Economic Survey 2022: ಕೋವಿಡ್‌ ನಡುವೆಯೂ ದೇಶದ ಆರ್ಥಿಕಾಭಿವೃದ್ಧಿ ದರ ದಾಖಲೆ ಬೆಳವಣಿಗೆ!

By Suvarna News  |  First Published Feb 1, 2022, 7:34 AM IST

*ಕೋವಿಡ್‌ ನಡುವೆಯೂ ಸತತ 2 ವರ್ಷ ವಿಶ್ವದಾಖಲೆಯ ಜಿಡಿಪಿ ವೃದ್ಧಿ ಅಂದಾಜು
*2021ರಲ್ಲಿ 9.2% ಬೆಳವಣಿಗೆ, 2022ರಲ್ಲಿ 8.5% ವೃದ್ಧಿಯ ನಿರೀಕ್ಷೆ: ಆರ್ಥಿಕ ಸಮೀಕ್ಷೆ


ನವದೆಹಲಿ (ಫೆ. 1): ಕೋವಿಡ್‌ ಸಾಂಕ್ರಾಮಿಕದಿಂದ (Covid 19) ನಲುಗಿದ್ದ ದೇಶದ ಆರ್ಥಿಕತೆ ಪೂರ್ಣ (Economy) ಪ್ರಮಾಣದಲ್ಲಿ ಪುಟಿದೆದ್ದಿದ್ದು, ಮುಂಬರುವ ಯಾವುದೇ ಸವಾಲುಗಳನ್ನು ಎದುರಿಸಲು ಸಂಪೂರ್ಣ ಸನ್ನದ್ಧವಾಗಿದೆ ಎಂದು ಕೇಂದ್ರ ಸರ್ಕಾರವು ಸೋಮವಾರ ಮಂಡಿಸಿದ ‘ಆರ್ಥಿಕ ಸಮೀಕ್ಷೆ’ಯಲ್ಲಿ ಘೋಷಿಸಿದೆ. ಜೊತೆಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಸಮಗ್ರ ಆರ್ಥಿಕ ಬೆಳವಣಿಗೆ ದರ (ಜಿಡಿಪಿ) ಶೇ.9.2ರಷ್ಟುಮತ್ತು 2022-23ನೇ ಸಾಲಿನಲ್ಲಿ ಶೇ.8ರಿಂದ ಶೇ.8.5ರಷ್ಟುಬೆಳವಣಿಗೆ ದಾಖಲಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ. ಇದರೊಂದಿಗೆ, ಈ ಹಿಂದಿನ ಕುಸಿತವನ್ನು ಮೆಟ್ಟಿನಿಂತು, ಮುಂದಿನ ಸತತ 2 ವರ್ಷಗಳ ಕಾಲ ಇಡೀ ವಿಶ್ವದ ಯಾವುದೇ ದೇಶಗಳಿಗಿಂತ ಭಾರತ ಹೆಚ್ಚಿನ ಜಿಡಿಪಿ ದರ ದಾಖಲಿಸುವ ಸಾಧ್ಯತೆ ದಟ್ಟವಾಗಿದೆ.

ಸೋಮವಾರ ಸಂಸತ್ತಿನಲ್ಲಿ 2021-22ನೇ ಸಾಲಿನ ಆರ್ಥಿಕ ಸಮೀಕ್ಷಾ ವರದಿ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ‘ಒಟ್ಟಾರೆ ಮತ್ತು ಬೃಹತ್‌- ಆರ್ಥಿಕತೆಯಲ್ಲಿನ ಸ್ಥಿರತೆ ಸೂಚ್ಯಂಕಗಳು ಭಾರತದ ಆರ್ಥಿಕತೆಯು 2022-23ರಲ್ಲಿ ಎದುರಾಗಬಹುದಾದ ಯಾವುದೇ ಸವಾಲುಗಳನ್ನು ಎದುರಿಸಲು ಸನ್ನದ್ಧವಾಗಿದೆ ಎಂಬುದನ್ನು ಸೂಚಿಸಿವೆ. ಭಾರತದ ಆರ್ಥಿಕತೆಯು ಹೀಗೆ ಉತ್ತಮ ಸ್ಥಿತಿಯನ್ನು ತಲುಪಿದ್ದಕ್ಕೆ ಮುಖ್ಯ ಕಾರಣ ಆರ್ಥಿಕತೆಯ ವಿಶಿಷ್ಟಪ್ರತಿಕ್ರಿಯೆ ಕಾರ್ಯತಂತ್ರ’ ಎಂದು ಹೇಳಿದ್ದಾರೆ.

Tap to resize

Latest Videos

undefined

ಇದನ್ನೂ ಓದಿ: Budget 2022 LIVE: ಮೋದಿ ಸರಕಾರದ ಲೆಕ್ಕ, ನಿರ್ಮಲಾ ಮಂಡಿಸ್ತಾರೆ ಪಕ್ಕಾ!

‘ದೇಶದಲ್ಲಿ ಕೋವಿಡ್‌ ಲಸಿಕಾ ಅಭಿಯಾನ ಅತ್ಯಂತ ಯಶಸ್ವಿಯಾಗಿ ನಡೆದಿರುವುದು, ಪೂರೈಕೆ ವಲಯದಲ್ಲಿನ ಸುಧಾರಣೆ ಮತ್ತು ನಿಯಂತ್ರಣಾ ಕ್ರಮಗಳನ್ನು ಸುಧಾರಣೆ ಮಾಡಿದ್ದು ದೇಶದ ಆರ್ಥಿಕ ಪ್ರಗತಿಗೆ ದೊಡ್ಡ ನೆರವು ನೀಡಿದೆ’ ಎಂದು ಸಚಿವೆ ನಿರ್ಮಲಾ ಬಣ್ಣಿಸಿದ್ದಾರೆ.

ದಾಖಲೆ ಜಿಡಿಪಿ ಬೆಳವಣಿಗೆ: ಮುಂಗಡ ಅಂದಾಜಿನ ದೇಶದ ಆರ್ಥಿಕತೆ 2021-22ನೇ ಸಾಲಿನಲ್ಲಿ (ಪ್ರಸಕ್ತ ಸಾಲಿನಲ್ಲಿ) ಶೇ.9.2ರಷ್ಟುಬೆಳವಣಿಗೆ ಸಾಧಿಸಲಿದೆ. ಅಂದರೆ ಆರ್ಥಿಕತೆ 2019-20ರ ಕೋವಿಡ್‌ ಪೂರ್ವಸ್ಥಿತಿಯನ್ನು ದಾಟಲಿದೆ. ದೇಶದ ಆರ್ಥಿಕತೆ ಚೇತರಿಕೆಗೆ ಅಗತ್ಯ ನೀಡಲು ಹಣಕಾಸು ವ್ಯವಸ್ಥೆ ಕೂಡಾ ಉತ್ತಮ ಸ್ಥಿತಿಯಲ್ಲಿರುವ ಕಾರಣ ಖಾಸಗಿ ಹೂಡಿಕೆಯೂ ಹೆಚ್ಚಳವಾಗುವ ನಿರೀಕ್ಷೆ ಇದೆ. ಪರಿಣಾಮ 2022-23ನೇ ಸಾಲಿನಲ್ಲೂ ಜಿಡಿಪಿ ಶೆ.8ರಿಂದ ಶೇ.8.5ರಷ್ಟುಬೆಳವಣಿಗೆ ದಾಖಲಿಸಲಿದೆ ಎಂದು ಸಮೀಕ್ಷೆ ಹೇಳಿದೆ.

ಈ ಹಿಂದಿನ ಸಾಲಿನಲ್ಲಿ (2020-21ರಲ್ಲಿ) ಕೋವಿಡ್‌ ನಿರ್ಬಂಧಗಳ ಕಾರಣ ಆರ್ಥಿಕತೆ ಶೇ.7.3ರಷ್ಟುಸಂಕುಚಿತವಾಗಲಿದೆ ಎಂದು ಮೊದಲು ಅಂದಾಜಿಸಲಾಗಿತ್ತು. ನಂತರ ಅದನ್ನು ಶೇ.6.6ಕ್ಕೆ ಪರಿಷ್ಕರಿಸಲಾಗಿದೆ. ಹೀಗಾಗಿ ಕೋವಿಡ್‌ನಿಂದ ಆರ್ಥಿಕ ಹಿಂಜರಿತವಾಗಿದ್ದರೂ, ಮುಂದಿನ 2 ವರ್ಷದಲ್ಲಿ ಭಾರತ ಪುಟಿದೇಳಲಿದೆ. ವಿಶ್ವದಲ್ಲೇ ವೇಗದ ಅಭಿವೃದ್ಧಿ ಕಾಣಲಿರುವ ದೇಶ ಎಂಬ ಹಿರಿಮೆಗೆ ಪಾತ್ರವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

ಇದನ್ನೂ ಓದಿ: Economic Survey 2022: ಆಶಾಭಾವನೆ ಮೂಡಿಸಿದ ಆರ್ಥಿಕ ಸಮೀಕ್ಷೆ; ಯಾವೆಲ್ಲ ಅಂಶಗಳ ಮೇಲೆ ಬೆಳಕು ಚೆಲ್ಲಿದೆ? ಇಲ್ಲಿದೆ ಮಾಹಿತಿ

ವೆಚ್ಚ ಹೆಚ್ಚಳ, ಆದಾಯವೂ ಹೆಚ್ಚಳ: ಆರ್ಥಿಕತೆ ಉತ್ತೇಜನಕ್ಕೆ ನೀಡಿದ ಆರ್ಥಿಕ ನೆರವು, ಕೋವಿಡ್‌ ನಿರ್ವಹಣೆಯ ವೆಚ್ಚ ಹೆಚ್ಚಿದ ಕಾರಣ 2021-22ನೇ ಸಾಲಿನಲ್ಲಿ ವಿತ್ತೀಯ ಕೊರತೆ ಮತ್ತು ಸರ್ಕಾರದ ಸಾಲ ಎರಡೂ ಹೆಚ್ಚಾಗಿದೆ. ಆದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗಿನ ಸರ್ಕಾರದ ಆದಾಯವೂ ಉತ್ತಮವಾಗಿರುವ ಕಾರಣ, ಸಾಲದ ಪ್ರಮಾಣದ ಆರ್ಥಿಕತೆ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಇಲ್ಲ. ಜೊತೆಗೆ ಯಾವುದೇ ಸಮಯದಲ್ಲಿ ಆರ್ಥಿಕತೆಗೆ ಅಗತ್ಯವಾದ ಬೆಂಬಲ ಮತ್ತು ಬಂಡವಾಳ ವೆಚ್ಚ ಹೆಚ್ಚಿಸಲು ಸರ್ಕಾರ ಆರ್ಥಿಕ ಸಾಮರ್ಥ್ಯವನ್ನು ಹೊಂದಿದೆ ಎಂದು ವರದಿ ಹೇಳಿದೆ.

ಪ್ರಗತಿಯ ಅಂದಾಜಿಗೆ ಕಾರಣ: ಮತ್ತೆ ಕೋವಿಡ್‌ ಸಾಂಕ್ರಾಮಿಕ ಕಾಡದು ಎಂಬ ಅಂದಾಜು, ವ್ಯಾಪಕ ಲಸಿಕಾಕರಣ, ಉತ್ತಮ ಮುಂಗಾರಿನ ನಿರೀಕ್ಷೆ, ಕಚ್ಚಾತೈಲ ಬೆಲೆ ಬ್ಯಾರಲ್‌ಗೆ 70-75 ಡಾಲರ್‌ನಲ್ಲಿ ಇರುವ ಅಂದಾಜು, ಜಾಗತಿಕ ಪೂರೈಕೆ ವ್ಯವಸ್ಥೆಯಲ್ಲಿ ಸುಧಾರಣೆ ಆಗಬಹುದು ಎಂಬ ನಿರೀಕ್ಷೆಗಳನ್ನು ಆಧಾರವಾಗಿಟ್ಟುಕೊಂಡು ಪ್ರಸಕ್ತ ಮತ್ತು ಮುಂದಿನ ವರ್ಷದ ಆರ್ಥಿಕ ಬೆಳವಣಿಗೆ ದರವನ್ನು ವಿಶ್ಲೇಷಿಸಲಾಗಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ಕಳೆದ ವರ್ಷ ಕುಸಿದಿದ್ದು 7.3% ಅಲ್ಲ 6.6% ಮಾತ್ರ:  ಕೊರೋನಾ ಹಾಗೂ ಲಾಕ್‌ಡೌನ್‌ನ ಪರಿಣಾಮ 2020-21ರಲ್ಲಿ ದೇಶದ ಆರ್ಥಿಕತೆ ಶೇ.7.3ರಷ್ಟುಕುಸಿಯಲಿದೆ ಎಂದು ಈ ಹಿಂದೆ ಅಂದಾಜಿಸಲಾಗಿತ್ತು. ಆದರೆ ವಾಸ್ತವದಲ್ಲಿ ಶೇ.6.6ರಷ್ಟುಮಾತ್ರ ಕುಸಿತವಾಗಿದೆ. ಅಂದರೆ ಆರ್ಥಿಕತೆಯ ಮೇಲೆ ಕೋವಿಡ್‌ನಿಂದ ನಿರೀಕ್ಷಿತ ದುಷ್ಪರಿಣಾಮ ಉಂಟಾಗಿಲ್ಲ ಎಂದು ರಾಷ್ಟ್ರೀಯ ಸಂಖ್ಯಾಶಾಸ್ತ್ರ ಕಚೇರಿ ಹೇಳಿದೆ.

2021ರ ಮೇ ತಿಂಗಳಲ್ಲಿ ಬಿಡುಗಡೆ ಮಾಡಲಾದ ಅಂದಾಜು ಪ್ರಕಾರ, 2020-21ರಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇ.7.3ರಷ್ಟುಕುಸಿತವಾಗಿದೆ ಎಂದು ಹೇಳಲಾಗಿತ್ತು. ಅದರೆ 2020-21 ಮತ್ತು 2019-20ರಲ್ಲಿ ಸ್ಥಿರ ಜಿಡಿಪಿ ಅಥವಾ ನೈಜ ಜಿಡಿಪಿ ಕ್ರಮವಾಗಿ 135.58 ಲಕ್ಷ ಕೋಟಿ ರು. ಮತ್ತು 145.16 ಲಕ್ಷ ಕೋಟಿ ರು.ನಷ್ಟಿದೆ. ಹೀಗಾಗಿ 2019-20ರ ಅವಧಿಯಲ್ಲಿ ಆದ ಶೇ.3.7ರ ಬೆಳವಣಿಗೆಗೆ ಹೋಲಿಸಿದರೆ 2020-21ರ ಅವಧಿಯಲ್ಲಿ ಶೇ.6.6 ಕುಸಿತವಾಗಿದೆ ಎಂದು ಅದು ಸ್ಪಷ್ಟಪಡಿಸಿದೆ.

ಆರ್ಥಿಕ ಸಮೀಕ್ಷೆ ವರದಿಯಲ್ಲೇನಿದೆ?

- ಮುಂದಿನ 2 ವರ್ಷ ಜಗತ್ತಿನ ಯಾವುದೇ ದೇಶಕ್ಕಿಂತ ಭಾರತದ ಜಿಡಿಪಿ ವೃದ್ಧಿ ದರ ಹೆಚ್ಚು

- ಕೋವಿಡ್‌ ನಡುವೆಯೂ ಈ ಪ್ರಗತಿ ದಾಖಲಿಸಲು ಕೇಂದ್ರದ ವಿಶಿಷ್ಟಕಾರ‍್ಯತಂತ್ರ ಕಾರಣ

- ಲಸಿಕೆ ಅಭಿಯಾನ, ಪೂರೈಕೆ ವಲಯದ ಪ್ರಗತಿ, ನಿಯಂತ್ರಣ ಕ್ರಮಗಳಿಂದ ಉತ್ತೇಜನ

- ವಿತ್ತೀಯ ಕೊರತೆ, ಸಾಲ ಎರಡೂ ಹೆಚ್ಚಳ; ಆದರೆ ಉತ್ಪಾದನೆಯೂ ಏರಿದ್ದರಿಂದ ಲಾಭ

click me!