5.94 ಲಕ್ಷ ಕೋಟಿ ರೂ ರಕ್ಷಣಾ ಬಜೆಟ್‌: ಚೀನಾ, ಪಾಕ್‌ ಉಪಟಳ ಹೆಚ್ಚಳದಿಂದ ಅನುದಾನ ಹೆಚ್ಚಳ

By Kannadaprabha NewsFirst Published Feb 2, 2023, 12:19 PM IST
Highlights

ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿ ಈ ಬಾರಿ 45 ಲಕ್ಷ ಕೋಟಿ ವೆಚ್ಚ ಮಾಡುವುದಾಗಿ ಘೋಷಿಸಿಕೊಂಡಿದೆ. ಇದರಲ್ಲಿ ಪ್ರಮುಖ ವೆಚ್ಚದ ಮಾಹಿತಿ ಇಲ್ಲಿದೆ.

ನವದೆಹಲಿ:  ದೇಶದ ಭದ್ರತೆಗೆ ಅತಿ ಮಹತ್ವದ್ದಾಗಿರುವ ರಕ್ಷಣಾ ವಲಯಕ್ಕೆ 2023-24ನೇ ಸಾಲಿನಲ್ಲಿ 5.94 ಲಕ್ಷ ಕೋಟಿ ರು. ಅನುದಾನ ಘೋಷಿಸಲಾಗಿದೆ. ಕಳೆದ ವರ್ಷ 5.25 ಲಕ್ಷ ಕೋಟಿ ರು. ನೀಡಲಾಗಿತ್ತು. ಆದರೆ ಅತ್ತ ಚೀನಾ ಹಾಗೂ ಇತ್ತ ಪಾಕಿಸ್ತಾನದ ಉಪಟಳ ಹೆಚ್ಚಿರುವ ಕಾರಣ ಸಹಜವಾಗಿಯೇ ಹೆಚ್ಚಿನ ಅನುದಾನವಾದ 5,93,537.64 ಕೋಟಿ ರು. ಪ್ರಕಟಿಸಲಾಗಿದೆ. ಹೊಸ ಶಸ್ತ್ರಾಸ್ತ್ರಗಳು, ವಿಮಾನಗಳು, ಯುದ್ಧನೌಕೆಗಳು ಮತ್ತು ಇತರ ಮಿಲಿಟರಿ ಯಂತ್ರಾಂಶಗಳನ್ನು ಖರೀದಿಸುವುದನ್ನು ಒಳಗೊಂಡಿರುವ ಬಂಡವಾಳ ವೆಚ್ಚಕ್ಕಾಗಿ ಒಟ್ಟು . 1.62 ಲಕ್ಷ ಕೋಟಿಗಳನ್ನು ಮೀಸಲಿಡಲಾಗಿದೆ.

2022-23ಕ್ಕೆ, ಬಂಡವಾಳ ಹೂಡಿಕೆಗೆ ಬಜೆಟ್‌ .1.52 ಲಕ್ಷ ಕೋಟಿ ಹಂಚಿಕೆ ಮಾಡಲಾಗಿತ್ತು. ಆದರೆ ಇದನ್ನು ಪರಿಷ್ಕರಿಸಲಾಗಿದ್ದು, .1.50 ಲಕ್ಷ ಕೋಟಿ ರು.ಗೆ ಬದಲಿಸಲಾಗಿದೆ. 2023-24ರ ಬಜೆಟ್‌ ದಾಖಲೆಗಳ ಪ್ರಕಾರ, ಆದಾಯ ವೆಚ್ಚಕ್ಕಾಗಿ 2,70,120 ಕೋಟಿ ರು. ನಿಗದಿಪಡಿಸಲಾಗಿದೆ, ಇದರಲ್ಲಿ ವೇತನ ಪಾವತಿ ಮತ್ತು ಸಂಸ್ಥೆಗಳ ನಿರ್ವಹಣೆ ವೆಚ್ಚಗಳು ಸೇರಿವೆ.

2022-23ರಲ್ಲಿ ಆದಾಯ ವೆಚ್ಚಕ್ಕೆಂದು  2,39,000 ಕೋಟಿ ರು. ಹಂಚಿಕೆ ಮಾಡಲಾಗಿದೆ. ಇನ್ನು ಮುಂದಿನ ಸಾಲಿನಲ್ಲಿ ರಕ್ಷಣಾ ಸಚಿವಾಲಯಕ್ಕೆ (ನಾಗರಿಕ) ಬಂಡವಾಳ ಹೂಡಿಕೆಯನ್ನು . 8,774 ಕೋಟಿ ಎಂದು ನಿಗದಿಪಡಿಸಲಾಗಿದ್ದು, .13,837 ಕೋಟಿ ಮೊತ್ತವನ್ನು ಬಂಡವಾಳ ವೆಚ್ಚದ ಅಡಿಯಲ್ಲಿ ಮೀಸಲಿಡಲಾಗಿದೆ. ರಕ್ಷಣಾ ಪಿಂಚಣಿಗಾಗಿ .1,38,205 ಕೋಟಿ ಪ್ರತ್ಯೇಕ ಮೊತ್ತವನ್ನು ನಿಗದಿಪಡಿಸಲಾಗಿದೆ. ಇನ್ನು ಪಿಂಚಣಿ ವೆಚ್ಚ ಸೇರಿದಂತೆ ಒಟ್ಟು ಆದಾಯ ವೆಚ್ಚವನ್ನು .4,22,162 ಕೋಟಿ ಎಂದು ಅಂದಾಜಿಸಲಾಗಿದೆ.

ರೈಲ್ವೆಗೆ ದಾಖಲೆಯ .2.40 ಲಕ್ಷ ಕೋಟಿ ಬಜೆಟ್

ಬಜೆಟ್‌ನಲ್ಲಿ ಈ ಬಾರಿ ಸರ್ಕಾರ ರೈಲ್ವೆ ಇಲಾಖೆಗೆ ದಾಖಲೆಯ 2.40 ಲಕ್ಷ ಕೋಟಿ ರು. ಅನುದಾನ ಮೀಸಲಿಟ್ಟಿದೆ. ಇದು ಈವರೆಗಿನ ಗರಿಷ್ಠ ಮೊತ್ತವಾಗಿದ್ದು, 2013-14ರ ಬಂಡವಾಳ ಹೂಡಿಕೆಯ ಮೊತ್ತಕ್ಕಿಂತ 9 ಪಟ್ಟು ಹೆಚ್ಚು. ಕಳೆದ ಬಜೆಟ್‌ನಲ್ಲಿ ವಂದೇ ಭಾರತ್‌ ರೈಲಿಗೆ ಹೆಚ್ಚಿನ ಆದ್ಯತೆ ನೀಡಿದ್ದ ಸರ್ಕಾರ ಈ ಬಾರಿ ಇದನ್ನು ಮತ್ತಷ್ಟುಮಾರ್ಗಗಳಿಗೆ ವಿಸ್ತರಿಸಲು ನಿರ್ಧರಿಸಿದೆ. ಕಲ್ಲಿದ್ದಲು, ರಸಗೊಬ್ಬರ, ಆಹಾರ ಧಾನ್ಯಗಳ ಕ್ರೇತ್ರಗಳ ನಡುವಿನ ಸಂಕರ್ಪಕಕ್ಕಾಗಿ 100 ನಿರ್ಣಾಯಕ ಸಾರಿಗೆ ಮೂಲಸೌಕರ್ಯ ಯೋಜನೆಗೆ 75,000 ಕೋಟಿ ರು. ಘೋಷಿಸಲಾಗಿದೆ. ಇದಕ್ಕಾಗಿ ಖಾಸಗಿ ಮೂಲಗಳಿಂದ 15000 ಕೋಟಿ ರು. ಪಡೆಯಲು ನಿರ್ಧರಿಸಿದೆ.

ಸ್ಟಾರ್ಟಪ್‌ಗಳಿಗೆ ಮತ್ತೊಂದು ವರ್ಷ ತೆರಿಗೆ ವಿನಾಯಿತಿ: ಐಟಿ ರಿಟರ್ನ್ಸ್ 24 ತಾಸುಗಳಲ್ಲಿ ಕ್ಲಿಯರ್‌!

ರಾಜಧಾನಿ, ಶತಾಬ್ದಿ ಸೇರಿದಂತೆ ಪ್ರಮುಖ ರೈಲುಗಳಲ್ಲಿ 1000 ಬೋಗಿಗಳ ನವವೀಕರಣಕ್ಕೆ ನಿರ್ಧರಿಸಿದೆ. ಹಳೆಯ ಟ್ರ್ಯಾಕ್‌ ಬದಲಾಯಿಸುವುದರ ಜೊತೆಗೆ ಹೈಸ್ಪೀಡ್‌ ರೈಲುಗಳ ಸಂಚಾರಕ್ಕೆ ಒತ್ತು. ಪ್ರವಾಸೋಧ್ಯಮದ ಆಕರ್ಷಣೆಗೆ 100 ವಿಸ್ಟಾಡೋಮ್‌ ಕೋಚ್‌, 35 ಹೈಡ್ರೋಜನ್‌ ಇಂಧನ ಆಧಾರಿತ ರೈಲು, ಅಟೋಮೊಬೈಲ್‌ ಸಾಗಾಟಕ್ಕೆ ಹೊಸ ಶೈಲಿಯ 4500 ಕೋಚ್‌, 5000 ಎಲ್‌ಎಚ್‌ಬಿ ಕೋಚ್‌, 58,000 ವೇಗನ್ಸ್‌ ಕೋಚ್‌ಗಳ ತಯಾರಿಕೆಗೆ ನಿರ್ಧರಿಸಿದೆ. 2022-23ರ ಬಜೆಟ್‌ನಲ್ಲಿ ರೈಲ್ವೆಗೆ 1.4 ಲಕ್ಷ ಕೋಟಿ ರು. ಮೀಸಲಿಟ್ಟಿತ್ತು.

45 ಲಕ್ಷ ಕೋಟಿ ಯಾವುದಕ್ಕೆ, ಏಕೆ ಖರ್ಚು ಮಾಡ್ತಿದೆ ಸರ್ಕಾರ

ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿ ಈ ಬಾರಿ 45 ಲಕ್ಷ ಕೋಟಿ ವೆಚ್ಚ ಮಾಡುವುದಾಗಿ ಘೋಷಿಸಿಕೊಂಡಿದೆ. ಇದರಲ್ಲಿ ಪ್ರಮುಖ ವೆಚ್ಚದ ಮಾಹಿತಿ ಇಲ್ಲಿದೆ. ಬಡ್ಡಿ ಪಾವತಿಗಾಗಿ 1.39 ಲಕ್ಷ ಕೋಟಿ ವ್ಯಯಿಸಲಾಗುತ್ತಿದೆ. ಇದರಲ್ಲಿ ಸರ್ಕಾರವು ಮಾಡಿದ ಸಾಲ, ರಿಯಾಯಿತಿಗಳು, ರಾಷ್ಟ್ರೀಯ ಉಳಿತಾಯ ಯೋಜನೆ, ರಾಜ್ಯ ಪ್ರಾವಿಡೆಂಟ್‌ ಫಂಡ್‌ಗೆ ಹಣ ನೀಡಲಿದೆ. ಇನ್ನು ರಾಜ್ಯ ಸರ್ಕಾರಗಳಿಗೆ ಸಾಲ, ಅನುದಾನ ನೀಡಲು .1.01 ಲಕ್ಷ ಕೋಟಿಯನ್ನು ಮೀಸಲಿರಿಸಲಾಗಿದೆ. ಇದರಿಂದ ರಾಜ್ಯಗಳ ಜಿಎಸ್‌ಟಿ ಪಾಲು, ವಿಶೇಷ ಸಾಲ ನೀಡಲಿದೆ. ಇನ್ನು ರೈಲ್ವೆಗೆ .80 ಸಾವಿರ ಕೋಟಿ ನೀಡಿದ್ದು, ಈ ಹಣದಲ್ಲಿ ಹೊಸ ರೈಲ್ವೆ ಹಳಿ ನಿರ್ಮಾಣ, ದ್ವಿಪಥ, ರೈಲ್ವೆಯಲ್ಲಿ ಹೂಡಿಕೆ ಮಾಡಲಿದೆ. ಪೆಟ್ರೋಲಿಯಂಗೆ .35 ಸಾವಿರ ಕೋಟಿ ಅನುದಾನ ನೀಡಿದ್ದು ತೈಲ ಕಂಪನಿಗಳಲ್ಲಿ ಹೂಡಿಕೆ ಮಾಡಲಿದೆ. ಅಲ್ಲದೆ ಭೂ, ವಾಯು, ನೌಕಾ ಸೇನೆಯ ವಿವಿಧ ಖರ್ಚುಗಳಿಗೆ .23 ಸಾವಿರ ಕೋಟಿ ನೀಡಿದೆ.

ಹೊಸ ಹಾಗೂ ಹಳೆ ತೆರಿಗೆ ಪದ್ಧತಿ ನಡುವಿನ ವ್ಯತ್ಯಾಸವೇನು..?

ನೀರು ಪೂರೈಕೆ, ನೈರ್ಮಲ್ಯಕ್ಕಾಗಿ .13 ಸಾವಿರ ಕೋಟಿ ವ್ಯಯಿಸಲಿದೆ. ಜಲ ಜೀವನ ಮಿಷನ್‌ ಮತ್ತು ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಗೆ ಹಣ ವೆಚ್ಚವಾಗುತ್ತದೆ. ಅಲ್ಲದೆ ಬಿಎಸ್‌ಎಫ್‌, ಸಿಐಎಸ್‌ಎಫ್‌, ಪೊಲೀಸ್‌, ಕೇಂದ್ರ ಮೀಸಲು ಪಡೆಯ ವೆಚ್ಚಕ್ಕಾಗಿ .6,999 ಕೋಟಿ ನೀಡಲಿದೆ. ಅಲ್ಲದೆ ಗ್ರಾಮೀಣ, ಸಣ್ಣ ಕೈಗಾರಿಕೆ ವಿಭಾಗದಲ್ಲಿ .6,268 ಕೋಟಿಯನ್ನು ಸಣ್ಣ ಕೈಗಾರಿಕೆಗಳಿಗೆ ತುರ್ತು ಸಾಲಕ್ಕಾಗಿ ಬಳಕೆ ಮಾಡಲಿದೆ. ವೈಜ್ಞಾನಿಕ ಸಂಶೋಧನೆಗಾಗಿ ರಾಷ್ಟ್ರೀಯ ಸಂಶೋಧನಾ ಫೌಂಡೇಷನ್‌ ಸ್ಥಾಪನೆ ಮಾಡಲು .3,232 ಕೋಟಿ ಇಟ್ಟಿದೆ. ಎಸ್ಸಿ, ಎಸ್ಟಿ, ಒಬಿಸಿ, ಅಲ್ಪಸಂಖ್ಯಾತರ ಕಲ್ಯಾಣ ವಿಭಾಗದಲ್ಲಿ .3229 ಕೋಟಿಯನ್ನು ಏಕಲವ್ಯ ಮಾದರಿ ವಸತಿ ಶಾಲೆಗೆ ನೀಡಲಿದೆ. .2400 ಕೋಟಿಯಲ್ಲಿ ಕೆನ್‌-ಬೆಟ್ವಾ ನದಿಗಳ ಜೋಡಣೆಗೆ ಬಳಸಲಿದೆ.
 

click me!