Asianet Suvarna News Asianet Suvarna News

ರಾಜ್ಯದಲ್ಲಿ ಮುಂದುವರಿದ ಮಳೆಯಬ್ಬರ : 12 ಬಲಿ

ರಾಜ್ಯದಲ್ಲಿ ಭಾರೀ ಮಳೆಯ ಅಬ್ಬರ ಮುಂದುವರಿದಿದೆ. ಮಳೆಯ ಅಬ್ಬರಕ್ಕೆ  ಒಂದೇ ದಿನ ರಾಜ್ಯದ ವಿವಿಧೆಡೆ ಒಟ್ಟು 12 ಮಂದಿ ಸಾವಿಗೀಡಾಗಿದ್ದಾರೆ. 

Many District Get Heavy Rain  Lightning Kill 12
Author
Bengaluru, First Published Oct 17, 2018, 7:46 AM IST

ಬೆಂಗಳೂರು :  ರಾಜ್ಯದ ವಿವಿಧೆಡೆ ಮಳೆಯಬ್ಬರ ಮುಂದುವರೆದಿದ್ದು, ಸಿಡಿಲಿಗೆ 9 ಮಂದಿ ಸೇರಿ ಒಟ್ಟಾರೆ ಮಂಗಳವಾರ ಒಂದೇ ದಿನ 12 ಮಂದಿ ಸಾವನ್ನಪ್ಪಿದ್ದಾರೆ.  ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕು ಒಂದರಲ್ಲೇ ಮೂವರು ಮಹಿಳೆಯರು ಬಲಿಯಾಗಿದ್ದರೆ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನಲ್ಲಿ ಇಬ್ಬರು ಕೊನೆಯುಸಿರೆಳೆದಿದ್ದಾರೆ. 

ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೊಪ್ಪಳ, ಗದಗ, ಬಳ್ಳಾರಿ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಸಿಡಿಲಿಗೆ ತಲಾ ಒಬ್ಬರು ಮೃತಪಟ್ಟಿದ್ದಾರೆ. ರಾಣಿಬೆನ್ನೂರಿನಲ್ಲಿ ಮಳೆಯಿಂದ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದರೆ, ಮಳೆಯಿಂದ ಮರಳು ದಿಬ್ಬ ಕುಸಿದು ಬಳ್ಳಾರಿ ಜಿಲ್ಲೆಯ ಜಂಭಯ್ಯನ ಕೆರೆ ಸಮೀಪದ ನಡುವಿನಕೆರೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಸೋಮವಾರ ಸಿಡಿಲು ಬಡಿದು 7 ಮಂದಿ ಮೃತಪಟ್ಟಿದ್ದರು.

ಇನ್ನುಳಿದಂತೆ ಉತ್ತರ ಕನ್ನಡ, ಹಾವೇರಿ, ಧಾರವಾಡ, ಮಡಿಕೇರಿ, ಮಂಗಳೂರು, ಉಡುಪಿ, ಮಂಡ್ಯ, ಮೈಸೂರು, ಚಿಕ್ಕಮಗಳೂರು, ಕಲಬುರಗಿ, ಕೊಪ್ಪಳ, ಗದಗ, ಬಳ್ಳಾರಿ, ಬೆಳಗಾವಿ ಹಾಗೂ ವಿಜಯಪುರ ಸೇರಿದಂತೆ ರಾಜ್ಯದ ವಿವಿಧೆಡೆ ವರುಣನ ಆರ್ಭಟ ಮುಂದುವರೆದಿದೆ.

ಬ.ಬಾಗೇವಾಡಿಯಲ್ಲಿ 3 ಬಲಿ:  ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯಿಂದ ರಕ್ಷಣೆ ಪಡೆಯಲು ಬನ್ನಿ ಮರದ ಕೆಳಗೆ ಆಶ್ರಯ ಪಡೆದಿದ್ದಾಗ ಸಿಡಿಲು ಬಡಿದು ರೇಣುಕಾ ಬಸನಗೌಡ ಹಿಕ್ಕನಗುತ್ತಿ (30), ಸಾವಿತ್ರಿ ಮಲ್ಲಿಕಾರ್ಜುನ ಪಾಟೀಲ (10) ಎಂಬುವರು ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ಬ.ಬಾಗೇವಾಡಿ ತಾಲೂಕಿನ ತಳೇವಾಡದಲ್ಲಿ ನಡೆದಿದೆ. ಮತ್ತೊಂದು ಪ್ರಕರಣದಲ್ಲಿ ಬ.ಬಾಗೇವಾಡಿ ತಾಲೂಕಿನ ಮುಳವಾಡ ತಾಂಡಾ ನಂ.1ರಲ್ಲಿ ಸಿಡಿಲು ಬಡಿದು ಗೂಜುಬಾಯಿ ಕೇಮು ರಾಠೋಡ್‌ (40) ಎಂಬುವರು ಕೊನೆಯುಸಿರೆಳೆದಿದ್ದಾರೆ.

ಗೋಕಾಕಲ್ಲಿ ಇಬ್ಬರು ಕೊನೆಯುಸಿರು:  ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ತಪಸ್ಸಿಯಲ್ಲಿ ಮಾರಪ್ಪ ನಾಗಪ್ಪ ಕಟ್ಟಿಕಾರ (24) ಹಾಗೂ ಬಿಲಕುಂದಿ ಗ್ರಾಮದ ಶೋಭಾ ಅವ್ವಣ್ಣ ಕಳ್ಳಿಗುದ್ದಿ (32) ಎಂಬುವರು ಸಿಡಿಲಿಗೆ ಬಲಿಯಾಗಿದ್ದಾರೆ. ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬಳಗೇರಿ ಗ್ರಾಮದಲ್ಲಿ ಸಿಡಿಲು ಬಡಿದು ಕುರಿಗಾಹಿ ಕಳಕಪ್ಪ ಹನುಮಪ್ಪ ಚಾಕರಿ (24) ಮೃತಪಟ್ಟಿದ್ದಾರೆ.

ಹೊಲದಲ್ಲೇ ಕೊನೆಯುಸಿರು:  ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದಲಿ ಗ್ರಾಮದಲ್ಲಿ ಹೊಲದಲ್ಲಿ ಹತ್ತಿ ಬಿಡಿಸಲು ಹೋಗಿದ್ದ ವೆಂಕವ್ವ ಯಲ್ಲಪ್ಪ ವಿಠಪ್ಪನವರ (35) ಸಿಡಿಲು ಬಡಿದು ಮೃತಳಾಗಿದ್ದಾಳೆ. ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಮೈಲಾಪುರ ಗ್ರಾಮದ ಹೊಲದಲ್ಲಿ ಸಿಡಿಲು ಬಡಿದು ರೈತರಾದ ವಿರುಪಾಕ್ಷಿಗೌಡ (40) ಮೃತರಾಗಿದ್ದಾರೆ.

ಮಂಗಳವಾರ ಸಂಜೆ ಹೊಲದ ಕೆಲಸ ಮುಗಿಸಿ ಮನೆಗೆ ಹಿಂದಿರುಗುವಾಗ ಸಿಡಿಲು ಬಡಿದು ಚಂದಪ್ಪ (65) ಎಂಬುವರು ಮೃತಪಟ್ಟಿರುವ ಘಟನೆ ಯಾದಗಿರಿ ಜಿಲ್ಲೆ ಗುರುಮಠಕಲ್‌ ನಗರದ ಹೈದರಾಬಾದ್‌ ರಸ್ತೆಯಲ್ಲಿ ನಡೆದಿದೆ.

ವ್ಯಕ್ತಿಯ ಬಲಿ ಪಡೆದ ವಿದ್ಯುತ್‌ ತಂತಿ

ಭಾರೀ ಮಳೆಗೆ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿ ಓರ್ವ ವ್ಯಕ್ತಿ ಮೃತಪಟ್ಟಘಟನೆ ಮಂಗಳವಾರ ಸಂಜೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ಸಂಭವಿಸಿದೆ. ಭದ್ರಾವತಿ ಮೂಲದ ಏಕಾಂತಪ್ಪ ಮಲ್ಲಪ್ಪ ಗುನ್ನಳ್ಳಿ (38) ಮೃತಪಟ್ಟವರು. ಮೃತರು ಗ್ರಾಮದ ಮನೋಹರ ಪೂಜಾರ ಎಂಬುವರ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಸಂಜೆ ಸುರಿದ ಮಳೆ-ಗಾಳಿಗೆ ವಿದ್ಯುತ್‌ ತಂತಿ ತುಂಡಾಗಿ ತಂತಿ ಬೇಲಿಗೆ ವಿದ್ಯುತ್‌ ಪ್ರವಹಿಸಿದ ಪರಿಣಾಮ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮರಳು ದಿಬ್ಬ ಕುಸಿದು ಇಬ್ಬರು ಬಲಿ

ಮಳೆಯಿಂದಾಗಿ ಮರಳು ದಿಬ್ಬ ಕುಸಿದು ಇಬ್ಬರು ಮೃತಪಟ್ಟಘಟನೆ ಬಳ್ಳಾರಿ ಜಿಲ್ಲೆಯ ಜಂಭಯ್ಯನ ಕೆರೆ ಸಮೀಪದ ನಡುವಿನಕೆರೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಹೊಸಪೇಟೆ ತಾಲೂಕಿನ ತಿಮ್ಮಲಾಪುರ ಗ್ರಾಮದ ಎರ್ರಿಸ್ವಾಮಿ ಮತ್ತು ಮೇಘರಾಜ ಮೃತಪಟ್ಟವರು. ಮರಳು ತುಂಬುವಾಗ ಮಳೆ ಪ್ರಾರಂಭವಾಗಿದ್ದು, ಮಳೆಯಿಂದ ರಕ್ಷಣೆ ಪಡೆಯಲು ಮರಳು ದಿನ್ನೆಯ ಕೆಳೆಗೆ ಇಬ್ಬರು ಕುಳಿತ್ತಿದ್ದಾಗ ದಿಬ್ಬ ಕುಸಿದು ದುರ್ಘಟನೆ ಸಂಭವಿಸಿದೆ.

ಜಾನುವಾರುಗಳು ಬಲಿ

ಕೊಪ್ಪಳ ಜಿಲ್ಲೆಯ ಹನುಮಸಾಗರ ಹೋಬಳಿಯ ವಕ್ಕಂದುರ್ಗಾ ಗ್ರಾಮದಲ್ಲಿ ಸಿಡಿಲು ಬಡಿದು 2 ಎತ್ತುಗಳು ಮೃತಪಟ್ಟಿದ್ದರೆ, ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ತಿಗಣಿಬಿದರಿ ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಗೋವುಗಳು ಸಾವನ್ನಪ್ಪಿವೆ. ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಎಮ್ಮೆ ಬಲಿಯಾಗಿದೆ. ಮಂಡ್ಯ ಜಿಲ್ಲೆಯ ಭಾರೀನಗರ ಸಮೀಪದ ಭುಜುವಳ್ಳಿಯಲ್ಲಿ ಸೋಮವಾರ ರಾತ್ರಿ 2 ಮನೆಗಳ ಗೋಡೆ ಕುಸಿದಿದ್ದು, ಅದೃಷ್ಟವಶಾತ್‌ ಯಾರಿಗೂ ಯಾವುದೇ ಅಪಾಯವಾಗಿಲ್ಲ.

Follow Us:
Download App:
  • android
  • ios