ಕಳೆದ ಕೆಲವು ತಿಂಗಳಿಂದ ದೇಶದಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಿವೆ. ಉದ್ಯೋಗ, ಸಾಲ, ಬ್ಯಾಂಕ್ ಹೆಸರೇಳಿ ಖಾತೆಗೆ ಕನ್ನ ಹಾಕುತ್ತಿರೋರ ಸಂಖ್ಯೆ ಹೆಚ್ಚಿದೆ. ಈ ವಂಚಕರು ಅಮಾಯಕರನ್ನೇ ಗುರಿಯಾಗಿಸಿಕೊಂಡು ಲಕ್ಷಾಂತರ ರೂಪಾಯಿ ಲೂಟಿ ಮಾಡುತ್ತಿದ್ದಾರೆ. ಹೀಗಾಗಿ ಈ ಸೈಬರ್ ವಂಚಕರ ಆಮಿಷಗಳಿಗೆ ಬಲಿಯಾಗದಂತೆ ಎಚ್ಚರ ವಹಿಸೋದು ಅಗತ್ಯ.
Business Desk: ದಿನಪತ್ರಿಕೆಯಲ್ಲಿ ದಿನಭವಿಷ್ಯ ನೋಡುತ್ತ ಕುಳಿತ ಆ ಮನೆಯ ಇಳಿ ವಯಸ್ಸಿನ ಮಹಿಳೆಯ ಪತಿ ಮೊಬೈಲ್ ಗೆ ಕರೆಯೊಂದು ಬರುತ್ತದೆ. ಪತಿಯಿಲ್ಲದ ಕಾರಣ ಕರೆ ಸ್ವೀಕರಿಸುವ ಮಹಿಳೆಗೆ ಬ್ಯಾಂಕ್ ನಿಂದ ಕರೆ ಮಾಡುತ್ತಿರೋದಾಗಿಯೂ, ಎರಡು ಬ್ಯಾಂಕ್ ಗಳು ವಿಲೀನವಾಗುತ್ತಿದ್ದು, ಹಳೆಯ ಬ್ಯಾಂಕ್ ಖಾತೆ ಇರಲ್ಲ. ಎಲ್ಲ ಬದಲಾಗುತ್ತದೆ. ಹೀಗಾಗಿ ಬ್ಯಾಂಕ್ ಖಾತೆ ಮಾಹಿತಿ ನೀಡಿ. ಇಲ್ಲವಾದ್ರೆ ನಿಮ್ಮ ಬ್ಯಾಂಕ್ ಖಾತೆ ರದ್ದಾಗುತ್ತದೆ ಎಂದು ತಿಳಿಸಲಾಗುತ್ತದೆ. ಹೀಗಾಗಿ ಆ ಮಹಿಳೆ ಬ್ಯಾಂಕ್ ಖಾತೆ ಸಂಖ್ಯೆ, ಐಎಫ್ ಸಿ ಕೋಡ್ ಎಲ್ಲ ಮಾಹಿತಿಯನ್ನು ನೀಡುತ್ತಾಳೆ. ಸೊಸೆ ಬೇಡವೆಂದರೂ ಆಕೆಯನ್ನು ಗದರಿಸಿ ಮಾಹಿತಿ ನೀಡುತ್ತಾಳೆ. ಆದರೆ, ಆಕೆಗೆ ತಾನು ಆನ್ ಲೈನ್ ವಂಚಕರ ಬಲೆಗೆ ಬೀಳುತ್ತಿದ್ದೇನೆ ಎಂಬುದು ತಿಳಿಯೋದೇ ಇಲ್ಲ. ಇದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಯೊಂದರ ತುಣುಕು. ಇದು ರೀಲ್ ಆದ್ರೆ ಇತ್ತೀಚೆಗೆ ರಿಯಲ್ ಆಗಿ 27 ವರ್ಷದ ಯುವತಿ ಅಕೆರಾಲಿಕ ಉದ್ಯೋಗಕ್ಕೆ ಸಂಬಂಧಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ 7.23ಲಕ್ಷ ರೂ. ಕಳೆದುಕೊಂಡಿದ್ದಾಳೆ.ಇನ್‌ಸ್ಟಾಗ್ರಾಂನಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದ ಮಹಿಳೆ 61,000 ರೂ. ಕಳೆದುಕೊಂಡಿರುವ ಬಗ್ಗೆ ಕೆಲವು ತಿಂಗಳ ಹಿಂದೆ ವರದಿಯಾಗಿತ್ತು. ಇಂಥ ಹಲವಾರು ಘಟನೆಗಳು ಇತ್ತೀಚಿನ ದಿನಗಳಲ್ಲಿ ನಡೆಯುತ್ತಿದೆ.ಆನ್ ಲೈನ್ ವಂಚನೆಗೆ ಇಂಥ ಹತ್ತಾರು ಮುಖಗಳಿವೆ.
7.23 ಲಕ್ಷ ಕಳೆದುಕೊಂಡ ಯುವತಿ
ಮುಂಬೈ ಮೂಲದ 27 ವರ್ಷದ ಅಕೌಂಟೆಂಟ್ ತನ್ನ ಮೊಬೈಲ್ ಗೆ ಬಂದ ಅರೆಕಾಲಿಕ ಉದ್ಯೋಗದ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದಾಳೆ. ಅದರಲ್ಲಿ ಯೂಟ್ಯೂಬ್ ಚಾನೆಲ್ ಗೆ ಸಬ್ ಸ್ಕ್ರೈಬ್ ಆಗಿ ಹಣ ಗಳಿಸಬಹುದು ಎಂದಿತ್ತು. ಅದರಲ್ಲಿ ಎರಡು ಯೂ ಟ್ಯೂಬ್ ಚಾನೆಲ್ ಗಳ ಲಿಂಕ್ ಕೂಡ ಇತ್ತು. ಆಕೆ ಸಬ್ ಸ್ಕ್ರೈಬ್ ಆದ ತಕ್ಷಣ ಆಕೆ ಖಾತೆಗೆ 120ರೂ. ಕ್ರೆಡಿಟ್ ಆಗಿದೆ. ಆಕೆಗೆ ಜಾಬ್ ಕೋಡ್ ಕಳುಹಿಸಿ ಅದನ್ನು ಟೆಲಿಗ್ರಾಮ್ ಖಾತೆಗೆ ಕಳುಹಿಸುವಂತೆ ಕೇಳಲಾಗಿದೆ. ಆಕೆ ಹಾಗೆಯೇ ಮಾಡಿದ್ದಾಳೆ. ಅವರು ಕೇಳಿದಂತೆ ಬ್ಯಾಂಕ್ ಖಾತೆ ಮಾಹಿತಿಯೂ ಕಳುಹಿಸಿದ್ದಾಳೆ. ಕೆಲವು ದಿನ ಆಕೆಯ ಖಾತೆಗೆ ವಿವಿಧ ಕೆಲಸಗಳನ್ನು ಪೂರ್ಣಗೊಳಿಸಿದ ನೆಪದಲ್ಲಿ ಹಣ ಹಾಕಿದ್ದಾರೆ. ಆದರೆ, ಕೆಲವೇ ದಿನಗಳಲ್ಲಿ ಆಕೆ ಖಾತೆಯಿಂದ 7.23 ಲಕ್ಷ ರೂ. ಎಗರಿಸಿದ್ದಾರೆ.
ಸಬ್‌ಸ್ಕ್ರೈಬ್, ಲೈಕ್ ಮಾಡಿ ಮನೆಯಲ್ಲೇ ಕುಳಿತು ಹಣ ಗಳಿಸಿ, ನಿಮಗೂ ಈ ಮೆಸೇಜ್ ಬಂದಿದೆಯಾ?
ಹೇಗೆಲ್ಲ ವಂಚಿಸುತ್ತಾರೆ?
ಆನ್ ಲೈನ್ ವಂಚಕರು ವಂಚನೆಗೆ ಹೊಸ ಹೊಸ ವಿಧಾನಗಳನ್ನು ಬಳಸುವ ಮೂಲಕ ಅಮಾಯಕರ ಖಾತೆಗಳಿಗೆ ಕನ್ನ ಹಾಕುತ್ತಿದ್ದಾರೆ. ಅದೆಷ್ಟೇ ವಿದ್ಯಾವಂತರಾಗಿದ್ದರೂ ಒಂದು ಕ್ಷಣ ಮೈ ಮರೆತರೂ ಇಂಥ ವಂಚಕರ ಬಲೆಯಲ್ಲಿ ಸಿಲುಕುವುದು ಗ್ಯಾರಂಟಿ. ಇಂಥ ಫಿಶಿಂಗ್ ಕ್ರೈಮ್ ಗಳಿಗೆ ವಂಚಕರು ನಾನಾ ಮಾರ್ಗಗಳನ್ನು ಅನುಸರಿಸುತ್ತಾರೆ. ಕೆಲವೊಂದು ವಿಧಾನಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
*ನೇರವಾಗಿ ನಿಮ್ಮ ಮೊಬೈಲ್ ಗೆ ಕರೆ ಮಾಡಿ ಬ್ಯಾಂಕ್ ನಿಂದ ಕರೆ ಮಾಡಿರೋದಾಗಿ ಹೇಳಿ ನಿಮ್ಮ ಬ್ಯಾಂಕ್ ಖಾತೆಗಳ ಮಾಹಿತಿ ಸಂಗ್ರಹಿಸಿ ವಂಚಿಸೋದು.
*ಬ್ಯಾಂಕ್ ವೆಬ್ ಸೈಟ್ ಗಳನ್ನೇ ಹೋಲುವ ನಕಲಿ ಲಿಂಕ್ ಗಳನ್ನು ಇ-ಮೇಲ್ ಅಥವಾ ಮೊಬೈಲ್ ಸಂದೇಶಗಳ ಮೂಲಕ ಕಳುಹಿಸಿ ಆನ್ ಲೈನ್ ಬ್ಯಾಂಕಿಂಗ್ ಐಡಿ, ಪಾಸ್ ವರ್ಡ್ ಮಾಹಿತಿಗಳನ್ನು ಕಲೆ ಹಾಕುವ ಮೂಲಕ ವಂಚಿಸಲಾಗುತ್ತದೆ.
*ಮನೆಯಲ್ಲೇ ಕುಳಿತು ತಿಂಗಳಿಗೆ 30 ಸಾವಿರ ಅಥವಾ 50 ಸಾವಿರ ರೂ. ಗಳಿಸಬಹುದು ಎಂಬ ಆಮಿಷವೊಡ್ಡುವ ಸಂದೇಶಗಳ ಮೂಲಕ ಕೂಡ ವಂಚಿಸುತ್ತಾರೆ. ಇಂಥ ಸುಲಭವಾಗಿ ಮನೆಯಲ್ಲೇ ಕುಳಿತು ಹಣ ಗಳಿಸುವ ಜಾಹೀರಾತುಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಸಿಗುತ್ತವೆ. ಇನ್ನು ನಿಮ್ಮ ವ್ಯಾಟ್ಸ್‌ಆ್ಯಪ್‌ಗೆ ಕೂಡ ಇಂಥ ಸಂದೇಶಗಳು ಬರುತ್ತವೆ. ಇದು ಕೂಡ ಮೋಸದ ದಂಧೆಯಾಗಿದೆ.
*ಆನ್ ಲೈನ್ ವೆಬ್ ಸೈಟ್ ಗಳಲ್ಲಿ ಪಾವತಿ ಮಾಡುವ ಮುನ್ನ ಎಚ್ಚರ ವಹಿಸಿ. ಅಧಿಕೃತ ವೆಬ್ಸೈಟ್ ಹೌದು ಅಲ್ಲವೇ ಎಂಬುದನ್ನು ಪರಿಶೀಲಿಸಿದ ಬಳಿಕವೇ ಪಾವತಿಸಿ. ಇತ್ತೀಚೆಗೆ ಅಧಿಕೃತ ವೆಬ್ ಸೈಟ್ ಗಳನ್ನೇ ಹೋಲುವ ಅನಧಿಕೃತ ವೆಬ್ ಸೈಟ್ ಗಳ ಸಂಖ್ಯೆ ಹೆಚ್ಚಿದೆ.
ಇನ್‌ಸ್ಟಾಗ್ರಾಂನಲ್ಲಿ ಸಾಲಕ್ಕೆ ಅರ್ಜಿ, 61 ಸಾವಿರ ರೂ ಕಳೆದುಕೊಂಡ ಮಹಿಳೆ!
*ಇನ್‌ಸ್ಟಾಗ್ರಾಂ ಅಥವಾ ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಕಡಿಮೆ ಬಡ್ಡಿಗೆ ಅಥವಾ ಸುಲಭವಾಗಿ ಸಾಲ ನೀಡುವ ಜಾಹೀರಾತುಗಳಿಗೆ ಮರುಳಾಗಬೇಡಿ. ಸಾಲದ ಹೆಸರಿನಲ್ಲಿ ನಿಮ್ಮ ಖಾತೆಗೇ ವಂಚಕರು ಕನ್ನ ಹಾಕುತ್ತಾರೆ ಹುಷಾರ್.