ವಿಧಾನ ಪರಿಷತ್‌ ಚುನಾವಣೆ: ಗೊಂದಲದ ಗೂಡಾದ ದಕ್ಷಿಣ ಶಿಕ್ಷಕರ ಕ್ಷೇತ್ರದ ಮೈತ್ರಿ ಟಿಕೆಟ್‌

ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳನ್ನೊಳಗೊಂಡ ದಕ್ಷಿಣ ಶಿಕ್ಷಕರ ಕ್ಷೇತ್ರದ ಬಿಜೆಪಿ-ಜೆಡಿಎಸ್‌ ಮೈತ್ರಿ ಪಕ್ಷದ ಟಿಕೆಟ್‌, ಗೊಂದಲದ ಗೂಡಾಗಿ ಪರಿಣಮಿಸಿದೆ. 

BJP JDS Alliance Ticket for South Teachers Constituency, which is a hotbed of Confusion grg

ಮೈಸೂರು(ಮೇ.16):  ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳನ್ನೊಳಗೊಂಡ ದಕ್ಷಿಣ ಶಿಕ್ಷಕರ ಕ್ಷೇತ್ರದ ಬಿಜೆಪಿ-ಜೆಡಿಎಸ್‌ ಮೈತ್ರಿ ಪಕ್ಷದ ಟಿಕೆಟ್‌, ಗೊಂದಲದ ಗೂಡಾಗಿ ಪರಿಣಮಿಸಿದೆ. ಕೆಲ ದಿನಗಳ ಹಿಂದಷ್ಟೇ ನಿಂಗರಾಜ ಗೌಡರಿಗೆ ಟಿಕೆಟ್‌ ಘೋಷಿಸಿದ್ದ ಬಿಜೆಪಿ ಇದೀಗ ದಿಢೀರ್‌ ಆಗಿ ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದು, ಇದು ತೀವ್ರ ಗೊಂದಲ ಸೃಷ್ಟಿಸಿದೆ.

ಬಿಜೆಪಿ ಡಾ.ಈ.ಸಿ.ನಿಂಗರಾಜ ಗೌಡ ಅವರಿಗೆ ಟಿಕೆಟ್‌ ನೀಡಿತ್ತು. ‘ಬಿ’ ಫಾರಂ ಕೊಡುವುದು ಬಾಕಿ ಇತ್ತು. ಆದರೆ, ಇದಾಗಿ ಕೆಲವೇ ದಿನಗಳಲ್ಲಿ ಈ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದು, ಆ ಪಕ್ಷದಿಂದ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಮಾಜಿ ಅಧ್ಯಕ್ಷ ಕೆ.ವಿವೇಕಾನಂದ ಅವರಿಗೆ ‘ಬಿ’ ಫಾರಂ ನೀಡಲಾಗಿದೆ. ಇದರಿಂದ ಬಿಜೆಪಿಯ ನಿಂಗರಾಜ ಅವರ ಜತೆಗೆ ಜೆಡಿಎಸ್‌ನಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಎಂಎಲ್ಸಿ ಕೆ.ಟಿ.ಶ್ರೀಕಂಠೇಗೌಡ ಅವರಿಗೂ ನಿರಾಸೆಯಾಗಿದೆ.

ಪರಿಷತ್‌ ಚುನಾವಣೆ: ಕಾಂಗ್ರೆಸ್ ಗೆಲ್ಲಿಸಿಕೊಂಡು ಬರುವಂತೆ ಮೂವರು ಶಿಕ್ಷಣ ಸಚಿವರಿಗೆ ಸೂಚನೆ

ಬಿಜೆಪಿಯಲ್ಲಿ ಒಮ್ಮೆ ಅಭ್ಯರ್ಥಿ ಪ್ರಕಟಿಸಿದ ನಂತರ ಯಾವುದೇ ಕಾರಣಕ್ಕೂ ಬದಲಿಸುವುದಿಲ್ಲ ಎಂದು ಇತ್ತೀಚೆಗಷ್ಟೇ ಸುದ್ದಿಗೋಷ್ಠಿ ಮಾಡಿ ಹೇಳಿದ್ದ ನಿಂಗರಾಜ ಗೌಡ ಅವರು, ನಾನೇ ಅಧಿಕೃತ ಅಭ್ಯರ್ಥಿ ಎಂದು ಹೇಳಿಕೊಂಡು ಬುಧವಾರ ನಾಮಪತ್ರವನ್ನೂ ಸಲ್ಲಿಸಿದ್ದಾರೆ. ಜೆಡಿಎಸ್‌ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರು ಬಂಡಾಯದ ಸುಳಿವು ನೀಡಿದ್ದಾರೆ.

ಟಿಕೆಟ್‌ಗೆ ವಿರೋಧ:

ಸದ್ಯದಲ್ಲೇ ನಡೆಯಲಿರುವ ರಾಜ್ಯದ ತಲಾ ಮೂರು ಶಿಕ್ಷಕ ಹಾಗೂ ಪದವೀಧರ ಕ್ಷೇತ್ರಗಳಿಂದ ಮೇಲ್ಮನೆಗೆ ನಡೆಯುವ ಚುನಾವಣೆಗೆ ಲೋಕಸಭೆ ರೀತಿಯಲ್ಲೇ ಬಿಜೆಪಿ-ಜೆಡಿಎಸ್ ನಡುವೆ ಹೊಂದಾಣಿಕೆ ನಡೆದಿದೆ. ಐದು ಪ್ಲಸ್ ಒಂದು ಎಂಬ ಸೂತ್ರದಂತೆ ಬಿಜೆಪಿ, ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿತ್ತು. ಆದರೆ, ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್ ಗೌಡರಿಗೆ ಟಿಕೆಟ್ ನೀಡಿದ್ದನ್ನು ವಿರೋಧಿಸಿದ ಜೆಡಿಎಸ್ ಕಳೆದ ಬಾರಿ ಗೆದ್ದಿರುವ ಈ ಕ್ಷೇತ್ರವನ್ನು ತಮಗೇ ಬಿಟ್ಟುಕೊಡುವಂತೆ ಪಟ್ಟು ಹಿಡಿದಿತ್ತು. ಹೀಗಾಗಿ ವರಿಷ್ಠರು ನಾಲ್ಕು ಪ್ಲಸ್ ಎರಡು ಸೂತ್ರಕ್ಕೆ ಬಂದರು. ಇದರಿಂದಾಗಿ ನಿಂಗರಾಜ್ ಗೌಡರ ಹೆಸರು ಘೋಷಿಸಿದರೂ ‘ಬಿ’ ಫಾರಂ ನೀಡಿರಲಿಲ್ಲ.

ಜೆಡಿಎಸ್ ಟಿಕೆಟ್‌ಗೆ ಕೆ.ಟಿ.ಶ್ರೀಕಂಠೇಗೌಡ ಹಾಗೂ ಕೆ.ವಿವೇಕಾನಂದ ಅವರ ನಡುವೆ ತೀವ್ರ ಪೈಪೋಟಿ ಇತ್ತು. ಕಾಂಗ್ರೆಸ್‌ ಅಭ್ಯರ್ಥಿ ಮರಿತಿಬ್ಬೇಗೌಡರ ವಿರುದ್ಧ ಶ್ರೀಕಂಠೇಗೌಡರನ್ನೇ ಕಣಕ್ಕಿಳಿಸಲು ಜೆಡಿಎಸ್‌ ನಿರ್ಧರಿಸಿತ್ತು. ಆದರೆ, ಮಂಗಳವಾರ ರಾತ್ರಿಯ ನಂತರದ ಬೆಳವಣಿಗೆಯಲ್ಲಿ ದಿಢೀರ್‌ ಆಗಿ ವಿವೇಕಾನಂದ ಅವರಿಗೆ ‘ಬಿ’ ಫಾರಂ ನೀಡಿದೆ.

Karnataka MLC Election 2024: ಬಿಜೆಪಿ, ಜೆಡಿಎಸ್ 5+1 ಬದಲು 4+2 ಟಿಕೆಟ್‌ ಸೂತ್ರ

ಶ್ರೀಕಂಠೇಗೌಡರ ನಡೆ ಕುತೂಹಲ:

ಪದವೀಧರ ಕ್ಷೇತ್ರದ ಬದಲು ಶಿಕ್ಷಕರ ಕ್ಷೇತ್ರಕ್ಕೆ ಸ್ಥಳಾಂತರವಾಗಲು ಉದ್ದೇಶಿಸಿದ್ದ ಶ್ರೀಕಂಠೇಗೌಡರಿಗೆ ಟಿಕೆಟ್ ಕೈತಪ್ಪಿರುವುದರಿಂದ ನಿರಾಸೆಯಾಗಿದೆ. ಬೆಂಬಲಿಗ ಶಿಕ್ಷಕರ ಜೊತೆ ಸಮಾಲೋಚಿಸಿ, ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ನನಗೆ ಟಿಕೆಟ್ ನೀಡುವ ಭರವಸೆ ನೀಡಿದ್ದರು. ಹತ್ತು ವರ್ಷಗಳಿಂದ ಶಿಕ್ಷಕರ ಪರ ಹೋರಾಟ ಮಾಡಿಕೊಂಡು ಬಂದಿರುವ ನಾನು ಚುನಾವಣೆಗೆ ಸಜ್ಜಾಗಿದ್ದೆ. ಟಿಕೆಟ್ ನೀಡಿದಲ್ಲಿ ಗೆಲ್ಲುವ ಅವಕಾಶವೂ ಇತ್ತು ಎಂದು ಅವರು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios