Asianet Suvarna News Asianet Suvarna News

ರಫೇಲ್ ಟಿಪ್ಪಣಿ ಬಹಿರಂಗ: ಭಾರೀ ವಿವಾದ ಸ್ಫೋಟ!

2015ರಲ್ಲೇ ಆಂತರಿಕ ಟಿಪ್ಪಣಿಯಲ್ಲಿ ಬರೆದಿದ್ದ ರಕ್ಷಣಾ ಕಾರ್ಯದರ್ಶಿ| ಪತ್ರಿಕೆಯೊಂದರಲ್ಲಿ ಟಿಪ್ಪಣಿ ಈಗ ಬಹಿರಂಗ: ಹೊಸ ವಿವಾದ| ಹಗರಣದಲ್ಲಿ ಮೋದಿ ಭಾಗಿ ಆಗಿದ್ದು ಈಗ ಸಾಬೀತು: ರಾಹುಲ್‌| ಇದು ಅರ್ಥ ಸತ್ಯ, ಕಾರ್ಯದರ್ಶಿ ಬರೆದಿದ್ದು ತಪ್ಪು ಎಂದು ಪರ್ರಿಕರ್‌ ಅವರೇ ಹೇಳಿದ್ದರು: ನಿರ್ಮಲಾ| ‘ಅರ್ಧ ಟಿಪ್ಪಣಿ ಮಾತ್ರ ಪ್ರಕಟಿಸಿದ ಮಾಧ್ಯಮ’| ಸತ್ತ ಕುದುರೆಯನ್ನು ಬಡಿಯಲಾಗುತ್ತಿದೆ: ಮಾಧ್ಯಮ, ರಾಹುಲ್‌ ಮೇಲೆ ನಿರ್ಮಲಾ ಗರಂ

defence ministry objected for parallel negotiation in rafale deal by pmo report
Author
New Delhi, First Published Feb 9, 2019, 8:15 AM IST

ನವದೆಹಲಿ[ಫೆ.09]: ‘ರಫೇಲ್‌ ಯುದ್ಧವಿಮಾನ ಖರೀದಿ ಒಪ್ಪಂದವನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಕ್ಷಣಾ ಸಚಿವಾಲಯದ ಗಮನಕ್ಕೆ ತಾರದೇ ಮಾಡಿಕೊಂಡಿದ್ದರು. ಇದಕ್ಕೆ ರಕ್ಷಣಾ ಸಚಿವಾಲಯದ ಕಾರ್ಯದರ್ಶಿಯವರೇ ಅಸಮಾಧಾನ ವ್ಯಕ್ತಪಡಿಸಿದ್ದರು’ ಎಂಬ ಸ್ಫೋಟಕ ವಿಚಾರವನ್ನು ಒಳಗೊಂಡ ರಕ್ಷಣಾ ಸಚಿವಾಲಯದ 2015ರ ಆಂತರಿಕ ಟಿಪ್ಪಣಿಯೊಂದು ಬಹಿರಂಗವಾಗಿ ಹೊಸ ವಿವಾದಕ್ಕೆ ಕಾರಣವಾಗಿದೆ.

‘ದ ಹಿಂದೂ’ ಪತ್ರಿಕೆಯ ಶುಕ್ರವಾರದ ಆವೃತ್ತಿಯಲ್ಲಿ, ಸೋರಿಕೆಯಾದ ಈ ಆಂತರಿಕ ಟಿಪ್ಪಣಿಯು ಮುದ್ರಣವಾಗಿತ್ತು. ಇದು ವಿವಾದಕ್ಕೂ ಕಾರಣವಾಗಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು, ‘ರಕ್ಷಣಾ ಸಚಿವ ಮನೋಹರ ಪರ್ರಿಕರ್‌ ಅವರ ಗಮನಕ್ಕೆ ತಾರದೇ ಪ್ರಧಾನಿಯವರೇ ಈ ಡೀಲ್‌ನಲ್ಲಿ ನೇರವಾಗಿ ಶಾಮೀಲಾಗಿದ್ದಾರೆ. ಇದು ಹಗರಣದಲ್ಲಿ ಪ್ರಧಾನಿ ಭಾಗಿಯಾಗಿದ್ದಾರೆ ಎಂಬುದನ್ನು ಸಾಬೀತುಪಡಿಸಿದೆ’ ಎಂಬ ಆರೋಪ ಹೊರಿಸಿದರು. ಲೋಕಸಭೆಯಲ್ಲಿ ಕೂಡ ಈ ವಿಷಯ ಗದ್ದಲಕ್ಕೆ ಕಾರಣವಾಗಿ ಸದನದ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ‘ಈ ಸರ್ಕಾರ ದೇಶ ವಿರೋಧಿ. ರಫೇಲ್‌ ಡೀಲ್‌ ಬಗ್ಗೆ ಈಗಾದರೂ ಜಂಟಿ ಸದನ ಸಮಿತಿ ತನಿಖೆ ನಡೆಯಲಿ’ ಎಂದು ಆಗ್ರಹಿಸಿದರು.

ಆಗ ಲೋಕಸಭೆಗೆ ಸ್ವಯಂಪ್ರೇರಿತ ಹೇಳಿಕೆ ನೀಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, ‘ದ ಹಿಂದೂ ಪತ್ರಿಕೆಯಲ್ಲಿ ಬಂದಿದ್ದು ಅರ್ಧ ಸತ್ಯ. ರಕ್ಷಣಾ ಇಲಾಖೆ ಕಾರ್ಯದರ್ಶಿಯವರು ಬರೆದಿದ್ದ ಟಿಪ್ಪಣಿಗೆ ಪರ್ರಿಕರ್‌ ಅವರು ಅದೇ ಕಾಗದದಲ್ಲಿ ಅಡಿ ಟಿಪ್ಪಣಿ ಬರೆದಿದ್ದಾರೆ. ರಕ್ಷಣಾ ಕಾರ್ಯದರ್ಶಿಯು ‘ಅತಿರೇಕದ ಪ್ರತಿಕ್ರಿಯೆ’ ನೀಡಿದ್ದು, ಸಮಸ್ಯೆಯನ್ನು ಪ್ರಧಾನಿ ಕಚೇರಿ ಜತೆ ಮಾತನಾಡಿ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಪರ್ರಿಕರ್‌ ಅವರು ಅಡಿಟಿಪ್ಪಣಿಯಲ್ಲಿ ಹೇಳಿದ್ದಾರೆ. ಈ ಅಂಶವನ್ನು ಪತ್ರಿಕೆ ಪ್ರಕಟಿಸದೇ ಅರ್ಧ ಸತ್ಯ ಬರೆದಿದೆ. ಪತ್ರಿಕೆ ಹಾಗೂ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಸತ್ತ ಕುದುರೆಯನ್ನು ಬಡಿದೆಬ್ಬಿಸಲು ಯತ್ನಿಸುತ್ತಿದ್ದಾರೆ’ ಎಂದು ತಿರುಗೇಟು ನೀಡಿ, ಆ ಆಂತರಿಕ ಟಿಪ್ಪಣಿಯ ಪೂರ್ಣ ಪ್ರತಿಯನ್ನು ತೆರೆದಿಟ್ಟರು.

ಅರ್ಧ ಟಿಪ್ಪಣಿ ವರ್ಸಸ್‌ ಪೂರ್ಣ ಟಿಪ್ಪಣಿ:

2015ರಲ್ಲಿ ಅಂದಿನ ರಕ್ಷಣಾ ಕಾರ್ಯದರ್ಶಿ ಎಸ್‌.ಕೆ. ಶರ್ಮಾ ಅವರು ಆಂತರಿಕ ಟಿಪ್ಪಣಿಯ 5ನೇ ಪ್ಯಾರಾದಲ್ಲಿ, ‘ರಕ್ಷಣಾ ಇಲಾಖೆ ಹಾಗೂ ರಫೇಲ್‌ ಕುರಿತ ಭಾರತದ ಒಪ್ಪಂದ ಸಮಾಲೋಚನಾ ಸಮಿತಿಗಳನ್ನು ಹೊರತುಪಡಿಸಿ ಪ್ರಧಾನಿ ಕಚೇರಿಯವರು ಪರ್ಯಾಯ ಸಮಾಲೋಚನೆಗಳನ್ನು ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿದಂತೆ ಫ್ರಾನ್ಸ್‌ ಜತೆ ನಡೆಸುತ್ತಿದ್ದಾರೆ. ಇದರಿಂದ ಒಪ್ಪಂದಕ್ಕೆ ನಾವು ನಡೆಸುತ್ತಿರುವ ಯತ್ನಗಳು ದುರ್ಬಲಗೊಂಡಿವೆ. ಹೀಗೆ ಹೊರಗಿನವರು ಮಾತುಕತೆಯಲ್ಲಿ ತೊಡಗುವುದು ಸಲ್ಲದು. ಪ್ರಧಾನಿ ಕಚೇರಿಗೆ ನಮ್ಮ ಯತ್ನಗಳು ತೃಪ್ತಿ ತರದಿದ್ದರೆ, ಅಂಥ ಸಂದರ್ಭದಲ್ಲಿ ಪ್ರಧಾನಿ ಕಚೇರಿ ಮಾತುಕತೆ ಆರಂಭಿಸಲಿ’ ಎಂದು ಬರೆದಿದ್ದಾರೆ. ‘ದ ಹಿಂದು’ ಪತ್ರಿಕೆಯಲ್ಲಿ ಈ ಅಂಶ ಮಾತ್ರ ಪ್ರಕಟವಾಗಿದೆ.

ಆದರೆ ಸರ್ಕಾರವು ವಿವಾದದ ಬೆನ್ನಲ್ಲೇ ಪೂರ್ಣ ಪ್ರಮಾಣದ ಟಿಪ್ಪಣಿ ಬಿಡುಗಡೆ ಮಾಡಿದ್ದು, ಅದರಲ್ಲಿ ಅಂದಿನ ರಕ್ಷಣಾ ಸಚಿವ ಮನೋಹರ್‌ ಪರ್ರಿಕರ್‌ ಅವರು ವಿವಾದವನ್ನು ತಣ್ಣಗೆ ಮಾಡಿಸಲು ಯತ್ನಿಸಿದ ಬರಹಗಳಿವೆ. ‘ರಫೇಲ್‌ ವಿಚಾರದಲ್ಲಿ ಫ್ರಾನ್ಸ್‌ ಸರ್ಕಾರ ಹಾಗೂ ಭಾರತದ ಪ್ರಧಾನಿ ಕಚೇರಿ ನೇರ ಮಾತುಕತೆಯಲ್ಲಿ ನಿರತವಾದಂತಿದೆ. ಹೀಗಾಗಿ ರಕ್ಷಣಾ ಕಾರ್ಯದರ್ಶಿ ಅವರು ಬರೆದ ಟಿಪ್ಪಣಿಯ 5ನೇ ಪ್ಯಾರಾದಲ್ಲಿನ ಅಂಶವು ‘ಅತಿರೇಕದ ಪ್ರತಿಕ್ರಿಯೆ’ಯಾಗಿದೆ. ಹೀಗಾಗಿ ರಕ್ಷಣಾ ಕಾರ್ಯದರ್ಶಿಯವರು ಪ್ರಧಾನಿ ಕಚೇರಿಯ ಮುಖ್ಯ ಕಾರ್ಯದರ್ಶಿಯವರನ್ನು ಭೇಟಿ ಮಾಡಿ ವಿವಾದ ಇತ್ಯರ್ಥ ಮಾಡಿಕೊಳ್ಳಬಹುದು’ ಎಂದು ಪರ್ರಿಕರ್‌ ಬರೆದಿದ್ದಾರೆ. ಈ ಅಂಶವನ್ನು ‘ದ ಹಿಂದೂ’ ಪ್ರಕಟಿಸಿಲ್ಲ.

ನಿರ್ಮಲಾಗೆ ರಾಮ್‌ ತಿರುಗೇಟು:

ಈ ನಡುವೆ, ವರದಿ ಬರೆದ ದ ಹಿಂದೂ ಸಮೂಹದ ಮುಖ್ಯಸ್ಥ ಎನ್‌. ರಾಮ್‌ ತಮ್ಮ ವರದಿ ಬಗ್ಗೆ ಪ್ರತಿಕ್ರಿಯೆ ನೀಡಿ, ‘ನಾನೇಕೆ ಪೂರ್ತಿ ಟಿಪ್ಪಣಿ ಪ್ರಕಟಿಸಬೇಕು? ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ರಿಂದ ನಾನು ಪಾಠ ಕಲಿಯಬೇಕಿಲ್ಲ. ಡೀಲ್‌ನಿಂದ ಅವರು (ಮೋದಿ ಸರ್ಕಾರ) ಸಂಕಷ್ಟದಲ್ಲಿದ್ದಾರೆ. ಹಗರಣ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ. ಈ ವ್ಯವಹಾರದಲ್ಲಿ ನಿರ್ಮಲಾ ಶಾಮೀಲಾಗಿಲ್ಲ. ಅವರೇಕೆ ಇಲ್ಲಿ ಬಂದು ಉತ್ತರ ಕೊಡುತ್ತಿದ್ದಾರೆ?’ ಎಂದು ಪ್ರಶ್ನಿಸಿದ್ದಾರೆ.

ಸೋರಿಕೆ ಹಿಂದೆ ದುರುದ್ದೇಶ- ಸೇನಾಧಿಕಾರಿಗಳು:

ಈ ಟಿಪ್ಪಣಿಯ ಸೋರಿಕೆ ಹಿಂದೆ ದುರುದ್ದೇಶವಿದೆ. ಟಿಪ್ಪಣಿ ಬರೆದ ಎಸ್‌.ಕೆ. ಶರ್ಮಾ ಅವರು ರಫೇಲ್‌ ಡೀಲ್‌ ಮಾತುಕತೆಯ ಭಾಗವಾಗಿರಲಿಲ್ಲ. ಆದಾಗ್ಯೂ ಅವರೇಕೆ ಡೀಲ್‌ ಪ್ರಶ್ನಿಸಿದ್ದರು ಎಂದು ಮಾತುಕತೆಯ ತಂಡದಲ್ಲಿದ್ದ ಏರ್‌ ಮಾರ್ಷಲ್‌ ಎಸ್‌ಬಿಪಿ ಸಿನ್ಹಾ ಪ್ರಶ್ನಿಸಿದ್ದಾರೆ.

Follow Us:
Download App:
  • android
  • ios