‘ಮಹಾರಾಜ’ನ ಮಾರಾಟ! ಸತತ ನಷ್ಟದಲ್ಲಿರುವ ಏರ್‌ಇಂಡಿಯಾವನ್ನು ಖರೀದಿಸುವವರು ಯಾರು?

By Kannadaprabha News  |  First Published Nov 19, 2019, 5:03 PM IST

ಸರ್ಕಾರಿ ಸ್ವಾಮ್ಯದ ಏರ್‌ ಇಂಡಿಯಾ 2007ರಿಂದಲೂ ನಷ್ಟದಲ್ಲಿದೆ. ಅದರ ಪುನಶ್ಚೇತನಕ್ಕೆ 2012ರಲ್ಲಿ ಅಂದಿನ ಯುಪಿಎ ಸರ್ಕಾರ 32 ಸಾವಿರ ರು. ನೆರವು ನೀಡಿತ್ತು. ಆದರೂ ಕಂಪನಿಯ ವ್ಯವಹಾರ ಸುಧಾರಿಸಿಲ್ಲ. ನಿರಂತರ ನಷ್ಟಅನುಭವಿಸಿರುವ ಏರ್‌ ಇಂಡಿಯಾ ಸದ್ಯ 58,000 ಕೋಟಿ ಸಾಲದ ಸುಳಿಯಲ್ಲಿದೆ. ತೈಲ ಕಂಪನಿಗಳಿಗೂ ಹಣ ಪಾವತಿಸದೆ ಬಾಕಿ ಉಳಿಸಿಕೊಂಡಿದೆ. 


‘ಮಹಾರಾಜ’ ಲಾಂಛನದಿಂದ ಗುರುತಿಸಿಕೊಂಡ 85 ವರ್ಷಗಳ ಇತಿಹಾಸ ಹೊಂದಿರುವ ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆ ಇಂದು ಕೋಟ್ಯಂತರ ರು. ನಷ್ಟದಲ್ಲಿ ಸಿಲುಕಿದೆ. ಸಂಸ್ಥೆಯನ್ನು ದಿವಾಳಿತನದಿಂದ ಮೇಲೆತ್ತಲು ಮಾಡಿರುವ ಎಲ್ಲ ಪ್ರಯತ್ನಗಳು ವಿಫಲಗೊಂಡಿರುವುದರಿಂದ ಸರ್ಕಾರ ಬಂಡವಾಳ ಹಿಂತೆಗೆತಕ್ಕೆ ಮುಂದಾಗಿದೆ.

2020 ರಲ್ಲಿ ಮಾರಾಟ ಮಾಡುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಏರ್‌ ಇಂಡಿಯಾ ದುಸ್ಥಿತಿಗೆ ಕಾರಣ ಏನು, ಎಷ್ಟುನಷ್ಟದಲ್ಲಿದೆ, ಈ ಬಾರಿಯಾದರೂ ಖರೀದಿಗೆ ಹೂಡಿಕೆದಾರರು ಮುಂದೆ ಬರುತ್ತಾರಾ ಎಂಬ ಕಿರು ವಿವರ ಇಲ್ಲಿದೆ.

Latest Videos

ಟಾಟಾ ಸ್ಥಾಪಿಸಿದ್ದ ಏರ್‌ ಇಂಡಿಯಾ ಸಂಸ್ಥೆ

‘ಏರ್‌ ಇಂಡಿಯಾ’ ಭಾರತದ ಸರ್ಕಾರಿ ಸ್ವಾಮ್ಯದ ಏಕೈಕ ವಿಮಾನ ಯಾನ ಕಂಪನಿ. 1932 ಅ.15ರಂದು ಟಾಟಾ ಸನ್ಸ್‌ ಉದ್ಯಮಿ ಜೆಆರ್‌ಡಿ ಟಾಟಾ ಅವರು ಟಾಟಾ ಏರ್‌ಲೈನ್ಸ್‌ ಸ್ಥಾಪಿಸಿದ್ದರು. ಭಾರತದ ಮೊಟ್ಟಮೊದಲ ವಿಮಾನ ಯಾನ ಕಂಪನಿಯದು. ಸ್ವಾತಂತ್ರ್ಯಾನಂತರ ಭಾರತ ಸರ್ಕಾರ ತನ್ನದೇ ವಿಮಾನಯಾನ ಕಂಪನಿಯೊಂದು ಇರಬೇಕು ಎಂಬ ದೃಷ್ಟಿಯಿಂದ ಟಾಟಾ ಏರ್‌ಲೈನ್ಸ್‌ನ ಶೇ.49ರಷ್ಟುಷೇರುಗಳನ್ನು ಖರೀದಿಸಿತು.

ವಿಪರೀತ ಸಾಲ: ಏರ್‌ಇಂಡಿಯಾ ಖಾಸಗೀಕರಣ ಅನಿವಾರ್ಯ

ಆಗ ಅದಕ್ಕೆ ‘ಏರ್‌ ಇಂಡಿಯಾ ಇಂಟರ್‌ನ್ಯಾಷನಲ್‌’ ಎಂದು ನಾಮಕರಣ ಮಾಡಲಾಯಿತು. ನಂತರ 1953ರಲ್ಲಿ ಭಾರತ ಸರ್ಕಾರವು ಏರ್‌ ಕಾರ್ಪೊರೇಷನ್ಸ್‌ ಕಾಯ್ದೆ ಜಾರಿಗೆ ತಂದು ಏರ್‌ ಇಂಡಿಯಾ ಇಂಟರ್‌ನ್ಯಾಷನಲ್‌ ಕಂಪನಿಯನ್ನು ರಾಷ್ಟ್ರೀಕರಣಗೊಳಿಸಿ, ಟಾಟಾ ಕಂಪನಿಯಿಂದ ಸಂಪೂರ್ಣವಾಗಿ ತನ್ನ ವಶಕೆ ಪಡೆಯಿತು. ಆಗ ಅದಕ್ಕೆ ‘ಏರ್‌ ಇಂಡಿಯಾ’ ಎಂದು ನಾಮಕರಣ ಮಾಡಲಾಯಿತು.

ಮಾರಾಟಕ್ಕೆ ಕಾರಣ ಏನು?

ಸರ್ಕಾರಿ ಸ್ವಾಮ್ಯದ ಏರ್‌ ಇಂಡಿಯಾ 2007ರಿಂದಲೂ ನಷ್ಟದಲ್ಲಿದೆ. ಅದರ ಪುನಶ್ಚೇತನಕ್ಕೆ 2012ರಲ್ಲಿ ಅಂದಿನ ಯುಪಿಎ ಸರ್ಕಾರ 32 ಸಾವಿರ ರು. ನೆರವು ನೀಡಿತ್ತು. ಆದರೂ ಕಂಪನಿಯ ವ್ಯವಹಾರ ಸುಧಾರಿಸಿಲ್ಲ. ನಿರಂತರ ನಷ್ಟಅನುಭವಿಸಿರುವ ಏರ್‌ ಇಂಡಿಯಾ ಸದ್ಯ 58,000 ಕೋಟಿ ಸಾಲದ ಸುಳಿಯಲ್ಲಿದೆ. ತೈಲ ಕಂಪನಿಗಳಿಗೂ ಹಣ ಪಾವತಿಸದೆ ಬಾಕಿ ಉಳಿಸಿಕೊಂಡಿದೆ. ಇದೇ ಕಾರಣದಿಂದ ಅ.18ರಂದು ತೈಲ ಕಂಪನಿಗಳು ತೈಲ ಪೂರೈಕೆಯನ್ನು ನಿಲ್ಲಿಸಲು ನಿರ್ಧರಿಸಿದ್ದವು.

ಬಳಿಕ ಹಿಂದಿನ ಬಾಕಿ ಪಾವತಿಸಿದ ನಂತರ ತೈಲ ಪೂರೈಸಿದ್ದವು. ನಿರಂತರವಾಗಿ ನಷ್ಟದಲ್ಲಿರುವ ಈ ಸಂಸ್ಥೆಗೆ ತನ್ನ ನೌಕರರಿಗೆ ವೇತನ ಪಾವತಿಸುವುದೇ ಕಷ್ಟವಾಗುತ್ತಿದೆ. ಕಳೆದ ವರ್ಷ ಕಾರ‍್ಯನಿರ್ವಹಣೆಯಲ್ಲಿ ತೈಲ ಬೆಲೆ ಏರಿಕೆ ಕಾರಣ ಏರ್‌ ಇಂಡಿಯಾ 4,600 ಕೋಟಿ ನಷ್ಟಅನುಭವಿಸಿದೆ. ಒಂದು ಕಾಲದಲ್ಲಿ ವಾಯುಯಾನ ಮಾರುಕಟ್ಟೆಯಲ್ಲಿ ಶೇ.40ರಷ್ಟುಪಾಲು ಹೊಂದಿದ್ದ ಏರ್‌ ಇಂಡಿಯಾ, ಈಗ ಶೇ.14ಕ್ಕೆ ಇಳಿದಿದೆ. ಆರ್ಥಿಕ ಸ್ಥಿತಿ ಸುಧಾರಿಸಲಾಗದ ಮಟ್ಟತಲುಪಿದ ನಂತರದಲ್ಲಿ ಖಾಸಗೀಕರಣ ಮಾಡುವಂತೆ 2018ರಲ್ಲಿ ನೀತಿ ಆಯೋಗವು ಶಿಫಾರಸು ಮಾಡಿತ್ತು.

ಏರ್ ಇಂಡಿಯಾ, ಭಾರತ್ ಪೆಟ್ರೋಲಿಯಂ ಮಾರಲು ಸರಕಾರ ಚಿಂತನೆ

ಅಲ್ಲದೆ ನಿರಂತರ ನಷ್ಟದಿಂದ ದಿವಾಳಿಯತ್ತ ಸಾಗುತ್ತಿರುವ ಸಂಸ್ಥೆಗೆ ಸರ್ಕಾರದ ನೆರವು ಮಂದುವರೆಸುವುದು ಲಾಭದಾಯಕವಲ್ಲ ಎಂದೂ ಸಲಹೆ ನೀಡಿತ್ತು. ಅನಂತರದಲ್ಲಿ ನೀತಿ ಆಯೋಗದ ಸಲಹೆಗೆ ಮಣಿದ ಕೇಂದ್ರ ಸರ್ಕಾರ 2017 ಜು.28ರಂದು ಖಾಸಗೀಕರಣಕ್ಕೆ ಸಮ್ಮತಿಸಿತ್ತು. ಆದರೆ 24% ಷೇರನ್ನು ತನ್ನಲ್ಲೇ ಇರಿಸಿಕೊಳ್ಳಲು ನಿರ್ಧರಿಸಿತ್ತು. ಹೀಗಾಗಿ ಯಾರೂ ಷೇರು ಖರೀದಿಗೆ ಮುಂದಾಗಿರಲಿಲ್ಲ. ಆದರೆ ಈ ಬಾರಿ ಸಂಪೂರ್ಣ ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಈಗಲಾದ್ರೂ ಏರ್‌ ಇಂಡಿಯಾ ಖರೀದಿಗೆ ಮುಂದೆ ಬರ್ತಾರಾ?

ಏರ್‌ ಇಂಡಿಯಾ ಮೇಲೆ 58,000 ಕೋಟಿ ಸಾಲ ಇದೆ. ವಾಣಿಜ್ಯ ವಿಮಾನಯಾನ ಸಂಸ್ಥೆಯನ್ನು ಮುನ್ನಡೆಸುವುದು ಅತ್ಯಂತ ದುಬಾರಿ ವ್ಯವಹಾರ. ಅದರಲ್ಲೂ ಸಾಲದ ಸುಳಿಯಲ್ಲಿ ಸಿಲುಕಿರುವ ಏರ್‌ ಇಂಡಿಯಾ ನಿರ್ವಹಣೆ ಬಹಳ ಕಷ್ಟ. ಅಲ್ಲದೆ ಇದುವರೆಗೆ ಕೇಂದ್ರ ಸರ್ಕಾರ 76% ಷೇರು ಮಾತ್ರ ಮಾರಾಟ ಮಾಡಲು ಇಚ್ಛಿಸಿತ್ತು. ಇದರಿಂದ ಸರ್ಕಾರ ಹಸ್ತಕ್ಷೇಪ ಮಾಡಬಹುದೆಂದು ಷೇರು ಖರೀದಿಗೆ ಯಾರೊಬ್ಬರೂ ಮುಂದಾಗಿರಲಿಲ್ಲ.

ಹೀಗಾಗಿ ಸರ್ಕಾರ ಈ ಪ್ರಕ್ರಿಯೆಯಲ್ಲಿ ಮಾರ್ಪಾಡು ಮಾಡಿ ಪೂರ್ಣ ಬಂಡವಾಳ ಹಿಂತೆಗೆತಕ್ಕೆ ಮುಂದಾಗಿದೆ. ಅಂದರೆ ಈ ಬಾರಿ ಸರ್ಕಾರ 100% ಷೇರು ಖರೀದಿಗೆ ಆಹ್ವಾನಿಸಿ ಸಂಪೂರ್ಣ ಮಾರಾಟಕ್ಕೆ ಸಿದ್ಧವಾಗಿದೆ. ಏರ್‌ ಇಂಡಿಯಾ ಖರೀದಿಗೆ ಹೂಡಿಕೆದಾರರಲ್ಲಿ ಭಾರಿ ಆಸಕ್ತಿ ಇದೆ ಎಂದು ಸ್ವತಃ ನಿರ್ಮಲಾ ಸೀತಾರಾಮನ್‌ ಅಭಿಪ್ರಾಯಪಟ್ಟಿದ್ದಾರೆ.

ಏರ್‌ ಇಂಡಿಯಾ ಮಾರಾಟ ಆರ್ಥಿಕ ಹಿಂಜರಿತಕ್ಕೆ ಟಾನಿಕ್‌?

ಪ್ರಸ್ತುತ ಹಣಕಾಸು ವರ್ಷದಲ್ಲಿ 1 ಲಕ್ಷ ಕೋಟಿ ರೂ ಸಂಗ್ರಹಿಸುವ ಗುರಿ ಹೊಂದಿರುವ ಕೇಂದ್ರ ಸರ್ಕಾರದ ಉದ್ದೇಶದಲ್ಲಿ ಈ ಮಾರಾಟ ಮಹತ್ವದ ಪಾತ್ರ ವಹಿಸಲಿದೆ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ತೆರಿಗೆ ಸಂಗ್ರಹದ ಒತ್ತಡದ ಸ್ಥಿತಿಯಲ್ಲಿ ಬಂಡವಾಳ ಹಿಂತೆಗೆತ ಕ್ರಮದಿಂದ ಸರ್ಕಾರದ ಆದಾಯ ಹೆಚ್ಚುವ ನಿರೀಕ್ಷೆಯಿದೆ.

ಆರ್ಥಿಕ ಕುಸಿತವನ್ನು ತಡೆಯಲು ಸರ್ಕಾರ ಸಕಾಲದಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದು, ಹಲವು ವಲಯಗಳು ಈ ಒತ್ತಡದಿಂದ ಹೊರಬರಲಿವೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ. ಆದರೆ ಕೇಂದ್ರ ಸರ್ಕಾರವು ತನ್ನ ತಪ್ಪು ಆರ್ಥಿಕ ನೀತಿಗಳಿಂದ ಮಾಡಿದ ನಷ್ಟವನ್ನು ಸರಿದೂಗಿಸಲು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಮಾರಾಟ ಮಾಡಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ ಎಂದು ವಿಪಕ್ಷಗಳು ಟೀಕಿಸಿವೆ.

ದಿವಾಳಿಯಾಗಲು ಕಾರಣ ಏನು?

2007ರಲ್ಲಿ ಏರ್‌ ಇಂಡಿಯಾ ಮತ್ತು ಏರ್‌ಲೈನ್ಸ್‌ ಅನ್ನು ವಿಲೀನ ಮಾಡಲಾಯಿತು. ಅನಂತರದಲ್ಲಿ ಬೇಕಾಬಿಟ್ಟಿಯಾಗಿ ವಿಮಾನಗಳನ್ನು ಖರೀದಿ ಮಾಡಲಾಯ್ತು. ಕೆಟ್ಟನಿರ್ವಹಣೆ, ಖಾಸಗಿ ವಿಮಾನ ಯಾನ ಸಂಸ್ಥೆಗಳ ಪೈಪೋಟಿ, ವೃತ್ತಿಪರತೆಯ ಕೊರತೆ, ಸರ್ಕಾರದ ಹಸ್ತಕ್ಷೇಪ, ವಿಮಾನ ಹಾರಾಟದ ವಿಳಂಬದ ಕಾರಣದಿಂದ ಸಂಸ್ಥೆ ನಷ್ಟದ ಹಾದಿ ಹಿಡಿಯಿತು.

ಇನ್ನು ರಾಜಕಾರಣಿಗಳು ಮತ್ತು ಏರ್‌ ಇಂಡಿಯಾ ಸಿಬ್ಬಂದಿಗೆ ಹಲವು ಸೌಲಭ್ಯಯಗಳಿರುವುದರಿಂದ ಅದು ಪ್ರಯಾಣಿಕರಿಗೆ ಕಿರಿಕಿರಿಯುಂಟು ಮಾಡಿತು. ಇದರಿಂದ ಪ್ರಯಾಣಿಕರ ಸಂಖ್ಯೆದಿನೇ ದಿನೇ ಕುಸಿಯುತ್ತಾ ಬಂತು. ಅಲ್ಲದೆ ಅನಗತ್ಯ ನೌಕರರು, ಹೆಚ್ಚು ವಿದೇಶಿ ಹಾರಾಟದಿಂದ ಮತ್ತಷ್ಟುನಷ್ಟಅನುಭವಿಸಿ, ದಿವಾಳಿ ಹಂತಕ್ಕೆ ಬಂದು ತಲುಪಿದೆ.

click me!