ಹೆಚ್ಚು ಬಳಕೆದಾರಸ್ನೇಹಿ ವಿಧಾನವಾಗಿರಲಿದ್ದು, ತೆರಿಗೆದಾರರ ಕೆಲಸವನ್ನು ಸುಲಭವಾಗಿಸಲಿದೆ. ಆದಾಯ ತೆರಿಗೆ ಇಲಾಖೆ (Income Tax Department) ಹೊರಡಿಸಿರುವ ಸುತ್ತೋಲೆಯಲ್ಲಿ (Circular) ತೆರಿಗೆದಾರ (Taxpayer) ತನಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಬೇಕು. ಅದಕ್ಕಾಗಿ ಆತ ಯೆಸ್ (Yes) ರೂಪದಲ್ಲಿ ನೀಡಿರುವ ಉತ್ತರಕ್ಕೆ ಸಂಬಂಧಿಸಿದ ಪ್ರಶ್ನೆಗಳೊಂದಿಗೆ ಲಿಂಕ್ ಆಗಿರುವ ಶೆಡ್ಯೂಲ್ಸ್ (Schedules) ಭರ್ತಿ ಮಾಡಬೇಕು. ಇದರಿಂದ ತೆರಿಗೆದಾರನ ಸಮಯ (Time) ಹಾಗೂ ಶ್ರಮ (Energy) ಎರಡೂ ಉಳಿಯುತ್ತದೆ. ಅಲ್ಲದೆ, ಐಟಿಆರ್ ಎಲ್ಲ ಭಾಗಗಳನ್ನು ಓದುವ ಹೆಚ್ಚುವರಿ ಹೊರೆ ತಪ್ಪುತ್ತದೆ.
ಬ್ಯಾಂಕ್ ಗಿಂತಲೂ ಕಡಿಮೆ ಬಡ್ಡಿದರದಲ್ಲಿ ಸಿಗುತ್ತೆ ಎಲ್ಐಸಿ ವೈಯಕ್ತಿಕ ಸಾಲ, ಪಡೆಯೋದು ಹೇಗೆ?
ಇನ್ನು ಡಿಜಿಟಲ್ ಸ್ವರೂಪದ ಆಸ್ತಿಗಳ ಮಾಹಿತಿ ನೀಡಲು ಈ ಅರ್ಜಿ ನಮೂನೆಯಲ್ಲಿ ಪ್ರತ್ಯೇಕ ವಿಭಾಗ ನೀಡಲು ನಿರ್ಧರಿಸಲಾಗಿದೆ. ಐಟಿಆರ್ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ಅನೇಕ ತೆರಿಗೆದಾರರು ಬಹು ನಮೂನೆಯ ಅರ್ಜಿ ಫಾರ್ಮ್ ಗಳ ಕಾರಣದಿಂದ ಗೊಂದಲಕ್ಕೆ ಒಳಗಾಗುತ್ತಿದ್ದರು. ಇನ್ನು ಯಾವ ಹೆಡ್ ಗಳ ಅಡಿಯಲ್ಲಿ ಭರ್ತಿ ಮಾಡಬೇಕು ಎಂಬ ಗೊಂದಲವೂ ಕಾಡುತ್ತಿತ್ತು. ಅಲ್ಲದೆ, ಏಳು ನುಮೂನೆಯ ಅರ್ಜಿಗಳನ್ನು ತುಂಬಲು ಸಾಕಷ್ಟು ಸಮಯ ಕೂಡ ಹಿಡಿಯುತ್ತಿತ್ತು. ಆನ್ ಲೈನ್ ನಲ್ಲಿ ಐಟಿಆರ್ ಸಲ್ಲಿಕೆ ಮಾಡುವಾಗಲಂತೂ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದ್ದವು. ಹೀಗಾಗಿ ಈ ಎಲ್ಲ ಸಮಸ್ಯೆಗಳಿಗೆ ಶೀಘ್ರದಲ್ಲೇ ಪರಿಹಾರ ಸಿಗುವ ಭರವಸೆ ಇದೆ.