Repo Rate:ರೆಪೋ ದರ ಹೆಚ್ಚಳದಿಂದ ಸಾಲಗಾರರಿಗೆ ಕಹಿ, ಠೇವಣಿದಾರರಿಗೆ ಸಿಹಿ; ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ

By Suvarna News  |  First Published May 5, 2022, 3:50 PM IST

*ರೆಪೋ ದರವನ್ನು ಶೇ.4.4ಕ್ಕೆ ಏರಿಕೆ ಮಾಡಿದ ಆರ್ ಬಿಐ
* ಸಾಲಗಳ ಇಎಂಐ, ಬಡ್ಡಿದರ ಏರಿಕೆಯಾಗೋ ಸಾಧ್ಯತೆ
*ಠೇವಣಿಗಳ ಮೇಲಿನ ಬಡ್ಡಿದರ ಹೆಚ್ಚಳವಾಗುವ ನಿರೀಕ್ಷೆ


ನವದೆಹಲಿ (ಮೇ 5): ಬುಧವಾರ (ಮೇ 5) ದಿಢೀರಾಗಿ ರೆಪೋ ದರ ಹಾಗೂ ನಗದು ಮೀಸಲು ಅನುಪಾತ  (CRR)ಏರಿಕೆಯ ಘೋಷಣೆ  ಮೂಲಕ ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಚ್ಚರಿ ಮೂಡಿಸಿತ್ತು. ರೆಪೋ ದರವನ್ನು 40 ಬೇಸಿಸ್ ಪಾಯಿಂಟ್ ಗಳಷ್ಟು ಏರಿಕೆ ಮಾಡುವ ಮೂಲಕ ಶೇ.4.4ಕ್ಕೆ ಹೆಚ್ಚಳ ಮಾಡಲಾಗಿದೆ. ಹಾಗೆಯೇ
ಸಿಆರ್ ಆರ್ ಅನ್ನು ಕೂಡ 50 ಬೇಸಿಸ್ ಪಾಯಿಂಟ್ ಗಳಷ್ಟು ಅಂದ್ರೆ ಶೇ.4.5ರಷ್ಟು ಏರಿಕೆ ಮಾಡಲಾಗಿದೆ. ಇದು ಸಾಲ ಹಾಗೂ ಠೇವಣಿಗಳ ಮೇಲಿನ ಬಡ್ಡಿದರದ ಮೇಲೆ ಹೇಗೆ ಪರಿಣಾಮ ಬೀರಲಿದೆ? ಇಲ್ಲಿದೆ ಮಾಹಿತಿ.

ದುಬಾರಿಯಾಗಲಿದೆ ಗೃಹ, ವಾಹನ ಸಾಲ
ರೆಪೋ ದರ ಏರಿಕೆಯಾದ ತಕ್ಷಣ ಅದರ ಮೊದಲ ಪರಿಣಾಮ ಸಾಲಗಳ ಬಡ್ಡಿದರದಲ್ಲಿ ಹೆಚ್ಚಳ. ರೆಪೋ ದರ ಹೆಚ್ಚಳವಾದ ತಕ್ಷಣ ಬ್ಯಾಂಕುಗಳು ಸಾಲಗಳ ಮೇಲಿನ ಬಡ್ಡಿದರದಲ್ಲಿ ಹೆಚ್ಚಳ ಮಾಡುವ ಕಾರಣ ಗೃಹ, ವಾಹನ ಸಾಲಗಳು ದುಬಾರಿಯಾಗಲಿವೆ. ಅಲ್ಲದೆ, ಗೃಹ ಹಾಗೂ ವಾಹನ ಸಾಲಗಳ ತಿಂಗಳ ಇಎಂಐಯಲ್ಲಿ ಕೂಡ ಹೆಚ್ಚಳವಾಗಲಿದೆ. ಇದು ಈಗಾಗಲೇ ವಾಹನ ಹಾಗೂ ಗೃಹ ಸಾಲ ಪಡೆದವರ ತಿಂಗಳ ವೆಚ್ಚಕೆ ಹೆಚ್ಚುವರಿ ಹೊರೆಯಾಗಿ ಪರಿಣಮಿಸಲಿದೆ. ಈಗಾಗಲೇ ಹಣದುಬ್ಬರ, ಪೆಟ್ರೋಲ್, ಡಿಸೇಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯೇರಿಕೆ ಕಾರಣದಿಂದ ಜೀವನ ನಿರ್ವಹಣೆ ವೆಚ್ಚ ಹೆಚ್ಚಾಗಿರುವ ಬೆನ್ನಲ್ಲೇ ಸಾಲದ ಇಎಂಐ ಏರಿಕೆ ಸಾಮಾನ್ಯಜನರಿಗೆ ಹೊರೆಯಾಗಲಿದೆ. ಇನ್ನು ಗೃಹ, ವಾಹನ ಸಾಲ ಪಡೆಯಲು ಬಯಸುವವರು ಆದಷ್ಟು ಶೀಘ್ರದಲ್ಲಿ ಪಡೆದುಕೊಳ್ಳುವುದು ಉತ್ತಮ. ಏಕೆಂದ್ರೆ ಮುಂದಿನ ದಿನಗಳಲ್ಲಿ ಸಾಲದ ಬಡ್ಡಿದರ ಹಾಗೂ ಇಎಂಐ ಎರಡೂ ಏರಿಕೆಯಾಗಲಿವೆ. 

Tap to resize

Latest Videos

Repo Rate Hike:ಮಿತಿ ಮೀರಿದ ಹಣದುಬ್ಬರಕ್ಕೆ RBI ಕಡಿವಾಣ; ರೆಪೋ ದರ ಏರಿಕೆ; ಹೆಚ್ಚಲಿದೆ ಸಾಲದ ಬಡ್ಡಿದರ

ಠೇವಣಿ ಮೇಲಿನ ಬಡ್ಡಿ ಹೆಚ್ಚಳ?
ಆರ್ ಬಿಐ ರೆಪೋದರ ಏರಿಕೆಯು ಸಾಲಗಾರರಿಗೆ ಕಹಿಯಾದ್ರೆ, ಠೇವಣಿದಾರರಿಗೆ ಸಿಹಿ ನೀಡಲಿದೆ ಎನ್ನುತ್ತಾರೆ ತಜ್ಞರು. ಉಳಿತಾಯ ಖಾತೆಗಳು, ಅಂಚೆ ಕಚೇರಿ ಉಳಿತಾಯ ಖಾತೆಗಳು, ಸ್ಥಿರ ಠೇವಣಿ (FD) ಸೇರಿದಂತೆ ಠೇವಣಿಗಳ ಮೇಲಿನ ಬಡ್ಡಿದರ ಹೆಚ್ಚಳವಾಗುವ ಸಾಧ್ಯತೆಯಿದೆ.  

ರೆಪೋ ದರಕ್ಕೂ ಬಡ್ಡಿದರಕ್ಕೂ ಏನು ಸಂಬಂಧ?
ಇದನ್ನು ತಿಳಿಯೋಣ ಮುನ್ನ ರೆಪೋ ದರ ಅಂದ್ರೇನು ಎಂಬುದು ಗೊತ್ತಿರುವುದು ಅಗತ್ಯ. ವಾಣಿಜ್ಯ ಬ್ಯಾಂಕುಗಳಿಗೆ (Commercial banks) ಹಣದ ಕೊರತೆ ಎದುರಾದಾಗ ಅವು ಆರ್ ಬಿಐಯಿಂದ  ಸಾಲ (Loan) ಪಡೆಯುತ್ತವೆ. ಆರ್ ಬಿಐ ಬ್ಯಾಂಕುಗಳಿಗೆ ನೀಡಿದ ಸಾಲದ ಮೇಲೆ ವಿಧಿಸೋ ನಿರ್ದಿಷ್ಟ ದರವೇ ರೆಪೋ ದರ. ಆರ್ ಬಿಐ ರೆಪೋ ದರ ಹೆಚ್ಚಳ ಮಾಡಿದಾಗ ಬ್ಯಾಂಕುಗಳು ಕೂಡ ತಾವು ನೀಡಿದ ಹಾಗೂ ನೀಡುವ ಸಾಲಗಳ ಮೇಲಿನ ಬಡ್ಡಿದರವನ್ನು ಏರಿಕೆ ಮಾಡುತ್ತವೆ. ಹಾಗೆಯೇ ರೆಪೋದರ ಇಳಿಕೆಯಾದಾಗ ಸಾಲಗಳ ಮೇಲಿನ ಬಡ್ಡಿದರವನ್ನು ಇಳಿಕೆ ಮಾಡುತ್ತವೆ. 

Fixed Deposits:ವಿವಿಧ ಬ್ಯಾಂಕುಗಳಲ್ಲಿ ಸ್ಥಿರ ಠೇವಣಿ ಬಡ್ಡಿದರ ಎಷ್ಟಿದೆ? ಯಾವ ಬ್ಯಾಂಕಿನಲ್ಲಿ FD ಖಾತೆ ತೆರೆಯೋದು ಬೆಸ್ಟ್?

ರೆಪೋದರ ಏರಿಕೆ, ಇಳಿಕೆಗೆ ಕಾರಣವೇನು?
ರೆಪೋ ದರ ಏರಿಸಬೇಕೋ, ಬೇಡವೋ ಎಂಬುದನ್ನು ಆರ್ ಬಿಐನ ಹಣಕಾಸು ನೀತಿ ಸಮಿತಿ (MPC) ನಿರ್ಧರಿಸುತ್ತದೆ. ಈ ಸಮಿತಿ ನಿಯಮಿತವಾಗಿ ಸಭೆ ಸೇರಿ ರೆಪೋ ದರದ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆ. ಈ ಸಮಿತಿಯ ದ್ವಿಮಾಸಿಕ ಸಭೆಯಲ್ಲಿ ರೆಪೋದರದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಅಗತ್ಯ ಸಂದರ್ಭಗಳಲ್ಲಿ ತುರ್ತುಸಭೆಯ ಮೂಲಕ ಈ ಸಮಿತಿ ನಿರ್ಧಾರ ಕೈಗೊಳ್ಳುತ್ತದೆ. ಹಣದುಬ್ಬರ ನಿಯಂತ್ರಣಕ್ಕೆ ಆರ್ ಬಿಐ ಬಳಿಯಿರುವ ಪ್ರಮುಖ ಅಸ್ತ್ರವೇ ರೆಪೋ ದರ. ಆರ್ ಬಿಐ ರೆಪೋ ದರವನ್ನು ಏರಿಕೆ ಮಾಡುವುದರಿಂದ ಹಣದುಬ್ಬರ ಇಳಿಕೆಯಾಗುತ್ತದೆ. ಹಾಗೆಯೇ ರೆಪೋದರ ಇಳಿಕೆ ಮಾಡಿದಾಗ ಹಣದುಬ್ಬರ ಏರಿಕೆಯಾಗುತ್ತದೆ. ಪ್ರಸ್ತುತ ದೇಶದಲ್ಲಿ ಹಣದುಬ್ಬರ ಗರಿಷ್ಠ ಮಿತಿಯನ್ನು ಮೀರಿದ್ದು, ಅದರ ನಿಯಂತ್ರಣಕ್ಕಾಗಿ ಆರ್ ಬಿಐ ತುರ್ತು ಸಭೆಯ ಮೂಲಕ ರೆಪೋದರ ಏರಿಕೆಯ ನಿರ್ಣಯವನ್ನು ಕೈಗೊಂಡಿದೆ.

 

click me!