Asianet Suvarna News Asianet Suvarna News

ರಾಮ ಮಂದಿರ ಭಾರತದ ಹೃದಯವಾದರೆ, ಶ್ರೀರಾಮ ಆತ್ಮವಾಗಿದ್ದಾರೆ; ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ

ಅಯೋಧ್ಯೆ ನಮ್ಮ ದೇಶದ ಹೃದಯ ಭಾಗದಲ್ಲಿದೆ. ರಾಮ ಮಂದಿರ ಭಾರತದ ಹೃದಯವಾದರೆ, ಶ್ರೀ ರಾಮ ಭಾರತದ ಆತ್ಮವಾಗಿದ್ದಾರೆ ಎಂದು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದ್ದಾರೆ. 

Ram Mandir is heart of India and Sri Ram is soul of India said Raghaveshwar swamiji sat
Author
First Published Jan 11, 2024, 8:31 PM IST

ಉತ್ತರಕನ್ನಡ (ಜ.11): ನಮ್ಮ ಭಾರತ ದೇಶದಲ್ಲಿ ಅಯೋಧ್ಯೆ ಹೃದಯದ ಸ್ಥಾನದಲ್ಲಿದೆ. ಇನ್ನು ರಾಮ ಮಂದಿರ ಭಾರತದ ಹೃದಯವಾಗಿದ್ದು, ರಾಮ ಭಾರತದ ಆತ್ಮವಾಗಿದ್ದಾನೆ ಎಂದು ಗೋಕರ್ಣ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದ್ದಾರೆ. 

ರಾಮಮಂದಿರ ಉದ್ಘಾಟನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮನುಷ್ಯನ ಹೃದಯ ಸರಿಯಿಲ್ಲದಿದ್ರೆ, ಆಘಾತವಾಗಿದ್ರೆ ಏನಾಗುತ್ತೋ ಅದೇ ಸ್ಥಿತಿ ಈ ದೇಶಕ್ಕಾಗಿತ್ತು. ಕಳೆದ 500 ವರ್ಷಗಳ ಕಾಲ ಭಾರತಕ್ಕೆ ಹೃದಯಾಘಾತವಾಗಿತ್ತು, ಹೃದಯ ಹೀನತೆ, ಹೃದಯ ಶೂನ್ಯತೆಯಾಗಿತ್ತು. ಆ ಹೃದಯವನ್ನು ಮತ್ತೆ ಪ್ರತಿಷ್ಠಾಪನೆ ಮಾಡುವ ಕಾರ್ಯವಾಗುತ್ತಿದೆ. ರಾಮ ಮಂದಿರದ ಪುನರ್ ಪ್ರತಿಷ್ಠಾಪನೆಯ ಮಹತ್ವ ಶರೀರದಲ್ಲಿ ಹೃದಯವನ್ನು ಮತ್ತೆ ಅಳವಡಿಸುವಷ್ಟೇ ಮಹತ್ವದ್ದಾಗಿದೆ. ನಾನು ರಾಮ ಮಂದಿರದ ಉದ್ಘಾಟನೆಗೆ ತೆರಳುತ್ತಿದ್ದೇನೆ. ಜ.22ರಂದು ನಡೆಯುವ ಪ್ರಾಣ ಪ್ರತಿಷ್ಠಾಪನೆಗೆ ರಸ್ತೆಯ ಮೂಲಕ ಪ್ರಯಾಣ ಮಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂತಿರುಗುತ್ತೇನೆ ಎಂದು ಹೇಳಿದರು.

ರಾಮ ಮಂದಿರವನ್ನು ರಾಜಕೀಯ ವಿಚಾರದ ರೂಪದಲ್ಲಿ ನಾನು ಸ್ವೀಕಾರ ಮಾಡುವುದಿಲ್ಲ. ರಾಮ ಮಂದಿರದ ವಿಷಯ ಒಂದು ಚಳುವಳಿಯಾಗಿ ಯಾವಾಗ ರೂಪುಗೊಂಡಿತೋ ಅಲ್ಲಿಂದ ದೇಶದಲ್ಲಿ ಧರ್ಮ ಜಾಗೃತಿಯಾಗಿದೆ. ಜನರ ಧಾರ್ಮಿಕ ಭಾವನೆಗಳು ಕೂಡಾ ಸಾಕಷ್ಟು ಬದಲಾಗಿವೆ. ರಾಜಕೀಯ ಏನಿದ್ರೂ ಬರೇ ತಾತ್ಕಾಲಿಕವಾಗಿದ್ದು, 5 ವರ್ಷದ, 3 ವರ್ಷದ ಒಂದು ಎಲೆಕ್ಷನ್‌ನ ವಿಷಯವಾಗಿರುತ್ತಷ್ಟೇ. ಆದರೆ, ಸಮಾಜದ ಮೇಲಾಗುವ ಬೇರೆ ಪರಿಣಾಮ ಶಾಶ್ವತವಾಗಿದ್ದು, ಎಲ್ಲೋ ಹೊರಟಿದ್ದ ಸಮಾಜ ರಾಮಮಂದಿರದ ಚಳುವಳಿಯ ಪರಿಣಾಮ ಹಿಂತಿರುಗಿ ಬರುವಂತಾಯ್ತು. ರಾಜಕೀಯ ಸಣ್ಣ ಆ್ಯಂಗಲ್, ಸಮಾಜದ ಮೇಲಾಗುವ ಸಾತ್ವಿಕ ಪರಿಣಾಮ ದೊಡ್ಡ ಆ್ಯಂಗಲ್ ಎಂದರು.

ಶ್ರೀರಾಮ ಚಂದ್ರಾಪುರ ಮಠದ ಸಂಪ್ರದಾಯವನ್ನು ಭಾಗವತ ಸಂಪ್ರದಾಯ ಅಂತಾರೆ. ಇಲ್ಲಿ ವೈಷ್ಣವ ಉಪಾಸನೆಯಿದ್ದು, ಏಕಾದಶಿ ವ್ರತದ ಆಚರಣೆ ಮಾಡಲಾಗ್ತದೆ. ರಾಮ ಮಠದ ಪ್ರಧಾನ ಆರಾಧ್ಯ ದೇವರಾಗಿದ್ದಾನೆ. ಶ್ರೀ ಮಠವನ್ನು ಶಿವನ ಅವತಾರವಾದ ಆದಿ ಶಂಕರಾಚಾರ್ಯರು ಸ್ಥಾಪನೆ ಮಾಡಿದ್ದು, ಆ ದೃಷ್ಠಿಯಿಂದ ಶಿವನ ಸಂಬಂಧ ಬರುತ್ತದೆ. ಉಪಾಸನೆಯಲ್ಲಿ ಸೀತಾ ರಾಮಚಂದ್ರ, ಚಂದ್ರ ಮೌಳೇಶ್ವರ, ರಾಜರಾಜೇಶ್ವರಿ ಮೂರು ಮುಖ್ಯ ದೇವರಾಗಿದ್ದಾರೆ. ಶಂಕರಾಚಾರ್ಯರು ನಮಗೆ ಸೂರ್ಯ, ಗಣಪತಿ, ಅಂಬಿಕಾ, ಶಿವ, ವಿಷ್ಣು ಎಂಬ ಪಂಚ ಮೂರ್ತಿಗಳ ಉಪಾಸನೆ ನೀಡಿದ್ದರು. ಇದೊಂದು ರೀತಿಯಲ್ಲಿ ಸಮನ್ವಯತೆ ಹೊಂದಿರುವ ಮಠವೇ ಹೊರತು, ಒಂದನ್ನೇ ಮಾಡಿ, ಉಳಿದದ್ದಕ್ಕೆ ಅವಕಾಶವಿಲ್ಲ ಅನ್ನೋವಂತದ್ದಲ್ಲ ಎಂದು ವಿವರಿಸಿದರು.

ಮೂಲದಲ್ಲಿ ಕಾಡಿನ ಬೇಡ ಅನಿಸಿಕೊಂಡಾತ ವಾಲ್ಮೀಕಿ, ಆದಿ ಕಾವ್ಯ, ಆದರ್ಶ ಜೀವನದ ಪಾಠವನ್ನು ಜಗತ್ತಿಗೆ ನೀಡಿದ ಸರ್ವಶ್ರೇಷ್ಠ ಮಹರ್ಷಿಯಾಗಿ ಬದಲಾದನು. ರಾಮ ನಾಮವೇ ರತ್ನಾಕರನನ್ನು ವಾಲ್ಮೀಕಿಯನ್ನಾಗಿ ಮಾಡಿದ ಒಂದು ಉದಾಹರಣೆಯೇ ಸಾಕು ನಮ್ಮ ಮನಸ್ಸು ಬದಲಾಯಿಸಲು. ಈ ದೇಶಕ್ಕೆ ಪೊಲೀಸ್ ಠಾಣೆಗಳು, ಕೋರ್ಟ್‌ಗಳು, ಜೈಲುಗಳು ಬೇಡ, ಅವೆಲ್ಲದರ ಅಗತ್ಯ ಕಡಿಮೆ ಮಾಡಿ ಸಮಾಜದ ಮೇಲೆ ಸಾತ್ವಿಕ ಪರಿಣಾಮ ಬೀರಲು ಸಮರ್ಥವಾದ ಮಂತ್ರ ರಾಮನಾಮ. ಹೇಗೆ ಬದುಕಬೇಕು ಅನ್ನೋದನ್ನು ರಾಮ ನಮಗೆ ಬದುಕಿ ತೋರಿಸಿದ್ದಾತ, ಉಳಿದ ಅವತಾರಗಳ ನುಡಿ ತೆಗೆದುಕೊಂಡರೆ, ರಾಮ ಸ್ವತಃ ಉದಾಹರಣೆ ಆಗಿದ್ದಾನೆ. ರಾಮ ಉಪದೇಶ ಮಾಡಿದ್ದು ಕಡಿಮೆ, ನಡೆದು ತೋರಿಸಿದ್ದು ಬಹಳಷ್ಟಾಗಿದ್ದರಿಂದ ರಾಮ ಇವತ್ತಿಗೂ ಆದರ್ಶವಾಗಿದ್ದಾನೆ. ರಾಮನಿಗಿಂತ ಆದರ್ಶವಾಗಿ ಯಾರೂ ಇರಲು ಸಾಧ್ಯವಿಲ್ಲ. ರಾಮನ ಬದುಕು ಗಮನಿಸಿದ್ರೆ ಪಾನದ ಬಗ್ಗೆ ಒಂದು ಶಬ್ದವನ್ನೂ ನಾವು ಕಾಣುವುದಿಲ್ಲ ಎಂದು ಹೇಳಿದರು.

ಸುಗ್ರೀವ ಮದ್ಯ, ಮಾಂಸ, ಮಾನಿನಿ ವಿಚಾರದಲ್ಲಿ ಮುಳುಗಿದ್ದಾಗ ಲಕ್ಷ್ಮಣನ ಮೂಲಕ ರಾಮ ಕಠೋರವಾಗಿ ಎಚ್ಚರಿಸುತ್ತಾನೆ. ಅಲ್ಲದೇ, ರಾಮ ಉಪದೇಶ ಕೂಡಾ ಮಾಡಿದ್ದನು. ರಾಮ ಅನ್ನೋದು ಯಾವುದೇ ಕಪ್ಪು ಕಲೆಯಿಲ್ಲದ ಸ್ವಚ್ಛ, ಬಿಳಿಯ, ಆದರ್ಶ ವ್ಯಕ್ತಿತ್ವ. ರಾಮ ರಾಜ್ಯದಲ್ಲಿ ಎಲ್ಲರಲ್ಲೂ ರಾಮನನ್ನು ಕಾಣುತ್ತಿದ್ದದ್ದರಿಂದ ಒಬ್ಬರನ್ನೊಬ್ಬರು ಹಿಂಸಿಸುತ್ತಿರಲಿಲ್ಲ ಎಂದು‌ ರಾಮಯಣದಲ್ಲಿ ಕಾಣಬಹುದು. ಒಬ್ಬರನ್ನೊಬ್ಬರು ಹಿಂಸೆ ಮಾಡದಿದ್ರೆ ಪ್ರಸ್ತುತ ಕಾಲದಲ್ಲಿ ಕಾನೂನು, ಕೋರ್ಟ್ ಬೇಕಾಗಿಲ್ಲ, ಜನರಿಗೆ ತೊಂದರೆಯಾಗದ ವಿಚಾರವೇ ರಾಮ ರಾಜ್ಯದ ವಿಶೇಷತೆ. ಕವಿ ಗಜಾನನ ಶರ್ಮ ರಚಿತ 'ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಹಾಡು' ನನಗೆ ತುಂಬಾ ಸಂತೋಷ ನೀಡಿದೆ. ನಮ್ಮ ರಾಮಕಥೆ ಕವಿ ಎಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ, ಅವರಿಂದ ಈ ಅದ್ಭುತ ಪದ್ಯ ಸೃಷ್ಠಿಯಾಗಿದೆ. ಇದು ಮಂತ್ರದ ರೀತಿಯಲ್ಲಿದ್ದು, ಎಂತಹ ಕಲ್ಲು ಹೃದಯದವನಲ್ಲೂ ಭಾವನೆಗಳನ್ನು ಜಾಗೃತ ಮಾಡುವಂತಿದೆ ಎಂದರು.

Follow Us:
Download App:
  • android
  • ios