Asianet Suvarna News Asianet Suvarna News

ಬಿಎಸ್’ಎಫ್‌ಗೆ ಮೊತ್ತ ಮೊದಲ ಕನ್ನಡಿಗ ಮಹಿಳಾ ಅಧಿಕಾರಿ

ಗಡಿಭದ್ರತಾ ಪಡೆಯ (ಬಿಎಸ್‌ಎಫ್) ಮೊದಲ ಮಹಿಳಾ ಅಧಿಕಾರಿಯಾಗಿ ರಾಜಸ್ಥಾನದ ತನುಶ್ರೀ ಪಾರೇಖ್ ಆಯ್ಕೆಯಾಗಿದ್ದು ಇತ್ತೀಚೆಗೆ ಸುದ್ದಿಯಾಗಿತ್ತು. ಆದರೆ, ಇದೇ ಪಡೆಯ ಎರಡನೇ ಅಧಿಕಾರಿಯಾಗಿ ಕನ್ನಡತಿಯೊಬ್ಬರು ಆಯ್ಕೆಯಾಗಿರುವುದು ಬಹುತೇಕರಿಗೆ ಗೊತ್ತಿಲ್ಲ.

Spoorthi Bhat First Kannadiga Woman Officer in BSF

ಮಂಗಳೂರು: ಗಡಿಭದ್ರತಾ ಪಡೆಯ (ಬಿಎಸ್‌ಎಫ್) ಮೊದಲ ಮಹಿಳಾ ಅಧಿಕಾರಿಯಾಗಿ ರಾಜಸ್ಥಾನದ ತನುಶ್ರೀ ಪಾರೇಖ್ ಆಯ್ಕೆಯಾಗಿದ್ದು ಇತ್ತೀಚೆಗೆ ಸುದ್ದಿಯಾಗಿತ್ತು. ಆದರೆ, ಇದೇ ಪಡೆಯ ಎರಡನೇ ಅಧಿಕಾರಿಯಾಗಿ ಕನ್ನಡತಿಯೊಬ್ಬರು ಆಯ್ಕೆಯಾಗಿರುವುದು ಬಹುತೇಕರಿಗೆ ಗೊತ್ತಿಲ್ಲ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದ ಸ್ಫೂರ್ತಿ ಭಟ್ ಬಿಎಸ್‌ಎಫ್ ಸಹಾಯಕ ಕಮಾಂಡೆಂಟ್ ಆಗಿ ಆಯ್ಕೆಯಾಗಿದ ಯುವತಿ. ಹವಾನಿಯಂತ್ರಿತ ಕೊಠಡಿಯಲ್ಲಿ ಕೂತು ಸಂಬಳ ಎಣಿಸುವ ಎಂಜಿನಿಯರಿಂಗ್ ಕೆಲಸಕ್ಕೆ ಗುಡ್‌ಬೈ ಹೇಳಿದ ಸ್ಫೂರ್ತಿ ದೇಶದ ಗಡಿ ಕಾಯುವ ಕೆಲಸಕ್ಕೆ ಸಜ್ಜಾಗಲಿದ್ದಾರೆ. ಈ ಮೂಲಕ ರಾಜ್ಯದ ಇತರೆ ಯುವತಿಯರ ಪಾಲಿಗೂ ‘ಸ್ಫೂರ್ತಿ’ಯಾಗಿದ್ದಾರೆ.

ಬಿಎಸ್‌ಎಫ್‌ಗೆ ನೇಮಕಗೊಂಡಿರುವ ರಾಜಸ್ಥಾನದ ತನುಶ್ರೀ ಪಾರೇಖ್ ಈಗಾಗಲೇ ತರಬೇತಿ ಪಡೆದು ಪಂಜಾಬ್‌ನ ಗಡಿಯಲ್ಲಿ ಮೊದಲ ಮಹಿಳಾ ಸಹಾಯಕ ಕಮಾಂಡೆಂಟ್ ಆಗಿ ಇತ್ತೀಚೆಗೆ ಕೆಲಸ ಆರಂಭಿಸಿದ್ದಾರೆ. ಸ್ಫೂರ್ತಿ ಭಟ್ ಗ್ವಾಲಿಯರ್‌ನಲ್ಲಿರುವ ಬಿಎಫ್‌ಎಫ್ ಅಕಾಡೆಮಿಯಲ್ಲಿ ಆರು ತಿಂಗಳಿಂದ ತರಬೇತಿ ಪಡೆಯುತ್ತಿದ್ದು, ಇನ್ನೂ ಆರು ತಿಂಗಳ ತರಬೇತಿ ಬಾಕಿ ಇದೆ. ಬಳಿಕ ಸ್ಫೂರ್ತಿ ಕೂಡ ಸಹಾಯಕ ಕಮಾಂಡೆಂಟ್ ಆಗಿ ನೇಮಕಗೊಳ್ಳಲಿದ್ದಾರೆ.

2ನೇ ಮಹಿಳಾ ಅಧಿಕಾರಿ: ಕೇಂದ್ರೀಯ ಆರ್ಮ್‌ಡ್ ಪೊಲೀಸ್ ಫೋರ್ಸ್(ಸಿಎಪಿಎಫ್)ನಲ್ಲಿ ಕೈಗಾರಿಕಾ ಭದ್ರತಾಪಡೆ, ಸಶಸ್ತ್ರ ಸೀಮಾಬಲ, ಬಿಎಸ್‌ಎಫ್, ಸಿಆರ್’ಪಿಎಫ್ ಹಾಗೂ ಇಂಡೋ ಟಿಬೆಟಿಯನ್ ಪಡೆಗಳಲ್ಲಿ ಆಡಳಿತ ಹಾಗೂ ವೈದ್ಯಕೀಯ ವಿಭಾಗಗಳಲ್ಲಿ ಮಹಿಳೆಯರಿದ್ದಾರೆ. ಆದರೆ ಬಿಎಸ್‌ಎಫ್‌ನಲ್ಲಿ ಅಧಿಕಾರಿಯಾಗಿ ಮಹಿಳೆಯರ ನೇಮಕ ಆರಂಭಗೊಂಡಿದ್ದು 2013ರಲ್ಲಿ. ಈ ಬ್ಯಾಚ್‌ನಲ್ಲಿ ಅಧಿಕಾರಿಯಾಗಿ ಆಯ್ಕೆಯಾದ ಮೊದಲ ಯುವತಿ ತನುಶ್ರೀ ಪಾರೇಖ್. 2014ರ ಬ್ಯಾಚ್‌ನಲ್ಲಿ ಮಹಿಳೆಯರ್ಯಾರೂ ಕಮಾಂಡೆಂಟ್ ಆಗಿ ಆಯ್ಕೆಯಾಗಿರಲಿಲ್ಲ.

ಸ್ಫೂರ್ತಿ ಭಟ್ 2015ನೇ ಬ್ಯಾಚ್‌ನವರು. 2016ನೇ ಬ್ಯಾಚ್‌ನಲ್ಲಿ ಇಬ್ಬರು ಯುವತಿಯರು ತರಬೇತಿ ಪಡೆದಿದ್ದು, ನವೆಂಬರ್ ವೇಳೆಗೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.

ಎಂಜಿನಿಯರಿಂಗ್ ಕೆಲಸಕ್ಕೆ ಗುಡ್‌ಬೈ: ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿರುವ ಸ್ಫೂರ್ತಿ ಭಟ್, ಎರಡು ವರ್ಷ ಕಾಲ ಖಾಸಗಿ  ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದರು. ಇದೇ ವೇಳೆ ಯುಪಿಎಸ್‌ಸಿ ಪರೀಕ್ಷೆಗೂ ಸಿದ್ಧತೆ ನಡೆಸಿದ್ದರು. ರೈಲ್ವೆ ಪರೀಕ್ಷೆ ಬರೆದು ಹಿರಿಯ ವಿಭಾಗದಲ್ಲಿ ಎಂಜಿನಿಯರ್ ಹುದ್ದೆಗೆ ಆಯ್ಕೆಯಾಗಿ ತರಬೇತಿಯನ್ನೂ ಪೂರೈಸಿದ್ದರು. ಅಷ್ಟರಲ್ಲಿ ಯುಪಿಎಸ್‌ಸಿ ನಡೆಸಿದ ಸಿಎಪಿಎಫ್ ಪರೀಕ್ಷೆ ಫಲಿತಾಂಶವೂ ಬಂದಿತ್ತು. ಇದರಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾಪಡೆ ಅಥವಾ ಬಿಎಸ್‌ಎಫ್‌ರಲ್ಲಿ ಒಂದನ್ನು ಸ್ಫೂರ್ತಿ ಆಯ್ಕೆ ಮಾಡಿಕೊಂಡಿದ್ದರು. ಕೈಗಾರಿಕಾ ಭದ್ರತಾಪಡೆಗೆ ಅವಕಾಶ ಸಿಗಲಿಲ್ಲ. ಆದರೆ ರೈಲ್ವೆ ಇಲಾಖೆ ಅಥವಾ ಮಿಲಿಟರಿ ಈ ಎರಡು ಅವಕಾಶಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದಾಗಿತ್ತು. ಕೊನೆಗೆ ಸ್ಫೂರ್ತಿ ಆರಿಸಿಕೊಂಡದ್ದು ಬಿಎಸ್‌ಎಫ್ ಅನ್ನು.

ತಂದೆ, ಸ್ನೇಹಿತರು ಸ್ಫೂರ್ತಿ!

ಮಿಲಿಟರಿಗೆ ಸೇರಲು ಸ್ಫೂರ್ತಿಗೆ ಸ್ಫೂರ್ತಿಯಾದ್ದು ಆಕೆಯ ತಂದೆ ಹಾಗೂ ಸ್ನೇಹಿತರಂತೆ. ತಂದೆ ಕೆ.ಬಾಲಸುಬ್ರಹ್ಮಣ್ಯ ಭಟ್ ಕೇಂದ್ರೀಯ ಕಸ್ಟಮ್ಸ್ ವಿಭಾಗದಲ್ಲಿ ಹೆಚ್ಚುವರಿ ನಿರ್ದೇಶಕರಾಗಿ ಇತ್ತೀಚೆಗೆ ನಿವೃತ್ತರಾಗಿದ್ದಾರೆ. ಸ್ಫೂರ್ತಿ ಸಹೋದರಿ ಪ್ರಶಸ್ತಿ ಭಟ್ ದೆಹಲಿಯ ಕಾನೂನು ವಿವಿಯಲ್ಲಿ ಎಲ್‌ಎಲ್‌ಬಿ ಕಲಿಯುತ್ತಿದ್ದಾರೆ. ಪ್ರಸ್ತುತ ಸ್ಫೂರ್ತಿ ತಂದೆ ಪುತ್ತೂರಿನ ಉಪ್ಪಿನಂಗಡಿಯ ಬನ್ನೆಂಗಳದಲ್ಲಿ ವಾಸವಿದ್ದಾರೆ.

 

 

Follow Us:
Download App:
  • android
  • ios