ರಾಮನಗರದಲ್ಲಿ ಬಿಜೆಪಿ ಶಾಸಕರು ಇಲ್ಲ ಎಂಬ ಕಾರಣಕ್ಕೆ ಟಾರ್ಗೆಟ್‌: ಡಿಕೆಶಿ, ಎಚ್‌ಡಿಕೆ!

ರಾಮನಗರಕ್ಕೂ ಸೋಂಕು: ರಾಜಕೀಯ ಕೆಸರೆರಚಾಟ| ಸರ್ಕಾರದ ವಿರುದ್ಧ ಎಚ್ಡಿಕೆ, ಡಿಕೆಶಿ, ಅನಿತಾ ವಾಗ್ದಾಳಿ| ರಾಮನಗರದಲ್ಲಿ ಬಿಜೆಪಿ ಶಾಸಕರು ಇಲ್ಲ ಎಂಬ ಕಾರಣಕ್ಕೆ ಟಾರ್ಗೆಟ್‌: ಡಿಕೆಶಿ, ಎಚ್‌ಡಿಕೆ| ಇದು ಆಡಳಿತಾತ್ಮಕ ಕ್ರಮ, ರಾಜಕೀಯ ಬೇಡ: ಸರ್ಕಾರ ತಿರುಗೇಟು

DK Shivakumar And HD Kumaraswamy Slams Govt For Shifting Padarayanapura Rioters To Ramanagara

ಬೆಂಗಳೂರು(ಏ.25): ಪಾದರಾಯನಪುರ ಗಲಭೆ ಪ್ರಕರಣದ ಆರೋಪಿಗಳನ್ನು ರಾಮನಗರ ಜೈಲಿಗೆ ಸ್ಥಳಾಂತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ರಾಜಕೀಯ ಕೆಸರೆರಚಾಟ ಆರಂಭವಾಗಿದೆ. ಇದುವರೆಗೂ ನೆಮ್ಮದಿಯಾಗಿದ್ದ ರಾಮನಗರ ಜಿಲ್ಲೆಯು ಕೊರೋನಾ ಭೀತಿಗೆ ಸಿಲುಕುವಂತಾಗಲು ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಪ್ರತಿಪಕ್ಷಗಳ ನಾಯಕರು ಆರೋಪಿಸಿದರೆ, ಇದೊಂದು ಆಡಳಿತ ಕ್ರಮವಾಗಿತ್ತು. ಜಿಲ್ಲೆಗೆ ಸಮಸ್ಯೆಯಾಗದಂತೆ ಎಲ್ಲ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ಆಡಳಿತ ಪಕ್ಷದ ಸಚಿವರು ತಿರುಗೇಟು ನೀಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಸಂಸದ ಡಿ.ಕೆ.ಸುರೇಶ್‌, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಶಾಸಕರಾದ ಅನಿತಾ ಕುಮಾರಸ್ವಾಮಿ ಅವರು ಸರ್ಕಾರದ ವಿರುದ್ಧ ಹರಿಹಾಯ್ದಿದ್ದು, ‘ರಾಮನಗರ ಜಿಲ್ಲೆ ಹಸಿರು ವಲಯದಲ್ಲಿದ್ದರೂ ಯಾವ ಕಾರಣಕ್ಕಾಗಿ ತೊಂದರೆ ಕೊಡುತ್ತಿದ್ದಾರೆ ಗೊತ್ತಿಲ್ಲ. ಜಿಲ್ಲೆಯ ಜನ ದಂಗೆ ಎದ್ದು ಹೋರಾಟ ಮಾಡುವ ಪರಿಸ್ಥಿತಿ ಎದುರಾಗಿದೆ. ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ಯಾರೊಬ್ಬರೂ ಗೆದ್ದಿಲ್ಲ. ಅಲ್ಲಿ ಬಿಜೆಪಿಯಿಂದ ಶಾಸಕರು ಇಲ್ಲ ಎಂಬ ಕಾರಣಕ್ಕೆ ಟಾರ್ಗೆಟ್‌ ಮಾಡಲಾಗುತ್ತಿದೆ’ ಎಂಬ ಗಂಭೀರ ಆರೋಪ ಮಾಡಿದ್ದಾರೆ.

ಪಾದರಾಯನಪುರ ಪುಂಡರು ಮತ್ತೆ ಬೆಂಗಳೂರಿಗೆ ಶಿಫ್ಟ್‌!

ಆದರೆ, ‘ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಕೈದಿಗಳ ಸಂಖ್ಯೆ ಹೆಚ್ಚಿದ್ದ ಕಾರಣ ಗಾತ್ರದಲ್ಲಿ ಚಿಕ್ಕದು ಎಂಬ ಕಾರಣಕ್ಕೆ ರಾಮನಗರ ಕಾರಾಗೃಹಕ್ಕೆ ಪಾದರಾಯನಪುರದ ಗಲಭೆಕೋರರನ್ನು ಸ್ಥಳಾಂತರಿಸಲಾಯಿತು. ಇದೊಂದು ಆಡಳಿತ ಕ್ರಮ. ಇದರ ಹಿಂದೆ ಇನ್ನಾವುದೇ ಉದ್ದೇಶವಿಲ್ಲ. ಕೊರೋನಾದಂತಹ ವಿಚಾರದಲ್ಲಿ ಪ್ರತಿಪಕ್ಷಗಳು ರಾಜಕೀಯ ಎಳೆದು ತರಬಾರದು’ ಎಂದು ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಹಾಗೂ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ತಿರುಗೇಟು ನೀಡಿದ್ದಾರೆ.

ಎಚ್‌ಡಿಕೆ ಆರೋಪ:

‘ನನ್ನ ಮೇಲಿನ ಕೋಪಕ್ಕೆ ನನ್ನ ಜನರಿಗೆ ತೊಂದರೆ ಕೊಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಆರೋಪಿಗಳನ್ನು ಸ್ಥಳಾಂತರ ಮಾಡುವುದು ಬೇಡ ಎಂದು ಹೇಳಿದ್ದೆ. ಆದರೆ ನನ್ನ ಮಾತನ್ನು ಸರ್ಕಾರ ಕೇಳಿಲ್ಲ. ಅಧಿಕಾರಿಗಳ ಉಡಾಫೆ ಮಾತನ್ನು ಕೇಳಿ ಸರ್ಕಾರ ಮುಜಗರಕ್ಕೊಳಗಾಗಬಾರದು. ಎಲ್ಲರೂ ಒಂದೇ ಧ್ವನಿಯಲ್ಲಿ ಹೋಗುತ್ತಿದ್ದೇವೆ. ಪದೇ ಪದೇ ತಪ್ಪು ಮಾಡಿದರೆ ಪ್ರತಿಪಕ್ಷವಾಗಿ ಸುಮ್ಮನೆ ಕೂರಲು ಸಾಧ್ಯವಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಇನ್ನು, ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿ, ‘ಬೆಂಗಳೂರಿನ ಪಾದರಾಯನಪುರದ ಗಲಭೆಕೋರರನ್ನು ರಾಮನಗರ ಕಾರಾಗೃಹಕ್ಕೆ ಸ್ಥಳಾಂತರಿಸುವ ಮೂಲಕ ರಾಜ್ಯ ಸರ್ಕಾರ ಅಕ್ಷಮ್ಯ ಅಪರಾಧವೆಸಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಅವರು ಹಾರಿಕೆಯ ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು ಜವಾಬ್ದಾರಿಯುತವಾಗಿ ವರ್ತಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಸಂಸದ ಡಿ.ಕೆ.ಸುರೇಶ್‌, ‘ರಾಮನಗರಕ್ಕೆ ಕೊರೋನಾ ಹಬ್ಬಿಸಲು ಮಾಡಿರುವ ಪಿತೂರಿ ಇದಾಗಿದೆ. ಪಾದರಾಯನಪುರ ಸೋಂಕಿತ ಆರೋಪಿಗಳನ್ನು ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರ ಮಾಡಿರುವುದು ಆಘಾತಕಾರಿ. ಸ್ಥಳಾಂತರ ಮಾಡುವ ತೀರ್ಮಾನವನ್ನು ಕೈ ಬಿಡುವಂತೆ ಕೋರಲಾಗಿತ್ತು. ಅದರೂ ಅದಕ್ಕೆ ಕಿವಿಕೊಡಲಿಲ್ಲ. ಆರೋಪಿಗಳನ್ನು ಪರೀಕ್ಷೆ ನಡೆಸದೆಯೇ ಕರೆತರಲಾಗಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

ಕೊರೋನಾ ಸಾವು: ಸ್ಮಶಾನದ ಬೀಗ ಒಡೆದು ಅಂತ್ಯಕ್ರಿಯೆ

ಹೆದರಬೇಕಿಲ್ಲ- ಬೊಮ್ಮಾಯಿ:

ಪ್ರತಿಪಕ್ಷ ನಾಯಕರ ಆರೋಪಗಳಿಗೆ ತಿರುಗೇಟು ನೀಡಿರುವ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ, ಪಾದರಾಯನಪುರ ಘಟನೆಯ ಆರೋಪಿಗಳನ್ನು ಸ್ಥಳಾಂತರ ಮಾಡಿದ್ದರಲ್ಲಿ ಯಾರದ್ದು ತಪ್ಪಿಲ್ಲ.. ರಾಮನಗರ ಜೈಲಿನಲ್ಲಿರುವ ಎಲ್ಲರನ್ನೂ ಪರೀಕ್ಷೆ ಮಾಡುತ್ತೇವೆ. ರಾಮನಗರದ ಜನ ಹೆದರಬೇಕಾಗಿಲ್ಲ. ಕೋರೋನಾ ಹೋರಾಟದಲ್ಲಿ ಬೇರೆ ಬೇರೆ ಆಯಾಮಗಳು ಬರುತ್ತಿರುತ್ತವೆ. ಸಂದರ್ಭಕ್ಕೆ ತಕ್ಕಂತೆ ಸರ್ಕಾರ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.

ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಮಾತನಾಡಿ, ಹಸಿರು ವಲಯ ರಾಮನಗರವನ್ನು ಕೆಂಪು ವಲಯ ಮಾಡುವ ದುರುದ್ದೇಶ ಇರಲಿಲ್ಲ. ಅಲ್ಲಿನ ಜನಪ್ರತಿನಿಧಿಗಳ ಮೇಲಿನ ದ್ವೇಷದಿಂದ ಹೀಗೆ ಮಾಡಿಲ್ಲ. ಪರಪ್ಪನ ಅಗ್ರಹಾರ ಜೈಲಿನಲ್ಲಿ ದೊಡ್ಡ ಸಂಖ್ಯೆಯ ಕೈದಿಗಳು ಇರುವುದರಿಂದ ಸಮೀಪದ ರಾಮನಗರ ಜೈಲಿಗೆ ಸಾಗಿಸುವ ನಿರ್ಧಾರಕ್ಕೆ ಬರಲಾಗಿತ್ತು ಎಂದು ಹೇಳಿದ್ದಾರೆ.

ಕೊರೋನಾದಿಂದ ಗುಣಮುಖ: ಸೋಂಕಿತ ಕಿಮ್ಸ್‌ನಿಂದ ಡಿಸ್ಚಾರ್ಜ್‌

ಈ ನಡುವೆ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಅವರು, ‘ಆರೋಪಿಗಳ ಸ್ಥಳಾಂತರ ನಿರ್ಧಾರ ಗೃಹ ಇಲಾಖೆಗೆ ಕೈಗೊಂಡಿದೆ. ಕ್ವಾರಂಟೈನ್‌ ನಿರ್ಧಾರ ಮಾತ್ರ ನಮ್ಮ ಇಲಾಖೆಯಿಂದ ಕೈಗೊಳ್ಳಲಾಗುತ್ತದೆ. ಹಸಿರು ವಲಯದಲ್ಲಿರುವ ರಾಮನಗರಕ್ಕೆ ಆರೋಪಿಗಳನ್ನು ಸ್ಥಳಾಂತರ ಮಾಡುವುದನ್ನು ತಪ್ಪಿಸಬಹುದಾಗಿತ್ತು. ಬೆಂಗಳೂರು ಅಥವಾ ಚಿಕ್ಕಬಳ್ಳಾಪುರಕ್ಕೆ ಆರೋಪಿಗಳನ್ನು ಸ್ಥಳಾಂತರ ಮಾಡಬಹುದಿತ್ತು’ ಎಂದು ಹೇಳಿದ್ದಾರೆ.

Latest Videos
Follow Us:
Download App:
  • android
  • ios