ಡಿ.31ರೊಳಗೆ ಈ ಪ್ರಮುಖ ಹಣಕಾಸು ಕಾರ್ಯಗಳನ್ನುಮಾಡಿ ಮುಗಿಸದಿದ್ರೆ, ಹೊಸ ವರ್ಷದಲ್ಲಿ ಜೇಬಿಗೆ ಹೊರೆ ಗ್ಯಾರಂಟಿ!

By Suvarna NewsFirst Published Dec 20, 2023, 5:17 PM IST
Highlights

ಈ ವರ್ಷ ಮುಗಿಯಲು ಇನ್ನು ಕೆಲವು ದಿನಗಳಷ್ಟೇ ಬಾಕಿ ಉಳಿದಿವೆ. ಹೀಗಿರುವಾಗ ಡಿ.31ರೊಳಗೆ ಕೆಲವು ಪ್ರಮುಖ ಹಣಕಾಸು ಕೆಲಸಗಳನ್ನು ಪೂರ್ಣಗೊಳಿಸೋದು ಅಗತ್ಯ.ಇಲ್ಲವಾದರೆ ಮುಂದಿನ ವರ್ಷ ತೊಂದರೆ ಎದುರಾಗಹುದು. 

ನವದೆಹಲಿ (ಡಿ.20): ಈ ವರ್ಷ ಮುಗಿಯಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಿರುವಾಗ ಎಲ್ಲರೂ 2024 ಅನ್ನು ಸ್ವಾಗತಿಸಲು ಹಾಗೂ ಅದಕ್ಕೂ ಮುನ್ನ ಕೆಲವೊಂದು ಪ್ರಮುಖ ಕೆಲಸಗಳನ್ನು ಅಂತಿಮ ಗಡುವಿನೊಳಗೆ ಮಾಡಿ ಮುಗಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. 2023ನೇ ಸಾಲಿನಲ್ಲಿ ಮಾಡಿ ಮುಗಿಸಬೇಕಾದ ಪ್ರಮುಖ ಕೆಲಸಗಳಿಗೆ ಡಿಸೆಂಬರ್ 31 ಅಂತಿಮ ಗಡುವಾಗಿದೆ. ಇನ್ನು ಈ ಕೆಲಸಗಳನ್ನು ಅಂತಿಮ ಗಡುವಿನೊಳಗೆ ಮಾಡಿ ಮುಗಿಸದಿದ್ದರೆ ಮುಂದೆ ತೊಂದರೆ ಎದುರಾಗಲಿದೆ. ಹಾಗಾದ್ರೆ ಡಿ.31ರೊಳಗೆ ಪೂರ್ಣಗೊಳಿಸಬೇಕಾದ ಪ್ರಮುಖ ಕೆಲಸಗಳು ಯಾವುವು? ಇಲ್ಲಿದೆ ಮಾಹಿತಿ.

1.ಡಿಮ್ಯಾಟ್ ಖಾತೆಗೆ ನಾಮಿನಿ ಸೇರ್ಪಡೆ
ಡಿಮ್ಯಾಟ್ ಖಾತೆ ಹಾಗೂ ಮ್ಯೂಚುವಲ್ ಫಂಡ್ ಗೆ ನಾಮಿನಿ ಹೆಸರಿಸಲು ಡಿಸೆಂಬರ್ 31 ಅಂತಿಮ ಗಡುವಾಗಿದೆ. ಹೀಗಾಗಿ ನೀವು ಇನ್ನೂ ಈ ಕೆಲಸ ಮಾಡದಿದ್ರೆ ಕೊನೆಯ ದಿನದ ತನಕ ಕಾಯದೆ ತಕ್ಷಣ ಮಾಡಿ ಮುಗಿಸಿ. ಒಂದು ವೇಳೆ ನೀವು ನಿಮ್ಮ ಮ್ಯೂಚುವಲ್ ಫಂಡ್ ಅಥವಾ ಡಿಮ್ಯಾಟ್ ಖಾತೆಗೆ ನಾಮಿನಿ ಸೇರ್ಪಡೆ ಮಾಡದಿದ್ರೆ ಅವು ನಿಷ್ಕ್ರಿಯಗೊಳ್ಳುವ ಅಪಾಯವಿದೆ.

Latest Videos

2.ಬ್ಯಾಂಕ್ ಲಾಕರ್ ಒಪ್ಪಂದಕ್ಕೆ ಅಂತಿಮ ಗಡುವು
ಪರಿಷ್ಕೃತ ಹೊಸ ಬ್ಯಾಂಕ್ ಲಾಕರ್ ಒಪ್ಪಂದಕ್ಕೆ ಎಲ್ಲ ಗ್ರಾಹಕರು ಸಹಿ ಮಾಡುವಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಸೂಚಿಸಿದ್ದು, ಇದಕ್ಕೆ 2023ರ ಡಿಸೆಂಬರ್ 31ರ ಗಡುವು ನೀಡಿದೆ. ಒಂದು ವೇಳೆ ನೀವು ಇನ್ನೂ ಪರಿಷ್ಕೃತ ಬ್ಯಾಂಕ್ ಲಾಕರ್ ಒಪ್ಪಂದ ಸಲ್ಲಿಕೆ ಮಾಡದಿದ್ದರೆ ಅಪ್ಡೇಟ್ ಆಗಿರುವ ಒಪ್ಪಂದಕ್ಕೆ ಸಹಿ ಮಾಡಿ ಡಿ.31ರೊಳಗೆ ಸಲ್ಲಿಕೆ ಮಾಡಬೇಕು.

ತೆರಿಗೆದಾರರೇ ಗಮನಿಸಿ, ವಿಳಂಬ, ಪರಿಷ್ಕೃತ ಐಟಿಆರ್ ಸಲ್ಲಿಕೆಗೆ ಡಿ.31 ಅಂತಿಮ ಗಡುವು

3.ವಿಳಂಬ, ಪರಿಷ್ಕೃತ ಐಟಿಆರ್ ಸಲ್ಲಿಕೆ
022-23ನೇ ಹಣಕಾಸು ಸಾಲಿನ (2023-24ನೇ ಮೌಲ್ಯಮಾಪನ ವರ್ಷ) ವಿಳಂಬ ಐಟಿಆರ್ ಸಲ್ಲಿಕೆಗೆ ಡಿಸೆಂಬರ್ 31 ಅಂತಿಮ ಗಡುವಾಗಿದೆ. ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಅನ್ನು ಅಂತಿಮ ಗಡುವಾದ ಜುಲೈ 31ರೊಳಗೆ ಫೈಲ್ ಮಾಡದವರು ವಿಳಂಬ ಐಟಿಆರ್ ಸಲ್ಲಿಕೆ ಮಾಡಬೇಕು. ಇನ್ನು ಅಂತಿಮ ಗಡುವಿನ ಮುನ್ನ ನೀವು ಐಟಿಆರ್ ಸಲ್ಲಿಕೆ ಮಾಡಿದ್ದು, ಅದರಲ್ಲಿನ ಕೆಲವು ತಪ್ಪುಗಳನ್ನು ಸರಿಪಡಿಸಿ ಪರಿಷ್ಕೃತ ಐಟಿಆರ್ ಸಲ್ಲಿಸಲು ಕೂಡ ಡಿ.31 ಕೊನೆಯ ದಿನವಾಗಿದೆ. ಸಮಯಕ್ಕೆ ಸರಿಯಾಗಿ ಐಟಿಆರ್ ಸಲ್ಲಿಕೆ ಮಾಡಲು ನೀವು ವಿಫಲರಾದ್ರೆ ವಿಳಂಬ (Belated)ಐಟಿಅರ್ ಸಲ್ಲಿಕೆಗೆ ದಂಡ ಶುಲ್ಕ ಕಟ್ಟಬೇಕು. ಹಣಕಾಸು ಕಾಯ್ದೆ ಅನ್ವಯ ಈ ದಂಡವನ್ನು ನಿಗದಿಪಡಿಸಲಾಗಿದ್ದು, 1,000ರೂ.ನಿಂದ  5,000ರೂ. ತನಕ ಇರುತ್ತದೆ.  

4.ಎಸ್ ಬಿಐ ಅಮೃತ್ ಕಲಶ್ ಯೋಜನೆ
ದೇಶದ ಸಾರ್ವಜನಿಕ ವಲಯದ ಅತೀದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಅಮೃತ್ ಕಲರ್ಶ ವಿಶೇಷ ಎಫ್ ಡಿ ಯೋಜನೆಯಲ್ಲಿ ಹೂಡಿಕೆ ಮಾಡಲು ನೀಡಿದ್ದ ಗಡುವನ್ನು ವಿಸ್ತರಣೆ ಮಾಡಲಾಗಿತ್ತು. ಅದರ ಅನ್ವಯ ಹೂಡಿಕೆದಾರರಿಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಲು 2023ರ ಡಿಸೆಂಬರ್ 31ರ ತನಕ ಸಮಯಾವಕಾಶ ನೀಡಲಾಗಿದೆ. ಈ ಎಫ್ ಡಿಯಲ್ಲಿನ ಹೂಡಿಕೆಗೆ ಶೇ.7.10ರಷ್ಟು ಬಡ್ಡಿದರ ನೀಡಲಾಗುತ್ತಿದೆ. 

5.ಯುಪಿಐ ಐಡಿಗಳು ನಿಷ್ಕ್ರಿಯ
ಒಂದು ವರ್ಷಕ್ಕಿಂತ ಹೆಚ್ಚು ಸಮಯದಿಂದ ಕಾರ್ಯನಿರ್ವಹಿಸದ ಯುಪಿಐ ಐಡಿಗಳನ್ನು ನಿಷ್ಕ್ರಿಯಗೊಳಿಸುವಂತೆ ಪೇಟಿಎಂ, ಗೂಗಲ್ ಪೇ, ಫೋನ್ ಪೇ ಮುಂತಾದ ಪಾವತಿ ಆಪ್ ಗಳಿಗೆ ಹಾಗೂ ಬ್ಯಾಂಕ್ ಗಳಿಗೆ  ಭಾರತದ ರಾಷ್ಟ್ರೀಯ ಪಾವತಿಗಳ ನಿಗಮ (ಎನ್ ಪಿಸಿಐ) ನಿರ್ದೇಶನ ನೀಡಿದೆ. ಈ ನಿಯಮ ಅನುಷ್ಠಾನಕ್ಕೆ ಥರ್ಡ್ ಪಾರ್ಟಿ ಆಪ್ ಪ್ರಾವೈಡರ್ಸ್ (ಟಿಪಿಎಪಿ) ಹಾಗೂ ಪಾವತಿ ಸೇವೆ ಪೂರೈಕೆದಾರರಿಗೆ (PSP) ಎನ್ ಪಿಸಿಐ ಡಿಸೆಂಬರ್ 31ರ ಗಡುವು ನೀಡಿದೆ. 

6.ಎಸ್ ಬಿಐ ಗೃಹಸಾಲ ಆಫರ್
ಗೃಹಸಾಲಗಳಿಗೆ ಎಸ್ ಬಿಐ ಪ್ರಸ್ತುತ ವಿಶೇಷ ಆಂದೋಲನ ನಡೆಸುತ್ತಿದೆ. 65 ಬೇಸಿಸ್ ಪಾಯಿಂಟ್ ಗಳ ಕಡಿತ ಕೂಡ ನೀಡುತ್ತಿದೆ. ಈ ವಿಶೇಷ ಕಡಿತ ಅನೇಕ ವಿಧದ ಗೃಹಸಾಲಗಳಿಗೆ ಅನ್ವಯಿಸಲಿದ್ದು, ಡಿಸೆಂಬರ್ 31ರ ತನಕ ಜಾರಿಯಲ್ಲಿರಲಿದೆ.

click me!