EPF Interest Rate: ಉದ್ಯೋಗಿಗಳಿಗೆ ಗುಡ್ ನ್ಯೂಸ್; ಇಪಿಎಫ್ ಠೇವಣಿ ಮೇಲಿನ ಬಡ್ಡಿದರ ಶೇ.8.25ಕ್ಕೆ ಏರಿಕೆ

By Suvarna NewsFirst Published Feb 10, 2024, 12:28 PM IST
Highlights

2023-24ನೇ ಸಾಲಿನ ಇಪಿಎಫ್ ಬಡ್ಡಿದರವನ್ನು ಇಪಿಎಫ್ಒ ಶೇ.8.25ಕ್ಕೆ ನಿಗದಿಪಡಿಸಿದೆ. 2022-23ನೇ ಸಾಲಿಗಿಂತ ಈ ಬಾರಿ ಬಡ್ಡಿದರದಲ್ಲಿ ಕೇವಲ ಶೇ.0.10ರಷ್ಟು ಏರಿಕೆ ಮಾಡಲಾಗಿದೆ. 
 

ನವದೆಹಲಿ (ಫೆ.10):ಇಪಿಎಫ್ ಬಡ್ಡಿದರದಲ್ಲಿ ಭಾರೀ ಹೆಚ್ಚಳ ನಿರೀಕ್ಷಿಸಿದ ಉದ್ಯೋಗಿಗಳಿಗೆ ಈ ಬಾರಿಯೂ ನಿರಾಸೆಯಾಗಿದೆ. ಇಪಿಎಫ್ ಖಾತೆಗಳ ಮೇಲಿನ ಬಡ್ಡಿದರದಲ್ಲಿ ಅತ್ಯಲ್ಪ ಹೆಚ್ಚಳವಾಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಟ್ರಸ್ಟಿಗಳ ಕೇಂದ್ರೀಯ ಮಂಡಳಿ (ಸಿಬಿಟಿ) ಇಪಿಎಫ್ ಖಾತೆಗಳ 2023-24ನೇ ಸಾಲಿನ ಬಡ್ಡಿದರವನ್ನು ಶೇ.8.25ಕ್ಕೆ ನಿಗದಿಪಡಿಸಿದೆ. ಇದರಿಂದ  ಆರು ಕೋಟಿಗೂ ಹೆಚ್ಚು ಚಂದಾದಾರರಿಗೆ ಪ್ರಯೋಜನಾಗಲಿದೆ.  ಕಳೆದ ವರ್ಷ ಮಾರ್ಚ್ 28ರಂದು 2022-23ನೇ ಸಾಲಿನ ಇಪಿಎಫ್ ಖಾತೆಗಳ ಮೇಲಿನ ಬಡ್ಡಿದರವನ್ನು ಇಪಿಎಫ್ಒ ಶೇ.8.15ಕ್ಕೆ ನಿಗದಿಪಡಿಸಿತ್ತು. ಇನ್ನು 2022ನೇ ಹಣಕಾಸು ಸಾಲಿನಲ್ಲಿ ಇಪಿಎಫ್ ಒ ಶೇ.8.10ರಷ್ಟು ಬಡ್ಡಿ ಕ್ರೆಡಿಟ್ ಮಾಡಿತ್ತು.ತಿಂಗಳ ವೇತನ ಪಡೆಯೋರು ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಖಾತೆಗಳನ್ನು ಹೊಂದಿರುತ್ತಾರೆ. ಇದು ನಿವೃತ್ತಿ ಜೀವನಕ್ಕಾಗಿರುವ  ಹೂಡಿಕೆ ಯೋಜನೆಯಾಗಿದೆ. ಪ್ರತಿ ತಿಂಗಳು ಉದ್ಯೋಗಿಯ ವೇತನದ ಒಂದು ಭಾಗವನ್ನು ಇಪಿಎಫ್  ಖಾತೆಗೆ ಜಮೆ ಮಾಡಲಾಗುತ್ತದೆ. ಹಾಗೆಯೇ ಉದ್ಯೋಗದಾತರು (ಕಂಪನಿ ಅಥವಾ ಸಂಸ್ಥೆ) ಕೂಡ ನಿರ್ದಿಷ್ಟ ಮೊತ್ತವನ್ನು ಈ ಖಾತೆಗೆ ಜಮೆ ಮಾಡುತ್ತಾರೆ. ಈ ಖಾತೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಪ್ರತಿ ವರ್ಷ ಬಡ್ಡಿ ನೀಡಲಾಗುತ್ತದೆ. 

ಪ್ರತಿ ತಿಂಗಳು ಉದ್ಯೋಗಿ ತನ್ನ ವೇತನದ ಶೇ.12ರಷ್ಟನ್ನು ಇಪಿಎಫ್ ಖಾತೆಗೆ ಕೊಡುಗೆ ನೀಡುತ್ತಾನೆ. ಇದರಲ್ಲಿ ಉದ್ಯೋಗದಾತ ಸಂಸ್ಥೆ ಶೇ.3.67ರಷ್ಟನ್ನು ಇಪಿಎಫ್ ಖಾತೆಗೆ ಜಮೆ ಮಾಡುತ್ತದೆ. ಉಳಿದ ಶೇ.8.33ರಷ್ಟನ್ನು ಉದ್ಯೋಗಿಗಳ ಪಿಂಚಣಿ ಯೋಜನೆಗೆ (EPS) ಜಮೆ ಮಾಡಲಾಗುತ್ತದೆ. 

ಇಪಿಎಫ್ ಯುಎಎನ್ ಮರೆತು ಹೋಗಿದೆಯಾ? ಮರಳಿ ಪಡೆಯಲು ಹೊಸ ವಿಧಾನ ಪ್ರಕಟಿಸಿದ ಇಪಿಎಫ್ ಒ

ಇನ್ನು ಇಪಿಎಫ್ ಮೇಲಿನ ಬಡ್ಡಿದರವನ್ನು ಹಣಕಾಸು ಸಚಿವಾಲಯದ ಜೊತೆಗೆ ಚರ್ಚಿಸಿದ ಬಳಿಕ ಪ್ರತಿ ವರ್ಷ ಪರಿಷ್ಕರಿಸಲಾಗುತ್ತದೆ. ಶಿಫಾರಸ್ಸು ಮಾಡಿದ ದರವನ್ನು ಪರಿಗಣಿಸಿದ ಬಳಿಕ ಕೇಂದ್ರ ಹಣಕಾಸು ಸಚಿವಾಲಯ ಅಂತಿಮ ದರದ ಅಧಿಸೂಚನೆ ಹೊರಡಿಸುತ್ತದೆ. ಇನ್ನು ಉದ್ಯೋಗಿಗಳ ಭವಿಷ್ಯ ನಿಧಿ ಖಾತೆಗೆ ವರ್ಷದಲ್ಲಿ ಒಂದು ಬಾರಿ ಮಾತ್ರ ಬಡ್ಡಿದರ ಜಮೆ ಮಾಡಲಾಗುತ್ತದೆ. ಇದನ್ನು ಪ್ರತಿ ಹಣಕಾಸು ಸಾಲಿನ ಮಾರ್ಚ್ 31ರಂದು ಮಾಡಲಾಗುತ್ತದೆ. ಅಂದಹಾಗೇ ಇಪಿಎಫ್ ಬಡ್ಡಿದರವನ್ನು ವರ್ಷಕ್ಕೊಮ್ಮೆ ಖಾತೆಗೆ ಜಮೆ ಮಾಡಲಾಗುತ್ತದೆಯಾದರೂ ಬಡ್ಡಿಯನ್ನು ಮಾತ್ರ ಪ್ರತಿ ತಿಂಗಳು ಲೆಕ್ಕ ಹಾಕಲಾಗುತ್ತದೆ. ಪ್ರತಿ ತಿಂಗಳ ಕ್ಲೋಸಿಂಗ್ ಬ್ಯಾಲೆನ್ಸ್ ಹಾಗೂ ಇಡೀ ವರ್ಷದ ಕ್ಲೋಸಿಂಗ್ ಬ್ಯಾಲೆನ್ಸ್ ಆಧಾರದಲ್ಲಿ ಬಡ್ಡಿ ಲೆಕ್ಕಾಚಾರ ನಡೆಯುತ್ತದೆ. 

2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇಪಿಎಫ್ ಬಡ್ಡಿದರ ಶೇ.8.80 ಹಾಗೂ ಶೇ.8.10ರ ನಡುವೆ ಬದಲಾವಣೆ ಕಂಡಿದೆ. 2014-15ನೇ ಸಾಲಿನಲ್ಲಿ ಇಪಿಎಫ್ ಬಡ್ಡಿದರ ಶೇ.8.75ರಷ್ಟಿತ್ತು. 2015-16ನೇ ಸಾಲಿನಲ್ಲಿ ಶೇ.8.80ರಷ್ಟಕ್ಕೆ ಏರಿಕೆಯಾಗಿತ್ತು. ಆ ಬಳಿಕ 2020-21ನೇ ಸಾಲಿನ ತನಕ ಶೇ.8.65 ಹಾಗೂ ಶೇ.8.50ರ ನಡುವೆ ಇತ್ತು. ಆದರೆ, ಆ ಬಳಿಕ ಕೋವಿಡ್ ಕಾಣಿಸಿಕೊಂಡ ಬಳಿಕ 2021-22ನೇ ಸಾಲಿನಲ್ಲಿ ಶೇ.8.10ಕ್ಕೆ ಇಳಿಕೆಯಾಗಿತ್ತು. 

ಇಪಿಎಫ್ ಸದಸ್ಯರೇ ಗಮನಿಸಿ, ಜನ್ಮದಿನಾಂಕ ಅಪ್ಡೇಟ್ ಗೆ ಅರ್ಹ ದಾಖಲೆಗಳ ಪಟ್ಟಿಯಿಂದ ಆಧಾರ್ ಹೊರಗಿಟ್ಟ ಇಪಿಎಫ್ಒ

ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?
ಹಂತ 1: ಇಪಿಎಫ್ ಒ (EPFO) ಅಧಿಕೃತ ವೆಬ್ ಸೈಟ್ epfindia.gov.in.ಭೇಟಿ ನೀಡಿ.
ಹಂತ 2:‘Services’ವಿಭಾಗದ ಮೇಲೆ ಕ್ಲಿಕ್ ಮಾಡಿ. ಈ ವಿಭಾಗದಡಿಯಲ್ಲಿ ‘For Employees’ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 3: ಈಗ ನಿಮ್ಮ ಮುಂದೆ ಹೊಸ ಪುಟ ತೆರೆದುಕೊಳ್ಳುತ್ತದೆ. ಈಗ ‘Member Passbook’ ಮೇಲೆ ಕ್ಲಿಕ್ ಮಾಡಿ. ಈಗ ಲಾಗಿನ್ ಪುಟ ತೆರೆದುಕೊಳ್ಳುತ್ತದೆ. 
ಹಂತ 4:  ಇಲ್ಲಿ ನೀವು ನಿಮ್ಮ ಯುಎಎನ್ ಸಂಖ್ಯೆ (UAN) ಹಾಗೂ ಪಾಸ್ ವರ್ಡ್ ನಮೂದಿಸಿ. ಕ್ಯಾಪ್ಚ ಕೋಡ್ ಕೂಡ ನಮೂದಿಸಬೇಕಾಗುತ್ತದೆ. ಇದಾದ ಬಳಿಕ ನಿಮ್ಮ ಪಾಸ್ ಬುಕ್ ಕಾಣಿಸುತ್ತದೆ.
 

click me!