Asianet Suvarna News Asianet Suvarna News

ಫ್ಲರ್ಟ್ ಬಾಯ್ ಜೊತೆ ಈಕೆಗೆ ಲವ್; ಹೊಟ್ಟೆಯೊಳಗೆ ಚಿಟ್ಟೆ ಓಡಾಡಲು ಶುರು..!

ಆ ಫ್ಲರ್ಟ್‌ ಬಾಯ್‌ಯ ಜೊತೆಗೆ ಈ ನನ್ನ ಮನಸಿಗೆ ಏನು ಕೆಲಸ!

about One tender love story begins
Author
Bangalore, First Published Jan 7, 2020, 4:10 PM IST

‘ರೋಶ್‌..’
ನಾನು ಅವನನ್ನು ಕರೆಯುತ್ತಿದ್ದದ್ದೇ ಹಾಗೆ. ಅವನೆದುರಿಗಲ್ಲ, ನನ್ನೊಳಗೇ. ಅವನ ಪೂರ್ತಿ ಹೆಸರು ರೋಶನ್‌ ಫೆರ್ನಾಂಡಿಸ್‌. ಆರಡಿಗೆ ಕೆಲವು ಇಂಚು ಕಮ್ಮಿ ಅವನ ಹೈಟ್‌. ಕೃಷ್ಣ ಸುಂದರ. ಕಣ್ಣುಗಳನ್ನೇ ದಿಟ್ಟಿಸಿ ನೋಡುತ್ತಾ ಮಾತನಾಡುವ ಅವನ ಧಾಟಿಯಲ್ಲಿ ಆತ್ಮವಿಶ್ವಾಸ ಎದ್ದು ಕಾಣುತ್ತಿತ್ತು. ಅವನೊಬ್ಬ ಫ್ಲರ್ಟ್‌ ಬಾಯ್‌ ಅಂದುಕೊಂಡಿದ್ದೆ ಶುರು ಶುರುವಿಗೆ. ಆ ಫೀಲ್‌ ನನ್ನೊಳಗೇ ಸಣ್ಣ ಅಸಹನೆ ಹುಟ್ಟು ಹಾಕುತ್ತಿತ್ತು. ಆದರೆ ಯಾವತ್ತೂ ಅದನ್ನು ತೋರಿಸಿಕೊಳ್ಳುತ್ತಿರಲಿಲ್ಲ. ಏನೂ ಆಗಿಲ್ಲ ಅನ್ನೋ ಹಾಗೆ, ಎಂದಿಗಿಂತಲೂ ಹೆಚ್ಚು ನಗು ಕಣ್ಣಲ್ಲೇ ತುಂಬಿಕೊಂಡು ಅವನತ್ತ ನೋಡುತ್ತಿದ್ದೆ, ಅವನ ಬಳಿ ಮಾತಾಡಿದ್ದು ಕಡಿಮೆ. ಯಾಕಂದರೆ ಅವನನ್ನು ಮಾತನಾಡಿಸಿದರೆ ಎಲ್ಲಿ ನನ್ನೊಳಗೆ ಅವನ ಬಗ್ಗೆ ಇರುವ ಆ ಫೀಲ್‌ ಎಲ್ಲಿ ಕಳೆದುಕೊಂಡು ಬಿಡುತ್ತೇನೋ ಅನ್ನೋ ಭಯ ನಂಗೆ.

ಕಿಸ್ಸಿನ ಕಿಮ್ಮತ್ತು ಏನ್ ಗಮ್ಮತ್ತು; ಕೊಟ್ಟು ಬಿಡಿ ಮುತ್ತು!

ಎರಡನೇ ವರ್ಷದ ಡಿಗ್ರಿಯಲ್ಲಿದ್ದಾಗ ಅವನನ್ನು ಮೊದಲು ನೋಡಿದ್ದು. ನಮ್ಮ ಕಾಲೇಜಿನ ಅಷ್ಟು ಸಾವಿರ ಹುಡುಗರ ನಡುವೆ ಈತ ನನ್ನ ಕಣ್ಣಿಗೆ ಬೀಳಲು ಅಷ್ಟು ಟೈಮ್‌ ಹಿಡಿದಿದ್ದರಲ್ಲಿ ಅಂಥಾ ಆಶ್ಚರ್ಯ ಏನೂ ಇಲ್ಲ. ಲೈಬ್ರೆರಿಯಲ್ಲಿ ಅವತ್ತಿದ್ದ ಪ್ರಾಜೆಕ್ಟ್ ವರ್ಕ್‌ಗೆ ಬೇಕಾದ ಬುಕ್‌ ಹುಡುಕುತ್ತಿದ್ದೆ. ಅತ್ತಲಿಂದ ಯಾರೋ ಒಬ್ಬ  ಇಣುಕಿದ ಹಾಗಾಯ್ತು, ನನ್ನ ಭ್ರಮೆ ಅಂದುಕೊಂಡು ಸುಮ್ಮನಾದೆ. ಆದರೂ ಯಾವುದೋ ಕಣ್ಣುಗಳು ನನ್ನನ್ನೇ ದಿಟ್ಟಿಸುತ್ತಿವೆ ಅಂತಲೇ ಅನಿಸುತ್ತಿತು. ತಡೆಯಲಾಗಲಿಲ್ಲ. ಸದ್ದಿಲ್ಲದ ಹಾಗೆ ಬುಕ್‌ ಮುಚ್ಚಿಟ್ಟು ಮೇಲೆದ್ದೆ. ಪಕ್ಕದ ಪುಸ್ತಕಗಳ ಸಾಲಿನಲ್ಲಿ ಒಬ್ಬನೇ ಹುಡುಗ ನಿಂತು ಯಾವುದೋ ಪುಸ್ತಕ ಹುಡುಕುವವನ ಹಾಗೆ ನಿಂತಿದ್ದ. ಆಕಸ್ಮಿಕ ಎಂಬಂತೆ ನನ್ನತ್ತ ತಿರುಗಿದ. ಕಣ್ಣಲ್ಲಿ ಕಿಡಿಗೇಡಿ ನಗುವಿತ್ತು. ಅನಿರೀಕ್ಷಿತ ನೋಟಕ್ಕೆ ಏನು ಮಾಡಲೂ ತೋಚದೇ ಪುಸ್ತಕ ನೋಡುವವಳಂತೆ ನಟಿಸುತ್ತ ಮುಂದೆ ಹೋದೆ. ಅವನು ನೋಡಿದ ರೀತಿ ಮನಸ್ಸಿಗೆ ಒಂಥರಾ ಅನಿಸಿತ್ತು. ಕಾಲೇಜ್‌ನಲ್ಲಿ ನನಗೆ ಸಾಕಷ್ಟು ಜನ ಹುಡುಗರು ಫ್ರೆಂಡ್ಸ್‌ ಇದ್ದಾರೆ. ನಿಸ್ಸಂಕೋಚವಾಗಿ ಅವರ ಹೆಗಲಿಗೆ ಕೈ ಹಾಕಿ ಮಾತಾಡುವ ನನಗೆ ಈ ಹುಡುಗನ ಹತ್ರ ಮಾತಾಡೋದಿರಲಿ, ಸರಿ ನೋಡೋದಕ್ಕೂ ಒಂಥರಾ ಅನಿಸುತ್ತಿತ್ತು.

ಹೊಸ ವರ್ಷದ ಹೊಸ್ತಿಲಲ್ಲಿ ಮೆರವಣಿಗೆ ಹೊಂಟಿವೆ ಮರೆತ ಸಂಬಂಧದ ನೆನಪು

ನಿನ್ನೆ ಒಂದು ಘಟನೆ ನಡೆಯಿತು. ಆ ಬಳಿಕ ನಾನು ನಾನಾಗಿ ಉಳಿದಿಲ್ಲ. ಕಾಲೇಜ್‌ಗೆ ಹೋಗೋದೂ ಬೇಡ, ಸುಮ್ಮನೆ ಯಾವುದೋ ಕನಸಿನಲ್ಲಿ ಕಳೆದುಹೋಗಿ ಬಿಡೋಣ ಅಂತಲೇ ಅನಿಸುತ್ತಿದೆ. 

ನಿನ್ನೆ ನಮ್ಮ ಕಾಲೇಜಿಂದ ಟೂರ್‌ ಇತ್ತು. ನಾವೊಂದಿಷ್ಟು ಜನ ಹುಡುಗ, ಹುಡುಗೀರು ಹೊರಟಿದ್ವಿ. ಬಸ್‌ ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ ರೋಶ್‌ ಓಡೋಡಿ ಬಂದು ಬಸ್‌ ಹತ್ತಿದ. ಲೆಕ್ಚರರ್‌ ಬೈಗುಳಕ್ಕೆ ಅದೇ ಕಿಡಿಗೇಟಿ ನಗುವಿನದೇ ಉತ್ತರ. ಏದುಸಿರು ಬಿಡುತ್ತಾ ಬಂದವನು ಬಸ್‌ ಒಳಗೆ ಇಣುಕಿದ. ಬಸ್‌ ಫುಲ್‌ ಆಗಿತ್ತು. ಮೂರು ಜನ ಕೂರುವ  ಸೀಟ್‌ನಲ್ಲಿ ಕಾರ್ನರ್‌ನಲ್ಲಿ ನಾನು ಕೂತಿದ್ದೆ. ಪಕ್ಕ ಫ್ರೆಂಡ್‌ ಕೂತಿದ್ದಳು. ಅವನು ಫ್ರೆಂಡ್‌ ಅನ್ನು ಜರುಗಲು ಹೇಳಿ ನೇರ ನನ್ನ ಪಕ್ಕ ಕೂತ. ಅವಳು ಮುಖ ಹುಳ್ಳಗೆ ನನಗೆ ಕಣ್‌ ಹೊಡೆದು ಪಕ್ಕದ ಸೀಟ್‌ಗೆ ನೆಗೆದಳು.

‘ಹಾಯ್‌, ನಾನು ರೋಷನ್‌’ ಅಂದ. ನಾನು ಹಾಯ್‌ ಅಂದೆ. ಅವನು ಕೂತ ಭಂಗಿ ಮಾತ್ರ ಎಷ್ಟೋ ವರ್ಷದ ಪರಿಚಯದವರ ಬಳಿ ಕೂತ ಹಾಗಿತ್ತು. ಒಣಗಿದ ತುಟಿಗಳನ್ನು ಒದ್ದೆ ಮಾಡಿದರೆ ತಪ್ಪರ್ಥ ಆಗಬಹುದೇನೋ ಅನ್ನೋ ಅನುಮಾನದಲ್ಲೇ ಕೂತಿದ್ದೆ. ಹಿಂದಿನಿಂದ ಹುಡುಗರು ಆಗಾಗ ‘ರೋಶನ್‌ ..’ ಅಂತ ಕೂಗುತ್ತಾ ಗಲಾಟೆ ಮಾಡುತ್ತಿದ್ದರು. ಬಸ್‌ ಮುಂದೆ ಹೋಗುತ್ತಿರುವಂತೆ ಅಪರಿಚಿತ ಊರುಗಳು ಮರೆಯಾಗುತ್ತಿದ್ದವು. ನಮ್ಮಿಬ್ಬರಿಗೆ ಅದರ ಪರಿವೇ ಇರಲಿಲ್ಲ. ಮಾತು ಕತೆ ಏನೂ ಇರಲಿಲ್ಲ. ಮಾತು ಬೇಕು ಅಂತನೂ ಅನಿಸುತ್ತಿರಲಿಲ್ಲ.ಇಳಿಯುವಾಗ ನನ್ನ ಕೈ ಅವನ ಕೈಯೊಳಗಿತ್ತು.  ಆ ದಿನ ರಾತ್ರಿ ಟೂರ್‌ ಮುಗಿದು ವಾಪಾಸಾದ್ವಿ. ಎಲ್ಲರೂ ಇಳಿಯುವವರೆಗೂ ಕೂತೇ ಇದ್ದ, ನನ್ನನ್ನೂ ಇಳಿಯಲು ಬಿಡಲಿಲ್ಲ. ಬಸ್‌ನೊಳಗೆ ಮಂದ ಬೆಳಕಿತ್ತು. ಎಲ್ಲರೂ ಇಳಿದಾದ ಮೇಲೆ ತಬ್ಬುವಂತೆ ಬಾಗಿ ಚುಂಬಿಸಿದ.

ಈ ಅಭ್ಯಾಸಗಳು ನಿಮಗಿದ್ರೆ ಸೆಕ್ಸ್‌ ಲೈಫ್‌ ಹಾಳಾಗೋದು ಗ್ಯಾರಂಟಿ!

ಇವತ್ತು ತಲೆನೋವು ಅಂತ ಕ್ಲಾಸ್‌ಗೆ ಬಂಕ್‌ ಹಾಕಿ ರೂಂನಲ್ಲಿ ಕೂತಿದ್ದೇನೆ. ಮತ್ತೇನೂ ತೋಚದೇ ಇಷ್ಟನ್ನು ಗೀಚಿದ್ದೇನೆ.

Follow Us:
Download App:
  • android
  • ios