Asianet Suvarna News Asianet Suvarna News

ಪೊಲೀಸ್‌ ತನಿಖೆ ಬಗ್ಗೆ ಹೈಕೋರ್ಟ್‌ ಜಡ್ಜ್‌ ಕ್ಲಾಸ್‌..!

ಸರ್ಕಾರಿ ವಕೀಲರು, ನ್ಯಾಯಾಧೀಶರು ಹಾಗೂ ಕಾನೂನು ತಜ್ಞರು ನಿಯಮಿತವಾಗಿ ಕಾರ್ಯಕ್ರಮಗಳನ್ನು ನಡೆಸಿ ಪೊಲೀಸ್‌ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಕಾನೂನುಗಳ ಅರಿವು ಮೂಡಿಸಬೇಕು. ನ್ಯಾಯಾಲಯಗಳ ತೀರ್ಪುಗಳ ಬಗ್ಗೆ ಮಾಹಿತಿ ನೀಡಬೇಕು. ತನಿಖೆ ವೇಳೆ ಅನುಸರಿಸಬೇಕಾದ ವಿಧಾನಗಳನ್ನು ತಿಳಿಸಿಕೊಡುವುದು ಸೂಕ್ತ ಎಂದು ಸಲಹೆ ನೀಡಿದ ನ್ಯಾಯಮೂರ್ತಿ ವಿ.ಶ್ರಿಷಾನಂದ 

High Court of Karnataka Judge Class on Police Investigation grg
Author
First Published May 7, 2024, 8:47 AM IST

ಬೆಂಗಳೂರು(ಮೇ.07):  ‘ಕ್ರಿಮಿನಲ್‌ ಪ್ರಕರಣಗಳಲ್ಲಿ ಯಾವುದೇ ತನಿಖಾಧಿಕಾರಿಯು ಪೋಸ್ಟ್‌ಮಾರ್ಟ್ಂ ನಡೆಯುವ ಸ್ಥಳಕ್ಕೆ ಹೋಗುವುದಿಲ್ಲ. ಡಿವೈಎಸ್‌ಪಿ ಶ್ರೇಣಿಯ ಅಧಿಕಾರಿಗಳಿಗೂ ಘಟನಾ ಸ್ಥಳದ ಪಂಚನಾಮೆ/ಮಹಜರು ವರದಿಯ ಬಗ್ಗೆ ಸರಿಯಾಗಿ ನಾಲ್ಕು ವಾಕ್ಯ ಬರೆಯಲು ಬರುವುದಿಲ್ಲ. ಕಾನೂನುಗಳ ಬಗ್ಗೆ ಆಳವಾದ ಮಾಹಿತಿ ಇರದ ಪೊಲೀಸ್‌ ಮುಖ್ಯ ಪೇದೆ ತನಿಖೆ ನಡೆಸಿ ವರದಿ ಸಿದ್ಧಪಡಿಸಿದರೆ, ಅದಕ್ಕೆ ಸರ್ಕಲ್‌ ಇನ್ಸ್‌ಪೆಕ್ಟರ್‌, ಸಬ್‌ ಇನ್ಸ್‌ಪೆಕ್ಟರ್‌ ಸಹಿ ಹಾಕಿ ಕೋರ್ಟ್‌ಗೆ ಸಲ್ಲಿಸುತ್ತಾರೆ’.

ಇದು ಪೊಲೀಸ್‌ ತನಿಖಾ ವೈಖರಿ ಬಗ್ಗೆ ಹೈಕೋರ್ಟ್‌ ಮೌಖಿಕವಾಗಿ ವ್ಯಕ್ತಪಡಿಸಿರುವ ಬೇಸರದ ಪರಿ. ಕ್ರಿಮಿನಲ್‌ ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ಪೊಲೀಸ್‌ ತನಿಖಾ ವರದಿಯ ಲೋಪಗಳ ಬಗ್ಗೆ ನ್ಯಾಯಮೂರ್ತಿ ವಿ.ಶ್ರಿಷಾನಂದ ಅವರು ಪ್ರತಿಕ್ರಿಯಿಸಿ, ಸರ್ಕಾರಿ ವಕೀಲರು, ನ್ಯಾಯಾಧೀಶರು ಹಾಗೂ ಕಾನೂನು ತಜ್ಞರು ನಿಯಮಿತವಾಗಿ ಕಾರ್ಯಕ್ರಮಗಳನ್ನು ನಡೆಸಿ ಪೊಲೀಸ್‌ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಕಾನೂನುಗಳ ಅರಿವು ಮೂಡಿಸಬೇಕು. ನ್ಯಾಯಾಲಯಗಳ ತೀರ್ಪುಗಳ ಬಗ್ಗೆ ಮಾಹಿತಿ ನೀಡಬೇಕು. ತನಿಖೆ ವೇಳೆ ಅನುಸರಿಸಬೇಕಾದ ವಿಧಾನಗಳನ್ನು ತಿಳಿಸಿಕೊಡುವುದು ಸೂಕ್ತ ಎಂದು ಸಲಹೆ ನೀಡಿದರು.

ಅಪ್ರಾಪ್ತೆ ಮದುವೆಯಾಗುವೆ ಎಂದ ಆರೋಪಿ: ಫೋಕ್ಸೋ ಕೇಸ್ ಹೈಕೋರ್ಟ್‌ನಲ್ಲಿ ರದ್ದು!

ವಿಚಾರಣೆ ಸಂದರ್ಭದಲ್ಲಿ ಪೊಲೀಸರು ತನಿಖೆ ವೇಳೆ ಎಸಗುವ ಲೋಪಗಳನ್ನು ಸರ್ಕಾರಿ ಅಭಿಯೋಜಕರಿಗೆ ವಿವರಿಸಿದ ನ್ಯಾಯಮೂರ್ತಿಗಳು, ಪೊಲೀಸರು ತನಿಖೆ ವೇಳೆ ಅನುಸರಿಸಬೇಕಾದ ವಿಧಾನಗಳನ್ನು ಪಾಲಿಸುತ್ತಿಲ್ಲ. ಈ ಪರಿಸ್ಥಿತಿಗೂ ಮತ್ತೊಂದು ಕಾರಣವಿದೆ. ಪ್ರತಿ ದಿನ ವಿಐಪಿಯೊಬ್ಬರು ನಗರಕ್ಕೆ ಬರುತ್ತಾರೆ. ಅವರ ಸುಗಮ ಸಂಚಾರ ವ್ಯವಸ್ಥೆ ಹಾಗೂ ಬಂದೋಬಸ್ತ್‌ಗೆ ಎಲ್ಲ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಬೆಳಗ್ಗೆ ಎದ್ದರೆ ಪೊಲೀಸರು ಬಂದೋಬಸ್ತ್‌ ಕೆಲಸದಲ್ಲಿ ಇರುತ್ತಾರೆ. ಇನ್ನು ಯಾವಾಗ ಪೊಲೀಸರು ತನಿಖೆ ನಡೆಸುತ್ತಾರೆ ಎಂದು ಪ್ರಶ್ನಿಸಿದರು.

ಇನ್‌ಪೆಕ್ಟರ್‌ ಹಾಗೂ ಸಬ್‌ ಇನ್ಸ್‌ಪೆಕ್ಟರ್‌ ಬಂದೋಬಸ್ತ್‌ ಕೆಲಸದಲ್ಲಿದ್ದರೆ, ಹೆಡ್‌ ಕಾನ್‌ಸ್ಟೇಬಲ್‌ ತನಿಖೆ ನಡೆಸಿ, ವರದಿ ಸಿದ್ಧಪಡಿಸುತ್ತಾರೆ. ಆ ವರದಿಗೆ ಸರ್ಕಲ್‌ ಇನ್ಸ್‌ಪೆಕ್ಟರ್‌ ಅಥವಾ ಸಬ್ ಇನ್ಸ್‌ಪೆಕ್ಟರ್‌ ಸಹಿ ಮಾಡಿ, ಕೋರ್ಟ್‌ಗೆ ಸಲ್ಲಿಸುತ್ತಾರೆ. ಹೆಡ್‌ಕಾನ್‌ಸ್ಟೇಬಲ್‌ಗೆ ಕಾನೂನು ಬಗ್ಗೆ ಏನು ಗೊತ್ತಿರುತ್ತದೆ? ಅವರಲ್ಲಿ ಕೋರ್ಟ್‌ ತೀರ್ಪುಗಳ ಬಗ್ಗೆ ಮಾಹಿತಿ ಏನಿರುತ್ತದೆ? ಕಾನೂನು ತಿಳಿಯದಿದ್ದರೆ ಯಾವ ರೀತಿ ತನಿಖೆ ನಡೆಸಿರುತ್ತಾರೆ ಎಂದು ನೀವೇ ಊಹಿಸಿಕೊಳ್ಳಲಿ ಎಂದು ಸರ್ಕಾರಿ ಅಭಿಯೋಜಕರಿಗೆ ನ್ಯಾಯಮೂರ್ತಿಗಳು ಹೇಳಿದರು.

ವಿಚ್ಛೇದನಕ್ಕೆ ಎಲ್ಲ ಆರೋಪ ಸಾಬೀತಾಗಬೇಕಿಲ್ಲ: ಹೈಕೋರ್ಟ್‌ನಿಂದ ಮಹತ್ವ ತೀರ್ಪು

ವಾಸನೆ ಬರುತ್ತದೆ ಎಂಬ ಕಾರಣಕ್ಕೆ ಯಾವೊಬ್ಬ ತನಿಖಾಧಿಕಾರಿಯೂ ಪೋಸ್ಟ್‌ ಮಾರ್ಟಂ ನಡೆಯುವಾಗ ಹಾಜರು ಇರುವುದಿಲ್ಲ. ಮಹತ್ವದ ಪ್ರಕರಣದಲ್ಲಿ ಅಪರೂಪಕ್ಕೆ ಹೋದರೂ ವೈದ್ಯರೊಂದಿಗೆ ಮಾತನಾಡುತ್ತಾ ಕೂರುತ್ತಾರಷ್ಟೆ. ಘಟನಾ ಸ್ಥಳದ ಪಂಚನಾಮೆ/ಮಹಜರು ಸರಿಯಾಗಿ ಮಾಡುವುದಿಲ್ಲ. ಡಿವೈಎಸ್‌ಪಿ ಶ್ರೇಣಿಯ ಅಧಿಕಾರಿಯಾಗಿದ್ದರೂ ಸರಿಯಾಗಿ ನಾಲ್ಕು ವಾಕ್ಯ ಪಂಚನಾಮೆ ಬಗ್ಗೆ ಬರೆಯಲು ಗೊತ್ತಿರುವುದಿಲ್ಲ. ತನಿಖೆಯಲ್ಲಿ ಘಟನಾ ಸ್ಥಳದ ಮಹಜರು/ಸ್ಕೆಚ್‌ ಮಹತ್ವದಾಯಕ ಎಂಬುದು ತನಿಖಾಧಿಕಾರಿ ತಿಳಿದುಕೊಳ್ಳಬೇಕು ಎಂದು ನ್ಯಾಯಮೂರ್ತಿ ಹೇಳಿದರು.

ಆರೋಪಿ ಘಟನೆ ಸ್ಥಳಕ್ಕೆ ಹೇಗೆ ಬಂದ, ಹೇಗೆ ಹೋದ, ಹೇಗೆ ಕೃತ್ಯ ಎಸಗಿದ, ಆರೋಪಿಯನ್ನು ಯಾರಾದರೂ ನೋಡಿರುವ ಸಾಧ್ಯತೆ ಇದೆಯೇ? ಘಟನಾ ಸ್ಥಳದ ಸುತ್ತ ಏನೇನಿದೆ ಎಂಬುದನ್ನು ಮಹಜರು ವರದಿ ತಿಳಿಸುತ್ತದೆ. ಈ ಎಲ್ಲ ವಿವರಗಳು ತಿಳಿಯದೆ ಹೋದರೆ ಹೇಗೆ ತನಿಖೆ ಸರಿ ದಾರಿಯಲ್ಲಿ ನಡೆಯುತ್ತದೆ. ಈ ತಪ್ಪುಗಳನ್ನು ಪೊಲೀಸರು/ತನಿಖಾಧಿಕಾರಿಗಳು ಸರಿಪಡಿಸಿಕೊಳ್ಳಬೇಕು. ತನಿಖಾಧಿಕಾರಿ ಸೂಕ್ತವಾಗಿ ಮಹಜರು ಮಾಡಬೇಕು. ಮಾಸ್ಕ್‌ ಧರಿಸಿ ಶವ ಪರೀಕ್ಷೆ ನಡೆಯುವ ಸ್ಥಳಕ್ಕೆ ಹೋಗಬೇಕು. ಕ್ರಿಮಿನಲ್‌ ಕಾನೂನುಗಳನ್ನು ತಿಳಿದಿರಬೇಕು ಎಂದು ನ್ಯಾಯಮೂರ್ತಿಗಳು ನುಡಿದರು.

Follow Us:
Download App:
  • android
  • ios