*ಆನ್ ಲೈನ್ ಖರೀದಿ ಬಳಿಕ ಪಾವತಿಗೆ ಡೆಬಿಟ್,ಕ್ರೆಡಿಟ್ ಕಾರ್ಡ್ ಟೋಕನೈಸೇಷನ್ ಅಗತ್ಯ
*ಆನ್ ಲೈನ್ ಪಾವತಿ ಸುರಕ್ಷಿತವಾಗಿಸಲು ಕಾರ್ಡ್ ಟೋಕನೈಸೇಷನ್ ಜಾರಿಗೊಳಿಸುತ್ತಿರುವ ಆರ್ ಬಿಐ
*ಈ ಹಿಂದೆ ಜೂನ್ 30ಕ್ಕಿದ್ದ ಟೋಕನೈಸೇಷನ್ ಗಡುವನ್ನು ಸೆ.30ರ ತನಕ ವಿಸ್ತರಿಸಿದ್ದ ಆರ್ ಬಿಐ
Business Desk:ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಮೂಲಕ ಆನ್ ಲೈನ್ ಪಾವತಿಗೆ ಸಂಬಂಧಿಸಿದ ನಿಯಮ ಅಕ್ಟೋಬರ್ 1ರಿಂದ ಬದಲಾಗಲಿದ್ದು, ಟೋಕನೈಸೇಷನ್ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಅಧಿಸೂಚನೆಯಲ್ಲಿ ತಿಳಿಸಿದೆ. ಈ ಹಿಂದೆ ಕಾರ್ಡ್ ಟೋಕನೈಸೇಷನ್ ವ್ಯವಸ್ಥೆ ಅನುಷ್ಠಾನಕ್ಕೆ ಆರ್ ಬಿಐ ಜೂನ್ 30ರ ಗಡುವು ನೀಡಿತ್ತು. ಆದರೆ, ನಂತರ ಈ ಗಡುವನ್ನು ಸೆಪ್ಟೆಂಬರ್ 30ರ ತನಕ ವಿಸ್ತರಿಸಿತ್ತು. ಒಂದು ವೇಳೆ ಗ್ರಾಹಕರು ಟೋಕನೈಸೇಷನ್ ಹೊಸ ನಿಯಮ ಪಾಲಿಸದಿದ್ರೆ ಆನ್ ಲೈನ್ ಪಾವತಿ ಮಾಡಲು ಜಾಸ್ತಿ ಸಮಯ ಹಿಡಿಯುತ್ತದೆ. ಡೆಬಿಟ್ (Debit) ಅಥವಾ ಕ್ರೆಡಿಟ್ ಕಾರ್ಡ್ (Credit card) ಮೂಲಕ ನಡೆಸೋ ಆನ್ ಲೈನ್ ವಹಿವಾಟುಗಳಲ್ಲಿ ಈ ತನಕ ವರ್ತಕರು, ಪೇಮೆಂಟ್ ಗೇಟ್ ವೇಗಳು ಗ್ರಾಹಕರ ಕಾರ್ಡ್ ಮಾಹಿತಿಗಳನ್ನು ಸಂಗ್ರಹಿಸಿಡುತ್ತಿದ್ದವು. ಇದ್ರಿಂದ ಆ ಗ್ರಾಹಕ ಇನ್ನೊಮ್ಮೆ ಅದೇ ಆನ್ ಲೈನ್ ಸಂಸ್ಥೆಯಿಂದ ಖರೀದಿ ಮಾಡೋವಾಗ ಕಾರ್ಡ್ ಮಾಹಿತಿಗಳನ್ನು ದಾಖಲಿಸಬೇಕಾದ ಅಗತ್ಯವಿರಲಿಲ್ಲ. ಇದ್ರಿಂದ ತಕ್ಷಣವೇ ಪಾವತಿ ಪ್ರಕ್ರಿಯೆ ನಡೆಸಲು ಸಾಧ್ಯವಾಗುತ್ತಿತ್ತು. ಇದು ವರ್ತಕ ಹಾಗೂ ಗ್ರಾಹಕ ಇಬ್ಬರಿಗೂ ಸಮಯ ಉಳಿತಾಯ ಮಾಡುತ್ತಿತ್ತು. ಆದ್ರೆ ಟೋಕನೈಸೇಷನ್ ಜಾರಿಗೆ ಬಂದ ಬಳಿಕ ಈ ವ್ಯವಸ್ಥೆ ಇರೋದಿಲ್ಲ. ಆನ್ ಲೈನ್ ಪಾವತಿ ವ್ಯವಸ್ಥೆಯನ್ನು ಹೆಚ್ಚು ಸುರಕ್ಷಿತ ಹಾಗೂ ಸುಭದ್ರವಾಗಿಡಲು ಆರ್ ಬಿಐ ಟೋಕನೈಸೇಷನ್ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಿದೆ.
ಏನಿದು ಟೋಕನೈಸೇಷನ್ ?
ಕ್ರೆಡಿಟ್ (Credit) ಅಥವಾ ಡೆಬಿಟ್ (Debit) ಕಾರ್ಡ್ ಮಾಹಿತಿಗಳನ್ನು ಟೋಕನ್ (Token) ಎಂಬ ಪರ್ಯಾಯ ಕೋಡ್ ಗೆ ಬದಲಾಯಿಸೋ ಪ್ರಕ್ರಿಯೆಯನ್ನು ಟೋಕನೈಸೇಷನ್ ಎಂದು ಕರೆಯಲಾಗುತ್ತದೆ. ಈ ವ್ಯವಸ್ಥೆಯಲ್ಲಿ ಕಾರ್ಡ್ ಮಾಹಿತಿಗಳನ್ನು 'ಟೋಕನ್' ಎಂಬ ವಿಶಿಷ್ಟ ಪರ್ಯಾಯ ಕೋಡ್ ಗೆ ಬದಲಾಯಿಸಲಾಗುತ್ತದೆ. ಪ್ರತಿ ಕಾರ್ಡ್, ಸಾಧನ ಹಾಗೂ ಟೋಕನ್ ಮನವಿದಾರರನ್ನು ಪರಿಗಣಿಸಿ ಹೊಸ ಟೋಕನ್ ನೀಡಲಾಗುತ್ತದೆ. ಈ ಟೋಕನ್ ವ್ಯವಸ್ಥೆಯಿಂದಾಗಿ ಗ್ರಾಹಕರ ಕಾರ್ಡ್ ಮಾಹಿತಿಗಳು ಸುರಕ್ಷಿತವಾಗಿರುತ್ತವೆ. ಅಲ್ಲದೆ, ಬಳಕೆದಾರರ ಖಾತೆಯ ಸಂಪೂರ್ಣ ಮಾಹಿತಿ ವ್ಯಾಪಾರಿಗೆ ತಿಳಿಯೋದಿಲ್ಲ.
Rupee Vs Dollar: ಡಾಲರ್ ಎದುರು ಮತ್ತೆ ಮಂಡಿಯೂರಿದ ರೂಪಾಯಿ; ಸಾರ್ವಕಾಲಿಕ ಕನಿಷ್ಠ ಮಟ್ಟ 81.09ಕ್ಕೆ ಇಳಿಕೆ
ಡೆಬಿಟ್ , ಕ್ರೆಡಿಟ್ ಕಾರ್ಡ್ ಟೋಕನೈಸ್ ಮಾಡೋದು ಹೇಗೆ?
ಡೆಬಿಟ್ , ಕ್ರೆಡಿಟ್ ಕಾರ್ಡ್ ಟೋಕನೈಸ್ ಮಾಡೋದು ಕಷ್ಟದ ಕೆಲಸವೇನಲ್ಲ. ಇದಕ್ಕೆ ಅನುಸರಿಸಬೇಕಾದ ಹಂತಗಳು ಸರಳವಾಗಿದ್ದು, ಈ ಬಗ್ಗೆ ಆರ್ ಬಿಐ ಕೂಡ ಮಾಹಿತಿ ನೀಡಿದೆ. ಹಾಗಾದ್ರೆ ಕ್ರೆಡಿಟ್/ಡೆಬಿಟ್ ಕಾರ್ಡ್ ಟೋಕನೈಸ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ.
1. ಇ-ಕಾಮರ್ಸ್ ಅಥವಾ ಆನ್ ಲೈನ್ ವ್ಯಾಪಾರ ತಾಣಕ್ಕೆ ಭೇಟಿ ನೀಡಿ ಏನಾದ್ರೂ ಖರೀದಿಸಿ. ಆಗ ಪಾವತಿ ವಹಿವಾಟು ಪ್ರಾರಂಭವಾಗುತ್ತದೆ.
2.ಈಗ ಚೆಕ್ ಔಟ್ ಮಾಡುವಾಗ ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮಾಹಿತಿಗಳನ್ನು ನಮೂದಿಸಿ.
3.ಈಗ 'Secure your card' ಅಥವಾ 'Save card as per RBI guidelines' ಆಯ್ಕೆ ಮೇಲೆ ಕ್ಲಿಕ್ ಮಾಡಿ.
4. ನಿಮ್ಮ ಮೊಬೈಲ್ ಸಂಖ್ಯೆಗೆ ಅಥವಾ ಇ-ಮೇಲ್ ಐಡಿಗೆ ಬಂದಿರುವ ಒಟಿಪಿ (OTP) ನಮೂದಿಸಿ ಹಾಗೂ ವಹಿವಾಟು ಪೂರ್ಣಗೊಳಿಸಿ.
5.ನಿಮ್ಮ ಕಾರ್ಡ್ ನ ಮಾಹಿತಿಗಳ ಬದಲಿಗೆ ಈಗ ಟೋಕನ್ ಸೃಷ್ಟಿಯಾಗಿ ಅದರ ಮಾಹಿತಿ ಸೇವ್ ಆಗಿರುತ್ತದೆ.
6.ನೀವು ಇದೇ ವೆಬ್ ಸೈಟ್ ಅಥವಾ ಮೊಬೈಲ್ ಅಪ್ಲಿಕೇಷನ್ ಗೆ ಇನ್ನೊಮ್ಮೆ ಭೇಟಿ ನೀಡಿದಾಗ ನಿಮ್ಮ ಕಾರ್ಡ್ ನ ಸೇವ್ ಆಗಿರುವ ಕೊನೆಯ ನಾಲ್ಕು ಅಂಕೆಗಳು ಕಾಣಿಸುತ್ತವೆ.
Personal Finance: ಹಬ್ಬ ಬಂತು, ಬೇಕಾಬಿಟ್ಟಿ ಖರ್ಚು ಮಾಡೋದ್ ಕಮ್ಮಿ ಮಾಡಿ
ಹೇಗೆ ಕಾರ್ಯನಿರ್ವಹಿಸುತ್ತದೆ?
-ನೀವು ಆನ್ ಲೈನ್ ವ್ಯಾಪಾರ ತಾಣದಲ್ಲಿ ಖರೀದಿ ಪ್ರಾರಂಭಿಸಿದ ತಕ್ಷಣ ವ್ಯಾಪಾರಿ ಟೋಕನೈಸೇಷನ್ ಪ್ರಕ್ರಿಯೆಗೆ ಚಾಲನೆ ನೀಡುತ್ತಾನೆ. ನಿಮ್ಮ ಡೆಬಿಟ್ /ಕ್ರೆಡಿಟ್ ಕಾರ್ಡ್ ಟೋಕನೈಸೇಷನ್ ಮಾಡಲು ಅನುಮತಿ ಕೇಳುತ್ತಾನೆ.
-ಗ್ರಾಹಕ ಅನುಮತಿ ನೀಡಿದ ತಕ್ಷಣ ವ್ಯಾಪಾರಿ ಕಾರ್ಡ್ ನೆಟ್ ವರ್ಕ್ ಗೆ ಟೋಕನೈಸೇಷನ್ ಮನವಿ ಕಳುಹಿಸುತ್ತಾನೆ.
-ಕಾರ್ಡ್ ನೆಟ್ ವರ್ಕ್ ತಕ್ಷಣ ಆ ನಿರ್ದಿಷ್ಟ ಕಾರ್ಡ್ಗೆ ಸಂಬಂಧಿಸಿ 16 ಅಂಕೆಗಳ ಟೋಕನ್ ಸೃಷ್ಟಿಸಿ ವ್ಯಾಪಾರಿಗೆ ಕಳುಹಿಸುತ್ತದೆ.
-ವ್ಯಾಪಾರಿಯು ಭವಿಷ್ಯದ ವಹಿವಾಟುಗಳಿಗಾಗಿ ಈ ಟೋಕನ್ ಸೇವ್ ಮಾಡಿಟ್ಟುಕೊಳ್ಳುತ್ತಾನೆ.
-ವಹಿವಾಟು ನಡೆಸಲು ಗ್ರಾಹಕರು ಒಟಿಪಿ(OPT) ಹಾಗೂ ಸಿವಿವಿ( CVV) ಸಂಖ್ಯೆ ಮೂಲಕ ಅನುಮತಿ ನೀಡೋದು ಅಗತ್ಯ.
-ಬೇರೆ ವ್ಯಾಪಾರಿಗಳಿಗೆ ಅಥವಾ ಬೇರೆ ಕಾರ್ಡ್ ಮೂಲಕ ಶಾಪಿಂಗ್ ಮಾಡಿದ್ರೆ ಗ್ರಾಹಕರು ಆನ್ ಲೈನ್ ಪಾವತಿ ಮಾಡಲು ಈ ಎಲ್ಲ ನಿಯಮಗಳನ್ನು ಇನ್ನೊಮ್ಮೆ ಪಾಲಿಸೋದು ಅಗತ್ಯ.