Asianet Suvarna News Asianet Suvarna News

ನನಗೂ ಸಿಎಂ ಆಗೋ ಆಸೆ ಇದೆ, ಕಾಲ ಕೂಡಿಬರಬೇಕಷ್ಟೆ: ಸತೀಶ ಜಾರಕಿಹೊಳಿ

ನನಗೂ ಸಿಎಂ ಆಗೋ ಆಸೆ ಇದೆ, ಕಾಲ ಕೂಡಿಬರಬೇಕಷ್ಟೆ| ಕಾಂಗ್ರೆಸ್‌ನಲ್ಲಿ ಸಮಸ್ಯೆ ಇದೆ, ಸರ್ಕಾರದಲ್ಲಿಲ್ಲ, ಕೆಲ ‘ಕೈ’ ಶಾಸಕರು ಸಂಪರ್ಕಕ್ಕೆ ಸಿಗುತ್ತಿಲ್ಲ- ಸತೀಶ ಜಾರಕಿಹೊಳಿ

satish Jarkiholi Aspires to Be Chief Minister
Author
Nippani, First Published Feb 3, 2019, 8:59 AM IST

ಬೆಳಗಾವಿ/ನಿಪ್ಪಾಣಿ[ಫೆ.03]: ರಾಜ್ಯದ ಮುಖ್ಯಮಂತ್ರಿ ಆಗುವ ಆಸೆ ನನಗೂ ಇದೆ, ಈ ಭಾಗದ ಜನರ ಮನಸ್ಸಲ್ಲೂ ಇದೆ. ಆದರೆ, ಅದಕ್ಕೆ ಕಾಲ ಕೂಡಿಬರಬೇಕು. ಪಕ್ಷ, ಹೈಕಮಾಂಡ್‌, ಶಾಸಕರು, ಮುಖಂಡರು ಈ ಬಗ್ಗೆ ನಿರ್ಧಾರ ಮಾಡಬೇಕು ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಪುನರುಚ್ಚರಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಾಮಾಜಿಕ ಜಾಲ ತಾಣಗಳಲ್ಲಿ ಆರಂಭವಾಗಿರುವ ‘ನನ್ನ ಸಿಎಂ ಸತೀಶ ಜಾರಕಿಹೊಳಿ’ ಅಭಿಯಾನವನ್ನು ಅಭಿಮಾನಿಗಳು ಮಾಡಿದ್ದಾರೆ. ರಾಜಕೀಯದಲ್ಲಿ ಒಂದು ಹಂತಕ್ಕೆ ಬಂದ ಮೇಲೆ ಮುಂದೆ ಹೋಗಬೇಕೆನ್ನುವ ಆಶಯ ಸಹಜವಾಗಿ ಎಲ್ಲರಲ್ಲೂ ಇರುತ್ತದೆ. ಮುಖ್ಯಮಂತ್ರಿಯಾಗುವ ಆಸೆ ನನಗೂ ಇದೆ. ಅಭಿಮಾನಿಗಳು ಈ ಕುರಿತು ಅಭಿಯಾನ ಆರಂಭಿಸಿದ್ದಾರೆ. ಮುಂಬರುವ ದಿನಗಳಲ್ಲಿ ಏನಾಗುತ್ತದೆಯೋ ನೋಡೋಣ ಎಂದರು.

ಕಾಂಗ್ರೆಸ್‌ನಲ್ಲಿ ಸಮಸ್ಯೆ ಇದೆ: ಇದೇ ವೇಳೆ, ಕಾಂಗ್ರೆಸ್‌ನಲ್ಲಿ ಸಮಸ್ಯೆ ಇದೆ, ಅಸಮಾಧಾನವಿದೆ ಎಂಬುದನ್ನು ಒಪ್ಪಿಕೊಂಡಿರುವ ಸತೀಶ ಜಾರಕಿಹೊಳಿ, ಸಮ್ಮಿಶ್ರ ಸರ್ಕಾರದಲ್ಲಿ ಮಾತ್ರ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ. ಜತೆಗೆ, ನಮ್ಮ ಕೆಲ ಶಾಸಕರು ತಮ್ಮ ಊರಲ್ಲೂ ಇಲ್ಲ, ಈವರೆಗೆ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಬೇಸರವನ್ನೂ ವ್ಯಕ್ತಪಡಿಸಿದರು.

ಕೇವಲ ಒಂದು ಸಮುದಾಯದವರು ಬಯಸಿದರೆ ನಾನು ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ. ಬದಲಾಗಿ ಹೈಕಮಾಂಡ್‌, ಶಾಸಕರು, ಪಕ್ಷದ ಮುಖಂಡರು ಈ ಬಗ್ಗೆ ತೀರ್ಮಾನಿಸಬೇಕು. ಹತ್ತು ವರ್ಷಗಳಲ್ಲಿ ಸಾಕಷ್ಟುಹುದ್ದೆಗಳನ್ನು ನಿಭಾಯಿಸಿರುವುದರಿಂದ ಮುಖ್ಯಮಂತ್ರಿ ಹುದ್ದೆ ನಿಭಾಯಿಸುವ ಸಾಮರ್ಥ್ಯ ನನಗೆ ಇದ್ದೇ ಇದೆ. ಆತ್ಮವಿಶ್ವಾಸವೂ ಇದೆ. ಒಮ್ಮೆಲೆ ಯಾವುದೂ ಆಗುವುದಿಲ್ಲ. ಚುನಾವಣೆ ಆಗಬೇಕು, ಇನ್ನೂ ಕಾಲಾವಕಾಶವಿದೆ ಎಂದರು ಸತೀಶ್‌.

Follow Us:
Download App:
  • android
  • ios