Asianet Suvarna News Asianet Suvarna News

ಲೋಕಸಭೆ ಚುನಾವಣೆ 2024: ಅಹಿಂದ ಮತಬೇಟೆಗೆ ರಾಜಕೀಯ ಪಕ್ಷಗಳ ಸರ್ಕಸ್‌..!

ಚಿಕ್ಕಬಳ್ಳಾಪುರ ಕ್ಷೇತ್ರ ಅಭ್ಯರ್ಥಿಗಳ ಘೋಷಣೆಗೆ ಕಾಂಗ್ರೆಸ್‌, ಬಿಜೆಪಿಯಲ್ಲಿ ಮುಂದುವರೆದ ರಣತಂತ್ರ । ಈ ಬಾರಿ ಯುವ ಹುರಿಯಾಳುಗಳ ಕದನ ನಿರೀಕ್ಷೆ । ಉಭಯ ಪಕ್ಷಗಳ ಆಕಾಂಕ್ಷಿಗಳಲ್ಲಿ ಹೆಚ್ಚಿದ ನಿರೀಕ್ಷೆ. 

Political Parties to Circus of for Ahinda Votes Chikkaballapur grg
Author
First Published Mar 22, 2024, 11:26 AM IST

ಕೆ.ಆರ್.ರವಿಕಿರಣ್

ದೊಡ್ಡಬಳ್ಳಾಪುರ(ಮಾ.22): ಅಹಿಂದ ಮತಗಳೇ ನಿರ್ಣಾಯಕ ಎನಿಸಿರುವ ರಾಜ್ಯದ ಕೆಲ ಪ್ರಮುಖ ಲೋಕಸಭಾ ಕ್ಷೇತ್ರಗಳ ಪೈಕಿ ಚಿಕ್ಕಬಳ್ಳಾಪುರವೂ ಒಂದು. ಒಕ್ಕಲಿಗ ಸಮುದಾಯದ ಮತಗಳು ನಿರೀಕ್ಷಿತ ಪ್ರಮಾಣದಲ್ಲಿದ್ದರೂ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಇತರೆ ಹಿಂದುಳಿದ ವರ್ಗಗಳು ಹಾಗೂ ಅಲ್ಪ ಸಂಖ್ಯಾತರ ಮತಗಳು ಚುನಾವಣೆ ಗೆಲುವಿನ ಲೆಕ್ಕಾಚಾರದಲ್ಲಿ ಪ್ರಧಾನ ಪಾತ್ರ ನಿರ್ವಹಿಸುತ್ತವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಅಳೆದು-ತೂಗಿ ಸಮರ್ಥ ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸುವ ಸಾಹಸ ಮುಂದುವರೆದಿದ್ದು, ಉಭಯ ಪಕ್ಷಗಳು ಈವರೆಗೆ ಅಧಿಕೃತ ಅಭ್ಯರ್ಥಿಗಳನ್ನು ಘೋಷಿಸಿಲ್ಲ!

ಕ್ಷೇತ್ರಕ್ಕೆ ಚಿಕ್ಕಬಳ್ಳಾಪುರ ಎಂಬ ಹೆಸರಿದ್ದರೂ, ಇಡೀ ಬೆಂಗಳೂರು ಗ್ರಾಮಾಂತರ ಜಿಲ್ಲೆ ಈ ಕ್ಷೇತ್ರದ ಭಾಗವಾಗಿದೆ. ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ ಮತ್ತು ಹೊಸಕೋಟೆ ವಿಧಾನಸಭಾ ಕ್ಷೇತ್ರಗಳು, ಬೆಂಗಳೂರು ನಗರ ಜಿಲ್ಲೆಯ ಯಲಹಂಕ, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು, ಚಿಕ್ಕಬಳ್ಳಾಪುರ ಮತ್ತು ಬಾಗೇಪಲ್ಲಿ ಕ್ಷೇತ್ರಗಳನ್ನು ಒಳಗೊಂಡಿದೆ.

LOK SABHA ELECTION 2024: ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಟಿಕೆಟ್ ಯಾರಿಗೆ?

ಪ್ರಸ್ತುತ ಈ ಕ್ಷೇತ್ರದಲ್ಲಿ ಒಟ್ಟಾರೆ 9,80,641 ಮಹಿಳಾ ಹಾಗೂ 9,69,538 ಪುರುಷ ಮತದಾರರು ಸೇರಿ ಒಟ್ಟು 19,50,179 ಮತದಾರರಿದ್ದಾರೆ. ಮಹಿಳಾ ಮತದಾರರು ಅಧಿಕ ಸಂಖ್ಯೆಯಲ್ಲಿರುವ ರಾಜ್ಯದ ಕೆಲವೇ ಕ್ಷೇತ್ರಗಳಲ್ಲಿ ಚಿಕ್ಕಬಳ್ಳಾಪುರವೂ ಒಂದು. ಈ ಪೈಕಿ ಯಲಹಂಕ ಅತಿಹೆಚ್ಚು ಮತದಾರರನ್ನು ಹೊಂದಿರುವ ವಿಧಾನಸಭಾ ಕ್ಷೇತ್ರವಾಗಿದೆ.

ಕಾಂಗ್ರೆಸ್‌ ಪ್ರಾಬಲ್ಯದ ಕ್ಷೇತ್ರ:

1977ರಲ್ಲಿ ಅಸ್ತಿತ್ವಕ್ಕೆ ಬಂದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಹುತೇಕ ಕಾಂಗ್ರೆಸ್‌ ಪ್ರಾಬಲ್ಯವಿದೆ. 1977ರಲ್ಲಿ ಮೊದಲ ಸಂಸದರಾಗಿ ಕಾಂಗ್ರೆಸ್‌ನ ಎಂ.ವಿ.ಕೃಷ್ಣಪ್ಪ, 1980ರಲ್ಲಿ ಕಾಂಗ್ರೆಸ್‌ನ ಎಸ್.ಎನ್.ಪ್ರಸನ್ನಕುಮಾರ್, 1984,1989 ಮತ್ತು 1991ರಲ್ಲಿ ಕಾಂಗ್ರೆಸ್‌ನ ವಿ.ಕೃಷ್ಣರಾವ್‌, ಬಳಿಕ 1996ರಲ್ಲಿ ಜನತಾದಳದಿಂದ ಆರ್.ಎಲ್.ಜಾಲಪ್ಪ, 1998, 1999 ಮತ್ತು 2004ರಲ್ಲಿ ಕಾಂಗ್ರೆಸ್‌ನಿಂದ ಆರ್.ಎಲ್.ಜಾಲಪ್ಪ, 2009 ಮತ್ತು 2014ರಲ್ಲಿ ಕಾಂಗ್ರೆಸ್‌ನ ಎಂ.ವೀರಪ್ಪ ಮೊಯ್ಲಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. 2019ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಬಿ.ಎನ್.ಬಚ್ಚೇಗೌಡರು ಗೆಲವು ದಾಖಲಿಸುವುದರೊಂದಿಗೆ 45 ವರ್ಷಗಳಲ್ಲಿ ಬಿಜೆಪಿ ಮೊದಲ ಗೆಲವು ದಾಖಲಿಸಿತ್ತು.
ಪ್ರಸ್ತುತ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 5ರಲ್ಲಿ ಕಾಂಗ್ರೆಸ್, 2ರಲ್ಲಿ ಬಿಜೆಪಿ ಮತ್ತು 1 ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿರುವ ಪಕ್ಷೇತರ ಶಾಸಕರಿದ್ದಾರೆ. ಕಾಂಗ್ರೆಸ್‌ನಿಂದ ಚಿಕ್ಕಬಳ್ಳಾಪುರದ ಪ್ರದೀಪ್ ಈಶ್ವರ್ , ಬಾಗೇಪಲ್ಲಿಯ ಎಸ್‌.ಎನ್.ಸುಬ್ಬಾರೆಡ್ಡಿ, ದೇವನಹಳ್ಳಿಯ ಕೆ.ಎಚ್.ಮುನಿಯಪ್ಪ, ಹೊಸಕೋಟೆಯ ಶರತ್‌ ಬಚ್ಚೇಗೌಡ ಮತ್ತು ನೆಲಮಂಗಲದ ಶ್ರೀನಿವಾಸ್, ಬಿಜೆಪಿಯಿಂದ ದೊಡ್ಡಬಳ್ಳಾಪುರದ ಧೀರಜ್‌ ಮುನಿರಾಜ್, ಯಲಹಂಕದ ಎಸ್‌.ಆರ್.ವಿಶ್ವನಾಥ್‌, ಪಕ್ಷೇತರ ಗೌರಿಬಿದನೂರಿನ ಪುಟ್ಟಸ್ವಾಮಿಗೌಡ ಶಾಸನಸಭೆಯನ್ನು ಪ್ರತಿನಿಧಿಸುತ್ತಿದ್ದಾರೆ.

ಕಾಂಗ್ರೆಸ್‌ ಟಿಕೆಟ್‌ಗೆ ರಕ್ಷಾರಾಮಯ್ಯ, ಮೊಯ್ಲಿ, ಶಿವಶಂಕರರೆಡ್ಡಿ ಪೈಪೋಟಿ:

ಕಾಂಗ್ರೆಸ್‌ನ ಭದ್ರಕೋಟೆ ಎನಿಸಿರುವ ಕ್ಷೇತ್ರದಲ್ಲಿ ಪಕ್ಷದಿಂದ ಆರಂಭದಿಂದಲೂ ಯುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಕ್ಷಾ ರಾಮಯ್ಯ ಹೆಸರು ಮುಂಚೂಣಿಯಲ್ಲಿದೆ. ಆದರೂ ಅನುಭವಿ ರಾಜಕಾರಣಿ ಹಾಗೂ 2 ಬಾರಿ ಸಂಸದರಾಗಿದ್ದ ವೀರಪ್ಪ ಮೊಯ್ಲಿ ಅವರನ್ನು ಕಡೆಗಣಿಸುವುದು ಸುಲಭವಲ್ಲ. ಜೊತೆಗೆ ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಮಾಜಿ ಸಚಿವ ಎಚ್.ಎನ್.ಶಿವಶಂಕರರೆಡ್ಡಿ ಕೂಡ ಆಕಾಂಕ್ಷಿಯಾಗಿದ್ದಾರೆ. ಜೊತೆಗೆ ಕಾಂಗ್ರೆಸ್‌ ಹೈಕಮಾಂಡ್‌ ಬಿಜೆಪಿಯ ನಡೆ ಮೇಲೆ ತೀವ್ರ ನಿಗಾ ಇಟ್ಟಿದ್ದು, ಶತಾಯಗತಾಯ ಕ್ಷೇತ್ರವನ್ನು ಮರುವಶ ಮಾಡಿಕೊಳ್ಳುವ ಉತ್ಸಾಹದಲ್ಲಿದೆ.

ಬಿಜೆಪಿಯಲ್ಲಿ ಸುಧಾಕರ್‌, ಅಲೋಕ್, ವಿಶ್ವನಾಥ್ ಮುಂಚೂಣಿ:

ಸದ್ಯ ಬಿಜೆಪಿಯ ಸಂಸದರು ಪ್ರತಿನಿಧಿಸುತ್ತಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಈ ಬಾರಿಯೂ ಉಳಿಸಿಕೊಳ್ಳುವ ಸಂಕಲ್ಪ ಮಾಡಿರುವ ಬಿಜೆಪಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿದೆ. ಈ ಪೈಕಿ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಿರುವ ಮಾಜಿ ಸಚಿವ ಡಾ.ಕೆ.ಸುಧಾಕರ್‌, ಬಿಡಿಎ ಮಾಜಿ ಅಧ್ಯಕ್ಷ ಎಸ್‌.ಆರ್.ವಿಶ್ವನಾಥ್ ಪುತ್ರ ಅಲೋಕ್‌ ವಿಶ್ವನಾಥ್‌ ಹೆಸರು ಮುಂಚೂಣಿಯಲ್ಲಿವೆ. ಈ ಮಧ್ಯೆ ಎಸ್‌.ಆರ್.ವಿಶ್ವನಾಥ್‌ ತಾವೂ ಆಕಾಂಕ್ಷಿ ಎಂದು ಹೇಳಿಕೆ ನೀಡಿದ್ದಾರೆ. ಜೊತೆಗೆ ಟಿಕೆಟ್ ವಂಚಿತರಾಗಿರುವ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಮಂಡ್ಯ ಸಂಸದೆ ಸುಮಲತಾ, ಮಾಜಿ ಶಾಸಕ ಸಿ.ಟಿ.ರವಿ ಹೆಸರುಗಳೂ ಕೇಳಿ ಬರುತ್ತಿದ್ದು, ಅಧಿಕೃತ ಅಭ್ಯರ್ಥಿ ಘೋಷಣೆಯ ಕುತೂಹಲ ಹೆಚ್ಚಿಸಿದೆ.

ಎಲ್ಲ ಪಕ್ಷ, ಸರ್ಕಾರಗಳು ರೈತ ವಿರೋಧಿಗಳೇ: ಕೋಡಿಹಳ್ಳಿ ಚಂದ್ರಶೇಖರ್

ಹೆಚ್ಚಿದ ಕದನ ಕುತೂಹಲ:

ಈ ಎಲ್ಲ ಅಂಶಗಳನ್ನು ಪರಿಗಣಿಸಿರುವ ಕಾಂಗ್ರೆಸ್ ಮತ್ತು ಬಿಜೆಪಿ ಜಾತಿ ಲೆಕ್ಕಾಚಾರದಲ್ಲಿ ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಸೂಕ್ತ ಎಂಬ ಜಿಜ್ಞಾಸೆಯಲ್ಲಿವೆ. ಅಹಿಂದ ಮತಗಳನ್ನು ಸೆಳೆಯುವ ಶಕ್ತಿಯುಳ್ಳ, ಇತರೆ ಸಮುದಾಯದ ವಿಶ್ವಾಸವನ್ನೂ ಗಳಿಸುವ ಅಭ್ಯರ್ಥಿಯ ಗೆಲುವು ನಿರಾಯಾಸ ಎನಿಸಿದರೂ, ರಾಷ್ಟ್ರ ರಾಜಕಾರಣ, ರಾಜ್ಯದ ರಾಜಕೀಯ ಬೆಳವಣಿಗೆಗಳ ಆಧಾರದಲ್ಲಿ ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಜಿದ್ದಾಜಿದ್ದಿನ ಅಖಾಡವಾಗಲಿದೆ ಎಂಬುದು ಸುಳ್ಳಲ್ಲ.

ಹಿಂದುಳಿದ ವರ್ಗದ ಸಂಸದರೇ ಹೆಚ್ಚು

ಈವರೆಗೆ ಕ್ಷೇತ್ರದಲ್ಲಿ ನಡೆದಿರುವ 12 ಚುನಾವಣೆಗಳಲ್ಲಿ 6 ಬಾರಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಸಂಸದರಾಗಿ ಆಯ್ಕೆಯಾಗಿದ್ದರೆ, 3 ಬಾರಿ ಬ್ರಾಹ್ಮಣ, 2 ಬಾರಿ ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳು ಸಂಸದರಾಗಿದ್ದಾರೆ. ಕಳೆದ 2019 ರಲ್ಲಿ ಬಿಜೆಪಿಯ ಬಿ.ಎನ್. ಬಚ್ಚೇಗೌಡ 7,45,912 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ಎಂ. ವೀರಪ್ಪ ಮೊಯ್ಲಿ(5,63,802) ಅವರನ್ನು ಒಂದೂವರೆ ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು. 2014 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ ವೀರಪ್ಪ ಮೊಯ್ಲಿ 4,24,800 ಮತ ಗಳಿಸಿ ಬಿಜೆಪಿಯ ಬಿಎನ್ ಬಚ್ಚೇಗೌಡ (4,15,280) ಮತ್ತು ಜೆಡಿಎಸ್ ನ ಎಚ್.ಡಿ.ಕುಮಾರ ಸ್ವಾಮಿ, (3,46,339) ಅವರನ್ನು ಮಣಿಸಿ ಆಯ್ಕೆಯಾಗಿದ್ದರು. 2009 ರಲ್ಲಿಯೂ ಕಾಂಗ್ರೆಸ್ ನ ವೀರಪ್ಪ ಮೊಯ್ಲಿ ಬಿಜೆಪಿಯ ಸಿ. ಅಶ್ವಥನಾರಾಯಣ್‌ ವಿರುದ್ಧ ಗೆಲುವು ಸಾಧಿಸಿದ್ದರು.

Follow Us:
Download App:
  • android
  • ios