Asianet Suvarna News Asianet Suvarna News

Lok sabha election 2024: ಕೈ ತಪ್ಪಿದ ಟಿಕೆಟ್, 'ಈ ಬದುಕಿಗೆ ಅಷ್ಟೇ ಸಾಕು..!' ಅನಂತ ಭಾವನಾತ್ಮಕ ಪತ್ರ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿ ಹಾಲಿ ಸಂಸದ ಅನಂತಕುಮಾರ ಹೆಗ್ಡೆಯವರಿಗೆ ಟಿಕೆಟ್ ಕೈತಪ್ಪಿರುವುದು ಭಾರೀ ನಿರಾಸೆಯನ್ನುಂಟು ಮಾಡಿದೆ. ಈ ಬಗ್ಗೆ ಭಾವನಾತ್ಮಕ ಪತ್ರದ ಮೂಲಕ ಧನ್ಯವಾದಗಳನ್ನು ತಿಳಿಸಿದ್ದಾರೆ.

Lok sabha election 2024 BJP 5th list release MP Anantakumar Hegade's emotional letter rav
Author
First Published Mar 25, 2024, 12:03 AM IST

ಕಾರವಾರ, ಉತ್ತರಕನ್ನಡ (ಮಾ.25): ಲೋಕಸಭಾ ಚುನಾವಣೆಗೆ ಬಿಜೆಪಿ ತನ್ನ 5ನೇ ಪಟ್ಟಿ ಬಿಡುಗಡೆ ಮಾಡಿದೆ. ಉತ್ತರ ಕನ್ನಡದಿಂದ ಲೋಕಸಭಾ ಚುನಾವಣಾ ಅಭ್ಯರ್ಥಿಯನ್ನಾಗಿ ವಿಶ್ವೇಶ್ವರ ಹೆಗಡೆಯವರನ್ನ ಘೋಷಣೆ ಮಾಡಿದೆ. ಟಿಕೆಟ್ ದೊರೆಯದೇ ಹಾಲಿ ಸಂಸದ ಅನಂತಕುಮಾರ ಹೆಗಡೆ ನಿರಾಸೆಗೊಂಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೇವರಿಗೆ ಹಾಗೂ ಜಿಲ್ಲೆಯ ಜನತೆಗೆ ಧನ್ಯವಾದ ತಿಳಿಸಿರುವ ಸಂಸದ ಹೆಗ್ಡೆ, ಈ ಭೂಮಿಯಲ್ಲಿ ನನ್ನ ಲೌಕಿಕ ಬದುಕಿನಿಂದಾಚೆಗೂ ಒಂದು ಭವ್ಯವಾದ ಬದುಕಿದೆ ಎಂದೆನಿಸಿತ್ತು. ಅಂತಹ ಬದುಕನ್ನು ನೋಡುವ ತಹತಹ ಇತ್ತು, ತಳಮಳವೂ ಇತ್ತು. ಸೋಲು ಗೆಲುವಿನ ಆತಂಕದಿಂದಾಚೆ ಜೀವನವನ್ನು ನಿತ್ಯ ಸತ್ಯವಾಗಿಸುವ, ಎಂದೂ ನಿಲ್ಲದ ಪ್ರವಾಹವಾಗಿಸುವ, ಚೈತನ್ಯದ ಪೂಜೆಯನ್ನಾಗಿಸುವ ಹಂಬಲ ಕಾಡುತ್ತಿತ್ತು. ಆದರೆ ಆರಂಭ ಎಲ್ಲಿಂದ ಎಂಬುದು ತಿಳಿದಿರಲಿಲ್ಲ. ಜ್ಞಾನಿಗಳು, ಹಣವಂತರು, ಅಧಿಕಾರ ಇದ್ದವರು ಅವರದೇ ಆದ ರೀತಿಯಲ್ಲಿ ಪೂಜೆ ಮಾಡುತ್ತಾರೆ. ಅಂತಹ ಯಾವುದೇ ಉಪಾಧಿಗಳಿಲ್ಲದ ನಾನು ಈ ಪೂಜೆಯನ್ನು ಎಲ್ಲಿಂದ, ಹೇಗೆ ಆರಂಭಿಸಲಿ ಎಂದು ಗೊತ್ತಿರಲಿಲ್ಲ. ಈ ಮಧ್ಯೆದಲ್ಲಿ ಆರಂಭಗೊಂಡಿದ್ದು ಜನತಾ ಜನಾರ್ದನ ಆರಾಧನೆ. ಸರಿ ಸುಮಾರು ಮೂವತ್ತು ವರ್ಷಗಳ ತಮ್ಮೆಲ್ಲರ ಅಪೂರ್ವ ಒಡನಾಟ. ತಾವುಗಳು ತೋರಿದ ಸ್ನೇಹ, ಪ್ರೀತಿ, ವಾತ್ಸಲ್ಯ ನಿಜಕ್ಕೂ ಭಾಷೆಗೆ ನಿಲುಕದ್ದು, ಅದು ಅದಮ್ಯ. ಯಾವುದೇ ಪೂಜೆ ಆರಾಧನೆ, ಅದು ಎಂದಿಗೂ ಮುಗಿಯದ ಅನಂತ ಕಾಯಕ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಬಿಜೆಪಿ 5ನೇ ಪಟ್ಟಿ ಘೋಷಣೆ: ಉತ್ತರ ಕನ್ನಡದಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಕಣಕ್ಕೆ, ಹೇಳಿದ್ದೇನು?

ಈ ತಾಯ್ನೆಲದ ಪೂಜೆಯಲ್ಲಿ, ಆಕೆಯ ಸೇವೆಯಲ್ಲಿ ನನ್ನನ್ನು ನಾನು ಸಮರ್ಪಿಸಿಕೊಳ್ಳುವ ಸೌಭಾಗ್ಯ ನನ್ನದು. ಅಂಥ ಸೌಭಾಗ್ಯವನ್ನು ಈ ಜನ್ಮದಲ್ಲಿ ಭಗವಂತ ಕರುಣಿಸಿದಕ್ಕೆ, ಈ ಕಣ್ಣಿಗೆ ಕಾಣದ ಆ ಅಕ್ಷಯ ಪಾದಪದ್ಮಗಳಿಗೆ ನನ್ನ ಅನಂತ ನಮನಗಳನ್ನು ಸಲ್ಲಿಸುತ್ತೇನೆ. ಕಳೆದ 3 ದಶಕಗಳಿಂದ ಹಿಂದವೀ ಹಿತದಲ್ಲಿ ಸೇವೆ ಸಲ್ಲಿಸುವ ಅಪೂರ್ವ ಸಯ್ಯೋಗ ಈ ಬದುಕಿನಲ್ಲಿ ನನಗೊಂದು ಗುರುತು ನೀಡಿದೆ. ನಿಜಕ್ಕೂ ಅಷ್ಟೇ ಸಾಕು! ಈ ಸಮಾಜ ದೇವತೆಯ ಪದತಲದಲ್ಲಿ ಹೂವಾಗುವ ಸೌಭಾಗ್ಯ ಅದೆಷ್ಟು ಜನರಿಗೆ ತಾನೇ ಸಿಕ್ಕೀತು? ಹೆತ್ತ ತಾಯೊಡಲಿಗೆ, ಬದುಕು ಕೊಟ್ಟ ಈ ಮಣ್ಣಿಗೆ ಗುರುತು ಕೊಟ್ಟ ನನ್ನ ಜನಕ್ಕೆ  ಸೇವೆಯ ಸೌಭಾಗ್ಯವನ್ನು ಒದಗಿಸಿಕೊಟ್ಟ ಕ್ಷೇತ್ರದ ಜನಮನಕ್ಕೆ ಮತ್ತೊಮ್ಮೆ, ಮತ್ತೊಮ್ಮೆ, ಮತ್ತೊಮ್ಮೆ ಸಾಷ್ಟಾಂಗವೆರಗುತ್ತೇನೆ. ತಮ್ಮೆಲ್ಲರ ನೆನಪಿನಲ್ಲಿ ಹೃದಯದಾಳದ ಕೃತಜ್ಞತೆಯೊಂದಿಗೆ, 

ಬೆಳಗಾವಿಯಿಂದ ಜಗದೀಶ ಶೆಟ್ಟರ್ ಕಣಕ್ಕೆ; 'ಕ್ಷಮಿಸಿ ಮೋದೀಜಿ' ಎಂದ ಬಿಜೆಪಿ ಮುಖಂಡ!

ಅನಂತಕುಮಾರ್ ಹೆಗಡೆ

"ತಾಯ್ನೆಲದ ಸೇವೆಯಲ್ಲಿ" ಎಂದು ಬರೆದು ಪೋಸ್ಟ್ ಮಾಡಿದ ಅನಂತ ಕುಮಾರ್ ಹೆಗಡೆ

Follow Us:
Download App:
  • android
  • ios