Budget 2022: ತೆರಿಗೆದಾರರ ಮೇಲೆ ನೇರ ಪರಿಣಾಮ ಬೀರೋ 8 ಬಜೆಟ್ ಘೋಷಣೆಗಳು ಯಾವುವು? ಇಲ್ಲಿದೆ ಮಾಹಿತಿ

By Suvarna NewsFirst Published Feb 1, 2022, 9:34 PM IST
Highlights

*.ಐಟಿ ರಿಟರ್ನ್ ಸಲ್ಲಿಕೆ ಗಡುವು ವಿಸ್ತರಣೆ
*ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯಲ್ಲಿ ಬದಲಾವಣೆಯಿಲ್ಲ
*80ಸಿ ಅಡಿಯಲ್ಲಿ ವಿನಾಯ್ತಿ ಮಿತಿಯಲ್ಲಿ ಹೆಚ್ಚಳವಿಲ್ಲ
*ಕೋವಿಡ್-19 ವೈದ್ಯಕೀಯ ವೆಚ್ಚಕ್ಕೆ ಪಡೆದ ಹಣಕ್ಕೆ ತೆರಿಗೆ ಇಲ್ಲ

ನವದೆಹಲಿ (ಫೆ.1): ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ (ಫೆ.1) ಮಂಡಿಸಿದ ಬಜೆಟ್ ತೆರಿಗೆ ಪಾವತಿದಾರರಿಗೆ ನಿರಾಸೆ ಮೂಡಿಸಿರೋದಂತೂ ನಿಜ. ಆದಾಯ ತೆರಿಗೆ ಮಿತಿ ಹಾಗೂ ಸ್ಲ್ಯಾಬ್ ಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದ್ರೆ ಈ ಬಾರಿ ಸಾಮಾನ್ಯ ಜನರ ಮೇಲೆ ನೇರ ಪರಿಣಾಮ ಬೀರೋ ತೆರಿಗೆಗೆ ಸಂಬಂಧಿಸಿದ ಕೆಲವು ಹೊಸ ಘೋಷಣೆಗಳ ಬಗ್ಗೆ ಮಾಹಿತಿ ಹೊಂದಿರೋ ಜೊತೆ ಬದಲಾವಣೆಯಾಗದ ವಿಷಯಗಳ ಬಗ್ಗೆಯೂ ಮಾಹಿತಿ ಹೊಂದಿರೋದು ಅಗತ್ಯ. ಹಾಗಾದ್ರೆ ಈ ಬಾರಿಯ ಬಜೆಟ್ ನಲ್ಲಿ ಸಾಮಾನ್ಯ ವ್ಯಕ್ತಿಯೊಬ್ಬ ಗಮನಿಸಲೇಬೇಕಾದ ಸಂಗತಿಗಳು ಯಾವುವು? 

1.ಯಥಾಸ್ಥಿತಿ ಕಾಯ್ದುಕೊಂಡ ಆದಾಯ ತೆರಿಗೆ
ಈ ಬಾರಿ ಆದಾಯ ತೆರಿಗೆ ಮಿತಿ ಹಾಗೂ ಸ್ಲ್ಯಾಬ್ ಗಳಲ್ಲಿ  ಬದಲಾವಣೆ ಆಗಿಲ್ಲ. ಪ್ರಸ್ತುತ 2.5 ಲಕ್ಷ ರೂ.ತನಕ ಆದಾಯ ಹೊಂದಿರೋರು ಯಾವುದೇ ತೆರಿಗೆ ಪಾವತಿಸಬೇಕಿಲ್ಲ. 60ರಿಂದ 80 ವರ್ಷದವರಿಗೆ ಈ ವಿನಾಯಿತಿ ಮಿತಿ 3 ಲಕ್ಷ ರೂಪಾಯಿ ಹಾಗೂ 80 ವರ್ಷ ಮೇಲ್ಪಟ್ಟವರಿಗೆ 5 ಲಕ್ಷ ರೂಪಾಯಿ ಇದೆ. 

2.ಐಟಿ ರಿಟರ್ನ್ ಸಲ್ಲಿಕೆ ಗಡುವು ವಿಸ್ತರಣೆ
ಒಂದು ವೇಳೆ ತೆರಿಗೆಪಾವತಿದಾರ ಅಂತಿಮ ದಿನಾಂಕದೊಳಗೆ ತೆರಿಗೆ ರಿಟರ್ನ್ ಸಲ್ಲಿಕೆ ಮಾಡದಿದ್ರೆ ಅಥವಾ ಐಟಿ ರಿಟರ್ನ್ ನಲ್ಲಿ ಏನಾದ್ರೂ ತಪ್ಪುಗಳಾಗಿದ್ರೆ ಅಂಥ ಸಂದರ್ಭದಲ್ಲಿ ಸಂಬಂಧಿಸಿದ ಮೌಲ್ಯಮಾಪನ ವರ್ಷದ  ಎರಡು ವರ್ಷದೊಳಗೆ ಪರಿಷ್ಕೃತ ತೆರಿಗೆ ರಿಟರ್ನ್ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ಪರಿಷ್ಕೃತ ತೆರಿಗೆ ರಿಟರ್ನ್ ಸಲ್ಲಿಕೆಗೆ ಮೌಲ್ಯಮಾಪನ ವರ್ಷದ ಅಂತ್ಯದ ಮೂರು ತಿಂಗಳು ಮುನ್ನ ಫೈಲ್ ಮಾಡಬೇಕಿತ್ತು.

Union Budget 2022 : ಹೊಸ ಇವಿಎಂಗಳ ಖರೀದಿಗೆ 1525 ಕೋಟಿ ಮೀಸಲು, ಸಬ್ಸಿಡಿಗಳಲ್ಲಿ ಇಳಿಕೆ!

3.ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯಲ್ಲಿ ಬದಲಾವಣೆಯಿಲ್ಲ
ಪ್ರಸ್ತುತ ವೇತನ ಪಡೆಯೋ ತೆರಿಗೆದಾರರಿಗೆ  ಸ್ಟ್ಯಾಂಡರ್ಡ್ ಡಿಡಕ್ಷನ್  ಮಿತಿ 50,000ರೂ. ಇದೆ. ಈ ಬಾರಿ ಈ ಮಿತಿಯನ್ನು 1ಲಕ್ಷ ರೂ.ಗೆ ಏರಿಕೆ ಮಾಡೋ ನಿರೀಕ್ಷೆಯಿತು. ಆದ್ರೆ ಬಜೆಟ್ ನಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯಲ್ಲಿಯಾವುದೇ ಬದಲಾವಣೆ ಮಾಡಿಲ್ಲ.ಉದ್ಯೋಗದ ಮೇಲಿನ ವೃತ್ತಿ ತೆರಿಗೆ ಹೊರತುಪಡಿಸಿ ಉದ್ಯೋಗಕ್ಕೆ ಸಂಬಂಧಿಸಿದ ಅನೇಕ ವೆಚ್ಚಗಳನ್ನು ಸ್ಟ್ಯಾಂಡರ್ಡ್ ಡಿಡಕ್ಷನ್ ಕವರ್ ಮಾಡುತ್ತದೆ.  2019 ರ ಮಧ್ಯಂತರ ಬಜೆಟ್‌ನಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು 40,000ರೂ.ನಿಂದ 50,000ರೂ.ಕ್ಕೆ ಹೆಚ್ಚಿಸಲಾಯಿತು.  

4.80ಸಿ ಅಡಿಯಲ್ಲಿ  ವಿನಾಯ್ತಿ ಮಿತಿಯಲ್ಲಿ ಹೆಚ್ಚಳವಿಲ್ಲ
ಆದಾಯ ತೆರಿಗೆ ಕಾಯ್ದೆ 80ಸಿ ಅಡಿಯಲ್ಲಿ ಎಲ್ಲಾ ಹೂಡಿಕೆ ಸೇರಿ ಪ್ರಸ್ತುತ  ಗರಿಷ್ಠ1.5 ಲಕ್ಷ ರೂ.ತೆರಿಗೆ ವಿನಾಯ್ತಿ ಪಡೆಯಲು ಅವಕಾಶವಿದೆ. ಈ ಮಿತಿಯನ್ನು ಈ 2022ನೇ ಸಾಲಿನ ಬಜೆಟ್ ನಲ್ಲಿ 2.5ಲಕ್ಷ ರೂ.ಗೆ ಹೆಚ್ಚಳ ಮಾಡೋ ನಿರೀಕ್ಷೆಯಿತ್ತು. ಆದ್ರೆ ಈ ಮಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ

5.ರಾಜ್ಯ ಸರ್ಕಾರದ ಉದ್ಯೋಗಿಗಳಿಗೆ ವಿಶೇಷ ಕೊಡುಗೆ
ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ (NPS) ಹೂಡಿಕೆ ಮಾಡೋ  ರಾಜ್ಯ ಸರ್ಕಾರಿ ಉದ್ಯೋಗಿಗಳಿಗೆ ತೆರಿಗೆ ಕಡಿತದ ಮಿತಿಯನ್ನು ಶೇ.10ರಿಂದ ಶೇ.14ಕ್ಕೆ ಹೆಚ್ಚಳ ಮಾಡಲಾಗಿದೆ. ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಈಗಾಗಲೇ ಈ ಸೌಲಭ್ಯ ಕಲ್ಪಿಸಲಾಗಿದೆ. 

6.ಮನೆ ಖರೀದಿಸೋರಿಗೆ ಯಾವುದೇ ಲಾಭವಿಲ್ಲ
ಮನೆ ಖರೀದಿಸೋರಿಗೆ ಯಾವುದೇ ತೆರಿಗೆ ಕಡಿತ ಅಥವಾ ಉತ್ತೇಜನಕಾರಿ ಯೋಜನೆಯನ್ನು ಈ ಬಾರಿಯ ಬಜೆಟ್ ನಲ್ಲಿ ಘೋಷಿಸಿಲ್ಲ.

ಬಜೆಟ್ ಗೆ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ 

7.ಕೋವಿಡ್-19 ವೈದ್ಯಕೀಯ ವೆಚ್ಚಕ್ಕೆ ಪಡೆದ ಹಣಕ್ಕೆ ತೆರಿಗೆ ಇಲ್ಲ
ವ್ಯಕ್ತಿಯೊಬ್ಬ ತನ್ನ ಹಾಗೂ ಕುಟುಂಬ ಸದಸ್ಯರ ಕೋವಿಡ್-19 ಗೆ ಸಂಬಂಧಿಸಿದ ವೈದ್ಯಕೀಯ ಚಿಕಿತ್ಸೆಗೆ ಉದ್ಯೋಗದಾತರು ಅಥವಾ ಇತರ ಯಾವುದೇ ವ್ಯಕ್ತಿಯಿಂದ ಪಡೆದ ಹಣ ಅಥವಾ ಆಸ್ತಿ ಮೇಲೆ ತೆರಿಗೆ ವಿಧಿಸಲಾಗೋದಿಲ್ಲ. ಇನ್ನು ಕೋವಿಡ್-19ನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಆತನ ಉದ್ಯೋಗದಾತರು ಅಥವಾ ಇತರ ಯಾವುದೇ ವ್ಯಕ್ತಿಗಳು ನೀಡೋ 10ಲಕ್ಷ ರೂ. ತನಕದ ಆರ್ಥಿಕ ನೆರವಿಗೆ ಯಾವುದೇ ತೆರಿಗೆಯಿಲ್ಲ.

8.ಬಂಡವಾಳ ಹೂಡಿಕೆ ಲಾಭಕ್ಕೆ ಶೇ. 15 ಸರ್ ಚಾರ್ಜ್
ದೀರ್ಘಾವದಿ ಹೂಡಿಕೆಯಿಂದ ಪಡೆದ ಲಾಭದ ಮೇಲೆ ವಿಧಿಸೋ ಸರ್ ಚಾರ್ಜ್ ಮಿತಿಯನ್ನು ಶೇ. 15ಕ್ಕೆ ನಿಗದಿಪಡಿಸಲಾಗಿದೆ. ಇಕ್ವಿಟಿ ಷೇರುಗಳು ಹಾಗೂ ಅದಕ್ಕೆ ಸಂಬಂಧಿಸಿದ ಮ್ಯೂಚ್ಯುವಲ್ ಫಂಡ್ ಗಳು ಗರಿಷ್ಠ ಶೇ. 15 ಸರ್ ಚಾರ್ಜ್ ಗೆ ಒಳಪಡಲಿವೆ. ಇತರ ಕೆಲವು ದೀರ್ಘಾಕಾಲಿಕ ಬಂಡವಾಳ ಹೂಡಿಕೆ ಲಾಭದ ಮೇಲೆ ಆಯಾ ವ್ಯಕ್ತಿಗಳ ತೆರಿಗೆಗೊಳಪಡೋ ಆದಾಯ ಆಧಾರದಲ್ಲಿ ಗರಿಷ್ಠ ಶೇ.37 ಸರ್ ಚಾರ್ಜ್  ವಿಧಿಸಲು ಅವಕಾಶವಿದೆ. 
 

click me!