Asianet Suvarna News Asianet Suvarna News

ಜಾಗತಿಕ ಮಾರುಕಟ್ಟೆಯ ಮೇಲೆ ಇಸ್ರೇಲ್ - ಇರಾನ್ ಕದನದ ಕಾರ್ಮೋಡ: ಅಪಾಯದಂಚಿನಲ್ಲಿ ಪೂರೈಕೆ ಸರಪಳಿ!

ಇಸ್ರೇಲ್ ಮತ್ತು ಇರಾನ್‌ಗಳ ನಡುವೆ ಇತ್ತೀಚೆಗೆ ತಲೆದೋರಿರುವ ಚಕಮಕಿ ಜಗತ್ತಿನ ಮೇಲೆ ಭಾರೀ ಆರ್ಥಿಕ ಪರಿಣಾಮಗಳನ್ನು ಬೀರುವ ಸಾಧ್ಯತೆಗಳಿವೆ. ಈ ಕದನ ಜಾಗತಿಕ ಸಾಗಣಿಕಾ ವೆಚ್ಚದಿಂದ, ಜಾಗತಿಕ ತೈಲ ಪೂರೈಕೆ ಮತ್ತು ಹಣದುಬ್ಬರದ‌ ತನಕ ಎಲ್ಲದರ ಮೇಲೂ ಪರಿಣಾಮ ಬೀರಲಿದೆ.

Israel Iran war effect on Global Markets supply chain in risk rav
Author
First Published Apr 15, 2024, 1:01 PM IST

-ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಇಸ್ರೇಲ್ ಮತ್ತು ಇರಾನ್‌ಗಳ ನಡುವೆ ಇತ್ತೀಚೆಗೆ ತಲೆದೋರಿರುವ ಚಕಮಕಿ ಜಗತ್ತಿನ ಮೇಲೆ ಭಾರೀ ಆರ್ಥಿಕ ಪರಿಣಾಮಗಳನ್ನು ಬೀರುವ ಸಾಧ್ಯತೆಗಳಿವೆ. ಈ ಕದನ ಜಾಗತಿಕ ಸಾಗಣಿಕಾ ವೆಚ್ಚದಿಂದ, ಜಾಗತಿಕ ತೈಲ ಪೂರೈಕೆ ಮತ್ತು ಹಣದುಬ್ಬರದ‌ ತನಕ ಎಲ್ಲದರ ಮೇಲೂ ಪರಿಣಾಮ ಬೀರಲಿದೆ. ಈ ಚಕಮಕಿಯ ಪರಿಣಾಮವಾಗಿ ಉಂಟಾಗಬಲ್ಲ ಸಂಭಾವ್ಯ ಆರ್ಥಿಕ ಪರಿಣಾಮಗಳು ಮತ್ತು ಪರಿಸ್ಥಿತಿಯನ್ನು ತೀವ್ರಗೊಳಿಸಬಲ್ಲ ಭೌಗೋಳಿಕ ರಾಜಕಾರಣದ ಅಂಶಗಳು ಇಂತಿವೆ:

ಆರ್ಥಿಕ ಪರಿಣಾಮಗಳು:

1. ಹೆಚ್ಚಾಗುವ ಸಾಗಾಣಿಕಾ ವೆಚ್ಚ: ಈ ಕದನ ಜಾಗತಿಕವಾಗಿ ಮುಖ್ಯವಾದ ಪ್ರದೇಶಗಳಲ್ಲಿ ಸಂಭಾವ್ಯ ಅಪಾಯಗಳನ್ನು ಹೆಚ್ಚಿಸಿ, ಇದರಿಂದಾಗಿ ಸಾಗಾಣಿಕಾ ವೆಚ್ಚ ಮತ್ತು ವಿಮಾ ವೆಚ್ಚಗಳು ಹೆಚ್ಚಾಗುವಂತೆ ಮಾಡುವ ಸಾಧ್ಯತೆಗಳಿವೆ. ಕದನದ ಕಾರಣದಿಂದಾಗಿ ಹಡಗುಗಳು ಹೆಚ್ಚು ಸುದೀರ್ಘವಾದ, ಯುದ್ಧ ಭೂಮಿಯನ್ನು ತಪ್ಪಿಸಿ ಮುಂದುವರಿಯುವ ಪರ್ಯಾಯ ಸಮುದ್ರ ಮಾರ್ಗದ ಮೂಲಕ ಸಾಗುವುದು ಅನಿವಾರ್ಯವಾಗುತ್ತದೆ. ಇದರಿಂದಾಗಿ ಸಾಗಾಣಿಕಾ ವೆಚ್ಚ ಗಣನೀಯವಾಗಿ ಹೆಚ್ಚಾಗುತ್ತದೆ.

ಭಾರತದ ಪರಮಾಣು ಪಯಣ: ಅಣ್ವಸ್ತ್ರ ಸಜ್ಜಿತ ಭಾರತ ನಿರ್ಮಾಣದ ಕಥನ

2. ತೈಲ ಪೂರೈಕೆಯಲ್ಲಿ ಅಡಚಣೆ: ಇಸ್ರೇಲ್ - ಇರಾನ್ ಯುದ್ಧದ ಪರಿಣಾಮವಾಗಿ, ಜಗತ್ತಿನ ಮೂರನೇ ಒಂದರಷ್ಟು (33%) ತೈಲ ಉತ್ಪಾದನೆಯ ಪ್ರಮುಖ ಮಾರ್ಗವಾದ ಹೊರ್ಮುಸ್ ಜಲಸಂಧಿ ಸ್ಥಗಿತಗೊಳ್ಳಬಹುದು. ಇದರ ಪರಿಣಾಮವಾಗಿ, ಹಿಂದೆ ನಡೆದಂತಹ ತೈಲ ಪೂರೈಕೆ ಬಿಕ್ಕಟ್ಟುಗಳು ಮರಳಿ ಸಂಭವಿಸಬಹುದು. ಅದರೊಡನೆ, ಸೂಯೆಜ್ ಕಾಲುವೆಯನ್ನೂ ಗುರಿಯಾಗಿಸಿಕೊಂಡು ದಾಳಿ ನಡೆಸುವ ಅಪಾಯವಿದ್ದು, ಅದರಿಂದ ಜಾಗತಿಕ ವ್ಯಾಪಾರ ಇನ್ನಷ್ಟು ಕಷ್ಟಕರವಾಗಬಹುದು.

3. ಇಸ್ರೇಲಿ ರಫ್ತಿನ ಮೇಲೆ ಪರಿಣಾಮ: ಇಸ್ರೇಲ್ ತನ್ನ ಸದೃಢ ಇಲೆಕ್ಟ್ರಾನಿಕ್ ವಲಯಕ್ಕೆ ಹೆಸರಾಗಿದ್ದು, ಈ ಕದನದ ಕಾರಣದಿಂದಾಗಿ ಇಸ್ರೇಲ್ ತನ್ನ ಉತ್ಪಾದನೆ ಮತ್ತು ಸಾಗಾಣಿಕೆಯಲ್ಲಿ ವ್ಯತ್ಯಯ ಎದುರಿಸಬಹುದು. ಇದರ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಇಸ್ರೇಲ್ ಉತ್ಪನ್ನಗಳ ಕೊರತೆ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.

4. ಜಾಗತಿಕ ಹಣದುಬ್ಬರ: ವಸ್ತುಗಳ ಸಾಗಾಣಿಕೆ ಹೆಚ್ಚು ಹೆಚ್ಚು ವೆಚ್ಚದಾಯಕವೂ, ಕಷ್ಟಕರವೂ ಆಗುವುದರಿಂದ, ಇದು ಹಣದುಬ್ಬರಕ್ಕೆ ಹಾದಿ ಮಾಡಿ, ಜಗತ್ತಿನಾದ್ಯಂತ ಆರ್ಥಿಕತೆಗಳ ಮೇಲೆ ಗಂಭೀರ ಪರಿಣಾಮ ಬೀರಬಹುದು.

5. ಯುದ್ಧದಿಂದ ಲಾಭ ಪಡೆಯುವವರು: ಯುದ್ಧದ ಪರಿಣಾಮವಾಗಿ ಹಲವಾರು ವಲಯಗಳು ಸಂಕಷ್ಟಕ್ಕೆ ಸಿಲುಕಿದರೂ, ಯುದ್ಧ ಎದುರಿಸುತ್ತಿರುವ ಪ್ರದೇಶದ ಹೊರಗಿರುವ ತೈಲ ಮತ್ತು ವಿಮಾ ಸಂಸ್ಥೆಗಳು ಏರುವ ತೈಲ ಬೆಲೆ ಮತ್ತು ವಿಮಾ ಪ್ರೀಮಿಯಂ ಮೊತ್ತದ ಕಾರಣದಿಂದ ಹೆಚ್ಚಿನ ಲಾಭ ಗಳಿಸಬಲ್ಲವು. ಇನ್ನು ಆಯುಧ ಉದ್ಯಮವೂ ಸಹ ಮಿಲಿಟರಿ ಉಪಕರಣಗಳಿಗೆ ಹೆಚ್ಚಿನ ಬೇಡಿಕೆಯನ್ನು ಗಮನಿಸಬಹುದು.

6. ಪ್ರಾದೇಶಿಕ ಉದ್ವಿಗ್ನತೆಯ ಸಾಧ್ಯತೆಗಳು: ಇಸ್ರೇಲ್ ಮತ್ತು ಇರಾನ್ ಕದನ ಸಾಗಬಹುದಾದ ಹಾದಿ ಇಂದಿಗೂ ಅಸ್ಪಷ್ಟವಾಗಿಯೇ ತೋರುತ್ತಿದೆ. ಆದರೆ, ಇದು ಇನ್ನಷ್ಟು ವ್ಯಾಪಕಗೊಂಡು, ಮಧ್ಯ ಪೂರ್ವದ ಇತರ ರಾಷ್ಟ್ರಗಳಾದ ಲೆಬನಾನ್, ಇರಾಕ್, ಸಿರಿಯಾ, ಯೆಮೆನ್, ಜೋರ್ಡಾನ್, ಸೌದಿ ಅರೇಬಿಯಾ, ಯುಎಇ, ಮತ್ತು ಈಜಿಪ್ಟ್‌ಗಳನ್ನು ಒಳಗೊಳ್ಳುವ ಅಪಾಯಗಳಂತೂ ಇದ್ದೇ ಇದೆ.

ಭೌಗೋಳಿಕ ರಾಜಕಾರಣದ ಹಿನ್ನೆಲೆ

ಅಂತಾರಾಷ್ಟ್ರೀಯ ಸಂಬಂಧದ ದೃಷ್ಟಿಯಿಂದ ನೋಡುವುದಾದರೆ, ಈ ಉದ್ವಿಗ್ನತೆ ವಿವಿಧ ಪ್ರಭಾವ ವಲಯಗಳಲ್ಲಿ ಅಸಮಾನವಾದ ಯುದ್ಧಕ್ಕೆ ಸೂಕ್ತ ಉದಾಹರಣೆಯಾಗಿದೆ.

ಇರಾನಿನ ಪ್ರಭಾವ: ಇರಾನ್ ನಿರಂತರವಾಗಿ ಯೆಮೆನ್, ಇರಾಕ್, ಮತ್ತು ಸಿರಿಯಾಗಳಲ್ಲಿರುವ ಅರೆ ಮಿಲಿಟರಿ ಪಡೆಗಳಾದ ಹೌತಿ ಬಂಡುಕೋರರು, ಅಲ್ ಹಶ್ದ್ ಅಲ್ ಶಾಬ್ (ಕತೈಬ್ ಹೆಜ್ಬೊಲ್ಲಾ ಮತ್ತು ಕತೈಬ್ ಇಮಾಮ್ ಅಲಿ ಸೇರಿದಂತೆ), ಹೆಜ್ಬೊಲ್ಲಾ, ಮತ್ತು ಸಿರಿಯನ್ ಸೇನೆಗಳಿಗೆ ಬೆಂಬಲ ನೀಡುತ್ತಾ ಬಂದಿದೆ. ಈ ಗುಂಪುಗಳು ಒಟ್ಟಾಗಿ 'ಆ್ಯಕ್ಸಿಸ್ ಆಫ್ ರೆಸಿಸ್ಟೆನ್ಸ್' ಎಂಬ ಒಕ್ಕೂಟವನ್ನು ರಚಿಸಿವೆ. ಇದು ಇರಾನ್‌ನಿಂದ ಸಿರಿಯಾ, ಲೆಬನಾನ್ ತನಕ ಕಾರ್ಯತಂತ್ರದ ಕಾರಿಡಾರ್ ಒಂದನ್ನು ಸ್ಥಾಪಿಸಿದೆ. ಈ ಕಾರಿಡಾರ್ ಇರಾನಿನ ಕಾರ್ಯತಂತ್ರಗಳು ಮತ್ತು ಆರ್ಥಿಕ ಗುರಿಗಳಿಗೆ ಅತ್ಯಂತ ಮುಖ್ಯವಾಗಿದೆ.

ಇಸ್ರೇಲಿನ ಸಹಯೋಗಿಗಳು: ಇನ್ನೊಂದೆಡೆ, ಇಸ್ರೇಲ್‌ಗೆ ಜೋರ್ಡಾನ್, ನ್ಯಾಟೋ, ಅಮೆರಿಕಾ, ಮತ್ತು ಇರಾಕ್ ಮತ್ತು ಸೌದಿ ಅರೇಬಿಯಾಗಳಲ್ಲಿರುವ ಅಮೆರಿಕಾದ ನೆಲೆಗಳು ಬೆಂಬಲ ಒದಗಿಸುತ್ತಿವೆ. ಈ ಮೈತ್ರಿಕೂಟ ಇಸ್ರೇಲಿನ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರಗಳಾದ ಇತ್ತೀಚೆಗೆ ಸಿರಿಯಾದಲ್ಲಿನ ಇರಾನ್ ರಾಯಭಾರ ಕಚೇರಿ ಸಮುಚ್ಚಯದ ಮೇಲಿನ ದಾಳಿಯಂತಹ ಪೂರ್ವಭಾವಿ ದಾಳಿ ನಡೆಸುವುದಕ್ಕೆ  ಬೆಂಬಲ ನೀಡುತ್ತವೆ.

ಇರಾನಿನ ಪ್ರತಿಕ್ರಿಯೆ: ತನ್ನ ರಾಯಭಾರ ಕಚೇರಿ ಸಮುಚ್ಚಯದ ಮೇಲೆ ನಡೆದ ದಾಳಿಯನ್ನು ಇರಾನ್ ತನ್ನ ವಿರುದ್ಧದ ದಾಳಿ ಎಂದು ಪರಿಗಣಿಸಿ, ಕ್ಷಿಪ್ರವಾಗಿ ಪ್ರತಿದಾಳಿ ನಡೆಸಿತು. ಇದು ಮಧ್ಯ ಪೂರ್ವ ಪ್ರದೇಶದ ಉದ್ವಿಗ್ನ ಮತ್ತು ಸಂಕೀರ್ಣ ಆಯಾಮಕ್ಕೆ ಸಾಕ್ಷಿಯಾಗಿದೆ.

ಮಧ್ಯ ಪೂರ್ವದಾದ್ಯಂತ ಯುದ್ಧ ತೀವ್ರಗೊಳ್ಳುವ ಅಪಾಯವನ್ನು ಮತ್ತು ಸದ್ಯದ ಪರಿಸ್ಥಿತಿಯನ್ನು ಅತ್ಯಂತ ಸೂಕ್ಷ್ಮವಾಗಿ ಅವಲೋಕಿಸಬೇಕಾದ ಅವಶ್ಯಕತೆಯನ್ನು ಮುಖ್ಯವೆಂದು ಮಧ್ಯ ಪೂರ್ವ ಪರಿಗಣಿಸುತ್ತಿಲ್ಲ. ಈ ಚಕಮಕಿಯ ಕಾರಣದಿಂದಾಗಿ, ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ಆರ್ಥಿಕ ಸ್ಥಿರತೆಯ ಮೇಲೆ ಪರಿಣಾಮ ಬೀರಿ, ಜಾಗತಿಕವಾಗಿ ಆರ್ಥಿಕ ಮತ್ತು ಭೌಗೋಳಿಕ ರಾಜಕಾರಣದ ಅಪಾಯಗಳು ಉಂಟಾಗಬಹುದು.

ಆ್ಯಂಟೆನಾ ಸರಿಹೊಂದಿಸುವಿಕೆ: ಮುಂದೂಡಲ್ಪಟ್ಟ ನಿಸಾರ್ ಉಡಾವಣೆ

ಹೊರ್ಮುಸ್ ಜಲಸಂಧಿಯ ಭೌಗೋಳಿಕತೆ

  •  ಹೊರ್ಮುಸ್ ಜಲಸಂಧಿ ಪರ್ಷಿಯನ್ ಕೊಲ್ಲಿ ಮತ್ತು ಒಮಾನ್ ಕೊಲ್ಲಿಯನ್ನು ಸಂಪರ್ಕಿಸುವ ಮಹತ್ವದ ಜಲಸಂಧಿಯಾಗಿದೆ.
  •  ಹೊರ್ಮುಸ್ ಜಲಸಂಧಿ ಇರಾನಿನ ಉತ್ತರದಲ್ಲಿ ಮತ್ತು ಒಮಾನಿನ ಮುಸಂದಮ್ ಪರ್ಯಾಯ ದ್ವೀಪದ ದಕ್ಷಿಣ ಭಾಗದಲ್ಲಿದೆ.
  •  ಈ ಜಲಸಂಧಿ ಅಂದಾಜು 33 ಕಿಲೋಮೀಟರ್ ಅಗಲವಾಗಿದ್ದು, ಎರಡೂ ಬದಿಯಲ್ಲಿ ಮೂರು ಕಿಲೋಮೀಟರ್ ಅಗಲದ ಸಾಗರ ಸಂಚಾರ ಮಾರ್ಗವನ್ನು ಹೊಂದಿದೆ.
  •  ಈ ಕಿರಿದಾದ ಜಲಮಾರ್ಗವು ಇರಾಕ್, ಇರಾನ್, ಕತಾರ್, ಬಹ್ರೇನ್, ಯುಎಇ, ಕುವೈತ್, ಮತ್ತು ಸೌದಿ ಅರೇಬಿಯಾದಂತಹ ಕೊಲ್ಲಿ ರಾಷ್ಟ್ರಗಳಿಂದ ಹಿಂದೂ ಮಹಾಸಾಗರಕ್ಕೆ ಸಂಪರ್ಕ ಕಲ್ಪಿಸಿ, ತೈಲ ಸಾಗಾಣಿಕೆಗೆ ಅತ್ಯವಶ್ಯಕವಾಗಿದೆ.
  •  ಹೊರ್ಮುಸ್ ಜಲಸಂಧಿ ಒಪೆಕ್ ಗುಂಪಿನ ತೈಲ ಉತ್ಪಾದಕ ರಾಷ್ಟ್ರಗಳಾದ ಸೌದಿ ಅರೇಬಿಯಾ, ಇರಾನ್, ಯುಎಇ, ಮತ್ತು ಕುವೈತ್‌ಗಳಿಗೆ ಇರುವ ಏಕೈಕ ಸಮುದ್ರ ಮಾರ್ಗವಾಗಿದೆ. ಅವೆಲ್ಲ ರಾಷ್ಟ್ರಗಳೂ ಈ ಜಲಮಾರ್ಗದ ಮೇಲೆ ಅಪಾರ ಅವಲಂಬನೆ ಹೊಂದಿವೆ.
  •  ಜಗತ್ತಿನ ಅತಿದೊಡ್ಡ ಎಲ್‌ಪಿಜಿ (ದ್ರವೀಕೃತ ಪೆಟ್ರೋಲಿಯಂ ಅನಿಲ) ರಫ್ತುದಾರ ರಾಷ್ಟ್ರವಾದ ಕತಾರ್ ಸಹ ತನ್ನ ರಫ್ತಿಗಾಗಿ ಹೊರ್ಮುಸ್ ಜಲಸಂಧಿಯ ಮೇಲೆ ಅವಲಂಬಿತವಾಗಿದೆ.
Follow Us:
Download App:
  • android
  • ios