Asianet Suvarna News Asianet Suvarna News

ದೆಹಲಿ ಕರ್ನಾಟಕ ಭವನಕ್ಕೆ ಇನ್ನು ರಾಜ್ಯದ ಪೊಲೀಸರಿಂದ ಕಾವಲು

ದೆಹಲಿ ಕರ್ನಾಟಕ ಭವನಕ್ಕೆ ಇನ್ನು ರಾಜ್ಯದ ಪೊಲೀಸರಿಂದ ಕಾವಲು |  ಮೂರು ಭವನಗಳಿಗೆ ಭದ್ರತೆಗೆ ಸರ್ಕಾರ ತೀರ್ಮಾನ | ಕರ್ನಾಟಕ ಭವನದ ಭದ್ರತೆಯ ಜವಾಬ್ದಾರಿಯನ್ನು ಮೀಸಲು ಪಡೆ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

State police security provide to Dehli Karnataka Bhavan
Author
Bengaluru, First Published Apr 2, 2019, 9:19 AM IST

ನವದೆಹಲಿ (ಏ. 02):  ದೆಹಲಿಯಲ್ಲಿರುವ ರಾಜ್ಯದ ಮೂರು ಕರ್ನಾಟಕ ಭವನಗಳಿಗೆ ಶಸ್ತ್ರಾಸ್ತ್ರ ಭದ್ರತೆಯನ್ನು ಒದಗಿಸಲು ರಾಜ್ಯಸರ್ಕಾರ ಮುಂದಾಗಿದ್ದು ರಾಜ್ಯ ಮೀಸಲು ಪೊಲೀಸ್‌ ಪಡೆಯ ಒಂದು ಪ್ಲಟೂನ್‌ ಈಗಾಗಲೇ ದೆಹಲಿಯಲ್ಲಿ ತನ್ನ ಕರ್ತವ್ಯ ಪ್ರಾರಂಭಿಸಿದೆ.

ರಾಜ್ಯದ ರಾಜ್ಯಪಾಲರು, ಮುಖ್ಯಮಂತ್ರಿಗಳು, ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ, ನ್ಯಾಯಮೂರ್ತಿಗಳು, ಸಚಿವರು, ಮಾಜಿ ಸಚಿವರಿಗೆ ವಾಸ್ತವ್ಯಕ್ಕೆ ವ್ಯವಸ್ಥೆ ಇರುವ ಕರ್ನಾಟಕ ಭವನದ ಭದ್ರತೆಯ ಜವಾಬ್ದಾರಿಯನ್ನು ಮೀಸಲು ಪಡೆ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಲೋಕಸಭಾ ಚುನಾವಣೆ ಮುಕ್ತಾಯಗೊಂಡ ಬಳಿಕ ಕರ್ನಾಟಕ ಭವನ 2 ಮತ್ತು ಕರ್ನಾಟಕ ಭವನ 3ಕ್ಕೂ ಪೊಲೀಸ್‌ ಭದ್ರತೆ ವಿಸ್ತರಣೆಗೊಳ್ಳಲಿದೆ.

ಈವರೆಗೆ ರಾಜ್ಯದ ಭವನಗಳ ಭದ್ರತೆಯನ್ನು ಖಾಸಗಿ ಭದ್ರತಾ ಸಂಸ್ಥೆಗಳು ನೋಡಿಕೊಳ್ಳುತ್ತಿದ್ದವು. ಕಳೆದ ಫೆಬ್ರವರಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಯೋಗದೊಂದಿಗೆ ಬಂದಿದ್ದ ಸಾಹಿತಿಗಳು, ದೆಹಲಿಯ ಸ್ಥಳೀಯರೊಂದಿಗೆ ಸೇರಿ ಕರ್ನಾಟಕ ಭವನದಲ್ಲಿ ಅನಧಿಕೃತ ಪಾರ್ಟಿ ನಡೆಸಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

ಘಟನೆಯ ಬಳಿಕ ಪ್ರಕರಣದ ಸಮಗ್ರ ತನಿಖೆ ನಡೆಸಿದ ಸ್ಥಾನಿಕ ಆಯುಕ್ತರು ಈ ಪಾರ್ಟಿಯಲ್ಲಿ ಅನಧಿಕೃತ ವ್ಯಕ್ತಿಗಳು ಭಾಗಿಯಾಗಿದ್ದು ಭದ್ರತಾ ಲೋಪವೇ ಕಾರಣವೆಂದು ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ವರದಿ ನೀಡಿದ್ದರು ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ಕರ್ನಾಟಕ ಭವನದ ಅಕ್ಕಪಕ್ಕದಲ್ಲಿರುವ ಗುಜರಾತ್‌ ಭವನ, ಜಮ್ಮು ಮತ್ತು ಕಾಶ್ಮೀರ ಭವನ ಸೇರಿದಂತೆ ರಾಜಸ್ಥಾನ ಭವನ ಮತ್ತು ಆಂಧ್ರ ಪ್ರದೇಶ ಭವನಗಳಿಗೆ ಮಾತ್ರ ಆಯಾ ರಾಜ್ಯಗಳ ಪೊಲೀಸರು ಭದ್ರತೆಗೆ ನಿಯೋಜನೆಗೊಂಡಿದ್ದಾರೆ.

ಭವನದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಸಿಬ್ಬಂದಿ ಬದಲಾಗುತ್ತಾರೆ. ಮೀಸಲು ಪಡೆಯಲ್ಲಿ 16 ಬೆಟಾಲಿಯನ್‌ ಇದ್ದು ಪ್ರತಿ ಬೆಟಾಲಿಯನ್‌ನ ಒಂದು ಪ್ಲಟೂನ್‌ ಅನ್ನು ಸರದಿ ಪ್ರಕಾರ ಕಳುಹಿಸಿಕೊಡಲಾಗುತ್ತದೆ. ಸದ್ಯ ಕರ್ನಾಟಕ ಭವನದ ಭದ್ರತಾ ವ್ಯವಸ್ಥೆಯನ್ನು ಮಾತ್ರ ನಾವು ನಿರ್ವಹಿಸುತ್ತೇವೆ. ರಸ್ತೆಯಲ್ಲಿ ಭದ್ರತೆ ನೀಡುವ ಜವಾಬ್ದಾರಿಯನ್ನು ದೆಹಲಿ ಪೊಲೀಸರೇ ನಿರ್ವಹಿಸಲಿದ್ದಾರೆ

-ಭಾಸ್ಕರ್‌ ರಾವ್‌, ಹೆಚ್ಚುವರಿ ಮಹಾ ನಿರ್ದೇಶಕ, ರಾಜ್ಯ ಮೀಸಲು ಪಡೆ

Follow Us:
Download App:
  • android
  • ios