Asianet Suvarna News Asianet Suvarna News

ಲೋಕಸಭಾ ಚುನಾವಣೆ ಮುಗಿಯುವವರೆಗೆ ಸಂಪುಟ ವಿಸ್ತರಣೆ ಇಲ್ಲ?

ಮಂತ್ರಿಗಿರಿ ಆಕಾಂಕ್ಷಿಗಳಿಗೆ ನಿಗಮ-ಮಂಡಳಿ ಅಧ್ಯಕ್ಷಪಟ್ಟ | ಸಂಪುಟ ವಿಸ್ತರಣೆಯಿಂದ ಬಂಡಾಯ ತಪ್ಪಿಸಲು ಈ ಪ್ಲಾನ್ | ಎಂಪಿ ಎಲೆಕ್ಷನ್‌ವರೆಗೂ ಸಂಪುಟ ವಿಸ್ತರಣೆ ಇಲ್ಲ?

No cabinet expansion till Loksabha Election
Author
Bengaluru, First Published Oct 11, 2018, 7:33 AM IST

ಬೆಂಗಳೂರು (ಅ. 11): ಲೋಕಸಭಾ ಚುನಾವಣೆ ಮುಗಿಯುವವರೆಗೂ ಸಚಿವ ಸಂಪುಟ ವಿಸ್ತರಣೆ ಮುಂದೂಡುವ ಹವಣಿಕೆಯಲ್ಲಿರುವ ಕಾಂಗ್ರೆಸ್ ನಾಯಕರು, ಅದುವರೆಗೂ ಸಚಿವ ಸ್ಥಾನದ ಆಕಾಂಕ್ಷಿಗಳು ಬಂಡಾಯವೇಳದಂತೆ ತಡೆಯಲು ನಿಗಮ- ಮಂಡಳಿ ಅಧ್ಯಕ್ಷ ಸ್ಥಾನದ ತುಪ್ಪ ಹಚ್ಚಲು ನಿರ್ಧರಿಸಿದಾರೆ.

ಕಾಂಗ್ರೆಸ್‌ನ ಉನ್ನತ ಮೂಲಗಳ ಪ್ರಕಾರ, ಸಚಿವ ಸ್ಥಾನದ ಆಕಾಂಕ್ಷಿಗಳು ಸೇರಿದಂತೆ ೨೫ ಶಾಸಕರನ್ನು ಶೀಘ್ರವೇ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ಘೋಷಿಸಲು ನಿರ್ಧರಿಸಲಾಗಿದ್ದು, ಈ ಸಂಬಂಧಿ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಮತ್ತು ಎಲ್ಲಾ 25 ಶಾಸಕರಿಗೆ ಸಂಪುಟ ದರ್ಜೆಯ ಸ್ಥಾನಮಾನಕ್ಕೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ. ಈ ಪಟ್ಟಿ ಶೀಘ್ರವೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ರವಾನೆಯಾಗಲಿದೆ.

ರಾಜ್ಯ ಉಸ್ತುವಾರಿ ವೇಣುಗೋಪಾಲ್ ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ ವೇಳೆ 25 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಇದಕ್ಕೆ ಮುಖ್ಯ ಕಾರಣ ಲೋಕಸಭಾ ಚುನಾವಣೆ ಮುಗಿಯುವವರೆಗೂ ಸಚಿವ ಸಂಪುಟ ವಿಸ್ತರಣೆ ಮಾಡುವ ಮನಸ್ಥಿತಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಇಲ್ಲ. ( ಶಾಸಕರ ಬಂಡಾಯ ಮೇರೆ ಮೀರಿ ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆ ತರುವಂತಹ ಅಥವಾ ಪಕ್ಷಕ್ಕೆ ಭಾರಿ ಹಾನಿಯಾಗುವಂತಹ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗದ ಹೊರತು ಲೋಕಸಭೆ ಚುನಾವಣೆಗೂ ಮುನ್ನ ಸಂಪುಟ ವಿಸ್ತರಣೆ ನಡೆಯುವುದಿಲ್ಲ!)

ಪಕ್ಷದ ಈ ನಿರ್ಧಾರದಿಂದ ಸಹಜವಾಗಿಯೇ ಸಚಿವ ಸ್ಥಾನಾಕಾಂಕ್ಷಿಗಳಲ್ಲಿ ಅಸಮಾಧಾನ ಆರಂಭವಾಗಲಿದೆ. ಅದು ಕ್ರಮೇಣ ಬಂಡಾಯ ಸ್ವರೂಪ ಪಡೆಯಬಹುದು ಎಂಬ ಆಂತಕವೂ ಕಾಂಗ್ರೆಸ್ ನಾಯಕರಿಗೆ ಇದೆ. ಹೀಗಾಗಿ, ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಶಾಸಕರನ್ನು ಕರೆದು ಅವರ ಮನವೊಲಿಸಿ ಸದ್ಯಕ್ಕೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ಹಾಗೂ ಅದರ ಜತೆಗೆ ಬರುವ ಸಂಪುಟ ದರ್ಜೆ ಸ್ಥಾನವನ್ನು ಪಡೆದುಕೊಳ್ಳಿ. ಸಂಪುಟ ವಿಸ್ತರಣೆಯಾಗುವಾಗ ಖಂಡಿತವಾಗಿಯೂ ಸಚಿವ ಸ್ಥಾನವನ್ನು ನೀಡಲಾಗುವುದು ಎಂದು ತಿಳಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಈ ಮೂಲಗಳ ಪ್ರಕಾರ ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ತುಕಾರಾಂ, ಬಿ.ಸಿ. ಪಾಟೀಲ್, ಎಂ.ಟಿ.ಬಿ. ನಾಗರಾಜ್, ಡಾ.ಸುಧಾಕರ್, ಎಸ್.ಟಿ.ಸೋಮಶೇಖರ್, ನಾಗೇಂದ್ರ ಅವರು ಸೇರಿದಂತೆ ೨೫ ಶಾಸಕರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಈ ಶಾಸಕರಿಗೆ ನೀಡಬೇಕಾದ ನಿಗಮ ಮಂಡಳಿಗಳ ಬಗ್ಗೆಯೂ ತೀರ್ಮಾನವಾಗಬೇಕಿದೆ. ಈ ತೀರ್ಮಾನವನ್ನು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಹೆಗಲಿಗೆ ವಹಿಸಲಾಗಿದೆ. 

Follow Us:
Download App:
  • android
  • ios