Asianet Suvarna News Asianet Suvarna News

ಸರಣಿ ಜಯಕ್ಕೆ ಮೊಹಾಲಿ ವೇದಿಕೆ? ಅವಕಾಶದ ನಿರೀಕ್ಷೆಯಲ್ಲಿ ರಾಹುಲ್‌

ಇಲ್ಲಿನ ಪಂಜಾಬ್‌ ಕ್ರಿಕೆಟ್‌ ಸಂಸ್ಥೆ (ಪಿಸಿಎ) ಕ್ರೀಡಾಂಗಣದಲ್ಲಿ ಭಾನುವಾರ ಆಸೀಸ್‌ ವಿರುದ್ಧ 4ನೇ ಏಕದಿನ ಪಂದ್ಯ ನಡೆಯಲಿದ್ದು, 5 ಪಂದ್ಯಗಳ ಸರಣಿಯಲ್ಲಿ 2-1ರಲ್ಲಿ ಮುಂದಿರುವ ಭಾರತ ಸರಣಿ ವಶಪಡಿಸಿಕೊಳ್ಳುವುದರ ಜತೆಗೆ ವಿಶ್ವಕಪ್‌ ತಂಡಕ್ಕೆ ಅಗತ್ಯವಿರುವ ಆಟಗಾರರ ಅಂತಿಮ ಸುತ್ತಿನ ಪರೀಕ್ಷೆ ನಡೆಸಲು ಎದುರು ನೋಡುತ್ತಿದೆ.

India Gunning For Series Clinching Win against Australia
Author
Mohali, First Published Mar 10, 2019, 12:23 PM IST

ಮೊಹಾಲಿ[ಮಾ.10]: ವಿಶ್ವಕಪ್‌ ಹತ್ತಿರವಾಗುತ್ತಿದ್ದಂತೆ ಭಾರತ ತಂಡದಲ್ಲಿ ಹೊಸ ಸಮಸ್ಯೆ ಶುರುವಾಗಿದೆ. ಆಸ್ಪ್ರೇಲಿಯಾ ವಿರುದ್ಧ ಸರಣಿಯಲ್ಲಿ ಮಧ್ಯಮ ಕ್ರಮಾಂಕದ ಸಾಮರ್ಥ್ಯ ಪರೀಕ್ಷಿಸುವ ಲೆಕ್ಕಾಚಾರದಲ್ಲಿದ್ದ ನಾಯಕ ವಿರಾಟ್‌ ಕೊಹ್ಲಿ ಹಾಗೂ ಕೋಚ್‌ ರವಿಶಾಸ್ತ್ರಿಗೆ ಅಗ್ರ ಕ್ರಮಾಂಕದ ವೈಫಲ್ಯ ತಲೆನೋವು ತಂದಿದೆ. ಈ ನಡುವೆ ಮೀಸಲು ಆಟಗಾರರನ್ನು ಆಯ್ಕೆ ಮಾಡುವ ಗೊಂದಲ ಸಹ ಮುಂದುವರಿದಿದೆ.

ಇಲ್ಲಿನ ಪಂಜಾಬ್‌ ಕ್ರಿಕೆಟ್‌ ಸಂಸ್ಥೆ (ಪಿಸಿಎ) ಕ್ರೀಡಾಂಗಣದಲ್ಲಿ ಭಾನುವಾರ ಆಸೀಸ್‌ ವಿರುದ್ಧ 4ನೇ ಏಕದಿನ ಪಂದ್ಯ ನಡೆಯಲಿದ್ದು, 5 ಪಂದ್ಯಗಳ ಸರಣಿಯಲ್ಲಿ 2-1ರಲ್ಲಿ ಮುಂದಿರುವ ಭಾರತ ಸರಣಿ ವಶಪಡಿಸಿಕೊಳ್ಳುವುದರ ಜತೆಗೆ ವಿಶ್ವಕಪ್‌ ತಂಡಕ್ಕೆ ಅಗತ್ಯವಿರುವ ಆಟಗಾರರ ಅಂತಿಮ ಸುತ್ತಿನ ಪರೀಕ್ಷೆ ನಡೆಸಲು ಎದುರು ನೋಡುತ್ತಿದೆ. ವಿಶ್ರಾಂತಿ ಬಯಸಿ ಕೊನೆ 2 ಪಂದ್ಯಗಳಿಂದ ಹೊರಗುಳಿಯಲಿರುವ ಎಂ.ಎಸ್‌.ಧೋನಿ ಸ್ಥಾನದಲ್ಲಿ ರಿಷಭ್‌ ಪಂತ್‌ ಆಡಲಿದ್ದು, ವಿಶ್ವಕಪ್‌ ತಂಡದಲ್ಲಿ ಸ್ಥಾನ ಗಿಟ್ಟಿಸಲು ಪ್ರಯತ್ನಿಸಲಿದ್ದಾರೆ.

ಇದೇ ವೇಳೆ ಭುವನೇಶ್ವರ್‌ ಕುಮಾರ್‌ ಈ ಪಂದ್ಯದಲ್ಲಿ ಆಡುವುದು ಬಹುತೇಕ ಖಚಿತವಾಗಿದೆ. 3ನೇ ಪಂದ್ಯದಲ್ಲಿ ಬೌಲಿಂಗ್‌ ವೇಳೆ ಮೊಹಮದ್‌ ಶಮಿ ಕಾಲಿಗೆ ಚೆಂಡು ತಗುಲಿತ್ತು. ಶಮಿ ತಮ್ಮ ಸ್ಪೆಲ್‌ ಪೂರ್ಣಗೊಳಿಸಿದರೂ, ಅವರಿಗೆ ವಿಶ್ರಾಂತಿ ನೀಡಲು ತಂಡ ನಿರ್ಧರಿಸಿದೆ ಎನ್ನಲಾಗಿದೆ.

ಇದೆಲ್ಲದ್ದಕ್ಕಿಂತ ಹೆಚ್ಚಾಗಿ ತಂಡದ ಅಗ್ರ ಕ್ರಮಾಂಕದ ಲಯದ ಸಮಸ್ಯೆ ಕೊಹ್ಲಿಯಲ್ಲಿ ಆತಂಕ ಮೂಡಿಸಿದೆ. ವಿರಾಟ್‌ ಹೊರತುಪಡಿಸಿ ಉಳಿದ ಮೂವರು ರನ್‌ ಗಳಿಸಲು ತಿಣುಕಾಡುತ್ತಿದ್ದಾರೆ. ರೋಹಿತ್‌ ಶರ್ಮಾ 3 ಇನ್ನಿಂಗ್ಸ್‌ಗಳಿಂದ ಕೇವಲ 51 ರನ್‌ ಗಳಿಸಿದ್ದಾರೆ. ಶಿಖರ್‌ ಧವನ್‌ 3 ಪಂದ್ಯಗಳಿಂದ 22 ರನ್‌ ಕಲೆಹಾಕಿದರೆ, 4ನೇ ಕ್ರಮಾಂಕದಲ್ಲಿ ಆಡುವ ಅಂಬಟಿ ರಾಯುಡು ಬ್ಯಾಟ್‌ನಿಂದ ಕೇವಲ 33 ರನ್‌ ದಾಖಲಾಗಿದೆ. ಈ ಮೂವರೂ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತ ಎನಿಸಿರುವ ಕಾರಣ, ತಂಡದಲ್ಲಿ ಆತಂಕ ಹೆಚ್ಚುತ್ತಿದೆ. ಟಿ20 ಸರಣಿಯಲ್ಲಿ ಆಕರ್ಷಕ ಆಟವಾಡಿದ್ದ ಕೆ.ಎಲ್‌.ರಾಹುಲ್‌ ಅವಕಾಶಕ್ಕಾಗಿ ಕಾತರಿಸುತ್ತಿದ್ದಾರೆ. ಆದರೆ ಧವನ್‌ ಇಲ್ಲವೇ ರಾಯುಡು ಇಬ್ಬರಲ್ಲಿ ಯಾರ ಬದಲಿಗೆ ರಾಹುಲ್‌ಗೆ ಸ್ಥಾನ ನೀಡಬೇಕು ಎನ್ನುವ ಗೊಂದಲ ತಂಡವನ್ನು ಕಾಡುತ್ತಿದೆ. ರಾಹುಲ್‌ ಒಬ್ಬ ಆರಂಭಿಕ ಬ್ಯಾಟ್ಸ್‌ಮನ್‌ ಆದರೂ ಅವಶ್ಯಕತೆ ಇದ್ದರೆ ಮಧ್ಯಮ ಕ್ರಮಾಂಕದಲ್ಲೂ ಆಡಬಲ್ಲರು. ಆದರೆ ತಂಡ ಪ್ರಯೋಗಕ್ಕೆ ಮುಂದಾಗಲು ಹಿಂದೇಟು ಹಾಕುತ್ತಿದ್ದು, ರನ್‌ ಗಳಿಸಲು ಕೊಹ್ಲಿ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ.

ಕೇದಾರ್‌ ಜಾಧವ್‌ ಹಾಗೂ ವಿಜಯ್‌ ಶಂಕರ್‌ ಬ್ಯಾಟಿಂಗ್‌ ಜತೆ ಬೌಲಿಂಗ್‌ನಲ್ಲೂ ಕೊಡುಗೆ ನೀಡುತ್ತಿದ್ದಾರೆ, ಆದರೆ ಇಬ್ಬರಿಂದ ಮತ್ತಷ್ಟು ಸ್ಥಿರತೆಯನ್ನು ತಂಡ ನಿರೀಕ್ಷಿಸುತ್ತಿದೆ. ಕುಲ್ದೀಪ್‌ ಜತೆ ಯುಜುವೇಂದ್ರ ಚಹಲ್‌ ಸಹ ಕಣಕ್ಕಿಳಿಯುವ ನಿರೀಕ್ಷೆ ಇದೆ.

ಆಸೀಸ್‌ಗೆ ಸಮಬಲ ಸಾಧಿಸುವ ಗುರಿ: ರಾಂಚಿ ಗೆಲುವು ಕಾಂಗರೂ ಪಾಳಯದಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ಫಿಂಚ್‌ ಹಾಗೂ ಖವಾಜ ಲಯಕ್ಕೆ ಮರಳಿರುವುದು ತಂಡ ಸಮತೋಲನ ಕಾಯ್ದುಕೊಳ್ಳಲು ನೆರವಾಗಿದ್ದು, ಶಾನ್‌ ಮಾರ್ಷ್ ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್‌ರಿಂದ ಜವಾಬ್ದಾರಿಯುತ ಆಟ ನಿರೀಕ್ಷೆ ಮಾಡಲಾಗುತ್ತಿದೆ. ಪೀಟರ್‌ ಹ್ಯಾಂಡ್ಸ್‌ಕಂಬ್‌ ಮಧ್ಯಮ ಕ್ರಮಾಂಕದ ಆಧಾರಸ್ತಂಭ ಎನಿಸಿದ್ದಾರೆ. ಸರಣಿಯಲ್ಲಿ ಅವರು ದೊಡ್ಡ ಮಟ್ಟದಲ್ಲಿ ಪ್ರಾಬಲ್ಯ ಸಾಧಿಸಲು ಸಾಧ್ಯವಾಗಿಲ್ಲವಾದರೂ, ಅವರ ಉಪಸ್ಥಿತಿ ಭಾರತೀಯರಲ್ಲಿ ಆತಂಕ ಮೂಡಿಸಿರುವುದು ಸುಳ್ಳಲ್ಲ.

ಭಾರತಕ್ಕೆ ಲೆಗ್‌ ಸ್ಪಿನ್ನರ್‌ ಆ್ಯಡಂ ಜಂಪಾ ಬಹುವಾಗಿ ಕಾಡುತ್ತಿದ್ದಾರೆ. ಪ್ರಮುಖವಾಗಿ ಕೊಹ್ಲಿ ವಿಕೆಟನ್ನು ಒಂದಕ್ಕಿಂತ ಹೆಚ್ಚು ಬಾರಿ ಕಬಳಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಆಸ್ಪ್ರೇಲಿಯಾ ವೇಗಿಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣದಿದ್ದರೂ, ಭಾರತೀಯ ಆರಂಭಿಕರು ಕಳಪೆ ಆಟವಾಡುತ್ತಿರುವ ಕಾರಣ ಪರಿಣಾಮಕಾರಿಯಾಗಿ ತೋರುತ್ತಿದ್ದಾರೆ. ಆಸ್ಪ್ರೇಲಿಯಾ ಈ ಪಂದ್ಯವನ್ನು ಗೆದ್ದು ಸರಣಿಯಲ್ಲಿ 2-2ರಲ್ಲಿ ಸಮಬಲ ಸಾಧಿಸುವ ಮೂಲಕ, ಅಂತಿಮ ಪಂದ್ಯದ ಕುತೂಹಲ ಹೆಚ್ಚಿಸುವ ಗುರಿ ಹೊಂದಿದೆ.

ಸಂಭವನೀಯ ತಂಡಗಳ ಪಟ್ಟಿ

ಭಾರತ: ಶಿಖರ್‌ ಧವನ್‌, ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ (ನಾಯಕ), ಅಂಟಟಿ ರಾಯುಡು, ರಿಷಭ್‌ ಪಂತ್‌, ಕೇದಾರ್‌ ಜಾಧವ್‌, ವಿಜಯ್‌ ಶಂಕರ್‌, ಭುವನೇಶ್ವರ್‌ ಕುಮಾರ್‌, ಕುಲ್ದೀಪ್‌ ಯಾದವ್‌, ಯುಜುವೇಂದ್ರ ಚಹಲ್‌, ಮೊಹಮದ್‌ ಶಮಿ/ಜಸ್‌ಪ್ರೀತ್‌ ಬೂಮ್ರಾ.

ಆಸ್ಪ್ರೇಲಿಯಾ: ಉಸ್ಮಾನ್‌ ಖವಾಜ, ಆ್ಯರೋನ್‌ ಫಿಂಚ್‌(ನಾಯಕ), ಶಾನ್‌ ಮಾಷ್‌ರ್‍, ಪೀಟರ್‌ ಹ್ಯಾಂಡ್ಸ್‌ಕಂಬ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಮಾರ್ಕಸ್‌ ಸ್ಟೋಯ್ನಿಸ್‌, ಅಲೆಕ್ಸ್‌ ಕಾರ್ರಿ, ಪ್ಯಾಟ್‌ ಕಮಿನ್ಸ್‌, ನೇಥನ್‌ ಲಯನ್‌, ಜಾಯಿ ರಿಚರ್ಡ್‌ಸನ್‌, ಆ್ಯಡಂ ಜಂಪಾ.

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

Follow Us:
Download App:
  • android
  • ios