Asianet Suvarna News Asianet Suvarna News

ರಾಯರೆಡ್ಡಿ ಅವರ ಟಾರ್ಗೆಟ್ ಸಚಿವ ಶಿವರಾಜ ತಂಗಡಗಿ: ಶಾಸಕ ಜನಾರ್ದನ ರೆಡ್ಡಿ

ಕೊಪ್ಪಳ ಲೋಕಸಭೆಗೆ ಸ್ಪರ್ಧೆ ಮಾಡಿರುವ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರನ್ನು ಬಿಜೆಪಿಯವರು ಸೋಲಿಸುವುದು ಬೇಕಾಗಿಲ್ಲ, ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಅವರೇ ಸೋಲಿಸುತ್ತಾರೆ ಎಂದು ಗಂಗಾವತಿ ಶಾಸಕ ಜಿ. ಜನಾರ್ದನ ರೆಡ್ಡಿ ವ್ಯಂಗ್ಯವಾಡಿದ್ದಾರೆ. 

Basavaraj Rayareddy target Minister Shivaraj Tangadagi Says MLA Janardhan Reddy gvd
Author
First Published Apr 13, 2024, 4:31 PM IST

ಕುಕನೂರು (ಏ.13): ಕೊಪ್ಪಳ ಲೋಕಸಭೆಗೆ ಸ್ಪರ್ಧೆ ಮಾಡಿರುವ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರನ್ನು ಬಿಜೆಪಿಯವರು ಸೋಲಿಸುವುದು ಬೇಕಾಗಿಲ್ಲ, ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಅವರೇ ಸೋಲಿಸುತ್ತಾರೆ ಎಂದು ಗಂಗಾವತಿ ಶಾಸಕ ಜಿ. ಜನಾರ್ದನ ರೆಡ್ಡಿ ವ್ಯಂಗ್ಯವಾಡಿದ್ದಾರೆ. ತಾಲೂಕಿನ ಮಂಗಳೂರು ಗ್ರಾಮದ ಶ್ರೀ ಮಂಗೇಶ್ವರ ಮಂಟಪದ ಆವರಣದಲ್ಲಿ ಕೊಪ್ಪಳ ಲೋಕಸಭಾ ಚುನಾವಣೆ ಅಂಗವಾಗಿ ಜರುಗಿದ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಮಹಾಶಕ್ತಿ ಕೇಂದ್ರಗಳ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಮಂತ್ರಿ ಸ್ಥಾನ ಸಿಗದಿದ್ದಕ್ಕೆ ವಿಧಾನಸಭೆ ಕಲಾಪ ನಡೆಯುವಾಗ ಪ್ರತಿ ವಿಷಯಕ್ಕೂ ಗಲಾಟೆ ಮಾಡುತ್ತಿರುತ್ತಾರೆ. ಮುಖ್ಯಮಂತ್ರಿ ಅವರಿಗೆ ಕಸಿವಿಸಿ ಆಗುವಂತೆ ಮಾಡುತ್ತಿದ್ದರು. ರಾಯರೆಡ್ಡಿ ಅವರ ಟಾರ್ಗೆಟ್ ಶಿವರಾಜ ತಂಗಡಗಿ, ಅವರನ್ನು ಕೆಳಗಿಳಿಸಬೇಕು ಎನ್ನುವ ವಿಚಾರವಿದೆ ಎಂದು ಹೇಳಿದರು. ಬಿಜೆಪಿಯಿಂದ ಡಾ. ಬಸವರಾಜ ಅವರ ಸಮಾಜ ಸೇವೆಯನ್ನು ಗುರುತಿಸಿ ಬಿಜೆಪಿ ಲೋಕಸಭೆಗೆ ಟಿಕೆಟ್ ನೀಡಿದೆ. ಕಾಂಗ್ರೆಸ್ ಅಭ್ಯರ್ಥಿಗಳು ಕೊಪ್ಪಳದಲ್ಲಿ ಕುಳಿತು ಮೈಂಡ್ ಗೇಮ್ ಆಡುತ್ತಿದ್ದಾರೆ. ಮಂಗಳೂರು ಸಭೆ ನೋಡಿದರೆ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಡಿಪಾಜಿಟ್ ಕಳೆದುಕೊಳ್ಳುತ್ತಾರೆ ಎನಿಸುತ್ತದೆ ಎಂದರು.

ಮಂಗಳೂರಿಗೆ ಮೋದಿ ಆಗಮನ ಹೊತ್ತಲ್ಲೇ ಮತ್ತೆ ಮುನ್ನಲೆಗೆ ಬಂದ ನಾರಾಯಣ ಗುರು ಟ್ಯಾಬ್ಲೋ ವಿವಾದ!

ಶಿವರಾಜ ತಂಗಡಗಿ ಅವರು ದೇಶದ ಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಮೋದಿ ಎಂದು ಕರೆದವರಿಗೆ ಕಪಾಳಕ್ಕೆ ಹೊಡೆಯಿರಿ ಎಂದು ಹೇಳುವ ಶಿವರಾಜ ತಂಗಡಗಿ ಅವರ ಕೂರಿಸಿ ಕಪಾಳಕ್ಕೆ ಹೊಡೆಯಲು ಒಂದು ಸೆಕೆಂಡ್ಸೇ ಕೂಡ ಟೈಮ್ ಆಗೋದಿಲ್ಲ. ಡಾ. ಬಸವರಾಜ ಅವರಿಗೆ ಚಲಾಯಿಸುವ ಮತ ತಂಗಡಗಿ ಕಪಾಳಕ್ಕೆ ಹೊಡೆದಂತೆ ಎಂದು ಭಾವಿಸಿ ಎಂದು ಹೇಳಿದರು. ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಮಾತನಾಡಿ, ಯಲಬುರ್ಗಾ ಕ್ಷೇತ್ರದಲ್ಲಿ ಹಾಲಪ್ಪ ಆಚಾರ್ ಅವರು ನೀರಾವರಿಗಾಗಿ ಕೆರೆ ತುಂಬಿಸುವ ಕೆಲಸ ಮಾಡಿದ್ದಾರೆ. ಶಾಸಕ ಬಸವರಾಜ ರಾಯರೆಡ್ಡಿ ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎಂದರು.

ಮೆರವಣಿಗೆ: ಲೋಕಸಭೆ ಚುನಾವಣೆ ಅಂಗವಾಗಿ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ, ಶಾಸಕ ಜನಾರ್ದನ ರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಣ್ಣನವರ್, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ ಗೌರಾ ಅವರನ್ನು ಪಕ್ಷದ ಕಾರ್ಯಕರ್ತರು ತೆರೆದ ವಾಹನದಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮೂಲಕ ವೇದಿಕೆಗೆ ಕರೆ ತಂದರು. ಕೊಪ್ಪಳ ಲೋಕಸಭಾ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ, ಕನಕಗಿರಿ ಮಾಜಿ ಶಾಸಕ ಬಸವರಾಜ ದಢೇಸೂಗೂರು, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ್, ಬಿಜೆಪಿ ವಕ್ತಾರ ವೀರಣ್ಣ ಹುಬ್ಬಳ್ಳಿ, ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ್ರ ಮಾತನಾಡಿದರು.

ದೇಶಕ್ಕಿಂತ ಕಾಂಗ್ರೆಸ್ಸಿಗರು ಅಭಿವೃದ್ಧಿಯಾಗಿದ್ದೆ ಹೆಚ್ಚು: ಮಾಜಿ ಸಚಿವ ಹಾಲಪ್ಪ ಆಚಾರ್‌

ಮಾಜಿ ಸಚಿವ ಹಾಲಪ್ಪ ಆಚಾರ್, ಬಿಜೆಪಿ ಯಲಬುರ್ಗಾ ಮಂಡಲದ ಅಧ್ಯಕ್ಷ ಮಾರುತಿ ಗಾವರಾಳ, ಜೆಡಿಎಸ್ ಅಧ್ಯಕ್ಷ ಬಸವರಾಜ ಗುಳಗುಳಿ, ಬಸಲಿಂಗಪ್ಪ ಭೂತೆ, ನಾಗರಾಜ ಬಿಲ್ಗಾರ್, ಶಿವಶಂಕರ್ ದೇಸಾಯಿ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ ಗೌರಾ, ವಿಶ್ವನಾಥ ಮರಿಬಸಪ್ಪನವರ್, ಸುರಪುರ ವಕೀಲರು, ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಬಸವನಗೌಡ ತೊಂಡಿಹಾಳ, ಸಿ.ಎಸ್. ಪಾಟೀಲ್, ಅಯ್ಯನಗೌಡ ಕೆಂಚಮ್ಮನವರ್ ಇದ್ದರು.

Follow Us:
Download App:
  • android
  • ios