Asianet Suvarna News Asianet Suvarna News

ಅಲರ್: ಕನ್ನಡ ಪದಗಳ ಹುಡುಕಾಟಕ್ಕೊಂದು ಆನ್‌ಲೈನ್ ತಾಣ..!

ಅಲರ್‌ ವೆಬ್‌ಸೈಟ್‌ ಕನ್ನಡ ಕಂಪು | ಶಬ್ದಗಳ ಸಂಗ್ರಹ, ಅರ್ಥ, ವಿವರಣೆ | ಇತರ ಶಬ್ದಕೋಶಗಳಲ್ಲಿ ಶಬ್ದ-ಅರ್ಥ ಮಾತ್ರವಿದ್ದರೆ ಇಲ್ಲಿದೆ ವಿವರಣೆ, ಗಾದೆಗಳು

Alar website to search kannda words dpl
Author
Bangalore, First Published Nov 1, 2020, 9:34 AM IST

ಪ್ರಿಯಾ ಕೆರ್ವಾಶೆ

ಆಸಕ್ತಿಗಾಗಿ ಆರಂಭಿಸಿದೆ, ಶಬ್ದಕೋಶ ಬೆಳೆಯುತ್ತಾ ಹೋಯಿತು : ವಿ ಕೃಷ್ಣ

ವಿ ಕೃಷ್ಣ ಅವರೀಗ 70 ವರ್ಷ ವಯಸ್ಸು. ಬಿಕಾಂ ಓದಿ ವಿವಿಧ ಕಂಪೆನಿಗಳಲ್ಲಿ ದುಡಿಯುತ್ತಲೇ ಹವ್ಯಾಸವಾಗಿ ಕನ್ನಡ ಶಬ್ದಕೋಶ ಕೆಲಸ ಮಾಡುತ್ತಿದುದು. 1974ರ ಸುಮಾರಿಂದ 2010ರವರೆಗೆ ಈ ರೀತಿ ಸಂಗ್ರಹಿಸಿದ ಪದಗಳು, ವಿವರಣೆಗಳು, ಗಾದೆಗಳು ಒಟ್ಟಾಗಿ ಒಂದೂವರೆ ಲಕ್ಷಗಳಷ್ಟಾದವು. ಕರ್ನಾಟಕ ಸಾಹಿತ್ಯ ಪರಿಷತ್‌ ಇದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿತು. ಇವರ ಮೂರು ಸಂಪುಟಗಳ ನಿಘಂಟಿನ ಸಂಕ್ಷಿಪ್ತ ಆವೃತ್ತಿಯನ್ನು ವಸಂತ ಪ್ರಕಾಶನದವರು ಇತ್ತೀಚೆಗೆ ಹೊರತಂದಿದ್ದಾರೆ. ಈಗ ಅಲರ್‌ ವೆಬ್‌ಸೈಟ್‌ನಲ್ಲಿ ಸಮಗ್ರವಾಗಿ ಲಭ್ಯವಿದೆ.

- ಇಂಥದ್ದೊಂದು ಅನನ್ಯವೆನಿಸುವ ಶಬ್ದಕೋಶದ ಅಗತ್ಯತೆಯನ್ನು ಹೇಗೆ ಕಂಡುಕೊಂಡಿರಿ?

ಆರಂಭದಲ್ಲಿ ನನ್ನ ಆಸಕ್ತಿಗಾಗಿ ಶಬ್ದಗಳ ಸಂಗ್ರಹ, ಅರ್ಥ, ವಿವರಣೆಯಲ್ಲಿ ತೊಡಗಿಸಿಕೊಂಡಿದ್ದೆ. ಆಗ ಬಿಕಾಂ ಮುಗಿಸಿ ಇಂಡಿಯನ್‌ ಅಗ್ರಿಕಲ್ಚರಲ… ರೀಸಚ್‌ರ್‍ ಇನ್ಸ್‌ಟಿಟ್ಯೂಟ್‌ನ ಮಣ್ಣು ವಿಶ್ಲೇಷಣೆ ಕೇಂದ್ರದಲ್ಲಿ ಉದ್ಯೋಗ ಆರಂಭಿಸಿದೆ. ಆಗ ಇಂಗ್ಲಿಷ್‌ನಲ್ಲಿ ಅಷ್ಟಾಗಿ ಹಿಡಿತವಿರಲಿಲ್ಲ. ಆದರೆ ಇಲ್ಲಿ ಹೆಚ್ಚಿನ ವ್ಯವಹಾರ ಇಂಗ್ಲೀಷ್‌ನಲ್ಲೇ ನಡೆಯುತ್ತಿತ್ತು. ಆಗ ನಮ್ಮ ನಿರ್ದೇಶಕರ ಮಾತಿನಂತೆ ಇಂಗ್ಲೀಷ್‌-ಕನ್ನಡ ನಿಘಂಟು ಕೊಂಡುಕೊಂಡೆ. ಕ್ರಮೇಣ ಬೇರೆ ಬೇರೆ ಶಬ್ದಕೋಶಗಳನ್ನು ಗಮನಿಸಲಾರಂಭಿಸಿದೆ. ಬಹುಶಃ ಆ ದಿನಗಳಲ್ಲಿ ನನಗೆ ಈ ಶಬ್ದಕೋಶದ ಬಗ್ಗೆ ಆಸಕ್ತಿ ಶುರುವಾಯಿತು. ಕ್ರಮೇಣ ಅದು ಬೆಳೆಯುತ್ತಾ ಹೋಯಿತು.

ದುಬೈನಲ್ಲಿ ಕನ್ನಡ ಕಂಪು...! ವಾರದ ರಜೆಯಲ್ಲಿ ಕುಳಿತು ಕನ್ನಡ ಕಲೀತಾರೆ ಪುಟ್ಟ ಮಕ್ಕಳು

ಆರಂಭದಲ್ಲಿ ಇಂಥದ್ದೊಂದು ಶಬ್ದಕೋಶ ರಚನೆಯ ಇರಾದೆ ಇರಲಿಲ್ಲ. ಕ್ರಮೇಣ ಶಬ್ದ ಸಂಗ್ರಹ ಅಧಿಕವಾದಾಗ ಇದಕ್ಕೊಂದು ಪುಸ್ತಕ ರೂಪ ಕೊಡಲಾಯಿತು. 2015ರಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್‌ ಅದನ್ನು ಪ್ರಕಟಿಸಿತು. ಇತ್ತೀಚೆಗೆ ವಸಂತ ಪ್ರಕಾಶನ ನಿಘಂಟಿನ ಸಂಕ್ಷಿಪ್ತ ಆವೃತ್ತಿ ಪ್ರಕಟಿಸಿದ್ದಾರೆ. ಈಗ ಅಲರ್‌ ವೆಬ್‌ಸೈಟ್‌ನಲ್ಲಿ ವಿ ಕೃಷ್ಣ ಕನ್ನಡ ಇಂಗ್ಲೀಷ್‌ ಶಬ್ದಕೋಶ ಲಭ್ಯವಿದೆ.

- ಇದರಲ್ಲಿ ಶಬ್ದಗಳ ಅರ್ಥದ ಜೊತೆಗೆ ಸಾಮ್ಯತೆ ಇರುವ ಇತರ ಶಬ್ದಗಳ ಅರ್ಥಗಳೂ ಇವೆ..

ಹೌದು. ಒಂದು ಶಬ್ದ ಬರೆವಾಗ ಅದರ ಜೊತೆಗೆ ಅಕ್ಷರ, ಅರ್ಥ ಸಾಮ್ಯತೆ ಇರುವ ಇನ್ನೊಂದಿಷ್ಟುಶಬ್ದಗಳೂ ಸಿಕ್ಕವು. ಅವನ್ನಿಲ್ಲಿ ಸೇರಿಸಿದ್ದೇನೆ. ಜೊತೆಗೆ ಆ ಶಬ್ದಕ್ಕೆ ಸಂಬಂಧಿಸಿದ ಗಾದೆಗಳನ್ನೂ ಹಾಕಿದ್ದೇನೆ. ಇತರ ಶಬ್ದಕೋಶಗಳಲ್ಲಿ ಶಬ್ದ-ಅರ್ಥ ಮಾತ್ರವಿದ್ದರೆ ಇಲ್ಲಿ ವಿವರಣೆಗಳಿವೆ. ಗಾದೆಗಳನ್ನೂ ಸೇರಿಸಿದ್ದೇನೆ. ಅದೊಂದು ಹೊಸ ಪ್ರಯತ್ನ.

- ಇಂಥಾದ್ದೊಂದು ಶಬ್ದಕೋಶ ತಯಾರಿಸುವಾಗಿನ ತಮ್ಮ ಅನುಭವಗಳನ್ನು ದಾಖಲಿಸಬಹುದೇ?

ನಾನಿದನ್ನು ಹವ್ಯಾಸವಾಗಿ ಆರಂಭಿಸಿದ್ದು. ಹೊಟ್ಟೆಪಾಡಿಗೆ ಇತರೇ ಉದ್ಯೋಗ ಮಾಡುತ್ತಿದ್ದೆ. ನಡುವೆ ಸಮಯ ಸಿಕ್ಕಾಗಲೆಲ್ಲ ಶಬ್ದಾರ್ಥ ಸಂಗ್ರಹದಲ್ಲಿ ತೊಡಗುತ್ತಿದ್ದೆ. ಆಮೇಲೆ ಕನ್ನಡ, ಇಂಗ್ಲೀಷ್‌ ಸಾಹಿತ್ಯ ಅಧ್ಯಯನಕ್ಕೆ ತೊಡಗಿದಾಗ ಈ ಕಾರ್ಯದಲ್ಲಿ ಇನ್ನಷ್ಟುಆಸಕ್ತಿ ಬಂತು. ಹಾಗಾಗಿ ಕೆಲಸ ಮುಂದುವರಿಸಿದೆ. ಹಾಗೆಂದು ಇದಕ್ಕಾಗಿ ಕ್ಷೇತ್ರಕಾರ್ಯ ಏನೂ ಮಾಡಿಲ್ಲ. ನನ್ನ ಸಮಯದ, ಅವಕಾಶಗಳ ಮಿತಿಯೊಳಗೇ ಕೆಲಸ ಮಾಡುತ್ತಾ ಬಂದೆ. ಕಳೆದ ಹತ್ತು ವರ್ಷಗಳಿಂದ ಈ ಸಂಗ್ರಹಕ್ಕೆ ಒಂದು ರೂಪುಕೊಟ್ಟು ದಾಖಲಿಸುತ್ತಾ ಬಂದೆ. ಅಷ್ಟಾದರೂ ನನಗೆ ಇದನ್ನು ಪ್ರಕಟಿಸುವ ಧೈರ್ಯ ಇರಲಿಲ್ಲ. ಒಮ್ಮೆ ಡಾ ಟಿ ವಿ ವೆಂಕಟಾಚಲ ಶಾಸ್ತ್ರಿ ಅವರಿಗೆ ತೋರಿಸಿದೆ. ಅವರು ಮೆಚ್ಚುಗೆಯ ಮಾತುಗಳನ್ನು ಹೇಳಿದರು. ಆಮೇಲೆ ಪ್ರೊ ಜಿ. ವೆಂಕಟಸುಬ್ಬಯ್ಯ ಅವರನ್ನು ಭೇಟಿಯಾಗುವ ಸಂದರ್ಭ ಬಂತು. ಅವರೂ ಮೆಚ್ಚಿದರು. ಆಮೇಲೆ ಇದನ್ನು ಕರ್ನಾಟಕ ಸಾಹಿತ್ಯ ಪರಿಷತ್‌ನವರು ಪ್ರಕಟ ಮಾಡಿದರು.

- ಆಕ್ಸ್‌ಪರ್ಡ್‌ ಡಿಕ್ಷನರಿಗಳಲ್ಲೆಲ್ಲ ಪ್ರತಿವರ್ಷ ಹೊಸ ಹೊಸ ಪದಗಳು ಸೇರ್ಪಡೆಗೊಳ್ಳುತ್ತಲೇ ಇರುತ್ತವೆ. ಈ ಶಬ್ದಕೋಶದಲ್ಲಿ ಅಂಥಾ ಶಬ್ದಗಳ ಸೇರ್ಪಡೆಗೆ ಅವಕಾಶವಿದೆಯಾ?

ಹೊಸತೊಂದು ಶಬ್ದ ಹುಟ್ಟಿ, ಅದು ಜನರಿಗೆ ಹತ್ತಿರವಾಗಿ ಬಳಕೆಯಲ್ಲಿ ಬಂದಾಗ ಆ ಶಬ್ದ ಉಳಿದುಕೊಳ್ಳುತ್ತದೆ. ಆದರೆ ಮಿಂಚಂಚೆಯಂಥಾ ಹೊಸ ಶಬ್ದಗಳು ಕನ್ನಡದಲ್ಲಿ ಬಂದರೂ ಜನ ಇಮೇಲ್‌ ಅನ್ನೋ ಪದವನ್ನೇ ಹೆಚ್ಚು ಬಳಕೆ ಮಾಡುತ್ತಿದ್ದಾರೆ. ಬಳಕೆ ಕಡಿಮೆಯಾದರೆ ಆ ಶಬ್ದಗಳು ಉಳಿಯೋ ಸಾಧ್ಯತೆ ಕಡಿಮೆ.

ಮಾತು ಮಾತು ಮಥಿಸಿ ಅಧ್ಯಕ್ಷರ ಪದವಿ;ಇದು ಅಮೆರಿಕನ್‌ ತಾಳಮದ್ದಲೆ!

ಇನ್ನು ಈ ಶಬ್ದಕೋಶಕ್ಕೆ ಹೊಸ ಪದಗಳ ಸೇರ್ಪಡೆಯನ್ನು ವಿಶ್ವವಿದ್ಯಾಲಯವೋ, ಸಾಹಿತ್ಯ ಪರಿಷತ್ತೋ ಮಾಡಿದರೆ ಉತ್ತಮ. ನನ್ನಿಂದ ಸಾಧ್ಯವಾದಷ್ಟುಕೆಲಸವನ್ನು ನಾನು ಈಗಾಗಲೇ ಮಾಡಿದ್ದೇನೆ. ನನಗೀಗ 70 ವರ್ಷ. ಇನ್ನು ಇದರ ಮುಂದುವರಿಕೆ ನನ್ನೊಬ್ಬನಿಂದ ಆಗುವುದು ಕಷ್ಟ. ಈ ಕೆಲಸಕ್ಕೆಂದೇ ಒಂದು ಸಮಿತಿ ರಚನೆಯಾಗಿ, ಅದರಿಂದ ಈ ಕಾರ್ಯ ಮುಂದುವರಿಯಬೇಕು.

Follow Us:
Download App:
  • android
  • ios