ದೃಷ್ಟಿ ಹಾಯಿಸಿದಲ್ಲೆಲ್ಲ ಕೆಟ್ಟದಾಗಲಿ; ಶನಿಗೆ ಪತ್ನಿ ಕೊಟ್ಟ ಶಾಪ

By Suvarna News  |  First Published Jun 9, 2020, 3:33 PM IST

ಶನಿಯ ದೃಷ್ಟಿ ಕೆಟ್ಟದೆಂಬುದು ಸಾಮಾನ್ಯ ನಂಬಿಕೆ. ಆದರೆ, ಆತನ ದೃಷ್ಟಿ ಬಿದ್ದಲೆಲ್ಲ ಕೆಟ್ಟದಾಗಲಿ ಎಂಬುದು ಶನಿಗೆ ಪತ್ನಿ ಕೊಟ್ಟ ಶಾಪ. ಅವಳೇಕೆ ಶಾಪ ಕೊಟ್ಟಳು?


ಹಿಂದೂಗಳಲ್ಲಿ ಹೆಚ್ಚಿನವರಿಗೆ ಶನಿ ಎಂದರೆ ಭಕ್ತಿಗಿಂತಲೂ ಹೆಚ್ಚು ಭಯ. ಜೀವನದಲ್ಲಿ ಕೆಡುಕಾಗತೊಡಗಿದರೆ ಸಾಕು, ಶನಿದೆಸೆ ಆರಂಭವಾಗಿರಬೇಕು ಎಂದು ಭಾವಿಸುತ್ತಾರೆ. ಶನಿಯ ಕರಿ ರೂಪ, ಕಾಗೆಯನ್ನು ವಾಹನವಾಗಿಸಿಕೊಂಡು ಸುತ್ತುವ ಚಿತ್ರಗಳನ್ನೆಲ್ಲ ನೋಡಿದಾಗ ಆತ ಭಯಂಕರವಾಗಿ ಕಾಣಿಸುತ್ತಾನೆ. ಶನಿ ಯಾರ ಮೇಲಾದರೂ ಕಣ್ಣು ಹಾಯಿಸಿದರೆ ಕೆಟ್ಟದಾಗುತ್ತದೆಂಬುದು ನಿಜವಾದರೂ, ಆತ ಕೆಟ್ಟವನಲ್ಲ, ಕ್ರೂರಿಯಲ್ಲ. 

ಶನಿ ಜನರ ತಪ್ಪುಗಳಿಗೆ ಶಿಕ್ಷೆ ನೀಡುತ್ತಾನೆ, ಸುಲಭವಾಗಿ ಕ್ಷಮಿಸುವವನಲ್ಲ. ಆದರೆ, ಆತ ಒಲಿದಾಗ ಜೀವನ ಅಷ್ಟೇ ಸುಖಮಯವಾಗಿರುತ್ತದೆ. ಹಾಗಾಗಿಯೇ ತಿಳಿದೋ ತಿಳಿಯದೆಯೋ ತಪ್ಪು ಮಾಡಿದವರು ಕ್ಷಮೆಗಾಗಿ ಶನಿಯ ಮೆಚ್ಚಿಸಲು ವಿವಿಧ ರೀತಿಯಲ್ಲಿ ಆತನನ್ನು ಪೂಜಿಸುತ್ತಾರೆ. 

ಈ ರಾಶಿಯವರಿಗೆ ಈಗ ಪ್ರೀತಿ ಪ್ರೇಮ ಪ್ರಣಯದ ಸಮಯ!

Tap to resize

Latest Videos

undefined

ಅಷ್ಟ ಪತ್ನಿಯರು
ಹೀಗೆ ಶನಿಯನ್ನು ಮೆಚ್ಚಿಸಲು ಮಾಡುವ ಅನೇಕ ವಿಧಾನಗಳಲ್ಲಿ ಆತನ ಪತ್ನಿಯರನ್ನು ಪೂಜಿಸುವುದೂ ಒಂದು. ಶನಿಯ ಬಗ್ಗೆ ಯಾರ ಅಭಿಪ್ರಾಯ ಏನೇ ಇರಲಿ, ಆತನಿಗೆ ಎಂಟು ಪತ್ನಿಯರಿದ್ದಾರೆಂದರೆ ಆತನಲ್ಲಿ ಪ್ರೀತಿ, ಪ್ರಣಯ ಭಾವಗಳು ಇದ್ದಿರಲೇಬೇಕು. ಧ್ವಜಿನಿ, ಧಾಮಿನಿ, ಕಂಕಾಳಿ, ಕಲಹಪ್ರಿಯ, ಕಂಟಕಿ, ತುರಂಗಿ, ಮಹಿಷಿ ಹಾಗೂ ಅಜ ಶನಿಯ ಪತ್ನಿಯರ ಹೆಸರುಗಳು. ಶನಿಯನ್ನು ಮೆಚ್ಚಿಸಲು ಆತನ ಪತ್ನಿಯರ ಹೆಸರುಗಳನ್ನು ಶನಿವಾರ ಜಪಿಸುವವರೂ ಇದ್ದಾರೆ. ಶನಿಯ ದೃಷ್ಟಿ ಕೆಟ್ಟದ್ದು ಎಂಬ ನಂಬಿಕೆ ಹುಟ್ಟಿದ್ದಕ್ಕೆ ಪತ್ನಿ ದಾಮಿನಿಯ ಜೊತೆ ನಡೆದ ಘಟನೆಯೊಂದು ತಳುಕು ಹಾಕಿಕೊಂಡಿದೆ. 

ದಾಮಿನಿಯ ಗಂಡುಮಗುವಿನ ಬಯಕೆ
ಸೂರ್ಯ ಮತ್ತು ಛಾಯಾದೇವಿಯ ಪುತ್ರ ಶನಿ ಕಪ್ಪುವರ್ಣದವನು. ಕಬ್ಬಿಣದಿಂದ ಮಾಡಿದ ರಥದಲ್ಲಿ ಓಡಾಡುವವ. ಬಾಲ್ಯದಿಂದಲೂ ಶ್ರೀಕೃಷ್ಣನ ಭಕ್ತನಾಗಿರುವ ಶನಿಯು ಆಗಾಗ ಪರ್ವತವನ್ನೇರಿ ಗಂಟೆಗಟ್ಟಲೆ ಧ್ಯಾನದಲ್ಲಿ ತೊಡಗುತ್ತಿದ್ದನು. ದೊಡ್ಡವನಾದ ಮೇಲೆ ಚಿತ್ರರಥನ ಮಗಳಾದ ದಾಮಿನಿಯನ್ನು ವಿವಾಹವಾದನು. ದಾಮನಿಯು ಬಹಳ ಸುಂದರಿಯಷ್ಟೇ ಅಲ್ಲ, ಮಹಾನ್ ಬುದ್ಧಿವಂತೆ ಕೂಡಾ. ಆಕೆಯಲ್ಲಿ ಕೆಲ ವಿಶೇಷ ಶಕ್ತಿಗಳಿದ್ದವು. 
ಒಮ್ಮೆ ಇದ್ದಕ್ಕಿದ್ದಂತೆ ಗಂಡುಮಗುವಿನ ತಾಯಾಗಬೇಕೆಂಬ ಉತ್ಕಟ ಬಯಕೆ ದಾಮಿನಿಯನ್ನು ಆವರಿಸಿಕೊಂಡಿತು. ಈ ಆಸೆಯನ್ನು ಹೇಳಿಕೊಳ್ಳಲು ಆಕೆ ಶನಿದೇವನ ಬಳಿ ಹೋದಳು. ಆದರೆ, ಆ ಸಮಯದಲ್ಲಿ ಶನಿಯು ಕೃಷ್ಣನ ಧ್ಯಾನದಲ್ಲಿ ತೊಡಗಿದ್ದನು. 

ಪತಿಗೆ ಶಾಪ
ಶನಿಯು ಧ್ಯಾನದಲ್ಲಿರುವುದನ್ನು ನೋಡಿದರೂ ದಾಮಿನಿಯು ತನ್ನ ಬಯಕೆಯನ್ನು ಆಗಲೇ ಹೇಳಿಕೊಳ್ಳಬೇಕೆಂಬ ಉತ್ಸಾಹದಲ್ಲಿದ್ದಳು. ಶನಿಯನ್ನು ಧ್ಯಾನದಿಂದ ಹೊರತರಲು ಆಕೆ ನಡೆಸಿದ ಎಲ್ಲ ಪ್ರಯತ್ನಗಳೂ ವಿಫಲವಾದವು. ಇದರಿಂದ ಅವಮಾನಿತಳಾಗಿ ಕ್ರೋಧಗೊಂಡ ದಾಮಿನಿಯು ಇನ್ನು ಮುಂದೆ ಶನಿಯ ದೃಷ್ಟಿ ಯಾರ ಮೇಲೆ ಬಿದ್ದರೂ ಅವರು ಹಾಳಾಗಿಹೋಗಲಿ ಎಂದು ಶಾಪ ನೀಡಿದಳು. ಶನಿದೇವನ ದೃಷ್ಟಿ ಬಿದ್ದ ವ್ಯಕ್ತಿ ಸಮಸ್ಯೆಗಳ ಸುಳಿಯಲ್ಲಿ ಬೀಳಲಿ ಎಂದು ಶಪಿಸಿದಳು. ಹಾಗಾಗಿಯೇ ಹೇಳಿದ್ದು, ಶನಿ ಕೆಟ್ಟವನಲ್ಲ, ಆತನ ದೃಷ್ಟಿ ಕೆಟ್ಟದ್ದನ್ನು ತರಬಹುದು. 

ಬ್ರೇಕಪ್‌ಗೆ ಕೂಡಾ ಸುಖಾಂತ್ಯ ನೀಡಬಹುದು!

ಪಶ್ಚಾತ್ತಾಪ
ಶನಿಯು ಧ್ಯಾನಾವಸ್ಥೆಯಿಂದ ಹೊರ ಬಂದ ಮೇಲೆ, ಪತ್ನಿಯ ಕೋಪ ನೋಡಿ ಅವಳಲ್ಲಿ ಕ್ಷಮೆ ಕೋರುತ್ತಾನೆ. ಆಗ ದಾಮಿನಿಗೆ ಸಂದರ್ಭ ಅರ್ಥವಾಗುತ್ತದೆ, ತಾನು ಶಾಪ ಕೊಡಬಾರದಿತ್ತು ಎಂಬ ಅರಿವಾಗುತ್ತದೆ. ಆದರೆ, ಒಮ್ಮೆ ಕೊಟ್ಟ ಶಾಪವನ್ನು ಹಿಂತೆಗೆದುಕೊಳ್ಳುವ ಶಕ್ತಿ ಆಕೆಗಿರುವುದಿಲ್ಲ. ಕೇವಲ ಶನಿಯನ್ನು ಸಂತೈಸುವ ಕೆಲಸವನ್ನಷ್ಟೇ ಅವಳು ಮಾಡಬಹುದಾಗುತ್ತದೆ. ಹಾಗಾಗಿಯೇ, ನಂತರದಲ್ಲಿ ಶನಿಯು ತನ್ನ ಭಕ್ತರನ್ನು ಕಾಪಾಡುವ ಸಲುವಾಗಿ ತಲೆಕೆಳಗೆ ಹಾಕಿಕೊಂಡು ತನ್ನ ದೃಷ್ಟಿ ತಾಕದಂತೆ ನೋಡಿಕೊಳ್ಳಲು ನಿರ್ಧರಿಸುತ್ತಾನೆ. ಹಾಗಿದ್ದರೂ, ಶನಿಗೆ ಕೋಪ ಬರಿಸಿದರೆ, ತಪ್ಪು ಮಾಡಿದರೆ ಆತ ದೃಷ್ಟಿಯಿಂದಲೇ ಶಾಪ ನೀಡುತ್ತಾನೆ. 

ರಾಮನು ವನವಾಸ ಅನುಭವಿಸಬೇಕಾದ್ದು, ರಾವಣನ ಪತನ, ಪಾಂಡವರ ವನವಾಸ, ನಳನ ಸಂಕಷ್ಟಗಳು- ಎಲ್ಲಕ್ಕೂ ಶನಿಯ ವಕ್ರದೃಷ್ಟಿಯೇ ಕಾರಣ ಎಂಬ ಕತೆಗಳಿವೆ. ಆದರೆ, ಆಂಜನೇಯನು ರಾವಣನ ಸೆರೆಯಿಂದ ಶನಿಯನ್ನು ಬಿಡಿಸಿದ್ದರಿಂದಾಗಿ, ಆಂಜನೇಯನ ಭಕ್ತರಿಗೆ ಶನಿ ಹಾನಿ ಮಾಡುವುದಿಲ್ಲ ಎಂಬ ನಂಬಿಕೆಯೂ  ಇದೆ. ಹೀಗಾಗಿ, ಶನಿಯಿಂದ ತಪ್ಪಿಸಿಕೊಳ್ಳಲು ಹಲವರು ಆಂಜನೇಯನನ್ನು ಪೂಜಿಸುವ ಅಭ್ಯಾಸವನ್ನೂ ಇಟ್ಟುಕೊಂಡಿರುತ್ತಾರೆ. 

click me!