ಗಿಫ್ಟ್ ಪಡೆಯೋ ಖುಷಿನೇ ಬೇರೆ. ಅದು ಸಣ್ಣದಿರಲಿ ಇಲ್ಲ ದೊಡ್ಡದಿರಲಿ. ಆದ್ರೆ ಅನೇಕರು ದೊಡ್ಡ ಮೊತ್ತದ ಆಸ್ತಿಯನ್ನು ಉಡುಗೊರೆಯಾಗಿ ನೀಡ್ತಾರೆ. ಗಿಫ್ಟ್ ಪ್ಯಾಕ್ ಮಾಡಿ ಅದನ್ನು ನೀಡಲು ಸಾಧ್ಯವಿಲ್ಲ. ಆ ವೇಳೆ ಕೆಲ ಕಾನೂನುಗಳನ್ನು ಪಾಲಿಸಬೇಕಾಗುತ್ತದೆ
ಉಡುಗೊರೆ (Gift) ನೀಡೋದು, ಉಡುಗೊರೆ ಪಡೆಯೋದು ಭಾರತೀಯರಿಗೆ ಹೊಸದಲ್ಲ. ಇದು ಭಾರತದ ಸಂಸ್ಕೃತಿ (Culture) ಯಲ್ಲಿ ಬಂದಿದೆ. ನಾವು ಅನೇಕ ಸಂದರ್ಭಗಳಲ್ಲಿ ಉಡುಗೊರೆಯನ್ನು ನೀಡ್ತೇವೆ. ಆದರೆ ಉಡುಗೊರೆಯ ಮೌಲ್ಯ ಮತ್ತು ಸ್ವರೂಪವನ್ನು ಅವಲಂಬಿಸಿ ಇದಕ್ಕೆ ಸಂಬಂಧಿಸಿದ ಅನೇಕ ಸಂಗತಿಗಳಿವೆ. ಅದನ್ನು ಕಾನೂನಿನ ಪರಿಧಿಯೊಳಗೆ ತಂದು ಅದರ ಸಿಂಧುತ್ವವನ್ನು ನಿರ್ಧರಿಸಲಾಗುತ್ತದೆ. ಅನೇಕರು ಮನೆಯನ್ನು, ಆಸ್ತಿಯನ್ನು ಉಡುಗೊರೆ ರೂಪದಲ್ಲಿ ನೀಡ್ತಾರೆ. ಇದ್ರ ಮೌಲ್ಯ ಹೆಚ್ಚಾಗಿರುವ ಕಾರಣ ಮನೆಯನ್ನು ಉಡುಗೊರೆ ನೀಡುವ ಮೊದಲು ಕೆಲ ವಿಷ್ಯಗಳನ್ನು ತಿಳಿಯಬೇಕಾಗುತ್ತದೆ. ನೀವು ಯಾರಿಗೋ ಮನೆ ಉಡುಗೊರೆ ನೀಡ್ತಿದ್ದೀರಾ ಎಂದಾದ್ರೆ ಉಡುಗೊರೆ ಪತ್ರ (Gift Deed) ದ ಬಗ್ಗೆ ನಿಮಗೆ ತಿಳಿದಿರಬೇಕು. ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕವನ್ನು ಪಾವತಿಸಿ ನಿಯಮಗಳ ಪ್ರಕಾರ ನೋಂದಾಯಿಸಿದ್ದರೆ ಮಾತ್ರ ಗಿಫ್ಟ್ ಡೀಡ್ ಕಾನೂನುಬದ್ಧವಾಗಿ ಮಾನ್ಯವಾಗಿರುತ್ತದೆ. ಗಿಫ್ಟ್ ಡೀಡ್ ಬಗ್ಗೆ ನಾವಿಂದು ಕೆಲ ವಿಷ್ಯಗಳನ್ನು ನಿಮಗೆ ಹೇಳ್ತೇವೆ.
ಗಿಫ್ಟ್ ಡೀಡ್ ಮೇಲೆ ಎಷ್ಟು ಸ್ಟಾಂಪ್ ಡ್ಯೂಟಿ ( ಮುದ್ರಾಂಕ ಶುಲ್ಕ) ಪಾವತಿ ಮಾಡ್ಬೇಕು? : ಯಾವ ವ್ಯಕ್ತಿ ಯಾರಿಗೆ ಬೇಕಾದ್ರೂ ಉಡುಗೊರೆ ನೀಡಬಹುದು. ಉಡುಗೊರೆ ನೀಡುವ ವಿಷ್ಯದಲ್ಲಿ ವ್ಯಕ್ತಿಗೆ ಸಂಪೂರ್ಣ ಸ್ವಾತಂತ್ರವಿದೆ. ನಮ್ಮ ಆಸ್ತಿಯನ್ನು ನಾವು ಬೇರೆಯವರಿಗೆ ನೀಡ್ತಿದ್ದೇವೆ, ಆದ್ರೂ ಈ ವರ್ಗಾವಣೆ ಸಂದರ್ಭದಲ್ಲಿ ಆಸ್ತಿಗೆ ನಾವು ಹಣ ಪಾವತಿ ಮಾಡಬೇಕಾಗುತ್ತದೆ. ವಿಚಿತ್ರವೆನ್ನಿಸಿದ್ರೂ ಇದು ಸತ್ಯ. ಆಸ್ತಿ ವರ್ಗಾವಣೆ ಮಾಡುವ ಸಂದರ್ಭದಲ್ಲಿ ಆದಾಯ ತೆರಿಗೆ ಮತ್ತು ಮುದ್ರಾಂಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಭಾರತದಲ್ಲಿ ಗಿಫ್ಟ್ ಡೀಡ್, ಸ್ಟ್ಯಾಂಪ್ ಡ್ಯೂಟಿ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಆಸ್ತಿಯ ಮೌಲ್ಯವನ್ನು ಅವಲಂಬಿಸಿ ಶೇಕಡಾ 2 ರಿಂದ ಶೇಕಡಾ 7 ರವರೆಗೆ ಈ ಶುಲ್ಕ ಇರುತ್ತದೆ.
ಗಿಫ್ಟ್ ಡೀಡ್ ನೋಂದಣಿಗೆ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕೇ? : ಆಸ್ತಿಯ ವಿನಿಮಯವನ್ನು ಕಾನೂನುಬದ್ಧವಾಗಿ ಕಡ್ಡಾಯಗೊಳಿಸಲು ಉಡುಗೊರೆ ಪತ್ರಕ್ಕೆ ನೋಂದಣಿ ಶುಲ್ಕವನ್ನು ವಿಧಿಸಲಾಗುತ್ತದೆ. ಕೆಲವು ರಾಜ್ಯಗಳು ಆಸ್ತಿಯ ವೆಚ್ಚದ ಶೇಕಡಾ ಒಂದನ್ನು ಉಡುಗೊರೆ ಪತ್ರ ನೋಂದಣಿ ಶುಲ್ಕವಾಗಿ ವಿಧಿಸುತ್ತವೆ ಮತ್ತೆ ಕೆಲವು ರಾಜ್ಯಗಳು ಪ್ರಮಾಣಿತ ಶುಲ್ಕವನ್ನು ವಿಧಿಸುತ್ತವೆ.
ಯಾವ ಆಸ್ತಿಯನ್ನು ಉಡುಗೊರೆಯಾಗಿ ನೀಡಬಹುದು? : ಭಾರತೀಯ ಕಾನೂನುಗಳ ಅಡಿಯಲ್ಲಿ ಯಾವುದೇ ವಸ್ತುವನ್ನು ಉಡುಗೊರೆ ರೂಪದಲ್ಲಿ ನೀಡಬಹುದು. ಚರ ಆಸ್ತಿಯಾಗಿರಲಿ ಇಲ್ಲ ಸ್ಥಿರ ಆಸ್ತಿಯಾಗಿರಲಿ. ಆದ್ರೆ ಆಸ್ತಿ ಸ್ಪಷ್ಟವಾಗಿರಬೇಕು.
ದೇಶದಲ್ಲಿ ನಕಲಿ ನೋಟು ಪ್ರಮಾಣ ಭಾರೀ ಏರಿಕೆ!
ಉಡುಗೊರೆ ನೀಡಲು ಕಾನೂನು ಅವಶ್ಯಕತೆಗಳು ಯಾವುವು? : ಆಸ್ತಿ ವರ್ಗಾವಣೆ ಕಾಯ್ದೆಯಡಿ, ಮನೆಯನ್ನು ಉಡುಗೊರೆಯಾಗಿ ನೀಡಲು, ಆಸ್ತಿಯನ್ನು ಉಡುಗೊರೆಯಾಗಿ ನೀಡುವ ವ್ಯಕ್ತಿಯಿಂದ ಸಹಿ ದಾಖಲೆಯನ್ನು ಸಿದ್ಧಪಡಿಸಬೇಕು. ಇದಲ್ಲದೆ, ದಾಖಲೆಯಲ್ಲಿ ಇಬ್ಬರು ಸಾಕ್ಷಿಗಳ ಸಹಿಯನ್ನು ಸಹ ಮಾಡಬೇಕು. ಇದಕ್ಕಾಗಿ ಅವರು ಸಂಪೂರ್ಣ ಕಾನೂನು ಪ್ರಕ್ರಿಯೆಯನ್ನು ಅನುಸರಿಸಬೇಕು. ಗಿಫ್ಟ್ ಡೀಡ್ ಅನ್ನು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಯಿಸಬೇಕು. ಗಿಫ್ಟ್ ಡೀಡ್ ನೋಂದಣಿ ವೇಳೆ ಮುದ್ರಾಂಕ ಶುಲ್ಕವನ್ನು ಪಾವತಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ರಿಜಿಸ್ಟ್ರಾರ್ ಖಚಿತಪಡಿಸುತ್ತಾರೆ.
ಉಡುಗೊರೆಯ ಮೇಲಿನ ಮಾಲೀಕತ್ವ : ಒಬ್ಬ ವ್ಯಕ್ತಿಯು ತನ್ನ ಆಸ್ತಿಯನ್ನು ಉಡುಗೊರೆಯಾಗಿ ನೀಡುತ್ತಿದ್ದರೆ, ಗಿಫ್ಟ್ ಡೀಡ್ ಅನ್ನು ನೋಂದಾಯಿಸಿದ ತಕ್ಷಣ ಆ ಆಸ್ತಿಯ ಮಾಲೀಕತ್ವ ಕೊನೆಯಾಗುತ್ತದೆ. ಗಿಫ್ಟ್ ಡೀಡ್ ಅಗತ್ಯ ಮುದ್ರಾಂಕ ಶುಲ್ಕವನ್ನು ಪಾವತಿಸಿದಾಗ ಮಾತ್ರ ಅನ್ವಯಿಸುತ್ತದೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.
ಉಡುಗೊರೆ ಪತ್ರದ ಮೇಲೆ ಆದಾಯ ತೆರಿಗೆ : ಆದಾಯ ತೆರಿಗೆ ನಿಯಮಗಳ ಪ್ರಕಾರ, ಒಬ್ಬ ವ್ಯಕ್ತಿಯು ಒಂದು ವರ್ಷದಲ್ಲಿ ಸ್ವೀಕರಿಸಿದ ಉಡುಗೊರೆಗಳಿಗೆ ಸಂಪೂರ್ಣವಾಗಿ ವಿನಾಯಿತಿ ನೀಡಲಾಗುತ್ತದೆ. ಆದರೆ ಈ ಉಡುಗೊರೆಗಳ ಮೌಲ್ಯವು ಒಂದು ವರ್ಷದಲ್ಲಿ 50,000 ರೂಪಾಯಿಗಳನ್ನು ಮೀರಬಾರದು. ಒಂದು ವರ್ಷದಲ್ಲಿ ಸ್ವೀಕರಿಸಿದ ಉಡುಗೊರೆಗಳ ಮೌಲ್ಯವು 50,000 ರೂಪಾಯಿಗಳನ್ನು ಮೀರಿದರೆ, ಅದರ ಮೇಲೆ ಯಾವುದೇ ವಿನಾಯಿತಿ ಲಭ್ಯವಿರುವುದಿಲ್ಲ ಮತ್ತು ಆದಾಯ ತೆರಿಗೆಯನ್ನು ವಿಧಿಸಲಾಗುತ್ತದೆ.
PM Kisan: ರೈತರಿಗೆ ಶುಭ ಸಮಾಚಾರ; ನಾಳೆ ಖಾತೆಗೆ ಪಿಎಂ ಕಿಸಾನ್ ಯೋಜನೆಯ 11ನೇ ಕಂತಿನ ಹಣ?
ಉಡುಗೊರೆ ಆಸ್ತಿಯನ್ನು ಹಿಂಪಡೆಯಬಹುದೇ? : ನೀವು ನೀಡಿದ ಉಡುಗೊರೆಯನ್ನು ನೀವು ಹಿಂಪಡೆಯಬಹುದು. ಆದರೆ ಉಡುಗೊರೆ ಪತ್ರದಲ್ಲಿ ಇದನ್ನು ನಮೂದಿಸಿರಬೇಕು. ಆಸ್ತಿ ವರ್ಗಾವಣೆ ಕಾಯಿದೆಯ ಸೆಕ್ಷನ್ 126 ರ ಅಡಿಯಲ್ಲಿ, ದಾನಿಯು ನೋಂದಾಯಿತ ಒಪ್ಪಂದದಲ್ಲಿ ಉಡುಗೊರೆಯನ್ನು ಹಿಂತೆಗೆದುಕೊಳ್ಳುವ ಹಕ್ಕನ್ನು ಹೊಂದಿದ್ದಾನೆ ಎಂಬ ಮಾಹಿತಿಯಿದ್ದರೆ ಮಾತ್ರ ಉಡುಗೊರೆ ವಾಪಸ್ ಪಡೆಯಬಹುದು.