ಪೋಷಕರಾಗುವುದು ಬಹು ದೊಡ್ಡ ಜವಾಬ್ದಾರಿ. ತಮ್ಮ ಮುದ್ದಾದ ಮಗುವಿನ ಭವಿಷ್ಯದಲ್ಲಿ ಸಂತೋಷ, ಆರೋಗ್ಯ ಹಾಗೂ ಯಶಸ್ಸು ಇರುವಂತೆ ನೋಡಿಕೊಳ್ಳುವ ಬಯಕೆ ಎಲ್ಲ ಅಪ್ಪಅಮ್ಮಂದಿರದು. ಇದಕ್ಕಾಗಿ ಹಣ ಉಳಿತಾಯ ಅತ್ಯವಶ್ಯ. ಹೇಗೆಲ್ಲ ಉಳಿತಾಯ ಮಾಡಬಹುದೆಂಬ ಸ್ಪಷ್ಟ ಕಲ್ಪನೆ ಪೋಷಕರಲ್ಲಿರಬೇಕು.
ಪ್ಲೇಸ್ಕೂಲ್‌ಗಾದರೂ ಸರಿ, ವಿದೇಶದಲ್ಲಿ ಕಾಲೇಜು ಓದಿಸಬೇಕೆಂದರೂ ಸರಿ ಮಗುವಿನ ಭವ್ಯ ಭವಿಷ್ಯಕ್ಕಾಗಿ ಪೋಷಕರು ಉತ್ತಮ ಸೇವಿಂಗ್ಸ್ ಮಾಡಿಡುವುದು ಅಗತ್ಯ. ಅವಕಾಶಗಳ ಸಂಖ್ಯೆ ಹೆಚ್ಚಿದ್ದಷ್ಟೂ ಅವುಗಳ ಫೀಸ್ ಕೂಡಾ ಹೆಚ್ಚು. ಇಂದಿನ ಬದುಕೇ ಇಷ್ಟು ಕಾಸ್ಟ್ಲಿಯಾಗಿರುವಾಗ ಮಕ್ಕಳು ಬೆಳೆಯುವ ಹೊತ್ತಿಗೆ ಜೀವನ ಮತ್ತಷ್ಟು ದುಬಾರಿಯಾಗಿರುತ್ತದೆ. ನಿಮ್ಮ ಮಗುವಿನ ಭವಿಷ್ಯಕ್ಕಾಗಿ ಉಳಿತಾಯ ಮಾಡುವಾಗ ಈ ಕೆಳಗಿನ ವಿಷಯಗಳನ್ನು ಗಮನದಲ್ಲಿರಿಸಿಕೊಳ್ಳಿ. ಈ ಪುಟ್ಟ ಟಿಪ್ಸ್‌ಗಳು ಮಗುವಿನ ಭವಿಷ್ಯದಲ್ಲಿ ದೊಡ್ಡ ಮಟ್ಟಿನ ಸಹಾಯವಾಗಿ ಒದಗಿಬರಬಹುದು.
1. ಮಗು ಹುಟ್ಟುವಾಗಲೇ ಉಳಿತಾಯವೂ ಶುರುವಾಗಲಿ
ನೀವು ಎಷ್ಟು ಬೇಗ ಸೇವಿಂಗ್ಸ್ ಆರಂಭಿಸುವಿರೋ, ಭವಿಷ್ಯದಲ್ಲಿ ಅಷ್ಟು ನೆಮ್ಮದಿಯಾಗಿರಬಹುದು. ನಿಮ್ಮ ಮಗು ಈಗಷ್ಟೇ ಅಂಬೆಗಾಲಿಡುತ್ತಿರಬಹುದು. ಅದಕ್ಕಾಗಿಯೇ ನೀವು ಈಗಲೇ ಸೇವಿಂಗ್ಸ್ ಆರಂಭಿಸಬೇಕು. ಈಗಿನ್ನೂ ಖರ್ಚುಗಳು ಅಷ್ಟು ಹೆಚ್ಚಿರುವುದಿಲ್ಲ. ಉಳಿತಾಯ ಸುಲಭ. ಸಮಯ ಸರಿದಂತೆಲ್ಲಾ ಖರ್ಚೇ ಹೆಚ್ಚಿ ಉಳಿತಾಯ ಶೂನ್ಯವಾದರೆ ಮಗುವಿನ ಭವಿಷ್ಯದ ಕನಸ್ಸಿನಲ್ಲಿ ಕೆಲವನ್ನು ಬಿಟ್ಟು ಕೊಡಬೇಕಾದೀತು. ಹೀಗಾಗಿ, ಇನ್ನೂ ಬೇಗ ಎಂದರೆ ಮಗು ಮನೆಗೆ ಬರುತ್ತದೆ ಎಂದು ತಿಳಿದಂದಿನಿಂದಲೇ ಸೇವಿಂಗ್ಸ್ ಆರಂಭಿಸುವುದೂ ಜಾಣತನವೇ. ಮಗುವಿನ ಹೆಸರಿನಲ್ಲಿ ಸೇವಿಂಗ್ಸ್ ಖಾತೆ ತೆಗೆದು ನಿರಂತರವಾಗಿ ಸ್ವಲ್ಪ ಸ್ವಲ್ಪವೇ ಅದರಲ್ಲಿ ಡೆಪಾಸಿಟ್ ಮಾಡಿ. ಮಗು ಬೆಳೆದು ದೊಡ್ಡವನಾಗುವ ಹೊತ್ತಿಗೆ ಹನಿಹನಿಗೂಡಿ ಹಳ್ಳವಾಗುವಂತೆ ಸಾಕಷ್ಟು ಹಣ ಉಳಿತಾಯವಾಗಿರುತ್ತದೆ.
2. ಎಷ್ಟು ಹಣ ಅಗತ್ಯವೆಂದು ಲೆಕ್ಕಾಚಾರ ಹಾಕಿ
ಸೇವಿಂಗ್ಸ್ ಆರಂಭಿಸುವ ಮುಂಚೆ ಎಷ್ಟು ಹಣ ಉಳಿಸಬೇಕೆಂದು ಒಂದು ಸರಾಸರಿ ಲೆಕ್ಕಾಚಾರವಿರಲಿ. ಉದಾಹರಣೆಗೆ ನೀವು ಮಗುವಿನ ಉನ್ನತ ಶಿಕ್ಷಣಕ್ಕಾಗಿ ಸೇವ್ ಮಾಡುತ್ತಿದ್ದೀರೆಂದಾದಲ್ಲಿ ಆ ಶಿಕ್ಷಣ ವೆಚ್ಚ ಒಟ್ಟಾರೆ ಸುಮಾರು 10 ಲಕ್ಷವಾಗಬಹುದು ಎಂದುಕೊಳ್ಳಿ. ದಿನೇ ದಿನೆ ಬೆಲೆಯೇರುವುದರಿಂದ ಇದು 20ರಿಂದ 30 ಲಕ್ಷ ರೂ. ಮುಟ್ಟಬಹುದು. ಹೀಗಾಗಿ, ಈ ಖಾತೆಯಲ್ಲಿ ಕನಿಷ್ಠ 30 ಲಕ್ಷ ರೂ. ಉಳಿಸುವುದು ನಿಮ್ಮ ಗುರಿಯಾಗಲಿ. ಇದು ದೊಡ್ಡ ಮೊತ್ತವೇ ಆದರೂ 18 ವರ್ಷ ಮುಂಚೆಯೇ ನೀವು ಅದಕ್ಕಾಗಿ ಯೋಜನೆ ರೂಪಿಸಿದ್ದೀರಾದ್ದರಿಂದ ಯಾವುದೇ ಚಿಂತೆ ಬೇಡ. ಹಾಗಂತ ಉದಾಸೀನವೂ ಬೇಡ.
ನಿಮ್ಮ ಮಕ್ಕಳಿಗೆ ಈ ಗುಣಗಳನ್ನು ಹೇಳಿಕೊಟ್ಟಿದ್ದೀರಾ?
3. ನಿಮ್ಮ ದಿನನಿತ್ಯದ ಖರ್ಚಿನಲ್ಲಿ ಉಳಿಸಿ
ಹೊಸ ದುಡಿಮೆ ಬೇಡ, ನಿಮ್ಮ ದೈನಂದಿನ ಖರ್ಚುವೆಚ್ಚದಲ್ಲೇ ಎಲ್ಲೆಲ್ಲಿ ಕಡಿತಗೊಳಿಸಬಹುದೋ ಅಲ್ಲೆಲ್ಲಾ ಖರ್ಚನ್ನು ತಗ್ಗಿಸಿ ಆ ಹಣವನ್ನು ಸೇವಿಂಗ್ಸ್‌ಗೆ ಹಾಕಿ. ನಿಮಗೇ ಅರಿಯದೆ ನೀವೆಷ್ಟು ದುಂದು ವೆಚ್ಚ ಮಾಡುತ್ತಿದ್ದೀರೆಂದು ಆಗ ಅರಿವಾಗಬಹುದು. ಈ ವಿಷಯದಲ್ಲಿ ನಿಮ್ಮ ಬ್ಯಾಂಕೇ ನಿಮಗೆ ಬೆಸ್ಟ್ ಫ್ರೆಂಡ್. ಈಗಂತೂ ಸ್ಮಾರ್ಟ್ ಫೋನ್ ಇದ್ದರೆ ಸಾಕು, ಬ್ಯಾಂಕಿಗೆ ಹೋಗದೆಯೇ ಎಲ್ಲ ಬ್ಯಾಂಕ್ ವ್ಯವಹಾರಗಳನ್ನೂ ಮಾಡಬಹುದು. ಅಲ್ಲದೆ, ಈ ಅಪ್ಲಿಕೇಶನ್‌ಗಳು ನಿಮಗೆ ಕ್ಯಾಶ್‌ಬ್ಯಾಕ್, ಶಾಪಿಂಗ್ ಡಿಸ್ಕೌಂಟ್, ಇಎಂಐ ಮುಂತಾದ ಆಫರ್‌ಗಳನ್ನು ನೀಡುತ್ತವೆ. ಇದರಿಂದ ಸಮಯ ಹಾಗೂ ಹಣ ಎರಡರ ಉಳಿತಾಯವೂ ಆಯಿತು.
4. ಉಡುಗೊರೆಗಳ ಪ್ರಯೋಜನ ಪಡೆಯಿರಿ
ಹೊಸತಾಗಿ ಪೇರೆಂಟ್ಸ್ ಆಗುತ್ತಿದ್ದಂತೆಯೇ ಹತ್ತಿರದವರಿಂದ ಉಡುಗೊರೆಗಳ ಸುರಿಮಳೆಯೇ ಬರುತ್ತದೆ. ಕುಟುಂಬಸ್ಥರು ಮಗುವಿಗಾಗಿ ಬೆಳ್ಳಿ, ಬಂಗಾರದ ಉಡುಗೊರೆಗಳನ್ನು ನೀಡಬಹುದು. ಈ ಎಲ್ಲ ಉಡುಗೊರೆಗಳನ್ನು ತೆಗೆದಿಟ್ಟು, ಅಗತ್ಯವಿದ್ದಾಗ ಮಗುವಿಗಾಗಿ ಬಳಸಿಕೊಳ್ಳಿ. ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಮತ್ತಷ್ಟು ಏರಿದಾಗ ನೋಡಿ ಇವುಗಳನ್ನು ಹಣವಾಗಿ ಪರಿವರ್ತಿಸಿಕೊಳ್ಳಿ.
5. ಹಲವು ಕಡೆ ಹೂಡಿಕೆ ಮಾಡಿ.
ಎಲ್ಲ ಮೊಟ್ಟೆಗಳನ್ನೂ ಒಂದೇ ಬಟ್ಟಲಿಗೆ ಹಾಕಬಾರದು ಎಂಬ ಮಾತೊಂದಿದೆ. ಹಾಗೆಯೇ ಒಂದೇ ಕಡೆ ಎಲ್ಲ ಸೇವಿಂಗ್ಸ್ ಬೇಡ. ಬೇರೆ ಬೇರೆ ಉದ್ದೇಶಗಳಿಗಾಗಿ ಹಣ ಉಳಿತಾಯ ಮಾಡುತ್ತಿರುತ್ತೀರಿ. ಒಂದೊಂದು ಉದ್ದೇಶದ ಹಣವನ್ನು ಒಂದೊಂದು ರೀತಿ ಹೂಡಿಕೆ ಮಾಡಿ. ಏಕೆಂದರೆ ಬೇರೆ ಬೇರೆ ಹೂಡಿಕೆಗಳು ಬೇರೆ ರೀತಿಯ ಲಾಭಾಂಶಗಳನ್ನು ನೀಡುತ್ತಿರುತ್ತವೆ. ಹೀಗಾಗಿ, ನಿಮ್ಮ ಗುರಿಯನ್ನು ಶಾರ್ಟ್ ಟರ್ಮ್ ಹಾಗೂ ಲಾಂಗ್ ಟರ್ಮ್ ಗುರಿಗಳನ್ನಾಗಿ ವಿಂಗಡಿಸಿ. ಶಾರ್ಟ್ ಟರ್ಮ್ ಗುರಿಯ ಹಣವನ್ನು ಫಿಕ್ಸ್ಡ್ ಡೆಪಾಸಿಟ್‌ನಲ್ಲಿಡುವುದು ಅಥವಾ ನಿಮ್ಮ ಸಧ್ಯದ ಡೆಪಾಸಿಟ್ ಖಾತೆಯಲ್ಲೇ ಇಟ್ಟುಕೊಳ್ಳಬಹುದು. ಈ ಖಾತೆಗಳು ನಿಮಗೆ ಉತ್ತಮ ರಿಟರ್ನ್ಸ್ ನೀಡುತ್ತವೆ. ಆದರೆ, ಈ ಹಣವನ್ನು ಮಧ್ಯದಲ್ಲಿ ತೆಗೆಯುವ ಹಾಗಿಲ್ಲ. ಹೀಗಾಗಿ, ನಿಮಗೆ ಉತ್ತಮ ರಿಟರ್ನ್ಸ್ ನೀಡುವ ಹೂಡಿಕೆ ಯೋಜನೆಯನ್ನು ಹುಡುಕಿ. ನಿಮ್ಮ ಮಾಸಿಕ ಉಳಿತಾಯ ಮೊತ್ತ ಹಾಗೂ ರಿಸ್ಕ್ ತೆಗೆದುಕೊಳ್ಳಬಲ್ಲ ಸಾಮರ್ಥ್ಯವನ್ನಾಧರಿಸಿ ವಿವಿಧ ಶೇರು ಮಾರುಕಟ್ಟೆಯಲ್ಲಿ, ಮ್ಯೂಚುವಲ್ ಫಂಡ್ಸ್‌ನಲ್ಲಿ ಲಾಂಗ್ ಟರ್ಮ್ ಉಳಿತಾಯಕ್ಕೆ ಕೈ ಹಾಕಿ. ಅದರಲ್ಲೂ ವಿದೇಶದಲ್ಲಿ ಹೈಯರ್ ಎಜುಕೇಶನ್ ಮಾಡಿಸುವ ಕನಸಿಗೆ ಈಕ್ವಿಟಿ ಮ್ಯೂಚುವಲ್ ಫಂಡ್ ಉತ್ತಮ ಆಯ್ಕೆ. ಈ ಬಗ್ಗೆ ನೀವು ಬ್ಯಾಂಕ್‌ನಲ್ಲಿ ಚರ್ಚಿಸಿ ನಿರ್ಧರಿಸಬಹುದು.
ಮಕ್ಕಳ ತಪ್ಪಿಗೆ ಶಿಕ್ಷೆ, ಹೇಗಿರಬೇಕು ಪೋಷಕರ ನಿರೀಕ್ಷೆ?
6. ಅನಿಶ್ಚಿತ ಸಂದರ್ಭಗಳಿಗಾಗಿಯೂ ಸೇವಿಂಗ್ಸ್ ಯೋಜನೆ ಇರಲಿ
ವೈದ್ಯಕೀಯ ಖರ್ಚುವೆಚ್ಚ ಇರಬಹುದು ಅಥವಾ ಮನೆಯಲ್ಲಿನ ಯಾವುದೋ ವಸ್ತುವನ್ನು ಬದಲಾಯಿಸಬೇಕಾಗಿ ಬರಬಹುದು. ಅನಿಶ್ಚಿತ ಖರ್ಚುವೆಚ್ಚಗಳು ಯಾವಾಗ ಬೇಕಾದರೂ ಬರಬಹುದು. ಅದಕ್ಕಾಗಿಯೂ ಮುಂಚಿತ ತಯಾರಿ ಅಗತ್ಯ. ನಿಮಗಾಗಿ ಹಾಗೂ ನಿಮ್ಮ ಕುಟುಂಬಕ್ಕಾಗಿ ಉತ್ತಮ ಇನ್ಶೂರೆನ್ಸ್ ಯೋಜನೆಯಲ್ಲಿ ಹೂಡಿಕೆ ಮಾಡುವುದು ಅನಿಶ್ಚಿತ ಸಂದರ್ಭಗಳಲ್ಲಿ ಹೆಚ್ಚು ಕಂಗೆಡದಂತೆ ನೋಡಿಕೊಳ್ಳುತ್ತದೆ. ಆದರೆ, ಈ ಇನ್ಶೂರೆನ್ಸ್ ಯೋಜನೆಯಲ್ಲಿ ಹೂಡುವ ಮುನ್ನ ಆ ಸಂಬಂಧ ಎಲ್ಲ ನಿಯಮಾವಳಿಗಳನ್ನೂ ಓದಿ ಅರಿತುಕೊಳ್ಳಿ. ಏಕೆಂದರೆ, ಕೆಲವು ನಿಯಮಗಳು ನಿಮ್ಮನ್ನು ಕಟ್ಟಿಹಾಕಿ, ನಂತರ ಮೋಸ ಹೋದ ಭಾವ ತಂದುಬಿಡುತ್ತವೆ.