ಲೈಂಗಿಕತೆ-ಋತುಸ್ರಾವ-ಮಾತೃಯೋನಿ ಸ್ವರೂಪಿ ದೇವಿಗಿಲ್ಲಿ ಪೂಜೆ....

By Web Desk  |  First Published Oct 3, 2019, 3:42 PM IST

ಗುವಾಹಟಿಯಲ್ಲಿ ನನಗಿದ್ದದ್ದು ಕೆಲವೇ ಗಂಟೆಗಳು. ಗುವಾಹಟಿಯಲ್ಲಿ ಏನಿದೆ ಎಂಬ ನನ್ನ ಪ್ರಶ್ನೆಗೆ ಚಾಲಕ ರಾಜುವಿನ ಉತ್ತರ ‘ಇಲ್ಲೇನಿದೆ, ಬೇಕಿದ್ರೆ ಬಾಜಾರ್‌ಗೆ ಹೋಗಬಹುದು!’ ‘ಕಾಮಾಕ್ಯ’ ದೇವಸ್ಥಾನಕ್ಕೆ ಹೋಗಬಹುದೆ ಎಂಬ ಪ್ರಶ್ನೆಗೆ ಆತ ಹೌಹಾರಿ, ಕಣ್ಣರಳಿಸಿದ್ದ!


‘ಪೂರ್ವದ ಬೆಳಕು’ ಎಂಬರ್ಥದ ‘ಪ್ರಾಗ್ಜೋತಿಷ್ಯಪುರ’ ಎಂಬ ಪ್ರಾಚೀನ ಹೆಸರಿನ ‘ಗುವಾಹಟಿ’ಯ ಮಧ್ಯದಲ್ಲಿದೆ ‘ನೀಲಾಚಲ’ವೆಂಬ ಬೆಟ್ಟ. ಬೆಟ್ಟವನ್ನು ಕಾರಿನಲ್ಲೇ ಹತ್ತಿದರೂ ಸುತ್ತಲೂ ಇರುವ ಅರಣ್ಯ, ಹಸಿರಿನ ರಾಶಿ ಮುದ ತರುತ್ತದೆ. ಕಾಮಾಕ್ಯ ದೇವಾಲಯ ಬೆಟ್ಟದ ತುದಿಯಲ್ಲಿದೆ.

Tap to resize

Latest Videos

undefined

ದೇವಾಲಯದ ಕೆಳ ಪ್ರಾಂಗಣದಲ್ಲಿ ಹೊಕ್ಕ ತಕ್ಷಣ ಸಾಲು ಸಾಲು ಅಂಗಡಿಗಳು. ಕೆಂಪು ಕವಳ ಬಾಯಿ ತುಂಬಾ ತುಂಬಿಕೊಂಡು ಅಲ್ಲಲ್ಲಿ ಉಗುಳುತ್ತಾ ಇರುವ ಅಸ್ಸಾಮೀ ಮುಖಗಳು. ಕೆಂಪು ಕುಂಕುಮ, ಮೇಖಲಾ ಛದ್ದರ್‌ ಉಟ್ಟಮಹಿಳೆಯರು. ಇವರೆಲ್ಲರ ಮಧ್ಯೆ ಸಾಲಿನಲ್ಲಿ ನಿಂತು ಒಳಹೊಕ್ಕರೆ ಅಲ್ಲಿ ಇರುವ ಶಕ್ತಿದೇವತೆಯೇ ‘ಕಾಮಾಕ್ಯ'.

ಭಾರತದ 51 ಶಕ್ತಿಪೀಠಗಳಲ್ಲಿ ಮುಖ್ಯವಾದ ಶಕ್ತಿಪೀಠಗಳು 4. ಶಕ್ತಿ ಪೀಠಗಳೆಂದರೆ ಅವು ದೇವಿ ಮಂದಿರಗಳಷ್ಟೇ ಅಲ್ಲ! ಪುರಾಣಗಳ ಪ್ರಕಾರ ಶಿವ ಸತಿಯ ದೇಹವನ್ನು ದಕ್ಷ ಯಜ್ಞ ಪ್ರಸಂಗದ ನಂತರ ಹೊತ್ತೊಯ್ಯುವಾಗ ವಿಷ್ಣು ತನ್ನ ಸುದರ್ಶನ ಚಕ್ರದಿಂದ ಆ ದೇಹವನ್ನು ಹಲವು ಖಂಡಗಳಾಗಿ ತುಂಡರಿಸಿದನಂತೆ. ಆ ದೇಹದ 4 ಮುಖ್ಯ ಭಾಗಗಳು ಭೂಮಿಯ ವಿವಿಧ ಸ್ಥಳಗಳಲ್ಲಿ ಬಿದ್ದಾಗ, ಅವು ‘ಶಕ್ತಿಪೀಠ’ಗಳೆನಿಸಿದವು. ಪಾದ ಖಂಡ ಪುರಿಯ ಜಗನ್ನಾಥ ಮಂದಿರದಲ್ಲಿ, ಸ್ತನ ಖಂಡ ಬೆಹ್‌ರಾಮ್‌ಪುರಿ ದ ಬಳಿಯ ಪೂರ್ಣಗಿರಿಯಲ್ಲಿ, ಮುಖ ಖಂಡ ಕೊಲ್ಕೊತ್ತಾದ ದಕ್ಷಿಣ ಕಾಳಿಕಾದಲ್ಲಿ, ಕಾಮಾಕ್ಯ ದೇವಾಲಯದಲ್ಲಿ ಯೋನಿಖಂಡ ಹೀಗೆ ಸತಿದೇವಿಯ ಮೃತದೇಹದ ಭಾಗಗಳಿಂದ ಇವು ಮುಖ್ಯ ಶಕ್ತಿ ಸ್ಥಳಗಳಾದವು.

ಹಾಗೆಂದೇ ಕಾಮಾಕ್ಯ ದೇವಾಲಯದಲ್ಲಿ ದೇವಿಯ ವಿಗ್ರಹವಿಲ್ಲ! ದೇವಿಯ ಯೋನಿಗೇ ಇಲ್ಲಿ ಪೂಜೆ. ದೇವಾಲಯದಲ್ಲಿ ಗುಹೆಯೊಂದರಲ್ಲಿ ಸ್ಥಾಪಿತವಾಗಿರುವ ಯೋನಿಯಾಕಾರದ ಪ್ರತಿಮೆಗೆ ಎಲ್ಲರೂ ಕೈಮುಗಿಯಲೇಬೇಕು! ಇದಕ್ಕೆ ಪ್ರಕೃತಿಯ ಅನುಮತಿಯೂ ಇದೆಯೆಂಬಂತೆ ಒಂದು ಸಹಜ, ಶುದ್ಧ ನೀರಿನ ಝರಿಯೂ ಇದೆ. ಆಷಾಢದಲ್ಲಿ ಈ ನೀರು ಕೆಂಪು ಬಣ್ಣಕ್ಕೆ ತಿರುಗುವುದೆಂದೂ, ಅದು ದೇವಿಯ ಋುತುಸ್ರಾವದ ರಕ್ತವೆಂದೂ ಇಲ್ಲಿಯ ನಂಬಿಕೆ.

ಸಂತಾನೋತ್ಪತ್ತಿಯ ಸಂಭ್ರಮವಾಗಿ ಅಂಬುಬಾಚಿ ಮೇಳ ಎಂಬ ದೊಡ್ಡ ಜಾತ್ರೆ ಇಲ್ಲಿ ನಡೆಯುತ್ತದೆ. 3 ದಿನಗಳ ಕಾಲ ದೇವಸ್ಥಾನ ಮುಚ್ಚಲ್ಪಡುತ್ತದೆ. ದೇವಿಯ ‘ಋುತುಸ್ರಾವ’ದ ಸಮಯವಿದು! ಮೂರು ದಿನಗಳ ಕಾಲ, ಹಗಲುರಾತ್ರಿ ಭಕ್ತರು ದೇವಾಲಯದ ಹೊರಗಿದ್ದು ಭಜನೆಗಳನ್ನು ಹಾಡುತ್ತಾ, ದೇವಿಯನ್ನು ಪ್ರಾರ್ಥಿಸುತ್ತಾ ಕಾಯುತ್ತಾರೆ. 4ನೇ ದಿನ ದೇವಾಲಯ ತೆರೆಯಲ್ಪಡುತ್ತದೆ. ಭಕ್ತರ ಜಯಘೋಷ ಮುಗಿಲಿಗೇರುತ್ತದೆ. ಅಂಗೋದಕ ಮತ್ತು ಅಂಗವಸ್ತ್ರ ಪ್ರಸಾದಗಳಾಗಿ ಹಂಚಲ್ಪಡುತ್ತದೆ. ದೇವಿಯ ದೇಹದ್ರವವೆಂದೇ ಭಾವಿಸಲಾದ ಝರಿಯ ನೀರು ಮತ್ತು ಪೂಜಿತಯೋನಿಯನ್ನು ಮುಚ್ಚಲಾದ ಕೆಂಪು ಬಣ್ಣದ ಬಟ್ಟೆಇವೇ ಆ ಪ್ರಸಾದಗಳು! ಒಟ್ಟಿನಲ್ಲಿ ‘ಮುಟ್ಟ’ನ್ನೂ ಮಾನ್ಯವಾಗಿಸುವ, ಸಾಮಾನ್ಯವಾಗಿ ನಾವು ‘ಅಪವಿತ್ರ’ ಎಂದು ಭಾವಿಸುವ ಋುತುಸ್ರಾವವನ್ನೂ ‘ಪವಿತ್ರ’ ವಾಗಿಸುವ ದೇವಿಯ ಶಕ್ತಿ ಬೆರಗು ಮೂಡಿಸುತ್ತವೆ.

ಅದರೊಂದಿಗೇ ‘ಯೋನಿ’ಗೆ ಪ್ರತಿಯೊಬ್ಬರೂ ಕೈಮುಗಿಯುವಾಗ, ಪೂಜೆ ಮಾಡಿ ಹಣೆ ತಾಗಿಸುವಾಗ, ಆ ಕ್ಷಣದಲ್ಲಿ ಮನದಲ್ಲಿ ಎದ್ದು ನಿಲ್ಲುವ ಭಾವನೆ ‘ಮಾತೃತ್ವ’ದ ಆರಾಧನೆ. ಲೈಂಗಿಕತೆಯ ಅಂಶಮಾತ್ರವೂ ಅಲ್ಲಿರಲಾರದು. ಋುತುಸ್ರಾವಕ್ಕೂ-ಸಂತಾನಶಕ್ತಿಗೂ ಇರುವ ಸೃಷ್ಟಿಕ್ರಿಯೆಯ ಸಾಮರ್ಥ್ಯವೇ ಅಲ್ಲಿ ಎದ್ದು ನಿಲ್ಲುವಂಥದ್ದು.

‘ಋುತು’ವಿನ, ದೇವಿಯ ‘ಕೆಂಪು’ ಬಣ್ಣವಾದರೂ ಅಷ್ಟೆ. ಉತ್ಸಾಹದ, ಕಾಮನೆಯ, ಪ್ರೇಮದ, ರಜೋಗುಣದ ಬಣ್ಣ. ಲಲಿತೆ ಮೂಲ ಇಚ್ಛಾ ಸ್ವರೂಪಳೂ, ಆದಿಕ್ರಿಯಾಶಕ್ತಿಯೂ ಹೌದು. ಅಷ್ಟೇ ಅಲ್ಲ, ಕತ್ತಲನ್ನು ದೂರಮಾಡುವ, ಬೆಳಕಿನ ಮುನ್ಸೂಚಕವಾದ ಉಷಃಕಾಲದ ಬಣ್ಣ ಕೆಂಪು. ಅಂದರೆ ಮಾತೃಶಕ್ತಿಯ ಬಣ್ಣವಾಗಲು ಎಲ್ಲ ಅರ್ಹತೆ ‘ಕೆಂಪು’ ಬಣ್ಣಕ್ಕಿದೆ!

ದೇವಿಯ ನಾದಶರೀರವೆಂದೇ ಪ್ರಖ್ಯಾತವಾದ ‘ಶ್ರೀಚಕ್ರೋಪಾಸನೆ’ ಯಲ್ಲಿ ಯಾದರೂ ಅಷ್ಟೆ. ಒಳಗಿನ 9 ಆವರಣಗಳನ್ನು ಪ್ರವೇಶಿಸುವಾಗ ಮೊದಲು ಸಾಧಕ ಏರಬೇಕಾದ ಸೋಪಾನಗಳು ಆಕೆಯ ಮಕ್ಕಳನ್ನು ಆರಾಧಿಸುವ ಮೆಟ್ಟಿಲುಗಳೇ. ಗಣಪತಿ-ಷಣ್ಮುಖರಿಗೆ ಆಕೆಯ ಮಕ್ಕಳಾಗಿದ್ದಕ್ಕೇ ಇಲ್ಲಿ ಮಹತ್ವ! ಮಕ್ಕಳನ್ನು ಒಲಿಸಿಯೇ ಅಮ್ಮನನ್ನು ಒಲಿಸಬೇಕಾದ ದಾರಿ.

ದೇಗುಲದ ವಿಶೇಷ ಪ್ರಸಾದ..ದೇವಲೋಕದ ದೈವೀ ಅನುಬಂಧ

ಇಂಥ ಅಧ್ಯಾತ್ಮದ ತತ್ತ$್ವಗಳಲ್ಲಿಯೂ ವಿಜ್ಞಾನ-ಮನಃಶಾಸ್ತ್ರ ಇಣುಕಿಬಿಡುವುದೇ ಭಾರತೀಯತೆಯ ವಿಶೇಷ! ‘ಕಾಮಾಕ್ಯ’ ದೇವಾಲಯದ ಸುತ್ತಮುತ್ತ ತಿರುಗಾಡುವಾಗ ಇಂಥ ಪರಿಕಲ್ಪನೆಯನ್ನು ಹುಟ್ಟು ಹಾಕಿದ ನಮ್ಮ ಪುರಾಣಗಳು. ಪೂರ್ವಜರ ಬಗೆಗೆ ಅಚ್ಚರಿಯಾಗದಿರದು. ಲೈಂಗಿಕತೆ-ಋುತುಸ್ರಾವ-ಮಾತೃತ್ವ ಈ ಎಲ್ಲಕ್ಕೂ ಅಧ್ಯಾತ್ಮಕ್ಕೂ ಸಂಬಂಧಗಳನ್ನು ಬೆಸೆದು ಅವು ಯಾವುವೂ ಅಸಹ್ಯವೆನಿಸದ, ಎಲ್ಲವೂ ಪ್ರಕೃತಿ ನಿರ್ಮಿತ-ನಿಸರ್ಗ ಸಹಜ ಎಂಬುದನ್ನು ಎತ್ತಿ ತೋರಿಸುವ ‘ತಂತ್ರ’ಗಳಾಗಿ ‘ಕಾಮಾಕ್ಯ’ ಎದ್ದು ನಿಲ್ಲುತ್ತದೆ.

ಜನರ ಮಹಾಪೂರ, ಸಾಧುಗಳ ಸಾಲು, ಮಧ್ಯೆ ಉದ್ದ ಗಡ್ಡ ಬಿಟ್ಟು, ಜಟೆಗಳನ್ನು ಬಿಟ್ಟಹಠಯೋಗಿಗಳ ಸಾಧನೆ ಇವೆಲ್ಲವೂ ಕಾಮಾಕ್ಯದ ಪ್ರಾಂಗಣದಲ್ಲಿದ್ದವು. ಅಲ್ಲಿನ ಕಥೆಗಳ ಬಗೆಗೆ, ಜನರಿಗೇನೋ ಗಾಢ ಶ್ರದ್ಧೆ-ಆಳವಾದ ನಂಬುಗೆ. ಆದರೆ ಆ ಜನರಷ್ಟುಮುಗ್ಧ-ತಿಳಿ ಮನಸ್ಸು ನಮಗಿರದ ಕಾರಣ ‘ಏಕೆ ಹೀಗೆ -ಹೇಗೆ’ ಎಂಬ ಪ್ರಶ್ನೆಗಳನ್ನು ನಮ್ಮ ಬುದ್ಧಿ ಎತ್ತದಿರಲು ಸಾಧ್ಯವೇ ಇಲ್ಲ. ಆದರೆ ಅಂಥ ಪ್ರಶ್ನೆಗಳಿಗೂ ಸೂಕ್ತ ಕಾರಣ-ಸಮಾಧಾನ ಜೊತೆಗೇ ಒಂದು ರೀತಿಯ ಅರಿವು ಮೂಡಿಸುವಂತೆ ‘ಕಾಮಾಕ್ಯ’ ದ ದೇವಿಯ ಕಥೆಗಳಿರುವುದು ಸುಳ್ಳಲ್ಲ.

ನವರಾತ್ರಿಯ ದೇವಿಯ ಆರಾಧನೆಯಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ ತಂತ್ರ ವಿದ್ಯೆಯೂ ಒಂದು. ತಾಂತ್ರಿಕ ವಿದ್ಯೆಯೆಂದರೆ ಬಹುಜನ ತಿಳಿದಿರುವಂತೆ ಅದು ಮಾಟ-ಮಂತ್ರವಲ್ಲ! ‘ತ್ರ’ ಎಂದರೆ ರಕ್ಷಿಸುವಂತಹದ್ದು. ಆಡುಭಾಷೆಯಲ್ಲಿ ‘ತಂತ್ರ’ ವೆಂದರೆ ಉಪಾಯದಿಂದ ಪಾರು ಮಾಡುವಂತಹದ್ದು ಎಂಬ ಅರ್ಥವಿದ್ದರೂ, ‘ತಾಂತ್ರಿಕ’ ವಿದ್ಯೆಯೆಂದರೆ ದೇವಿಯ ಆರಾಧನೆಯಲ್ಲಿ ಸಾಧನೆಯನ್ನು ಅಪೇಕ್ಷಿಸುವಂತಹದ್ದು, ಸಾಧಕನನ್ನು ರಕ್ಷಿಸುವಂತಹದ್ದು ಎಂಬ ಅರ್ಥವೇ. ದೇವಿಯ ಆರಾಧನೆ ಮಾಡುವ, ಆಕೆಯನ್ನು ಸಂಭ್ರಮದಿಂದ ಪೂಜಿಸುವ ನಾವು, ನಮ್ಮ ಮಧ್ಯೆ ಇರುವ ‘ನಿಜ ದೇವಿ’ ಯರ ಆರೈಕೆ ಮಾಡದಿರುವುದು, ಅವಹೇಳನ ಮಾಡುವುದು, ಅಗೌರವ ತೋರುವುದು, ಮುಟ್ಟು-ಮಡಿಯ ಬಗೆಗಿನ ಸಮಸ್ಯೆಗಳನ್ನು ಗಮನಿಸದೆ -ಅವರವರ ವೈಯಕ್ತಿಕ ಭಾವನೆಗಳಿಗೆ ಬಿಡದೆ ಅವರ ಮೇಲೆ ನಮ್ಮ ನಿರ್ಧಾರಗಳನ್ನು ಹೇರುವುದು ವಿಷಾದ ಮೂಡಿಸುತ್ತದೆ. ಇಂತಹ ಒತ್ತಡಗಳೇ ಮಹಿಳೆಯರ ಮನಸ್ಸಿನಲ್ಲಿ ನೆಲೆ ನಿಂತು, ಅವರ ಮೈ ಮೇಲೆ ‘ದೇವಿ’ ಬರುವಂತೆ ಮಾಡುತ್ತವೆ ಎಂಬ ಸತ್ಯ ನಮಗೆ ಇನ್ನೂ ಗೊತ್ತಿರದಿರುವ ಬಗ್ಗೆ ಖೇದ ಮೂಡಿಸುತ್ತದೆ!.

ಋತುಮತಿಯಾಗೋ ದೇವಿ, ಮಾತೃತ್ವಕ್ಕಿಲ್ಲಿ ವಿಶೇಷ ಪೂಜೆ

ಕಾಮಾಕ್ಯ ಬೆಟ್ಟದ ತುದಿಯಲ್ಲಿ ನಿಂತು ಸ್ಥಳ ಪುರಾಣ ಕಥೆಗಳನ್ನು ಕೇಳಿದಾಗ, ‘ಮಾತೃಯೋನಿ’ಗೆ ಕೈ ಮುಗಿದು ಹೊರಬರುವಾಗ ಮನಸ್ಸಿನಲ್ಲಿ ಮೂಡಿದ ಚಿಂತನೆಗಳು ಇವು. ಬೆಟ್ಟಇಳಿಯುತ್ತಾ, ದಟ್ಟಅರಣ್ಯದ ಹಸಿರಿಗೆ ಕೈ ಮುಗಿಯುತ್ತಾ ಇಳಿಯುವಾಗ ಮನಸ್ಸಿಗೆ ಅನ್ನಿಸಿದ್ದು ‘ನವರಾತ್ರಿ ಎಂದರೆ ಶಕ್ತಿ ಪೂಜೆಯಷ್ಟೇ ಅಲ್ಲ, ಅದು ‘ದೇವಿ’ಯ ಆರಾಧನೆಯಲ್ಲಿ ನಮ್ಮ ಸುತ್ತಮುತ್ತಲಲ್ಲಿರುವ ಮಹಿಳೆಯರೆಲ್ಲರಿಗೆ ಸಂಬಂಧಿಸಿದ ವಿಜ್ಞಾನ-ಅಧ್ಯಾತ್ಮ-ಕಲೆ-ಮನಃಶಾಸ್ತ್ರ-ಆರೋಗ್ಯ ಎಲ್ಲದರ ಬಗೆಗೆ ಚಿಂತನೆ ನಡೆಸುವ ಅವಕಾಶ!’

click me!