ಮಹಿಳೆ ಇಂದು ಕುಟುಂಬದ ಆರ್ಥಿಕ ನಿರ್ವಹಣೆಯಲ್ಲಿ ಪುರುಷನಷ್ಟೇ ಪ್ರಧಾನ ಪಾತ್ರ ವಹಿಸುತ್ತಿದ್ದಾಳೆ. ಹೀಗಿರುವಾಗ ತಾನು ದುಡಿದ ಹಣದ ಮೇಲೆ ಆಕೆಗೆ ಹಕ್ಕಿರುವ ಜೊತೆಗೆ ಅದನ್ನು ಹೇಗೆ ಸಮರ್ಪಕವಾಗಿ ಬಳಸಬೇಕು ಎಂಬ ಬಗ್ಗೆ ಯೋಜನೆ ರೂಪಿಸುವ ಜವಾಬ್ದಾರಿಯೂ ಇದೆ. ನಿವೃತ್ತಿ, ವೃತ್ತಿ ಜೀವನದಲ್ಲಿನ ಬ್ರೇಕ್ ಸೇರಿದಂತೆ ನಾನಾ ಕಾರಣಗಳನ್ನು ಗಮನಿಸಿದಾಗ ಮಹಿಳೆ ತನ್ನ ಗಳಿಕೆಯ ಉಳಿತಾಯ, ಹೂಡಿಕೆಗೆ ಸಂಬಂಧಿಸಿ ಸಮರ್ಪಕ ಯೋಜನೆ ರೂಪಿಸುವ ಅಗತ್ಯ ಹೆಚ್ಚಿದೆ.
Business Desk: ಇಂದು ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಪುರುಷರಿಗೆ ಸರಿಸಮನಾಗಿ ದುಡಿಯುತ್ತಿದ್ದಾರೆ. ಹೀಗೆ ದುಡಿದ ಹಣವನ್ನು ಸಮರ್ಪಕವಾಗಿ ಬಳಸೋದು ಕೂಡ ಮಹಿಳೆಯ ಭವಿಷ್ಯದ ದೃಷ್ಟಿಯಿಂದ ಅಗತ್ಯ. ಹೀಗಾಗಿ ಮಹಿಳೆ ಬರೀ ದುಡಿದರೆ ಸಾಲದು ಅದನ್ನು ಎಲ್ಲಿ ಹೂಡಿಕೆ ಮಾಡಬೇಕು ಎಂಬ ಬಗ್ಗೆ ಕೂಡ ಯೋಚಿಸಬೇಕು. ಮಹಿಳೆ ಮನೆ ನಿರ್ವಹಣೆಗೆ ಮಾತ್ರ ಸೀಮಿತ ಎಂಬ ಮನೋಭಾವ ಇಂದು ಉಳಿದಿಲ್ಲ. ಆಕೆಯ ಕಾರ್ಯಕ್ಷೇತ್ರ ಮನೆಯ ನಾಲ್ಕು ಗೋಡೆಗಳ ಗಡಿದಾಟಿದೆ. ಪರಿಣಾಮ ದೇಶದಲ್ಲಿ ಇಂದು ಅನೇಕ ಮಹಿಳೆಯರು ಅನೇಕ ಸಂಸ್ಥೆಗಳ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅಷ್ಟೇ ಅಲ್ಲ, ಎಷ್ಟೋ ಸಂದರ್ಭಗಳಲ್ಲಿ ಪುರುಷರಿಗಿಂತ ಸಮರ್ಥವಾಗಿ ಕಾರ್ಯನಿರ್ವಹಿಸಬಲ್ಲೆವು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಆದರೆ, ಕೆಲವು ಸಂಸ್ಥೆಗಳಲ್ಲಿ ಮಹಿಳೆಯರು ವೇತನ ತಾರತಮ್ಯ ಅನುಭವಿಸುತ್ತಿದ್ದಾರೆ. ಕಡಿಮೆ ವೇತನದ ಕಾರಣ ಮಹಿಳೆಯರ ಉಳಿತಾಯ ಕೂಡ ಕಡಿಮೆಯಿರುತ್ತದೆ. ಅಲ್ಲದೆ, ಮಹಿಳೆಯರು ಜಾಣತನದ ಹಣಕಾಸು ನಿರ್ಧಾರಗಳನ್ನು ಕೈಗೊಳ್ಳುವುದಿಲ್ಲ ಕೂಡ. ಗಳಿಕೆಯ ಜೊತೆಗೆ ಅದನ್ನು ಎಲ್ಲಿ ಹೇಗೆ ತೊಡಗಿಸಬೇಕು ಎಂಬ ಜ್ಞಾನವನ್ನು ಮಹಿಳೆ ಹೊಂದಿರೋದು ಅಗತ್ಯ. ಆಗ ಮಾತ್ರ ಬದುಕಿನ ದ್ವಿತೀಯಾರ್ಧವನ್ನು ಕೂಡ ಯಾವುದೇ ಆರ್ಥಿಕ ಸಮಸ್ಯೆಗಳಿಲ್ಲದೆ ನೆಮ್ಮದಿಯಿಂದ ಕಳೆಯಬಹುದು. ಮಹಿಳೆ ಈ ಕೆಳಗಿನ ಕೆಲವು ಕಾರಣಗಳಿಂದ ಹಣವನ್ನು ಸಮರ್ಪಕವಾದ ರೀತಿಯಲ್ಲಿ ಉಳಿತಾಯ ಅಥವಾ ಹೂಡಿಕೆ ಮಾಡೋದು ಅಗತ್ಯ.
ವೃತ್ತಿ ಜೀವನದ ಬ್ರೇಕ್ ಅವಧಿಗೆ
ಮಹಿಳೆಯ ವೃತ್ತಿಜೀವನ ಪುರುಷರಂತೆ ಇರಲು ಸಾಧ್ಯವಿಲ್ಲ. ಗರ್ಭಧಾರಣೆ, ಹೆರಿಗೆ, ಬಾಣಂತನ, ಮಕ್ಕಳ ಪಾಲನೆ ಈ ಎಲ್ಲ ಕಾರಣಗಳಿಂದ ಆಕೆ ವೃತ್ತಿಜೀವನದಲ್ಲಿ ಬ್ರೇಕ್ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ. ಈ ಬ್ರೇಕ್ ಅವಧಿಯಲ್ಲಿ ಆಕೆಗೆ ಯಾವುದೇ ಆದಾಯದ ಮೂಲ ಇರೋದಿಲ್ಲ. ಇಂಥ ಸಮಯದಲ್ಲಿ ಅಗತ್ಯ ಖರ್ಚು-ವೆಚ್ಚಗಳನ್ನು ನಿಭಾಯಿಸಲು ಆಕೆಯ ನೆರವಿಗೆ ಬರುವುದು ಈ ಹಿಂದೆ ಆಕೆ ಉಳಿತಾಯ ಮಾಡಿರುವ ಹಣ. ಇನ್ನು ಕೆಲವೊಮ್ಮೆ ವೃತ್ತಿ ಜೀವನದಲ್ಲಿ ಬ್ರೇಕ್ ತೆಗೆದುಕೊಂಡ ಹಿನ್ನೆಲೆಯಲ್ಲಿ ಇನ್ನೊಮ್ಮೆ ಉದ್ಯೋಗಕ್ಕೆ ಸೇರುವಾಗ ಹೆಚ್ಚಿನ ವೇತನ ಸಿಗದೇ ಇರುವ ಸಾಧ್ಯತೆ ಕೂಡ ಇರುತ್ತದೆ. ಇನ್ನೂ ಕೆಲವರಿಗೆ ಬ್ರೇಕ್ ಕಾರಣಕ್ಕೆ ಉನ್ನತ ಹುದ್ದೆಯನ್ನು ನಿರಾಕರಿಸಲಾಗುತ್ತದೆ. ಇವೆಲ್ಲವೂ ಮಹಿಳೆಯ ಆದಾಯ, ಉಳಿತಾಯ ಹಾಗೂ ನಿವೃತ್ತಿ ಯೋಜನೆಗಳ ಮೇಲೆ ಪರಿಣಾಮ ಬೀರುತ್ತವೆ.
ದುಡಿಯೋಕೂ ಸೈ ಹೂಡಿಕೆಗೂ ರೆಡಿ; ದೇಶದಲ್ಲಿ ಮಹಿಳಾ ಹೂಡಿಕೆದಾರರ ಪ್ರಮಾಣದಲ್ಲಿ ಏರಿಕೆ
ಮನೆ ಖರೀದಿ, ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ
ಹಿಂದೆಲ್ಲ ಕುಟುಂಬದ ಖರ್ಚು-ವೆಚ್ಚಗಳ ಸಂಪೂರ್ಣ ಜವಾಬ್ದಾರಿ ಪುರುಷರ ಮೇಲಿರುತ್ತಿತ್ತು. ಆದರೆ, ಇಂದು ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಇಂದಿನ ದುಬಾರಿ ದುನಿಯಾದಲ್ಲಿ ಕುಟುಂಬವನ್ನು ಸಂಭಾಳಿಸಲು ಪತಿ ಹಾಗೂ ಪತ್ನಿ ಇಬ್ಬರೂ ದುಡಿಯಲೇಬೇಕಾದ ಅನಿವಾರ್ಯತೆ ಇದೆ. ಶೈಕ್ಷಣಿಕ ವೆಚ್ಚಗಳು, ವೈದ್ಯಕೀಯ ವೆಚ್ಚಗಳು ಸೇರಿದಂತೆ ನಿತ್ಯದ ಖರ್ಚುಗಳು ಕೂಡ ಹೆಚ್ಚಿರುವ ಕಾರಣ ಮಹಿಳೆ ಆರ್ಥಿಕವಾಗಿ ಕುಟುಂಬಕ್ಕೆ ಬೆಂಬಲ ನೀಡಲೇಬೇಕಾಗಿದೆ. ಹೀಗಾಗಿ ಮನೆ ಖರೀದಿ, ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಕುಟುಂಬದ ಇತರ ಅಗತ್ಯಗಳನ್ನು ಪೂರೈಸುವಲ್ಲಿ ಮಹಿಳೆ ಕೂಡ ಹೆಗಲು ನೀಡಬೇಕಾಗಿದೆ. ಈ ಎಲ್ಲ ಕರ್ತವ್ಯಗಳನ್ನು ಸಮರ್ಪಕವಾಗಿ ನಿಭಾಯಿಸಲು ಆಕೆ ತಾನು ದುಡಿದ ಹಣವನ್ನು ಸಮರ್ಪಕವಾದ ವಿಧಾನದಲ್ಲಿ ಬಳಸುವುದು ಅಗತ್ಯ. ಉದಾಹರಣೆಗೆ ಕ್ಕಳ ಉನ್ನತ ಶಿಕ್ಷಣಕ್ಕಾಗಿ ಯಾವ ಯೋಜನೆಯಲ್ಲಿ ಹೂಡಿಕೆ ಮಾಡಬಹುದು? ಎಷ್ಟು ರಿಟರ್ನ್ ಸಿಗುತ್ತದೆ? ಹೀಗೆ ಯೋಚಿಸಿ ಹೂಡಿಕೆ ಮಾಡೋದು ಅಗತ್ಯ.
ನಿವೃತ್ತಿ ಬದುಕಿಗೆ
ಪುರುಷರಿಗೆ ಹೋಲಿಸಿದರೆ ಮಹಿಳೆಯರ ಜೀವಿತಾವಧಿ ಅಧಿಕ. ಪುರುಷರಿಗಿಂತ ಮಹಿಳೆ ಸರಾಸರಿ 6ರಿಂದ 8 ವರ್ಷಗಳು ಹೆಚ್ಚು ಬದುಕುತ್ತಾಳೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಹೀಗಾಗಿ ಪುರುಷರಿಗಿಂತ ಮಹಿಳೆಯ ನಿವೃತ್ತಿ ನಿಧಿ ಹೆಚ್ಚಿರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಆಕೆ ತನ್ನ ನಿವೃತ್ತಿ ಬದುಕಿಗೆ ಸುದೀರ್ಘ ಅವಧಿಯ ಹಣಕಾಸಿನ ಯೋಜನೆ ರೂಪಿಸೋದು ಅಗತ್ಯ.
ಆರೋಗ್ಯ ವೆಚ್ಚಗಳು
ಮಹಿಳೆ ಆರೋಗ್ಯ ವಿಮೆ ಖರೀದಿಸುವಾಗ ಪುರುಷರಿಗಿಂತ ಹೆಚ್ಚು ಎಚ್ಚರ ವಹಿಸಬೇಕಾಗುತ್ತದೆ. ಹೆರಿಗೆ ವೆಚ್ಚಗಳ ಜೊತೆಗೆ ಮಹಿಳೆಗೆ ಸಂಬಂಧಿಸಿದ ಕೆಲವು ಕಾಯಿಲೆಗಳ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಭರಿಸುವಂತಹ ಆರೋಗ್ಯ ವಿಮೆಗಳನ್ನು ಆಕೆ ಆಯ್ಕೆ ಮಾಡೋದು ಅಗತ್ಯ. ಆಗ ಮಾತ್ರ ದುಬಾರಿ ವೈದ್ಯಕೀಯ ವೆಚ್ಚಗಳನ್ನು ಸಮರ್ಥವಾಗಿ ನಿಭಾಯಿಸಲು ಆಕೆಗೆ ಸಾಧ್ಯವಾಗುತ್ತದೆ.
ಕೋಕಿಲಾಬೆನ್ ಅಂಬಾನಿ ಬಳಿಯಿದೆ ಶಾರ್ಕ್ ಟ್ಯಾಂಕ್ ಇಂಡಿಯಾದ ಎಲ್ಲ ತೀರ್ಪುಗಾರರನ್ನು ಖರೀದಿಸುವಷ್ಟು ಸಂಪತ್ತು!
ವಿಶ್ವದ ಶೇ.20ರಷ್ಟು ಜನಸಂಖ್ಯೆ ಭಾರತದಲ್ಲಿದೆ. ಇಲ್ಲಿನ ಸಾಕ್ಷರತೆ ಪ್ರಮಾಣ ಶೇ.80ರಷ್ಟಿದೆ. ಆದರೆ, ಆರ್ಥಿಕ ಸಾಕ್ಷರತೆ ರಾಷ್ಟ್ರೀಯ ಆಯೋಗದ ವಾರ್ಷಿಕ ವರದಿ 2020–21ರ ಅನ್ವಯ ಒಟ್ಟು ಜನಸಂಖ್ಯೆಯ ಶೇ.27ರಷ್ಟು ಮಂದಿ ಮಾತ್ರ ಆರ್ಥಿಕ ಸಾಕ್ಷರರಾಗಿದ್ದಾರೆ. ಇನ್ನು ಇದರಲ್ಲಿ ಮಹಿಳೆಯರ ಪ್ರಮಾಣ ಕೇವಲ ಶೇ.21ರಷ್ಟು ಮಾತ್ರ. ಹೀಗಾಗಿ ಮಹಿಳೆಯರಲ್ಲಿ ಆರ್ಥಿಕ ಸಾಕ್ಷರತೆ ಬಗ್ಗೆ ಅರಿವು ಮೂಡಿಸಬೇಕಾದ ಅಗತ್ಯವಿದೆ.