ತೆರಿಗೆ ಉಳಿತಾಯದ ಪ್ಲ್ಯಾನ್ ಮಾಡಲು ಇದು ಸೂಕ್ತ ಸಮಯ. ಹೀಗಿರುವಾಗ ವಿಮೆಗಳು ತೆರಿಗೆ ಉಳಿತಾಯಕ್ಕೆ ಹೇಗೆ ನೆರವು ನೀಡುತ್ತವೆ? ಅವುಗಳ ಮೂಲಕ ಎಷ್ಟು ತೆರಿಗೆ ಉಳಿತಾಯ ಮಾಡ್ಬಹುದು?
Business Desk: ನಾವು ಮತ್ತೊಂದು ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ. ಹೀಗಾಗಿ ಈ ವರ್ಷದ ಮೊದಲ ತಿಂಗಳು ನಮ್ಮ ಹಣಕಾಸಿನ ಯೋಜನೆಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ತೆರಿಗೆ ಪ್ಲ್ಯಾನಿಂಗ್ ಇರಬಹುದು ಅಥವಾ ಹಣಕಾಸಿನ ಯೋಜನೆಗಳಿರಬಹುದು, ಅವುಗಳನ್ನು ರೂಪಿಸಲು ಇದು ಸರಿಯಾದ ಸಮಯ. ಕಳೆದ ವರ್ಷ ನಿಮಗೆ ಕಾರ್ಯರೂಪಕ್ಕೆ ತರಲು ಸಾಧ್ಯವಾಗದ ಹಣಕಾಸಿನ ಯೋಜನೆಗಳನ್ನು ಮತ್ತೆ ಮುನ್ನಲೆಗೆ ತರಲು ಇದು ಸೂಕ್ತ ಸಮಯ. ಅದರಲ್ಲೂ ತೆರಿಗೆ ಉಳಿತಾಯಕ್ಕೆ ಸಂಬಂಧಿಸಿ ಸೂಕ್ತ ನಿರ್ಧಾರ ಕೈಗೊಳ್ಳಲು ಇದು ಸೂಕ್ತವಾದ ಸಮಯ. ತೆರಿಗೆ ಉಳಿತಾಯಕ್ಕೆ ನೆರವಾಗುವ ಹೂಡಿಕೆಗಳಲ್ಲಿ ವಿಮೆ ಕೂಡ ಸೇರಿದೆ. ವಿಮೆ ನಿಮ್ಮ ತೆರಿಗೆ ಯೋಜನೆಯ ಪ್ರಮುಖ ಭಾಗವಾಗಿರುವ ಕಾರಣ ತೆರಿಗೆ ದಕ್ಷತೆಯನ್ನು ಸಾಧಿಸಲು ವಿಮೆ ಹೇಗೆ ನೆರವು ನೀಡುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ. ಹಾಗಾದ್ರೆ ತೆರಿಗೆ ಉಳಿತಾಯಕ್ಕೆ ವಿಮೆ ಹೇಗೆ ನೆರವು ನೀಡುತ್ತದೆ? ಇಲ್ಲಿದೆ ಮಾಹಿತಿ.
ನಿಮ್ಮ ತೆರಿಗೆ ಹೊರೆಯನ್ನು ಲೆಕ್ಕ ಹಾಕಿ
ಮೊಟ್ಟ ಮೊದಲಿಗೆ ನೀವು ಮಾಡಬೇಕಿರುವ ಕೆಲಸವೆಂದ್ರೆ ಒಟ್ಟು ತೆರಿಗೆಗೊಳಪಡುವ ಆದಾಯವನ್ನು ಲೆಕ್ಕ ಹಾಕೋದು. ಇದು ಪ್ರಸಕ್ತ ಹಣಕಾಸಿನ ಸಾಲಿನಲ್ಲಿ ನಿಮ್ಮ ಒಟ್ಟು ತೆರಿಗೆ ಪಾವತಿ ಎಷ್ಟು ಎಂಬುದನ್ನು ಲೆಕ್ಕ ಹಾಕಲು ನೆರವು ನೀಡುತ್ತದೆ. ನಿಮ್ಮ ಆದಾಯಕ್ಕೆ ಎಷ್ಟು ತೆರಿಗೆ ಬೀಳುತ್ತದೆ ಎಂಬ ಲೆಕ್ಕಾಚಾರಕ್ಕೆ ಅನೇಕ ಆನ್ ಲೈನ್ ಕ್ಯಾಲ್ಕುಲೇಟರ್ ಗಳು ಲಭ್ಯವಿವೆ. ಇವು ನಿಮಗೆ ತೆರಿಗೆ ಲೆಕ್ಕಾಚಾರಕ್ಕೆ ನೆರವು ನೀಡುತ್ತವೆ. ನೀವು ಎಷ್ಟು ತೆರಿಗೆ ಪಾವತಿಸಬೇಕು ಎಂಬುದನ್ನು ಲೆಕ್ಕ ಹಾಕಿದ ಬಳಿಕ ತೆರಿಗೆ ಕಡಿತಗಳನ್ನು ಗರಿಷ್ಠ ಬಳಕೆ ಮಾಡಿಕೊಳ್ಳಬಹುದು ಎಂಬುದನ್ನು ಪ್ಲ್ಯಾನ್ ಮಾಡಿ. ಇದಾದ ಬಳಿಕ ಇನ್ನು ಕೂಡ ನಿಮ್ಮ ತೆರಿಗೆ ಹೊರೆಯನ್ನು ತಗ್ಗಿಸಿಕೊಳ್ಳಲು ಅವಕಾಶವಿದೆ ಎಂದಾದರೆ ವಿವಿಧ ವಿಮಾ ಉತ್ಪನ್ನಗಳನ್ನು ಬಳಕೆ ಮಾಡಿ. ಅವು ಅನೇಕ ತೆರಿಗೆ ಪ್ರಯೋಜನಗಳನ್ನು ಒದಗಿಸುತ್ತವೆ.
2023 ರಲ್ಲಿ 1.98 ಲಕ್ಷ ಕೋಟಿ ರೂ. ತೆರಿಗೆ ವಂಚನೆ, 140 ಜನರ ಸೆರೆ: ಹಣಕಾಸು ಇಲಾಖೆ
ಯಾವ ವಿಮೆಯನ್ನು ಪರಿಗಣಿಸಬೇಕು?
*ಟರ್ಮ್ ಜೀವ ವಿಮೆ: ಇದು ಅತ್ಯಂತ ಮುಖ್ಯವಾದ ಜೀವ ವಿಮೆಯಾಗಿದೆ. ಇದು ಯಾವುದೇ ಹೂಡಿಕೆ ಆಯ್ಕೆಗಳಿಲ್ಲದೆ ಜೀವ ವಿಮೆ ಒದಗಿಸುತ್ತದೆ. ನೀವು ನಿಯಮಿತವಾಗಿ ವಿಮಾ ಪ್ರೀಮಿಯಂ ಪಾವತಿಸುತ್ತೀರಿ ಹಾಗೂ ಅದಕ್ಕೆ ಪ್ರತಿಯಾಗಿ ಲೈಫ್ ಕವರೇಜ್ ಪಡೆಯುತ್ತೀರಿ. ಟರ್ಮ್ ಜೀವ ವಿಮೆ ಅರ್ಹ ಪ್ರೀಮಿಯಂನಲ್ಲಿ ಅತ್ಯಧಿಕ ಕವರೇಜ್ ಒದಗಿಸುತ್ತದೆ. ಹೀಗಾಗಿ ಪಾಲಿಸಿದಾರರು ನಿಧನರಾದ ಸಂದರ್ಭದಲ್ಲಿ ಈ ವಿಮೆ ಆತ ಅಥವಾ ಆಕೆಯ ಕುಟುಂಬಕ್ಕೆ ದೊಡ್ಡ ಮೊತ್ತವನ್ನು ನೀಡುವ ಮೂಲಕ ಅವರ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುತ್ತದೆ. ಅಲ್ಲದೆ, ಟರ್ಮ್ ಪ್ಲ್ಯಾನ್ ಗಳು ತೆರಿಗೆ ಪ್ರಯೋಜನಗಳನ್ನು ಕೂಡ ಹೊಂದಿವೆ. ಎಲ್ಲ ಪ್ರೀಮಿಯಂ ಪಾವತಿಗಳು ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 80 ಸಿ ಅಡಿಯಲ್ಲಿ 1.5ಲಕ್ಷ ರೂ. ತನಕ ತೆರಿಗೆ ಪ್ರಯೋಜನ ಪಡೆಯಲು ಅರ್ಹವಾಗಿವೆ. ಹಾಗೆಯೇ ಪಾಲಿಸಿದಾರನ ಕುಟುಂಬ ಆಕೆ/ ಆತನ ಮರಣದ ಬಳಿಕ ಪಡೆದ ಸೆಟ್ಲಮೆಂಟ್ ಹಣ ಸಂಪೂರ್ಣವಾಗಿ ತೆರಿಗೆಯಿಂದ ಮುಕ್ತವಾಗಿದೆ.
*ವಿಮೆ ಕಮ್ ಹೂಡಿಕೆ ಯೋಜನೆಗಳು: ಮಾರುಕಟ್ಟೆ ಲಿಂಕ್ಡ್ ಅಥವಾ ಗ್ಯಾರಂಟಿ ಹೊಂದಿರುವ ವಿಮಾ ಪ್ಲ್ಯಾನ್ ಗಳು ರಿಟರ್ನ್ಸ್ ಜೊತೆಗೆ ಲೈಫ್ ಕವರ್ ಕೂಡ ಹೊಂದಿವೆ. ಈ ಪಾಲಿಸಿಗಳಿಗೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80 ಸಿ ಅಡಿಯಲ್ಲಿ 1.5ಲಕ್ಷ ರೂ. ತೆರಿಗೆ ಪ್ರಯೋಜನ ಪಡೆಯಬಹುದು. ಯುಎಲ್ ಐಪಿಎಸ್ ಮೂಲಕ ನೀವು ನಿಮ್ಮ ಕುಟುಂಬವನ್ನು ಸಂರಕ್ಷಿಸುವ ಜೊತೆಗೆ ದೊಡ್ಡ ಮೊತ್ತದ ಹಣವನ್ನು ಕೂಡ ಸಂಗ್ರಹಿಸಬಹುದು.
ನಿಮ್ಮ ವೇತನಕ್ಕೆ ಎಷ್ಟು ಆದಾಯ ತೆರಿಗೆ ಬೀಳುತ್ತೆ? ಲೆಕ್ಕಾಚಾರ ಹೇಗೆ? ಇಲ್ಲಿದೆ ಮಾಹಿತಿ
*ಆರೋಗ್ಯ ವಿಮೆ: ಜೀವ ವಿಮೆ ಮಾದರಿಯಲ್ಲೇ ಆರೋಗ್ಯ ವಿಮೆ ಕೂಡ ಅಗತ್ಯ. ಇದು ದುಬಾರಿ ವೈದ್ಯಕೀಯ ವೆಚ್ಚಗಳ ಹೊರೆ ನಿಮ್ಮ ಆರ್ಥಿಕ ಸ್ಥಿತಿಯನ್ನು ಹದಗೆಡಿಸದಂತೆ ಸಂರಕ್ಷಿಸುತ್ತದೆ. ಆರೋಗ್ಯ ವಿಮೆಗಳು ಕೂಡ ತೆರಿಗೆ ಪ್ರಯೋಜನಗಳನ್ನು ಒಳಗೊಂಡಿರುತ್ತವೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಡಿ ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಪಡೆಯಲು ಇದು ನೆರವು ನೀಡುತ್ತದೆ. ಸೆಕ್ಷನ್ 80ಸಿ ಅಡಿಯಲ್ಲಿ 1.5 ಲಕ್ಷ ರೂ. ತನಕ ತೆರಿಗೆ ಪ್ರಯೋಜನಗಳನ್ನು ಪಡೆಯಲು ಇದು ನೆರವು ನೀಡುತ್ತದೆ.