Asianet Suvarna News Asianet Suvarna News

Lok Sabha Election 2024: ಬಾಗಲಕೋಟೆಯಲ್ಲಿ ವೀಣಾ ಬಿಟ್ಟು ಸಂಯುಕ್ತಾ ಹೆಸರು ಯಾಕೆ?, ಕಾಣದ ಕೈಗಳ ಆಟ ಇದೆಯಾ?

ಕಳೆದ ಬಾರಿ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಪ್ರಬಲ ಪೈಪೋಟಿ ನೀಡಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಹಾಗೂ ಮಾಜಿ ಸಚಿವ ಅಜಯಕುಮಾರ ಸರನಾಯಕ ಅವರನ್ನು ಬದಿಗಿರಿಸಿ ವಿಜಯಪುರದ ಸಂಯುಕ್ತಾ ಪಾಟೀಲ ಅವರನ್ನು ಪಕ್ಷ ಅಭ್ಯರ್ಥಿ ಮಾಡಲು ಹೊರಟಿರುವುದು ಸಹಜವಾಗಿಯೇ ಆಕಾಂಕ್ಷಿಗಳಲ್ಲಿ ಅಸಮಾಧಾನ ಭುಗಿಲೇಳುವಂತೆ ಮಾಡಿದೆ. 

Why is Samyukta Patil's name Instead of Veena Kashappanavar at Bagalkot grg
Author
First Published Mar 22, 2024, 8:42 AM IST

ಈಶ್ವರ ಶೆಟ್ಟರ

ಬಾಗಲಕೋಟೆ(ಮಾ.22):  ಬಾಗಲಕೋಟೆ ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷ ಅವಿಭಜಿತ ವಿಜಯಪುರ ಜಿಲ್ಲೆಯ ಮಹಿಳೆಯನ್ನು ಘೋಷಿಸುವ ಮೂಲಕ ಚುನಾವಣಾ ತಂತ್ರ ಬದಲಿಸಲು ಹೊರಟಂತೆ ಕಾಣುತ್ತಿದೆ. ಆದರೆ, ಸ್ಥಳೀಯ ಆಕಾಂಕ್ಷಿಗಳನ್ನು ಬದಿಗಿಟ್ಟು, ಮುಖಂಡರ ವಿಶ್ವಾಸ ಪಡೆಯದೇ ಅಭ್ಯರ್ಥಿ ಆಯ್ಕೆ ಮಾಡಿರುವುದು ಜಿಲ್ಲೆಯ ಕಾಂಗ್ರೆಸ್ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಕಳೆದ ಬಾರಿ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಪ್ರಬಲ ಪೈಪೋಟಿ ನೀಡಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಹಾಗೂ ಮಾಜಿ ಸಚಿವ ಅಜಯಕುಮಾರ ಸರನಾಯಕ ಅವರನ್ನು ಬದಿಗಿರಿಸಿ ವಿಜಯಪುರದ ಸಂಯುಕ್ತಾ ಪಾಟೀಲ ಅವರನ್ನು ಪಕ್ಷ ಅಭ್ಯರ್ಥಿ ಮಾಡಲು ಹೊರಟಿರುವುದು ಸಹಜವಾಗಿಯೇ ಆಕಾಂಕ್ಷಿಗಳಲ್ಲಿ ಅಸಮಾಧಾನ ಭುಗಿಲೇಳುವಂತೆ ಮಾಡಿದೆ. ಮಾತ್ರವಲ್ಲ, ಕ್ಷೇತ್ರದಲ್ಲಿರದ ವ್ಯಕ್ತಿಯ ಹೆಸರನ್ನು ಇಲ್ಲಿಗೆ ತಂದು ಸ್ಪರ್ಧೆ ಮಾಡುವಂತೆ ಮಾಡಿರುವುದು ಆಕಾಂಕ್ಷಿಗಳಲ್ಲಿ ಮತ್ತು ಕ್ಷೇತ್ರದ ನಾಯಕರಲ್ಲಿ ದಿಗಿಲು ಕೂಡ ಮೂಡಿಸಿದೆ. ಮತ್ತೊಂದು ಕಡೆ ವೀಣಾ ಬೆಂಗಲಿಗರ ಪ್ರತಿಭಟನೆ ಕೂಡ ಜೋರಾಗಿದೆ.

Lok Sabha Election 2024: ಕಾಂಗ್ರೆಸ್‌ ಟಿಕೆಟ್‌ ಕೈತಪ್ಪುವ ಆತಂಕದಲ್ಲಿ ಕಣ್ಣೀರಿಟ್ಟ ವೀಣಾ ಕಾಶಪ್ಪನವರ್‌!

ಕಾಣದ ಕೈಗಳ ಆಟ:

ಕಾಂಗ್ರೆಸ್ ಅಭ್ಯರ್ಥಿಯಾಗಿ ನಾನೇ ಸ್ಪರ್ಧಿಸುವುದು ಖಚಿತವೆಂಬ ವಿಶ್ವಾಸದಲ್ಲಿ ಇಡೀ ಕ್ಷೇತ್ರದಲ್ಲಿ ಸುತ್ತಾಡಿದ್ದ ಶಾಸಕ ವಿಜಯಾನಂದ ಕಾಶಪ್ಪನವರ ಅವರ ಪತ್ನಿ ವೀಣಾ ಕಾಶಪ್ಪನವರ ಅವರಿಗೆ ಟಿಕೆಟ್ ತಪ್ಪಿಸುವುದರ ಹಿಂದೆ ಕಾಣದ ಕೈಗಳ ಕೈವಾಡದ ಜೊತೆಗೆ ಜಿಲ್ಲೆಯ ಕೈ ಪಕ್ಷದ ನಾಯಕರ ಕೈವಾಡವಿರುವ ಮಾತುಗಳು ಕೇಳಿ ಬರುತ್ತಿವೆ. ಆದರೆ, ಅದರ ಹಿಂದಿನ ಉದ್ದೇಶ ಮಾತ್ರ ಇನ್ನೂ ಅಸ್ಪಷ್ಟವಾಗಿದೆ.

ಅತಿಯಾದ ಆತ್ಮವಿಶ್ವಾಸ:

ಕಾಂಗ್ರೆಸ್‌ನಲ್ಲಿ ನನ್ನನ್ನು ಬಿಟ್ಟರೆ ಪಕ್ಷದಲ್ಲಿ ಬೇರೆ ಯಾರಿದ್ದಾರೆ ಅಭ್ಯರ್ಥಿಗಳು ಎಂಬ ಮಾತುಗಳು ವೀಣಾ ಕಾಶಪ್ಪನವರ ಅವರ ಟಿಕೆಟ್ ತಪ್ಪಿಸಲು ಒಂದು ಪ್ರಮುಖ ಕಾರಣವಾಗುತ್ತಿದೆಯೇ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ಅವರ ಪತಿ ವಿಜಯಾನಂದ ಕಾಶಪ್ಪನವರ ಜಿಲ್ಲೆಯ ಕಾಂಗ್ರೆಸ್‌ ಶಾಸಕರ ಜೊತೆಗಿನ ಸಂಬಂಧಗಳ ಕೊರತೆ ಸಹ ಟಿಕೆಟ್ ತಪ್ಪಲು ಮತ್ತೊಂದು ಕಾರಣ ಎಂದು ಹೇಳಲಾಗುತ್ತಿದೆ.

ದೆಹಲಿ ತಲುಪದ ವೀಣಾ ಹೆಸರು:

ಅಚ್ಚರಿ ಎಂಬಂತೆ ಚುನಾವಣೆ ಪೂರ್ವದಲ್ಲಿ ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇವರೇ ಎಂಬಂತೆ ಹೆಸರು ಮುನ್ನೆಲೆಗೆ ಬಂದಿದ್ದ ವೀಣಾ ಕಾಶಪ್ಪನವರ ಹೆಸರು, ಏಕಾಏಕಿ ಒಂದು ವಾರದ ಇತ್ತೀಚೆಗೆ ಹಿನ್ನಡೆ ಕಾಣಲಾರಂಭಿಸಿತ್ತು. ಆಗ ಮುನ್ನೆಲೆಗೆ ಬಂದಿದ್ದ ಹೆಸರು ಸಚಿವ ಶಿವಾನಂದ ಪಾಟೀಲ ಅವರ ಪುತ್ರಿ ಸಂಯುಕ್ತಾ ಪಾಟೀಲ ಹೆಸರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಆದಿಯಾಗಿ ಕಾಶಪ್ಪನವರ ಕುಟುಂಬದ ಹಿತೈಷಿಗಳು ಮತ್ತು ವೀಣಾ ಕಾಶಪ್ಪನವರ ಪರ ಬೆಂಬಲ ಸೂಚಿಸಿದವರಿಂದಲೂ ಕಾಂಗ್ರೆಸ್‌ನ ಚುನಾವಣಾ ಸಮಿತಿಯಿಂದ ದೆಹಲಿಗೆ ಹೆಸರು ಶಿಫಾರಸು ಆಗದಿರುವುದು. ವೀಣಾ ಹೆಸರು ಶಿಫಾರಸಾಗದಿರುವುದು ಈ ಕ್ಷಣದವರೆಗೂ ಕುತೂಹಲ ಮೂಡಿಸಿದೆ.

ವೀಣಾ ಕಾಶಪ್ಪನವರಿಗೆ ಟಿಕೆಟ್‌ ಕೊಡಿ, ಇಲ್ಲಾಂದ್ರೆ ಮತದಾನ ಬಹಿಷ್ಕಾರ ಮಾಡುತ್ತೇವೆ: ಸಿದ್ದರಾಮಯ್ಯಗೆ ಗುದ್ದು?

ಸಂಯುಕ್ತಾ ಆಯ್ಕೆ ಹಿಂದೆ ಲೆಕ್ಕಾಚಾರ:

ಕಾಂಗ್ರೆಸ್ ಪಕ್ಷ ಸದ್ಯ ಆಯ್ಕೆ ಮಾಡಿರುವ ಸಂಯುಕ್ತಾ ಪಾಟೀಲ ಆಯ್ಕೆ ಹಿಂದೆ ಒಂದು ತಂತ್ರ ರೂಪಿಸಿದಂತಿದೆ. ಲಿಂಗಾಯತ ಸಮುದಾಯದ ಪಂಚಮಸಾಲಿ ಸಮಾಜದ ಸಂಯುಕ್ತಾ ಪಾಟೀಲ ವಿಜಯಪುರದ ಚಾಣಾಕ್ಷ ರಾಜಕಾರಣಿ ಶಿವಾನಂದ ಪಾಟೀಲ ಅವರ ಪುತ್ರಿ. ಅದೇ ಸಮುದಾಯದ ವೀಣಾ ಕಾಶಪ್ಪನವರ ಬದಲು ಸಂಯುಕ್ತಾ ಪಾಟೀಲ ಅವರಿಗೆ ಟಿಕೆಟ್ ನೀಡಿದರೆ ಸಮುದಾಯವೇನು ವಿರೋಧಿಸಲಾರದು. ಜಿಲ್ಲೆಯ ಶಾಸಕರ ಜೊತೆ ಸಮನ್ವಯತೆ ಸಾಧಿಸಿ ಪಕ್ಷದ ಸಾಂಪ್ರದಾಯಿಕ ಮತಗಳನ್ನು ಕ್ರೋಢಿಕರಿಸುವಲ್ಲಿ ಯಶಸ್ವಿಯಾದರೆ ಗೆಲವಿನ ದಡ ಸೇರಬಹುದು ಎಂಬ ಲೆಕ್ಕಾಚಾರವು ಸಹ ಇದೆ ಎಂದು ಹೇಳಲಾಗುತ್ತಿದೆ.

ಒಟ್ಟಾರೆ ಸ್ಥಳೀಯರಿಗೆ ಟಿಕೆಟ್ ತಪ್ಪಿಸಿ ಹೊರಗಿನ ಅಭ್ಯರ್ಥಿಗೆ ಮಣೆ ಹಾಕಿರುವ ಕಾಂಗ್ರೆಸ್ ಪಕ್ಷ ಈ ಚುನಾವಣೆಯನ್ನು ಹೇಗೆ ಎದುರಸಲಿದೆ ಎಂಬುದು ಸದ್ಯದ ಕುತೂಹಲ.

Follow Us:
Download App:
  • android
  • ios