Asianet Suvarna News Asianet Suvarna News

ರೇವಣ್ಣ ಮಾಳಿಗೆ ಎಂಬ ‘ಭಾಗವತರು’

ರಂಗ ಸಂಘಟನೆಯನ್ನೇ ಉದ್ದೇಶವಾಗಿಟ್ಟುಕೊಂಡಿರುವ ‘ಭಾಗವತರು’ ತಂಡದ 19ನೆಯ ನಾಟಕೋತ್ಸವ ರಾಜಧಾನಿಯಲ್ಲಿ ಜರುಗುತ್ತಿದೆ. ಅದರ ಸೂತ್ರಧಾರ ರೇವಣ್ಣ ಮಾಳಿಗೆ ನಡೆದು ಬಂದ ದಾರಿಯ ಕಿರುಪರಿಚಯ ಇದು.
 

Know about 19th Kannada Theatre fair pioneer Revanna Malige vcs
Author
Bangalore, First Published Mar 6, 2022, 11:03 AM IST

ಜಿ ಎನ್‌ ಮೋಹನ್‌

‘ಎಲ್ಲರೂ ನಟರೇ. ಆದರೆ, ಎಲ್ಲರೂ ವೇದಿಕೆಯ ಮೇಲೇ ಇದ್ದರೆ ಕಾರ್ಯಕ್ರಮ ಸಂಘಟಿಸುವವರು ಯಾರು?’ ಎನ್ನುವ ಗುಂಗೀಹುಳ ರೇವಣ್ಣ ಮಾಳಿಗೆ ಅವರಿಗೆ ಅದ್ಯಾವಾಗ ತಲೆಗೆ ಹೊಕ್ಕಿತೋ ಗೊತ್ತಿಲ್ಲ. ಆದರೆ ಇದಕ್ಕೆ ಉತ್ತರ ಹುಡುಕಿಯೇ ಸೈ ಎನ್ನುವಂತೆ ಅವರು ಸರಿಯಾಗಿ 20 ವರ್ಷಗಳ ಹಿಂದೆ ಈ ಪ್ರಶ್ನೆಗೆ ಮದ್ದು ಅರೆಯುವವರಂತೆ ‘ಭಾಗವತರು’ ಆರಂಭಿಸಿಯೇ ಬಿಟ್ಟರು.

‘ಭಾಗವತರು’ ಇಂದು ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದಲ್ಲಿ ಮಹತ್ವದ ಹೆಸರು. ರೇವಣ್ಣ ಮಾಳಿಗೆ ಆಗಿದ್ದ ಹುಡುಗ ಈಗ ‘ಭಾಗವತರು ರೇವಣ್ಣ’ ಎಂದೇ ಗುರುತಿಸುವಷ್ಟುಹೆಸರುವಾಸಿ.

ಇದುವರೆಗೂ 19 ನಾಟಕೋತ್ಸವಗಳನ್ನು ಸಂಘಟಿಸಿದ್ದೇವೆ ಎನ್ನುವಾಗ ರೇವಣ್ಣ ಅವರ ಮುಖದಲ್ಲಿ ಅಪಾರ ತೃಪ್ತಿ ಇತ್ತು. ‘ಕಲಾಕ್ಷೇತ್ರದ ಕ್ಯಾಂಟೀನ್‌ ಕಾರಂತರ ಜೊತೆ ಸೇರಿ ಕಂಡ ಕನಸು ಇದು. ಯಾರ ಮೇಲೆ ಸ್ಪಾಟ್‌ ಲೈಟ್‌ ಬಿದ್ದಿಲ್ಲವೋ, ಯಾವ ನಾಟಕಗಳು, ರಂಗ ತಂಡಗಳು ನಿಜಕ್ಕೂ ಪ್ರೋತ್ಸಾಹವಿಲ್ಲದೆ ನಿಂತಿದ್ದವೋ ಅಂತಹದ್ದರ ಮೇಲೆ ಬೆಳಕು ಚೆಲ್ಲಲು ಹೊರಟೆವು. ಮೊದಲ ಬಾರಿಗೆ ರಂಗಭೂಮಿಯಿಂದ ಕಿರುತೆರೆ, ಹಿರಿತೆರೆಯತ್ತ ಪಯಣ ಬೆಳೆಸಿದ ಕಲಾವಿದರ ಬಗ್ಗೆ ಕಾರ್ಯಕ್ರಮ ಹಮ್ಮಿಕೊಂಡೆವು. ಅದೊಂದು ಅದ್ಭುತ ಯಶಸ್ಸಿನ ಕಾರ್ಯಕ್ರಮ, ರಾಜಕುಮಾರ್‌ ಒಬ್ಬರು ಇರಲಿಲ್ಲ ಎನ್ನುವುದು ಬಿಟ್ಟರೆ ಸುಮಾರು 80 ಕಲಾವಿದರು ಜೊತೆಯಲ್ಲಿದ್ದರು’ ಎಂದು ರೇವಣ್ಣ ಹೇಳುವಾಗ ಅವರ ಕಣ್ಣುಗಳಲ್ಲಿ ಮಿಂಚಿತ್ತು.

ಒಂದು ಹಿಡಿ ಪ್ರೀತಿಗಾಗಿ: ಗೇಬ್ರಿಯಲ್ ಗಾರ್ಸಿಯಾ ಮಾರ್ಕೆಸ್‌ ಹುಟ್ಟುಹಬ್ಬ

ತುಮಕೂರು ಜಿಲ್ಲೆಯ ಜಡೆ ಮಾಯಸಂದ್ರದ ಆ ಮನೆಯಲ್ಲಿ ಸದಾ ನಾಟಕದ ಸಂಭಾಷಣೆಗಳು, ಹಾಡುಗಳು ಕೇಳಿ ಬರುತ್ತಲೇ ಇತ್ತು. ಅಂತಹ ಮನೆಯಲ್ಲಿ ಹುಟ್ಟಿದಾಗಲಿಂದ ತಂದೆ ಹಾಗೂ ಅಣ್ಣನ ಪಾತ್ರವನ್ನು ನೋಡುತ್ತಲೇ ಬಂದ ರೇವಣ್ಣ ತಮಗೆ ಗೊತ್ತಿಲ್ಲದೇ ರಂಗದ ಮಾಯಾ ಲೋಕಕ್ಕೆ ಶರಣಾಗಿ ಹೋಗಿದ್ದರು. ತನ್ನ ತಂದೆ ಬಣ್ಣ ಹಚ್ಚಿ ರಂಗವೇರುತ್ತಿದ್ದಂತೆಯೇ ಬದಲಾಗುತ್ತಿದ್ದ ರೀತಿ, ಅವರನ್ನು ಊರ ಜನ ದೈನಂದಿನ ಬದುಕಿನಲ್ಲೂ ರಾಮ, ಕೃಷ್ಣರಂತೆಯೇ ಗೌರವ ಕೊಡುತ್ತಿದ್ದುದು ರೇವಣ್ಣ ಅವರಿಗೆ ರಂಗಭೂಮಿಯ ಯಾನಕ್ಕೆ ದೋಣಿಯಾಯಿತು.

ಬೆಂಗಳೂರಿನ ಮುದ್ರಣಾಲಯದಲ್ಲಿ ಕೆಲಸ ಮಾಡುತ್ತಾ ಪಿ ಇ ಎಸ್‌ ಸಂಜೆ ಕಾಲೇಜು ಹೊಕ್ಕ ರೇವಣ್ಣ ಅವರಿಗೆ ಅಲ್ಲಿ ಚಿತ್ರನಟ ಮಾನು ಅವರು ಪ್ರಾಂಶುಪಾಲರಾಗಿದ್ದದ್ದು ಇನ್ನಷ್ಟುಇಂಬು ಕೊಟ್ಟಿತು. ನಾಗರಾಜಮೂರ್ತಿ, ಶ್ರೀನಿವಾಸ ಜಿ ಕಪ್ಪಣ್ಣ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಶಿಬಿರಗಳು ರೇವಣ್ಣ ಅವರಿಗೆ ಹೇಳಿ ಮಾಡಿಸಿದಂತಿತ್ತು. ತಮ್ಮ ಕಾಲೇಜಿನಿಂದ ಸ್ಪರ್ಧೆಗೆ ನಾಟಕಗಳನ್ನು ಕರೆದುಕೊಂಡು ಬಂದ ರೇವಣ್ಣ ನಂತರ ರವೀಂದ್ರ ಕಲಾಕ್ಷೇತ್ರದ ಆವರಣ ಬಿಟ್ಟು ಹೋಗಲೇ ಇಲ್ಲ.

ಪ್ರಸ್ತುತ ಕರ್ನಾಟಕ ನಾಟಕ ಅಕಾಡೆಮಿಯ ನೌಕರರಾದ ರೇವಣ್ಣ ಮಾಳಿಗೆ ‘ಭಾಗವತರು’ ತಂಡದ ಏಕೈಕ ಚುಕ್ಕಾಣಿ. ತಮ್ಮ ವೃತ್ತಿ ಹಾಗೂ ಹವ್ಯಾಸದ ನಡುವೆ ಸುಮಧುರ ಹೊಂದಾಣಿಕೆ ಮಾಡಿಕೊಂಡೇ ರಂಗಭೂಮಿಯ ಚಟುವಟಿಕೆಗಳಿಗೆ ಕೆಟಲಿಸ್ಟ್‌ ಆಗಿದ್ದಾರೆ. ‘ಭಾಗವತರು’ ಈಗ ಕನ್ನಡ ರಂಗಭೂಮಿಯ ಹೆಮ್ಮೆಯ ಗರಿಗಳಲ್ಲೊಂದು. ಭಾಗವತರು ಈ ಬಾರಿ ಯಾವ ಉತ್ಸವ ಹಮ್ಮಿಕೊಳ್ಳುತ್ತಾರೆ ಎನ್ನುವ ಕುತೂಹಲ ಪ್ರತೀ ವರ್ಷ ರಂಗಕರ್ಮಿಗಳ ಮನದಲ್ಲಿ ಸುಳಿಯುವಂತೆ ವಿಶಿಷ್ಟರೀತಿಯ ಉತ್ಸವ ಆಯೋಜಿಸುವುದು ರೇವಣ್ಣನವರ ಹಿರಿಮೆ.

Mysuru: ಮಾರ್ಚ್‌ನಲ್ಲಿ ರಂಗಾಯಣದ ಬಹುರೂಪಿ ನಾಟಕೋತ್ಸವಕ್ಕೆ ವೇದಿಕೆ ಸಜ್ಜು

ಬಿ ವಿ ಕಾರಂತ, ಆರ್‌ ನಾಗೇಶ್‌, ಸಿ ಜಿ ಕೆ, ಎಚ್‌ ನರಸಿಂಹಯ್ಯ ನೆನಪಿನ ರಂಗೋತ್ಸವ, ಬಿ ಜಯಶ್ರೀ, ಉಮಾಶ್ರೀ, ಚಂದ್ರಶೇಖರ ಕಂಬಾರ, ಕೆ ಎಸ್‌ ನಿಸಾರ್‌ ಅಹಮದ್‌ ಅಭಿನಂದನಾ ಸಮಾರಂಭಗಳು ಕನ್ನಡ ರಂಗಭೂಮಿಯ ಮಹತ್ವದ ಕಾರ್ಯಕ್ರಮಗಳು.

ರೇವಣ್ಣ ಅವರ ಮಡದಿ ರೂಪಾ ಎ ಭಾಗವತರು ಬಳಗದ ವೇಗವರ್ಧಕ. ‘ಈಗ ಮಗ ರೇವಂತ್‌ ಹಾಗೂ ಮಗಳು ರಚನಾ ಸಹಾ ರಂಗದ ಮೇಲೆ ಬಂದಿದ್ದಾರೆ. ನಾಟಕಗಳಲ್ಲಿ ಅಭಿನಯ, ನಿರ್ದೇಶನವಲ್ಲದೆ ಸಂಗೀತ, ನೃತ್ಯ ಕ್ಷೇತ್ರಗಳಲ್ಲೂ ವಿದ್ವತ್‌ ಪಡೆದಿರುವುದು ನನಗೆ ಹೆಮ್ಮೆ’ ಎನ್ನುತ್ತಾರೆ. ಭಾಗವತರು ಉತ್ಸವಗಳ ಸಂಘಟನೆಯಲ್ಲಿ ಈ ಇಬ್ಬರದೂ ಮಹತ್ವದ ಪಾತ್ರವಿದೆ.

ಇದಕ್ಕೆಲ್ಲಾ ನಿಮಗೆ ಏನು ಸ್ಫೂರ್ತಿ ರೇವಣ್ಣ? ಎಂದು ಕೇಳಿದರೆ ‘ನಿಮ್ಮೊಡನಿದ್ದೂ ನಿಮ್ಮಂತಾಗದೆ ಎನ್ನುವ ನಿಸಾರ್‌ ವಾಣಿ ಇದೆ. ಅಂತಹದ್ದರಲ್ಲಿ ರಂಗಭೂಮಿಯನ್ನೇ ಉಸಿರಾಡಿದ ಮನೆ, ಕಾಲೇಜು, ನಾಟಕ ಅಕಾಡೆಮಿಯಲ್ಲಿದ್ದೂ ನಾನು ರಂಗಭೂಮಿಗೆ ಒಂದು ಪುಟ್ಟಕಾಣಿಕೆ ನೀಡದಿದ್ದರೆ ಹೇಗೆ’ ಎಂದು ಪ್ರಶ್ನಿಸುತ್ತಾರೆ.

Follow Us:
Download App:
  • android
  • ios