Asianet Suvarna News Asianet Suvarna News

ಪ್ರಧಾನಿ ಮೋದಿಯಿಂದ ಆರ್ಥಿಕ ಭದ್ರತೆಗೆ ಧಕ್ಕೆ ಎಂದ ಮಾಜಿ ಸಚಿವ

ಮೋದಿ ಆಡಳಿತ ವೈಫಲ್ಯದಿಂದ ಆರ್ಥಿಕ ಭದ್ರತೆಗೆ ಧಕ್ಕೆ| ಸೊಲ್ಲಾಪುರದಲ್ಲಿ ಮಾಜಿ ಸಚಿವ ಎಂ.ಬಿ. ಪಾಟೀಲ ಆರೋಪ| ಯುಪಿಎ 1 ಮತ್ತು 2, 10 ವರ್ಷಗಳ ಕಾಲ ಅವಧಿಯಲ್ಲಿ ಕೂಡ ಭಾರತದ ಆರ್ಥಿಕ ಸ್ಥಿತಿ ಚೆನ್ನಾಗಿತ್ತು| ಅಮೆರಿಕ, ಯೂರೋಪಗಳಲ್ಲಿ ಅರ್ಥಿಕ ಹಿಂಜರಿತ ಉಂಟಾದರೂ, ಭಾರತಕ್ಕೆ ಯಾವುದೇ ಹಾನಿಯಾಗಿರಲಿಲ್ಲ| ಅಂತಹ ಆರ್ಥಿಕ ಹಿಂಜರಿತಗಳನ್ನು ತಡೆದುಕೊಳ್ಳುವ ಶಕ್ತಿ ದೇಶಕ್ಕೆ ಆ ಸಂದರ್ಭದಲ್ಲಿತ್ತು| 

Economy Down For PM Modi's Administrative Failure
Author
Bengaluru, First Published Oct 20, 2019, 12:31 PM IST

ವಿಜಯಪುರ(ಅ.20): ಪಿ.ವಿ.ನರಸಿಂಹರಾವ, ಡಾ.ಮನಮೋಹನ ಸಿಂಗ್‌ ಅವರಂತಹ ಮೇಧಾವಿಗಳು ಜಾಗತೀಕರಣ ಸಂದರ್ಭದಲ್ಲಿ ಭಾರತದ ಆರ್ಥಿಕತೆಗೆ ಹಾಕಿದ ಭದ್ರ ಬುನಾದಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಅಲಗಾಡುತ್ತಿದೆ ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ ಆರೋ​ಪಿ​ಸಿ​ದ್ದಾರೆ.

ಶುಕ್ರವಾರ ಸೊಲ್ಲಾಪುರದಲ್ಲಿ ವಿಧಾನಸಭೆ ಚುನಾವಣೆಯ ಕಾಂಗ್ರೆಸ್‌-ಎನ್‌ಸಿಪಿ ಮೈತ್ರಿಕೂಟ ಅಭ್ಯರ್ಥಿಗಳ ಪರ ಪ್ರಚಾರ ಸಭೆಗಳನ್ನು ನಡೆಸಿ, ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಯುಪಿಎ 1 ಮತ್ತು 2, 10 ವರ್ಷಗಳ ಕಾಲ ಅವಧಿಯಲ್ಲಿ ಕೂಡ ಭಾರತದ ಆರ್ಥಿಕ ಸ್ಥಿತಿ ಚೆನ್ನಾಗಿತ್ತು. ಅಮೆರಿಕ, ಯೂರೋಪಗಳಲ್ಲಿ ಅರ್ಥಿಕ ಹಿಂಜರಿತ ಉಂಟಾದರೂ, ಭಾರತಕ್ಕೆ ಯಾವುದೇ ಹಾನಿಯಾಗಿರಲಿಲ್ಲ. ಅಂತಹ ಆರ್ಥಿಕ ಹಿಂಜರಿತಗಳನ್ನು ತಡೆದುಕೊಳ್ಳುವ ಶಕ್ತಿ ದೇಶಕ್ಕೆ ಆ ಸಂದರ್ಭದಲ್ಲಿತ್ತು. ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಜನತೆ, ಸಂಸತ್ತು ತಮ್ಮದೇ ಸಚಿವ ಸಂಪುಟ, ರಿಸವ್‌ರ್‍ ಬ್ಯಾಂಕ್‌ ಸೇರಿದಂತೆ ಆರ್ಥಿಕ ಸಂಸ್ಥೆಗಳನ್ನೂ ಕತ್ತಲಲ್ಲಿಟ್ಟು, ನೋಟ್‌ ಬ್ಯಾನ್‌ನಂತಹ ಏಕಪಕ್ಷೀಯ ಕ್ರಮ ಜರುಗಿಸಿದರ ಫಲವಾಗಿ ಇಂದಿಗೂ ಹಾನಿ ಅನುಭವಿಸುತ್ತಿದ್ದೇವೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಐಟಿ ಮತ್ತು ಇಡಿಗಳನ್ನು ವಿರೋಧ ಪಕ್ಷಗಳನ್ನು ಶಮನ ಮಾಡಲು ಬಳಸಿಕೊಳ್ಳಲಾಗುತ್ತಿದ್ದು, 5 ವರ್ಷಗಳ ಕಾಲ ಸುಮ್ಮನಿದ್ದು, ಇವರು ಮಹಾರಾಷ್ಟ್ರದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ, ಮಹಾರಾಷ್ಟ್ರದಲ್ಲಿ ಶರದ್‌ ಪವಾರ ಅಂತಹ ರಾಷ್ಟ್ರೀಯವಾದಿ ನಾಯಕರಿಗೆ ಕಪ್ಪು ಚುಕ್ಕೆ ತರಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಡಿ.ಕೆ.ಶಿವಕುಮಾರ, ಜಿ.ಪರಮೇಶ್ವರ ಅವರನ್ನು ರಾಜಕೀಯ ಕಾರಣಗಳಿಗಾಗಿಯೇ ತೊಂದರೆ ನೀಡಲಾಗುತ್ತಿದೆ ಎಂದು ಆರೋ​ಪಿ​ಸಿ​ದರು.
ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಆಡಳಿತ ಶಾಸಕರನ್ನು ಖರೀದಿಸಿ ಸರ್ಕಾರ ರಚಿಸಿದ್ದ ಬಿಜೆಪಿಯವರು ಇದೀಗ ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿಯವರಿಗೂ ಬೆದರಿಕೆ ಹಾಕಿದ್ದಾರೆ ಎಂದರು.

ಪುಲ್ವಾಮ, ಬಾಲಾಕೋಟ್‌ನಂತಹ ವಿಷಯಗಳನ್ನು ಮುಂದೆ ಮಾಡಿ ಕಳೆದ ಲೋಕಸಭಾ ಚುನಾವಣೆ ಗೆದ್ದ ಇವರು ದೇಶದಲ್ಲಿ ಇಷ್ಟು ಪ್ರಮಾಣ ಆರ್‌ಡಿಎಕ್ಸ್‌ ಹಾಗೂ ಉಗ್ರಗಾಮಿಗಳು ಹೇಗೆ ಒಳತಂದರು? ಎಂಬುದನ್ನು ಪತ್ತೆ ಹಚ್ಚಲಿಲ್ಲ. ಇದು ಕೇಂದ್ರದ ವೈಫಲ್ಯ ಎಂದು ಮಾಧ್ಯಮದವರು ಪ್ರಶ್ನಿಸಲಿಲ್ಲ ಎಂದರು.

ಮೋದಿಯವರಿಗಿಂತ 136 ಹೆಚ್ಚಿನ ಲೋಕಸಭಾ ಸದಸ್ಯರನ್ನು ಹೊಂದಿದ್ದ ರಾಜೀವ ಗಾಂಧಿಯವರೇ ಮುಂದಿನ ಚುನಾವಣೆಯಲ್ಲಿ ನಮ್ಮ ಸರ್ಕಾರ ಕಳೆದುಕೊಳ್ಳಬೇಕಾಯಿತು. ಕಾಲ ಚಕ್ರ ತಿರುಗಲಿದೆ. ದೇಶದಲ್ಲಿ ಏಕಚಕ್ರಾಧಿಪಥ್ಯ ಸ್ಥಾಪಿಸಲು ಹೊರಟಿರುವ ಮೋದಿ ಮತ್ತು ಟೀಂ ಅವರಿಗೆ ಅವರ ವೈಫಲ್ಯವೇ ತಿರುಗುಬಾಣ ಆಗಲಿದೆ ಎಂದರು.

ಕಾಂಗ್ರೆಸ್‌ ಆಡಳಿತ ಅಂತ್ಯವಾಗಲೂ 70 ವರ್ಷ ಬೇಕಾಯಿತು. ಹಾಗಿದ್ದರೆ ಮೋದಿಯವರ ಅಂತ್ಯ ಯಾವಾಗ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಎಂ.ಬಿ. ಪಾಟೀಲರು, ಬಿಜೆಪಿಯ ಸುಬ್ರಮಣ್ಯಂ ಸ್ವಾಮಿಯವರೇ ಮೋದಿಯನ್ನು ಟೀಕಿಸಿದ್ದಾರೆ. ಇವರ ಎಲ್ಲ ಭರವಸೆಗಳು ಪೊಳ್ಳು ಎಂದು ಇದೀಗ ಜನರಿಗೆ ಗೊತ್ತಾಗಲಿದ್ದು, ಇನ್ನೂ 2 ವರ್ಷಗಳಲ್ಲಿ ಇವರ ಪತನ ಆರಂಭವಾಗಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸೊಲ್ಲಾಪುರ ನಗರ ಕಾಂಗ್ರೆಸ್‌ ಅಧ್ಯಕ್ಷ ಪ್ರಕಾಶ ವಾಲಿ, ಮಾಜಿ ಶಾಸಕರಾದ ರಾಜು ಆಲಗೂರ, ವಿಠಲ ಕಟಕದೊಂಡ, ಕಾಂಗ್ರೆಸ್‌ ಮುಖಂಡ ಹಮೀದ ಮುಶ್ರೀಫ್‌ ಸೇರಿದಂತೆ ಪ್ರಮುಖರು ಇ​ದ್ದರು.
 

Follow Us:
Download App:
  • android
  • ios