ಬರ್ತಿದ್ದಾಳೆ ‘ವರಮಹಾಲಕ್ಷ್ಮೀ’; ಮನೆ ತುಂಬಿಸಿಕೊಳ್ಳಲು ಹೀಗೆ ಪೂಜೆ ಮಾಡಿ!

By Web Desk  |  First Published Aug 7, 2019, 4:24 PM IST

ಆಷಾಢದ ಆಲಸ್ಯ ಮುಗಿದು ಶ್ರಾವಣದ ಲವಲವಿಕೆ, ಚೈತನ್ಯ ಬಂದಿದೆ. ವಿರಹ ಗೀತೆ ಮುಗಿದು ಎಲ್ಲೆಡೆ ಆನಂದವೇ ತುಂಬುವ ಸಮಯ. ಸಾಲು ಸಾಲು ಹಬ್ಬಗಳು ಶುರುವಾಗುವ ಕಾಲ. ನಾಗರಪಂಚಮಿಯಿಂದ ಶುರುವಾಗಿ ಹಬ್ಬಗಳ ಸಾಲು ಶುರುವಾಗಿದೆ. ಇದಾದ ಹೆಂಗಳೆಯರ ಅಚ್ಚುಮೆಚ್ಚಿನ ವರಮಹಾಲಕ್ಷ್ಮೀ ಹಬ್ಬ ಬಂದಿದೆ. ಶ್ರಾವಣ ಮಾಸದಲ್ಲಿ ಮೊದಲು ಬರುವ ವ್ರತ ಇದಾಗಿದೆ.


ಹಿಂದೂ ಸಂಪ್ರದಾಯದಲ್ಲಿ ವ್ರತಗಳಿಗೆ ಹೆಚ್ಚು ಪಾಮುಖ್ಯತೆ ನೀಡಲಾಗುತ್ತದೆ. ಸುಮಂಗಲಿಯರೆಲ್ಲರೂ ಸೇರಿ ನೇಮ, ನಿಷ್ಠೆಯಿಂದ ವ್ರತ ಮಾಡಿ ಇಷ್ಟಾರ್ಥಗಳನ್ನು ಈಡೇರಿಸುವಂತೆ ಬೇಡುತ್ತಾರೆ. ಅಕ್ಕಪಕ್ಕದ ಮನೆಯ ಹೆಂಗಳೆಯರನ್ನು ಕರೆದು ಅರಿಶಿನ-ಕುಂಕುಮ, ಬ್ಲೌಸ್ ಪೀಸ್ ಕೊಡುತ್ತಾರೆ. ಭಕ್ತಿ ಭಾವದಿಂದ ಪೂಜೆ ಮಾಡಿ ತಾಯಿಯನ್ನು ಕೇಳಿದರೆ ಆಕೆ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ ಎಂಬ ನಂಬಿಕೆ ಇದೆ.

ವರಮಹಾಲಕ್ಷ್ಮೀ ಹಬ್ಬ/ ವ್ರತ ಹೆಂಗಳೆಯರಿಗೆ ಪ್ರಮುಖವಾದ ವ್ರತ. ಸುಖ, ಸಂಪತ್ತು, ಆಸ್ತಿ,ವಿದ್ಯೆ,ಪ್ರೀತಿ,ಶಾಂತಿ ಹಾಗೂ ಸಮೃದ್ಧಿಯನ್ನು ನೀಡುವಂತೆ ಪಾರ್ವತಿ ದೇವಿಯನ್ನು ಪ್ರಾರ್ಥಿಸುವುದೇ ವರಮಹಾಲಕ್ಷ್ಮಿ ವ್ರತದ ಪ್ರಾಮುಖ್ಯತೆ.  ವರಮಹಾಲಕ್ಷ್ಮಿ ಅಂದರೆ ಕೇಳಿದ 'ವರವನ್ನು ನೀಡುವ ದೇವಿ' ಎಂದರ್ಥ.

Latest Videos

undefined

ವರಮಹಾಲಕ್ಷ್ಮೀ ವ್ರತದ ದಿನ ತಪ್ಪದೇ ಮಾಡಬೇಕಾದ ಕ್ರಮಗಳಿವು:

- ವ್ರತ ಮಾಡುವ ಸುಮಂಗಲಿಯರು ತಪ್ಪದೇ ಲಕ್ಷ್ಮೀ ಅಷ್ಟೋತ್ತರ ಹಾಗೂ ಸಹಸ್ರನಾಮ ಪಠಿಸಬೇಕು.
- ಸುಮಂಗಲಿಯರು ಹಾಗೂ ಹೆಣ್ಣು ಮಕ್ಕಳು ಒಂಬತ್ತು ಗಂಟುಗಳನ್ನೊಳಗೊಂಡ ಹಳದಿ ದಾರಕ್ಕೆ ಒಂದು ಹೂವು ಕಟ್ಟಿ ಬಲಗೈಗೆ ಕಟ್ಟಿಕೊಳ್ಳಬೇಕು. ಇದರ ಉದ್ದೇಶ ಪತಿಗೆ ದೀರ್ಘಾಯುಷ್ಯ ಹಾಗೂ ಆರೋಗ್ಯ ಲಭಿಸಲೆಂದು.

- ಮುಖವಾಡ ಹಾಕದೇ ದೇವರಿಗೆ ಪೂಜೆ ಮಾಡುವವರು ತೆಂಗಿನಕಾಯಿಯನ್ನು ಕಳಶ ರೂಪದಲ್ಲಿಟ್ಟು ಪೂಜೆ ಮಾಡಬಹುದು.

- ದೇವಿಯನ್ನು ಬೆಳ್ಳಿ  ಅಥವಾ ಹಿತ್ತಾಳೆ ಕಲಶದಲ್ಲಿ ಪ್ರತಿಷ್ಠಾಪಿಸಬೇಕು. ಹಾಗೂ ಅದರಲ್ಲಿ ಅಕ್ಕಿ, 5 ವೀಳ್ಯದೆಲೆಗಳು, ಅಡಿಕೆ, ನೀರು, ನಾಣ್ಯ, ಪೂರ್ಣ ಲಿಂಬೆಹಣ್ಣು, ಬಾಚಣಿಗೆ, ಕನ್ನಡಿ, ಕಪ್ಪು ಬಳೆಗಳನ್ನು ಅದರಲ್ಲಿ ತುಂಬಬೇಕು.

ಕಳೆ ಕಳೆದುಕೊಂಡ ವರಮಹಾಲಕ್ಷ್ಮೀ; ಆಚರಿಸಲು ಸುಷ್ಮಾ ಇನ್ನಿಲ್ಲ!

- ದೇವರ ವ್ರತ ಮಾಡುವವರು ಉಪವಾಸ ಮಾಡಬೇಕು. ಗರ್ಭಿಣಿಯರು, ಹಾಗೂ ಆರೋಗ್ಯ ಸಮಸ್ಯೆ ಉಳ್ಳವರಿಗೆ ಉಪವಾಸ ಮಾಡದಿದ್ದರೂ ಅಡ್ಡಿಯಿಲ್ಲ. 

- ಕಾರಣಾಂತರಗಳಿಂದ ವರಮಹಾಲಕ್ಷ್ಮೀ ವ್ರತ ತಪ್ಪಿದರೆ ಮುಂಬರುವ ಶುಕ್ರವಾರ ಅಥವಾ ನವರಾತ್ರಿಯ ಶುಕ್ರವಾರದಲ್ಲಿ ಮಾಡಬಹುದು.

- ವರಮಹಾಲಕ್ಷ್ಮೀ ಪೂಜೆಯನ್ನು ಎಂದೂ ಒಬ್ಬಂಟಿಯಾಗಿ ಮಾಡಬಾರದು.

ವರಮಹಾಲಕ್ಷ್ಮೀ ಹಬ್ಬ ಆಚರಣೆ ಹಿಂದಿದೆ ಈ ಕಥೆ!

ವಿವಾಹವಾದ ಮಹಿಳೆ ತನ್ನ ಜೀವನದಲ್ಲಿ ಏನು ಬೇಕೋ ಅದನ್ನು ಪಡೆಯುವುದು ಹೇಗೆ ಎಂದು  ಪಾರ್ವತಿ ದೇವಿ ಒಮ್ಮೆ ಶಿವನನ್ನು ಪ್ರಶ್ನಿಸುತ್ತಾಳೆ. ಯಾವ ಪತಿವ್ರತೆ ಭಕ್ತಿಯಿಂದ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸುತ್ತಾಳೋ ಅವಳಿಗೆ ಇಷ್ಟಾರ್ಥಗಳು ಲಭಿಸುತ್ತದೆ ಎಂದು ಹೇಳುತ್ತಾ  ಶಿವ ಚಾರುಮತಿ ಕಥೆಯನ್ನು ಹೇಳುತ್ತಾನೆ.

ಮಗಧ ರಾಜ್ಯದಲ್ಲಿ ಚಾರುಮತಿ ಎಂಬ ಮಹಿಳೆ ವಾಸಿಸುತ್ತಿದ್ದಳು. ಈಕೆ ತನ್ನ ಒಳ್ಳೆಯ ಗುಣದಿಂದ ಗಂಡನಿಗೆ ಆದರ್ಶ ಪತ್ನಿಯಾಗಿ, ಅತ್ತೆ ಮಾವನಿಗೆ ಒಳ್ಳೆಯ ಸೊಸೆಯಾಗಿ, ಮಕ್ಕಳಿಗೆ ಉತ್ತಮ ತಾಯಿಯಾಗಿದ್ದಳು.  ಈಕೆಯ ಗುಣಕ್ಕೆ ಪ್ರಸನ್ನಳಾದ ಲಕ್ಷ್ಮೀದೇವಿ ಚಾರುಮತಿ ಕನಸಿನಲ್ಲಿ ಬಂದು ಆಷಾಢದ ಹುಣ್ಣಿಮೆ ನಂತರ ಬರುವ ಶ್ರಾವಣ ಮಾಸದ ಮೊದಲನೇ ಶುಕ್ರವಾರ ಯಾರು ನನ್ನ ಪೂಜಿಸುತ್ತಾರೋ ಅವರು ಬೇಡಿಕೊಂಡ ಇಷ್ಟಾರ್ಥಗಳು ಲಭಿಸುತ್ತದೆ ಎಂದು ಹರಸಿದಳು. 

ದೇವಿಯ ಮಾತಿನಂತೆ ಚಾರುಮತಿ ನೆರೆಹೊರೆಯವರ ಜೊತೆ ವರಮಹಾಲಕ್ಷ್ಮೀ ಪೂಜೆಯನ್ನು ಭಕ್ತಿ ಭಾವದಿಂದ ಆಚರಿಸುತ್ತಾಳೆ. ಇದರಿಂದ ಸಂತುಷ್ಟಳಾದ ಲಕ್ಷ್ಮೀದೇವಿ ಆಕೆಗೆ ಮಾತ್ರವಲ್ಲದೇ ಆಕೆಯೊಂದಿಗೆ ಇದ್ದ ಮಹಿಳೆಯರಿಗೆ ಲಕ್ಷ್ಮೀದೇವಿಯೂ ಬಂಗಾರದ ಆಭರಣವನ್ನು ವರವನ್ನಾಗಿ ನೀಡುತ್ತಾಳೆ. ಅಷ್ಟೇ ಅಲ್ಲದೇ ಪೂಜೆ ಮಾಡಿದವರು ಮನೆಗೆ ಹಿಂತಿರುಗಿ ಹೋದಾಗ ಮನೆಯಲ್ಲಿ ಚಿನ್ನ ಇದ್ದವು ಎಂಬ ಪ್ರತೀತಿಯಿದೆ. ಅಂದು ಶುರುವಾದ ಪೂಜೆಯನ್ನು ಇಂದಿನವರೆಗೂ ಸುಮಂಗಲಿಯರು ಪಾಲಿಸುತ್ತಾ ಬರುತ್ತಿದ್ದಾರೆ.

"

click me!