ತೀರ್ಥದಲ್ಲೇಕೆ ತುಳಸಿ ಎಲೆ ಹಾಕಿರುತ್ತಾರೆ?

By Web Desk  |  First Published Oct 29, 2018, 6:35 PM IST

ಕೆಲವು ಆಚಾರ, ವಿಚಾರಗಳನ್ನು ಮೂಢ ನಂಬಿಕೆಗಳು ಎಂದುಕೊಳ್ಳುವುದು ಇದೆ. ಖಂಡಿತ ಅಲ್ಲ. ಇವುಗಳ ಹಿಂದೆ ವೈಜ್ಞಾನಿಕ ಅಥವಾ ತಾರ್ಕಿಕ ಕಾರಣಗಳಿವೆ. ನಮ್ಮೆಲ್ಲಾ ಆಚಾರ ಹಾಗೂ ನಂಬಿಕೆಯ ಹಿಂದೆಯೂ ಒಂದೊಂದು ಲಾಜಿಕ್ ಇದೆ. ಕೆಲವು ಅಚ್ಚರಿ ಹುಟ್ಟಿಸುವಂತಿವೆ, ಇನ್ನು ಕೆಲವು ನಿಗೂಢವಾಗಿವೆ. ಏನವು? ಇಂದಿನಿಂದ ಪ್ರತಿದಿನ ಒಂದೊಂದನ್ನು ಇಲ್ಲಿ ಓದಿ.


ಹಳೆ ಆಚಾರ, ಹೊಸ ವಿಚಾರ-1

ತುಳಸಿ ಹಾಕದೆ ದೇವರ ತೀರ್ಥವಿಲ್ಲ. ತೀರ್ಥಕ್ಕೆ ತುಳಸಿ ಹಾಕುವುದಕ್ಕೆ ಧಾರ್ಮಿಕ ಕಾರಣವೂ ಇದೆ, ಆರೋಗ್ಯ ಸಂಬಂಧಿ ಹಿನ್ನೆಲೆಯೂ ಇದೆ.

Tap to resize

Latest Videos

undefined

ಧಾರ್ಮಿಕ ಕಾರಣ- ತುಳಸಿ ದೇವಪತ್ರೆ. ಸ್ಕಂದಪುರಾಣದ ಪ್ರಕಾರ, ದೇವತೆಗಳು ಸಮುದ್ರಮಥನ ಮಾಡುವಾಗ ಅಮೃತದ ಕೆಲ ಹನಿಗಳು ಭೂಮಿ ಮೇಲೆ ಬಿದ್ದವಂತೆ. ಅಲ್ಲಿ ತುಳಸಿ ಹುಟ್ಟಿತಂತೆ. ಅಂದರೆ, ತುಳಸಿಯಲ್ಲಿ ಅಮೃತದ ಗುಣವಿದೆ ಎಂದರ್ಥ. ನಂತರ ಬ್ರಹ್ಮನು ಈ ತುಳಸಿಯನ್ನು ವಿಷ್ಣುವಿಗೆ ಒಪ್ಪಿಸಿದನಂತೆ. ವಿಷ್ಣುವಿಗೆ ಇದು ಬಹಳ ಇಷ್ಟವಾಯಿತಂತೆ. ತುಳಸಿ ಗಿಡದಲ್ಲಿ ಎಲ್ಲಾ ದೇವತೆಗಳೂ ನೆಲೆಸಿದ್ದಾರಂತೆ. ಆ ಕಾರಣಕ್ಕೇ ಪ್ರತಿ ಮನೆಯಲ್ಲೂ ತುಳಸಿ ಗಿಡ ಇಟ್ಟು ಪೂಜಿಸುತ್ತಾರೆ.

ಔಷಧಿಯ ಆಗರ ತುಳಸಿ
ಆರೋಗ್ಯ ಸಂಬಂಧಿ ಕಾರಣ- ತುಳಸಿಯಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ.
-ತುಳಸಿ ಎಲೆ ಅಥವಾ ಅದನ್ನು ನೆನೆಸಿದ ನೀರನ್ನು ಸೇವಿಸಿದರೆ ಉಸಿರಾಟ ಸುಗಮವಾಗುತ್ತದೆ.
- ತುಳಸಿಯ ನೀರು ಕುಡಿದರೆ ಕಫ ನಿವಾರಣೆಯಾಗುತ್ತದೆ.
- ಸಣ್ಣಪುಟ್ಟ ಜ್ವರ, ಫಂಗಸ್ ಹಾಗೂ ಬ್ಯಾಕ್ಟೀರಿಯಾಕ್ಕೆ ಸಂಬಂಧಿಸಿದ ಸೋಂಕುಗಳನ್ನು, ಕೆಮ್ಮನ್ನು ನಿವಾರಿಸುವ ಶಕ್ತಿ ಹಾಗೂ ಚರ್ಮ ಸಂಬಂಧಿ ತೊಂದರೆಗಳನ್ನು ದೂರ ಮಾಡುವ ಗುಣ ತುಳಸಿಗಿದೆ.
- ಒತ್ತಡ ನಿವಾರಣೆಗೆ, ಕಿಡ್ನಿ ಸ್ಟೋನ್, ಹೃದ್ರೋಗ ಹಾಗೂ ಮಧುಮೇಹ ತಡೆಯಲು ಕೂಡ ತುಳಸಿ ಪ್ರಶಸ್ತ.
- ತುಳಸಿಯಲ್ಲಿರುವ ಓಲಿಯೋನಿಕ್ ಆಸಿಡ್ ಯಕೃತ್ ರಕ್ಷಕ. ಗಂತಿರೋಧಕ ಹಾಗೂ ವೈರಸ್ ರೋಧಕ ಗುಣಗಳೂ ತುಳಸಿಯಲ್ಲಿವೆ.
- ಆರ್ಸೋಲಿಕ್ ಆಸಿಡ್ ಕ್ಯಾನ್ಸರ್ ನಿಗ್ರಾಹಕ. ಕ್ಯಾನ್ಸರ್ ಕೋಶಗಳ ಸ್ವಯಂಭಕ್ಷಣೆಗೆ ಇದು ಪ್ರೇರೇಪಿಸುತ್ತದೆ.
- ರೋಸ್ಮೆರಿನಿಕ್ ಆಮ್ಲವು ಆತಂಕಲಯ (ಆಂಕ್ಸಿಯೋಲೈಟಿಕ್) ಕಾರಕ ಗುಣವುಳ್ಳದ್ದು. ಕಾರ್ವಕ್ರಾಲ್ ಬ್ಯಾಕ್ಟೀರಿಯ ನಾಶಕ.
- ಚರಕಸಂಹಿತೆಯು ತುಳಸಿಯ ಬಗ್ಗೆ ಪ್ರಸ್ತಾಪಿಸಿ ಮನೋ ಒತ್ತಡವನ್ನು ನಿಗ್ರಹಿಸುವುದರ ಜೊತೆಗೆ ಶರೀರ ಕ್ರಿಯೆಯಲ್ಲಿ ಸಮತೋಲನೆ ತರುತ್ತದೆ ಎನ್ನುತ್ತದೆ.
- ಇದು ಒಂದು ಅರ್ಥದಲ್ಲಿ ಆಯಸ್ಸನ್ನು ಹೆಚ್ಚಿಸುವ ಸಂಜೀವಿನಿಯಂತೆ. ಹೀಗಾಗಿ ಪ್ರತಿದಿನ ತೀರ್ಥದ ರೂಪದಲ್ಲಾದರೂ ತುಳಸಿಯ ಅಂಶ ದೇಹಕ್ಕೆ ಹೋಗಲಿ ಎಂದು ತೀರ್ಥದಲ್ಲಿ ತುಳಸಿ ಕಡ್ಡಾಯ ಮಾಡಲಾಗಿದೆ.

- ಮಹಾಬಲ ಸೀತಾಳಬಾವಿ

click me!