Asianet Suvarna News Asianet Suvarna News

ಕಾಂಗ್ರೆಸ್‌ ನಲ್ಲಿ ಅಯೋಮಯ!

 ಮೈತ್ರಿಕೂಟ ಸರ್ಕಾರ ಕೆಡವಲು ಬಿಜೆಪಿ ನಡೆಸುತ್ತಿದೆ ಎನ್ನಲಾದ ಆಪರೇಷನ್‌ ಕಮಲದ ಆಶಂಕೆ ಗಟ್ಟಿಯಾಗುವಂತೆ ಕಾಂಗ್ರೆಸ್‌ನ ಕೆಲ ಶಾಸಕರು ಶನಿವಾರ ವರ್ತಿಸಿದ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದ ಡೋಲಾಯಮಾನ ಪರಿಸ್ಥಿತಿ ಶನಿವಾರವೂ ಮುಂದುವರೆಯಿತು.

Twists And Turns In  Karnataka Politics
Author
Bengaluru, First Published Sep 23, 2018, 7:24 AM IST

ಬೆಂಗಳೂರು :  ಮೈತ್ರಿಕೂಟ ಸರ್ಕಾರ ಕೆಡವಲು ಬಿಜೆಪಿ ನಡೆಸುತ್ತಿದೆ ಎನ್ನಲಾದ ಆಪರೇಷನ್‌ ಕಮಲದ ಆಶಂಕೆ ಗಟ್ಟಿಯಾಗುವಂತೆ ಕಾಂಗ್ರೆಸ್‌ನ ಕೆಲ ಶಾಸಕರು ಶನಿವಾರ ವರ್ತಿಸಿದ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದ ಡೋಲಾಯಮಾನ ಪರಿಸ್ಥಿತಿ ಶನಿವಾರವೂ ಮುಂದುವರೆದಿದೆ.

ರಾಜ್ಯ ಸಮ್ಮಿಶ್ರ ಸರ್ಕಾರ ಅಸ್ಥಿರಗೊಳ್ಳುವ ವದಂತಿ ದಟ್ಟಗೊಳ್ಳುತ್ತಿದ್ದಂತೆಯೇ ಕಾಂಗ್ರೆಸ್‌ನ ಹಲವು ಶಾಸಕರು ನಾಯಕರ ಸಂಪರ್ಕಕ್ಕೆ ಸಿಗದಿರುವುದು, ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್‌ ನೇತೃತ್ವದಲ್ಲಿ ಮೂವರು ಶಾಸಕರು ಚೆನ್ನೈನತ್ತ ಪ್ರಯಾಣ ಬೆಳೆಸಿರುವುದು ಹಾಗೂ ಹಲವು ಶಾಸಕರು ಆಗಲೇ ಮುಂಬೈಗೆ ತೆರಳಿದ್ದಾರೆ ಎಂಬ ವದಂತಿ ಹುಟ್ಟಿಕೊಂಡಿರುವುದು ಗೊಂದಲಕ್ಕೆ ಕಾರಣವಾಗಿದೆ.

ಕಾಂಗ್ರೆಸ್‌ನ ಕೆಲ ಶಾಸಕರು ಒಗ್ಗೂಡಿ ಪ್ರವಾಸ ಹೊರಡುತ್ತಿರುವುದು ಹಾಗೂ ನಾಯಕರ ಕೈಗೆ ದೊರೆಯದೇ ಸತಾಯಿಸುತ್ತಿರುವುದಕ್ಕೆ ಬಿಜೆಪಿ ಪ್ರೇರಿತ ಆಪರೇಷನ್‌ ಕಮಲ ಕಾರಣ ಎಂದು ಒಂದು ಮೂಲ ಹೇಳಿದರೆ, ಮತ್ತೊಂದು ಮೂಲದ ಪ್ರಕಾರ ಶೀಘ್ರವೇ ನಡೆಯಲಿರುವ ಸಚಿವ ಸಂಪುಟ ವಿಸ್ತರಣೆ ವೇಳೆ ತಮಗೆ ಸಚಿವ ಸ್ಥಾನ ನೀಡುವಂತೆ ಪಕ್ಷದ ನಾಯಕರ ಮೇಲೆ ಒತ್ತಡ ಹೇರಲು ಶಾಸಕರು ನಡೆಸುತ್ತಿರುವ ತಂತ್ರವಿದು.

ಶನಿವಾರ ಇಡೀ ದಿನ ರಾಜಕೀಯ ವದಂತಿಗಳ ಮೇಲಾಟ ನಡೆದಿತ್ತು. ಡಾ. ಸುಧಾಕರ್‌ ಅವರು ತಮ್ಮ ನಿವಾಸದಿಂದ ಮೂರು ಜನ ಶಾಸಕರೊಂದಿಗೆ ಚೆನ್ನೈಗೆ ಪ್ರವಾಸ ಹೊರಟಿದ್ದರಿಂದ ಇದು ಆರಂಭಗೊಂಡಿತ್ತು. ಸುಧಾಕರ್‌, ಎಂಟಿಬಿ ನಾಗರಾಜ್‌ ಹಾಗೂ ನಾಗೇಶ್‌ ಒಂದೇ ಕಾರಿನಲ್ಲಿ ಚೆನ್ನೈನತ್ತ ಪ್ರಯಾಣ ಬೆಳೆಸಿದ್ದು ಹಾಗೂ ಆನಂದ್‌ಸಿಂಗ್‌, ಶಿವಣ್ಣ ಸೇರಿದಂತೆ ಹಲವು ಶಾಸಕರು ಕಾಂಗ್ರೆಸ್‌ ನಾಯಕರ ಸಂಪರ್ಕಕ್ಕೆ ಸಿಗದೆ ಇದ್ದ ಕಾರಣ ತೀವ್ರ ಗೊಂದಲ ಉಂಟಾಗಿತ್ತು. ಅತೃಪ್ತ ಶಾಸಕರೆಲ್ಲಾ ಆಪರೇಷನ್‌ ಕಮಲಕ್ಕೆ ಒಳಗಾಗಿ ಗುಂಪು ಸೇರುತ್ತಿದ್ದಾರೆಯೇ ಎಂಬ ಅನುಮಾನ ಹುಟ್ಟಿತ್ತು. ಆನಂದ್‌ ಸಿಂಗ್‌ ಅವರು ಮುಂಬೈನ ಹೋಟೆಲ್‌ನಲ್ಲಿದ್ದಾರೆ ಎಂಬ ವದಂತಿಯೂ ಹುಟ್ಟಿಕೊಂಡಿತ್ತು.

ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೋಲಾರಕ್ಕೆ ತೆರಳಿದ್ದ ಸಿದ್ದರಾಮಯ್ಯ ಅವರು ಸಂಜೆಯ ವೇಳೆಗೆ ನಗರಕ್ಕೆ ಹಿಂತಿರುಗಿದ ಕೂಡಲೇ ಕಾಂಗ್ರೆಸ್‌ನಲ್ಲಿ ಸರಣಿ ಸಭೆಗಳು ನಡೆಯಲು ಆರಂಭಗೊಂಡವು. ಶಾಸಕ ಜಮೀರ್‌ ಅಹ್ಮದ್‌ ಖಾನ್‌ ಅವರು ಆನಂದ್‌ಸಿಂಗ್‌ ಅವರನ್ನು ಸಿದ್ದರಾಮಯ್ಯ ಅವರ ನಿವಾಸಕ್ಕೆ ಕರೆದುಕೊಂಡು ಹೋಗಿ ಭೇಟಿ ಮಾಡಿಸಿದರು. ಈ ಸಂದರ್ಭದಲ್ಲಿ ಆನಂದ್‌ ಸಿಂಗ್‌ ಬಳ್ಳಾರಿ ಜಿಲ್ಲೆಗೆ ಸಚಿವ ಸ್ಥಾನ ನೀಡುವುದಾದರೆ ತಮಗೆ ನೀಡಬೇಕು ಎಂದು ಆಗ್ರಹ ಮಾಡಿದ್ದು, ಯಾವ ಕಾರಣಕ್ಕೂ ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಬಾರದು ಎಂದು ಒತ್ತಾಯಿಸಿದರು ಎನ್ನಲಾಗಿದೆ.

ಇದೇ ವೇಳೆ ಮಳವಳ್ಳಿ ಶಾಸಕ ಅನ್ನದಾನಿ, ಶಾಸಕ ಭೀಮಾನಾಯಕ್‌, ಗಣೇಶ್‌ ಸೇರಿದಂತೆ ಹಲವು ಶಾಸಕರು ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿ ನಾವು ಎಲ್ಲೂ ಹೋಗಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದರ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌, ಸಚಿವ ಕೃಷ್ಣ ಬೈರೇಗೌಡ, ಜಮೀರ್‌ ಅಹ್ಮದ್‌ ಖಾನ್‌ ಸೇರಿದಂತೆ ಹಲವು ನಾಯಕರು ಸಿದ್ದರಾಮಯ್ಯ ನಿವಾಸಕ್ಕೆ ದೌಡಾಯಿಸಿ ಚರ್ಚೆ ನಡೆಸಿದರು.

ಈ ಸಭೆಯಲ್ಲೂ ಪಾಲ್ಗೊಂಡಿದ್ದ ಶಾಸಕ ಆನಂದ್‌ ಸಿಂಗ್‌, ಭೀಮಾನಾಯಕ್‌, ಗಣೇಶ್‌ ಸೇರಿದಂತೆ ಹಲವು ಶಾಸಕರು ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿ ಪಕ್ಷದಲ್ಲೇ ಉಳಿಯುತ್ತೇವೆ. ಆದರೆ ಬಳ್ಳಾರಿ ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ ಆನೇಕಲ್‌ ಶಾಸಕ ಶಿವಣ್ಣ ಅವರು ದೂರವಾಣಿ ಮೂಲಕ ಕರೆ ಮಾಡಿ ನಾನು ಮುರ್ಡೇಶ್ವರದಲ್ಲಿದ್ದು, ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಬಿಟ್ಟು ಹೋಗುವುದಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ತಿಳಿಸಿದರು.

ಇನ್ನೂ ಕೆಲ ಕಾಂಗ್ರೆಸ್‌ ಶಾಸಕರು ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಅ.4ರಂದು ನಡೆಯಲಿರುವ ವಿಧಾನಪರಿಷತ್‌ ಚುನಾವಣೆಗೆ ಮೊದಲೇ ಟೆಸ್ಟ್‌ ರನ್‌ ನಡೆಸಲು ಕಾಂಗ್ರೆಸ್‌ ಮುಂದಾಗಿದೆ. ಹೀಗಾಗಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೆ.25ಕ್ಕೆ ಕಾಂಗ್ರೆಸ್‌ನ ಎಲ್ಲಾ ಶಾಸಕರ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಈ ವೇಳೆ ಬಿಜೆಪಿಯತ್ತ ತೆರಳುತ್ತಿರುವ ಶಾಸಕರು ಎಷ್ಟು, ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಏನು ಮಾಡಬೇಕು ಎಂಬ ಚರ್ಚೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

Follow Us:
Download App:
  • android
  • ios