ಮೇಕ್‌ ಇನ್‌ ಇಂಡಿಯಾ ಹೆಸರಲ್ಲಿ ಕಡಿಮೆ ಗುಣಮಟ್ಟದ ಯುದ್ಧ ವಿಮಾನ ಖರೀದಿ? ದೇಶೀಯ ರಕ್ಷಣಾ ಉತ್ಪಾದನೆ ವಿಚಾರದಲ್ಲಿ ಚರ್ಚೆ

By Suvarna News  |  First Published Mar 4, 2023, 2:27 PM IST

ಭಾರತೀಯ ವಾಯುಪಡೆ ಮೊದಲಿಗೆ ಎಚ್‌ಟಿಟಿ-40 ವಿಮಾನಗಳನ್ನು ಖರೀದಿಸಲು ನಿರಾಕರಿಸಿತ್ತು. ಅದಕ್ಕೆ ವಾಯುಪಡೆ ವಿಮಾನದ ತಾಂತ್ರಿಕ ವೈಶಿಷ್ಟ್ಯಗಳು ಹಾಗೂ ಪ್ರದರ್ಶನದ ಕಾರಣ ನೀಡಿತ್ತು.


(ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಹೊಸದೆಹಲಿ (ಮಾರ್ಚ್‌ 4, 2023): ಭಾರತೀಯ ವಾಯುಪಡೆ ಕಳೆದ ಹಲವು ವರ್ಷಗಳಿಂದ ತಿರಸ್ಕರಿಸುತ್ತಾ ಬಂದಿದ್ದ ಎಚ್‌ಟಿಟಿ-40 ದೇಶೀಯ ನಿರ್ಮಾಣದ ತರಬೇತಿ ವಿಮಾನಗಳನ್ನು ಕೊನೆಗೂ ಖರೀದಿಸಲು ಒಪ್ಪಿಗೆ ಸೂಚಿಸಿದೆ. ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ವಿನ್ಯಾಸಗೊಳಿಸಿ, ನಿರ್ಮಿಸಿರುವ ಎಚ್‌ಟಿಟಿ-40 ವಿಮಾನಗಳು ಭಾರತೀಯ ವಾಯುಪಡೆಯ ಬಳಿ ಇರುವ, ಹಳೆಯದಾಗಿರುವ ಹಿಂದುಸ್ತಾನ್ ಟರ್ಬೋ ಟ್ರೈನರ್ - 32 (ಎಚ್‌ಟಿಟಿ-32) ವಿಮಾನಗಳ ಬದಲಿಗೆ ಕಾರ್ಯಾಚರಿಸಲಿವೆ. ಎಚ್‌ಟಿಟಿ-40 ಒಂದು ತರಬೇತಿ ವಿಮಾನವಾಗಿದ್ದು, ಏರೋಬಾಟಿಕ್ಸ್, ಇನ್ಸ್ಟ್ರುಮೆಂಟ್ ಫ್ಲೈಯಿಂಗ್, ಹಾಗೂ ನ್ಯಾವಿಗೇಶನ್ ತರಬೇತಿ ಸೇರಿದಂತೆ ಹಲವು ಕಾರ್ಯಗಳನ್ನು ನಿರ್ವಹಿಸಬಲ್ಲದು. ಪ್ರತಿ ಗಂಟೆಗೆ ಗರಿಷ್ಠ 450 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲ ಈ ವಿಮಾನ, 1,000 ಕಿಲೋಮೀಟರ್ ವ್ಯಾಪ್ತಿ ಹೊಂದಿದ್ದು, ಗರಿಷ್ಠ 6,500 ಮೀಟರ್ ಎತ್ತರದಲ್ಲಿ ಚಲಿಸಬಲ್ಲದು. ಈ ವಿಮಾನದಲ್ಲಿ ಗಾಜಿನ ಕಾಕ್‌ಪಿಟ್, ಹೊರಚಿಮ್ಮಬಲ್ಲ ಆಸನ ವ್ಯವಸ್ಥೆಗಳಿದ್ದು, ರಾಕೆಟ್ ಮತ್ತು ಬಾಂಬ್‌ಗಳಂತಹ ಆಯುಧಗಳನ್ನು ಒಯ್ಯಬಲ್ಲದು. ಭಾರತೀಯ ವಾಯುಪಡೆ ಈ ತರಬೇತಿ ವಿಮಾನವನ್ನು ವಿವಿಧ ವ್ಯಾಪ್ತಿಯ ತರಬೇತಿ ಉದ್ದೇಶಗಳಿಗೆ ಬಳಸುವ ಯೋಚನೆ ಹೊಂದಿದೆ. ಅದರಲ್ಲಿ ಮೂಲಭೂತ ಹಾರಾಟ ತರಬೇತಿ, ಏರೋಬಾಟಿಕ್ಸ್, ನಿಕಟ ರಚನೆಯ ಹಾರಾಟ, ಇನ್ಸ್ಟ್ರುಮೆಂಟ್ ಫ್ಲೈಯಿಂಗ್, ನ್ಯಾವಿಗೇಶನ್ ಹಾಗೂ ರಾತ್ರಿ ಹಾರಾಟವೂ ಸೇರಿವೆ.

Tap to resize

Latest Videos

ಎಚ್ಎಎಲ್ ಎಚ್‌ಟಿಟಿ-40 ವರ್ಸಸ್ ಸ್ವಿಸ್ ಪಿಸಿ-7: ಭಾರತದ ತರಬೇತಿ ವಿಮಾನಗಳ ಕಥೆ

ಭಾರತೀಯ ವಾಯುಪಡೆ ಮೊದಲಿಗೆ ಎಚ್‌ಟಿಟಿ-40 ವಿಮಾನಗಳನ್ನು ಖರೀದಿಸಲು ನಿರಾಕರಿಸಿತ್ತು. ಅದಕ್ಕೆ ವಾಯುಪಡೆ ವಿಮಾನದ ತಾಂತ್ರಿಕ ವೈಶಿಷ್ಟ್ಯಗಳು ಹಾಗೂ ಪ್ರದರ್ಶನದ ಕಾರಣ ನೀಡಿತ್ತು. ಭಾರತೀಯ ವಾಯುಸೇನೆ ದೇಶೀಯ ನಿರ್ಮಾಣದ ವಿಮಾನಕ್ಕಿಂತಲೂ ವಿದೇಶೀ ನಿರ್ಮಾಣದ ತರಬೇತಿ ವಿಮಾನಗಳೆಡೆಗೆ ಆಸಕ್ತಿ ಹೊಂದಿತ್ತು. ಆ ಕಾರಣದಿಂದಲೇ 2011ರಲ್ಲಿ ಎಚ್ಎಎಲ್‌ನ ಎಚ್‌ಟಿಟಿ ಯೋಜನೆಯ ಪ್ರಸ್ತಾವನೆ ತಿರಸ್ಕರಿಸಲ್ಪಟ್ಟಿತ್ತು. ಬಳಿಕ 2012ರಲ್ಲಿ ಎಚ್ಎಎಲ್ ಭಾರತೀಯ ವಾಯು ಸೇನೆ ಮತ್ತು ರಕ್ಷಣಾ ಸಚಿವಾಲಯದ ಬಳಕೆಗೆ ತರಬೇತಿ ವಿಮಾನಗಳನ್ನು ತಯಾರಿಸುವ ಪ್ರಸ್ತಾವನೆ ಸಲ್ಲಿಸಿತು. ಆದರೆ ಆಗ ಖರೀದಿಸುವ ಉದ್ದೇಶ ಹೊಂದಿದ್ದ 75 ಸ್ವಿಸ್ ಪಿಲಾಟಸ್ ಪಿಸಿ-7 ಎಂಕೆ II ಟ್ರೈನರ್‌ಗೆ ಹೋಲಿಸಿದರೆ, ಎಚ್‌ಟಿಟಿ-40 ವೆಚ್ಚ ಹೆಚ್ಚಾದ ಕಾರಣದಿಂದ ಎಚ್ಎಎಲ್ ಪ್ರಸ್ತಾಪ ತಿರಸ್ಕೃತವಾಯಿತು.

ಇದನ್ನು ಓದಿ: ವಿನೂತನ ಸೂಪರ್‌ಸಾನಿಕ್ ಜೆಟ್ ಟ್ರೈನರ್ ವಿನ್ಯಾಸ ಪ್ರದರ್ಶಿಸಿದ ಎಚ್‌ಎಎಲ್‌

2014ರಲ್ಲಿ, ಭಾರತೀಯ ವಾಯುಪಡೆ ಒಂದು ರಿಕ್ವೆಸ್ಟ್ ಫಾರ್ ಇನ್ಫಾರ್ಮೇಶನ್ (ಆರ್‌ಎಫ್ಐ) ಬಿಡುಗಡೆಗೊಳಿಸಿ, ಪಿಲಾಟಸ್ ಸಂಸ್ಥೆಯೊಡನೆ ಸಹಯೋಗ ಹೊಂದಿ, 106 ಪಿಸಿ-7 ಎಂಕೆ II ಟ್ರೈನರ್ ಪೂರೈಸಲು ಸಹಯೋಗಕ್ಕೆ ಹರಾಜಿನಲ್ಲಿ ಭಾಗವಹಿಸಲು ಆಮಂತ್ರಿಸಿತು. ಕ್ರಮೇಣ ಸ್ವಿಸ್ ವಿಮಾನಕ್ಕಾಗಿ 2,900 ಕೋಟಿ ರೂಪಾಯಿ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಆದರೆ, ಅಗತ್ಯವಿದ್ದ 183 ತರಬೇತಿ ವಿಮಾನಗಳಲ್ಲಿ ಸ್ವಿಸ್ ವಿಮಾನಗಳ ಲಭ್ಯತೆ ಕೇವಲ 75 ಆಗಿತ್ತು. ಎಚ್ಎಎಲ್ ಆಗ ವಾಯುಪಡೆಗೆ 108 ಎಚ್‌ಟಿಟಿ-40 ವಿಮಾನಗಳನ್ನು ಖರೀದಿಸಿ, ಅಗತ್ಯವನ್ನು ಪೂರೈಸುವಂತೆ ಸಲಹೆ ನೀಡಿತು. ಆದರೆ ವಾಯುಪಡೆ ದೇಶೀಯ ಎಚ್‌ಟಿಟಿ-40 ಬದಲಿಗೆ ಸ್ವಿಸರ್‌ಲ್ಯಾಂಡ್‌ನಿಂದ ಇನ್ನೂ 37 ಪಿಸಿ-7 ವಿಮಾನಗಳನ್ನು ಖರೀದಿಸುವುದಕ್ಕೆ ಆದ್ಯತೆ ನೀಡಿತ್ತು. ಮುಂದಿನ ವರ್ಷಗಳಲ್ಲಿ ಭಾರತೀಯ ವಾಯುಪಡೆ ಎಚ್‌ಟಿಟಿ-40ಯನ್ನು ತಿರಸ್ಕರಿಸುತ್ತಾ ಬಂದಿದ್ದರಿಂದ, ತರಬೇತಿ ವಿಮಾನದ ವಿರುದ್ಧದ ಭಾವನೆಗಳು ಹುಟ್ಟಿಕೊಂಡಿದ್ದವು.

ಪಿಸಿ-7 ವಿಮಾನಗಳು ಈಗಾಗಲೇ ನಂಬಿಕಾರ್ಹ ವಿಮಾನಗಳೆಂದು ಸಾಬೀತಾಗಿದ್ದರಿಂದ ಮತ್ತು ಅವುಗಳ ಸಾಮರ್ಥ್ಯವನ್ನು ಪ್ರದರ್ಶಿಸಿದ್ದರಿಂದ, ಜಗತ್ತಿನ ವಿವಿಧ ವಾಯುಪಡೆಗಳು ಅದನ್ನು ದಶಕಗಳ ಕಾಲ ಬಳಸುತ್ತಿದ್ದ ಕಾರಣ, ಭಾರತೀಯ ವಾಯುಪಡೆ ಅದರ ಖರೀದಿಗೆ ಹೆಚ್ಚಿನ ಆದ್ಯತೆ ನೀಡಿತ್ತು. ಪಿಸಿ-7 ಅತ್ಯುತ್ತಮ ಸುರಕ್ಷತಾ ದಾಖಲೆಗಳು, ಕಡಿಮೆ ನಿರ್ವಹಣಾ ವೆಚ್ಚ ಹಾಗೂ ಸುಲಭ ನಿರ್ವಹಣೆಯನ್ನು ಹೊಂದಿರುವುದರಿಂದ, ಅದು ಭಾರತೀಯ ವಾಯುಪಡೆಯ ತರಬೇತಿ ಅಗತ್ಯಗಳಿಗೆ ಸೂಕ್ತ ವಿಮಾನವಾಗಿಸಿತ್ತು. ಅದರೊಡನೆ, ಪಿಸಿ-7 ಹಲವು ಕಾರ್ಯಗಳನ್ನು ನಿರ್ವಹಿಸಲು ಸಮರ್ಥವಾಗಿದ್ದು, ಮೂಲ ಹಾಗೂ ಆಧುನಿಕ ತರಬೇತಿ, ಏರೋಬಾಟಿಕ್ಸ್, ಹಾಗೂ ಫಾರ್ಮೇಶನ್ ಫ್ಲೈಯಿಂಗ್ ನಡೆಸಬಲ್ಲ ಉತ್ತಮ ವಿಮಾನವಾಗಿದೆ. ಪಿಸಿ-7 ವಿಮಾನದ ಸುರಕ್ಷತಾ ಇತಿಹಾಸವನ್ನು ಗಮನಿಸಿ, ಭಾರತೀಯ ವಾಯುಪಡೆ ಅದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಸಹಜವೇ ಆಗಿತ್ತು. ಅದರೊಡನೆ, ಬೇರೆ ಯಾವುದೇ ವಿಮಾನವನ್ನು ಆಯ್ಕೆ ಮಾಡಿಕೊಳ್ಳಬೇಕಾದರೆ, ಅದು ಪಿಸಿ-7ಗೆ ಸರಿಸಮ ಅಥವಾ ಅದಕ್ಕಿಂತಲೂ ಉತ್ತಮವಾಗಿರಬೇಕಿತ್ತು.

ಇದನ್ನೂ ಓದಿ: ಭಾರತದ ವೈಮಾನಿಕ, ರಕ್ಷಣಾ ಉದ್ಯಮಕ್ಕೆ ಕರ್ನಾಟಕವೇ ತವರು ಮನೆ..!

ಆದರೆ ಎಚ್ಎಎಲ್ ಎಚ್‌ಟಿಟಿ-40 ವಿಮಾನವನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರಿಸಿ, ಭಾರತೀಯ ವಾಯುಪಡೆಯ ಅನುಮಾನಗಳನ್ನು ಪರಿಹರಿಸುವಂತಹ ಬದಲಾವಣೆಗಳನ್ನು ವಿಮಾನದಲ್ಲಿ ತಂದಿತು. ಅದೇ ಸಮಯದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವೂ ಮೇಕ್ ಇನ್ ಇಂಡಿಯಾ ಯೋಜನೆಗೆ ಹೆಚ್ಚಿನ ಒತ್ತು ನೀಡತೊಡಗಿತು. ಆದ್ದರಿಂದ ಎಚ್‌ಟಿಟಿ-40 ವಿಮಾನದ ಖರೀದಿಗೆ ಹೆಚ್ಚಿನ ಆದ್ಯತೆ ನೀಡಲಾಗಿ, ಭಾರತೀಯ ವಾಯುಪಡೆ 70-80 ವಿಮಾನಗಳನ್ನು ಖರೀದಿಸಲು ಯೋಚಿಸಿತು. ಎಚ್‌ಟಿಟಿ-40 ವಿಮಾನಗಳ ಉತ್ಪಾದನೆ ಮತ್ತು ಪೂರೈಕೆ 2023ರಲ್ಲಿ ಆರಂಭಗೊಳ್ಳುವ ನಿರೀಕ್ಷೆಗಳಿವೆ. ಎಚ್‌ಟಿಟಿ-40ರ ಅಭಿವೃದ್ಧಿ ಹಾಗೂ ಖರೀದಿಯಿಂದ, ದೇಶೀಯ ವಿನ್ಯಾಸ ಮತ್ತು ನಿರ್ಮಾಣದ ಪ್ರಯೋಜನಗಳನ್ನು ತೋರಿಸುತ್ತದೆ. ಇದು ವಿದೇಶೀ ವಿನಿಮಯವನ್ನು ಉಳಿಸಿ, ದೇಶದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.

ಸ್ವಾವಲಂಬನೆ ಅಥವಾ ಕಡಿಮೆ ಗುಣಮಟ್ಟದ ಉತ್ಪನ್ನಗಳು? ಗುಣಮಟ್ಟದ ಕುರಿತು ಚರ್ಚೆಗಳನ್ನು ಹುಟ್ಟುಹಾಕಿದೆ ಭಾರತದ ದೇಶೀಯ ನಿರ್ಮಾಣ ಯೋಜನೆ

ಎಚ್‌ಟಿಟಿ-40 ಯೋಜನೆಗೆ ಸಂಬಂಧಿಸಿದ ಹಾಗೆ, ಸ್ವಾವಲಂಬನೆ ಹಾಗೂ ದೇಶೀಯ ಉತ್ಪಾದನೆಯ ಕುರಿತು ಭಾರತ ಸರ್ಕಾರ ಒತ್ತು ನೀಡುತ್ತಿರುವುದು ಶ್ಲಾಘನೀಯ ವಿಚಾರ. ಆದರೆ, ದೇಶೀಯ ನಿರ್ಮಾಣ ಯಾವ ಕಾರಣಕ್ಕೂ ವಿಮಾನದ ಗುಣಮಟ್ಟ ಮತ್ತು ಸಾಮರ್ಥ್ಯದ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವಂತೆ ಇರಬಾರದು.

ಇದನ್ನೂ ಓದಿ: ಕೇಂದ್ರ ಬಜೆಟ್ 2023-24: ರಕ್ಷಣಾ ವಲಯಕ್ಕೆ ಹೆಚ್ಚಿದ ಕೊಡುಗೆ; ಆಧುನೀಕರಣಕ್ಕೆ ಒತ್ತು..!

ಈ ಹಿಂದೆ, ಸೋವಿಯತ್ ಒಕ್ಕೂಟ ಮತ್ತು ಚೀನಾದಂತಹ ರಾಷ್ಟ್ರಗಳು ರಕ್ಷಣಾ ಉಪಕರಣಗಳು ಸೇರಿದಂತೆ ಎಲ್ಲವನ್ನೂ ದೇಶೀಯವಾಗಿ ಉತ್ಪಾದಿಸಿ, ತಮ್ಮ ಉದ್ಯಮಗಳನ್ನು ಅಭಿವೃದ್ಧಿ ಪಡಿಸಲು ಯೋಚಿಸಿದ್ದವು. ಆದರೆ ಇಂತಹ ಪ್ರಯತ್ನಗಳ ಪರಿಣಾಮವಾಗಿ ಕಡಿಮೆ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುವಂತಾಯಿತು. ಅದರೊಡನೆ, ಕೌಶಲ್ಯ ಮತ್ತು ಸಂಪನ್ಮೂಲಗಳ ಕೊರತೆಯಿಂದಾಗಿ ನಿರ್ಮಾಣವೂ ತಡವಾಗುತ್ತಿತ್ತು. ಭಾರತವೂ ವಿದೇಶೀ ತಂತ್ರಜ್ಞಾನ ಮತ್ತು ಪರಿಣತಿಯ ಬದಲು ದೇಶೀಯ ನಿರ್ಮಾಣಕ್ಕೇ ಹೆಚ್ಚಿನ ಒತ್ತು ನೀಡುತ್ತಾ ಹೋದರೆ, ಇದೇ ಸಮಸ್ಯೆಯನ್ನು ಎದುರಿಸಬೇಕಾಗಿ ಬರಬಹುದು. ಸ್ವಾವಲಂಬನೆ ಎನ್ನುವುದು ಅತ್ಯಂತ ಪ್ರಮುಖ ಗುರಿಯಾದರೂ, ಅದಕ್ಕಾಗಿ ರಕ್ಷಣಾ ಕ್ಷೇತ್ರದಂತಹ ಮಹತ್ವದ ವಿಚಾರದಲ್ಲಿ ಗುಣಮಟ್ಟ ಮತ್ತು ದಕ್ಷತೆಯಲ್ಲಿ ರಾಜಿ ಮಾಡಿಕೊಳ್ಳಬಾರದು.

ಶೀತಲ ಸಮರದ ಕಾಲದಲ್ಲಿ, ಸೋವಿಯತ್ ಒಕ್ಕೂಟ ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಗುರಿ ಹೊಂದಿ, ವಿದೇಶಿ ತಂತ್ರಜ್ಞಾನದ ಖರೀದಿಯ ಬದಲಿಗೆ ದೇಶೀಯ ನಿರ್ಮಾಣಕ್ಕೆ ಒತ್ತು ನೀಡಿತು. ಆದರೆ ಇದರ ಪರಿಣಾಮವಾಗಿ ಕಡಿಮೆ ಗುಣಮಟ್ಟದ ಉತ್ಪನ್ನಗಳು ನಿರ್ಮಾಣಗೊಂಡವು. ಪರಿಣತಿಯ ಕೊರತೆಯಿಂದ ಸೂಕ್ತ ಸಮಯದಲ್ಲಿ ಪೂರೈಕೆಯೂ ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ, ಪಾಶ್ಚಾತ್ಯ ರಾಷ್ಟ್ರಗಳ ಆಧುನಿಕ ತಂತ್ರಜ್ಞಾನಗಳಿಗೆ ಹೋಲಿಸಿದರೆ ಸೋವಿಯತ್ ಒಕ್ಕೂಟದ ಮಿಲಿಟರಿ - ಉದ್ಯಮ ಹಿಂದುಳಿಯುವಂತಾಯಿತು.

ಅದೇ ರೀತಿ, ಕಮ್ಯುನಿಸ್ಟ್ ನಾಯಕತ್ವದ ಅಡಿಯಲ್ಲಿ ಚೀನಾ ಸಹ ತನ್ನ ಉದ್ಯಮಗಳನ್ನು ದೇಶೀಯವಾಗಿ ಅಭಿವೃದ್ಧಿ ಪಡಿಸುವ ಹಾದಿಯನ್ನು ಹಿಡಿಯಿತು. ಇದು ಚೀನಾವನ್ನು ಜಾಗತಿಕ ಉತ್ಪಾದನಾ ಕೇಂದ್ರವಾಗಿ ರೂಪಿಸಲು ನೆರವಾಯಿತು. ಆದರೆ ಚೀನಾ ಸಹ ಗುಣಮಟ್ಟ ಹಾಗೂ ಸರಿಯಾದ ಸಮಯದಲ್ಲಿ ಪೂರೈಸುವ ವಿಚಾರದಲ್ಲಿ ವಿಫಲವಾಗಬೇಕಾಯಿತು ಹಾಗೂ ಸಂಪನ್ಮೂಲಗಳ ಕೊರತೆ ಎದುರಿಸಬೇಕಾಯಿತು. ಆದರೆ ಇತ್ತೀಚಿನ ವರ್ಷಗಳಲ್ಲಿ ಚೀನಾ ವಿದೇಶೀ ತಂತ್ರಜ್ಞಾನಗಳನ್ನು ಪಡೆಯುವಲ್ಲಿ ಮತ್ತು ಪ್ರಾವೀಣ್ಯತೆ ಸಾಧಿಸುವಲ್ಲಿ ಅಪಾರ ಅಭಿವೃದ್ಧಿ ಸಾಧಿಸಿದೆ. ಇದು ಚೀನಾ ಹಲವು ಸವಾಲುಗಳನ್ನು ಮೀರಿ ನಿಲ್ಲುವಂತೆ ಮಾಡಿದೆ.

ಇನ್ನು ಭಾರತದ ವಿಚಾರಕ್ಕೆ ಬರುವುದಾದರೆ, ದೇಶೀಯ ನಿರ್ಮಾಣಕ್ಕೆ ಒತ್ತು ನೀಡಲು ಪ್ರಮುಖ ಕಾರಣವೆಂದರೆ ವಿದೇಶೀ ಪೂರೈಕೆದಾರರ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುವುದು ಹಾಗೂ ದೇಶೀಯ ರಕ್ಷಣಾ ಉದ್ಯಮವನ್ನು ಅಭಿವೃದ್ಧಿ ಪಡಿಸುವುದು. ಆದರೆ ಸ್ವಾವಲಂಬನೆಯನ್ನು ಸಾಧಿಸುವಾಗ, ರಕ್ಷಣಾ ಕ್ಷೇತ್ರದಂತಹ ಮಹತ್ವದ ವಲಯದಲ್ಲಿ ಗುಣಮಟ್ಟ ಮತ್ತು ದಕ್ಷತೆಯನ್ನು ಮರೆಯಬಾರದು. ದೇಶೀಯ ಸಾಮರ್ಥ್ಯದ ಅಭಿವೃದ್ಧಿ ಹಾಗೂ ವಿದೇಶಿ ತಂತ್ರಜ್ಞಾನ ಪಡೆದುಕೊಳ್ಳುವಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ.

click me!