Asianet Suvarna News Asianet Suvarna News

ಸಿಬಿಐಗೆ ಬಾಗಿಲು ಮುಚ್ಚಿದ ಸರ್ಕಾರ!

ಸಿಬಿಐ ತಂಡವು ಇನ್ಮುಂದೆ ರಾಜ್ಯಕ್ಕೆ ಸಂಬಂಧಿಸಿದ ಯಾವುದೇ ವಿಚಾರದ ತನಿಖೆಗೂ ಮೊದಲು ಸರ್ಕಾರದ ಅನುಮತಿ ಪಡೆಯುವುದು ಅಗತ್ಯ ಎಂದು ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರವು ಹೇಳಿಕೆ ನೀಡಿದೆ.

Chandrababu Naidu bars CBI from entering Andhra Pradesh  without approval
Author
Hyderabad, First Published Nov 16, 2018, 2:20 PM IST

ಸಿಬಿಐ ತಂಡವು ಇನ್ಮುಂದೆ ಆಂಧ್ರ ಪ್ರದೇಶಕ್ಕೆ ಸಂಬಂಧಿಸಿದ ಯಾವುದೇ ವಿಚಾರದ ತನಿಖೆಗೂ ಮೊದಲು ಅಲ್ಲಿನ ಸರ್ಕಾರದ ಅನುಮತಿ ಪಡೆಯುವುದು ಅಗತ್ಯ. ಕೇಂದ್ರೀಯ ತನಿಖಾ ತಂಡದ ಅಧಿಕಾರಿಗಳು ಆಂಧ್ರ ಪ್ರದೇಶ ಪ್ರವೇಶಿಸುವ ಮುನ್ನ ಸರ್ಕಾರದ ಅನುಮತಿ ಪಡೆಯಲೇಬೇಕು ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ. ಸರ್ಕಾರದ ಈ ಹೇಳಿಕೆಯಿಂದ ಆಂಧ್ರ ಪ್ರದೇಶ ಹಾಗೂ ಸಿಬಿಐ ನಡುವೆ ಕಂದಕವೇರ್ಪಟ್ಟಿದ್ದು, ವಿವಾದಕ್ಕೆ ಕಾರಣವಾಗಿದೆ.

ರಾಜ್ಯ ಸರ್ಕಾರವು ಇದಕ್ಕೆ ಸಂಬಂಧಿಸಿದಂತೆ ಆದೇಶ ಪತ್ರವನ್ನೂ ಜಾರಿಗೊಳಿಸಿದ್ದು, ಇದರಲ್ಲಿ 'ಸಿಬಿಐ ಅಧಿಕಾರಿಗಳು ಇನ್ಮುಂದೆ ರಾಜ್ಯದಲ್ಲಿ ಯಾವುದೇ ರೀತಿಯ ತನಿಖೆ ಕೈಗೊಳ್ಳುವ ಮೊದಲು ಅಥವಾ ಯಾವುದೇ ರೀತಿಯ ಕಾರ್ಯಾಚರಣೆ ನಡೆಸುವ ಮೊದಲು ಸರ್ಕಾರಕ್ಕೆ ಸೂಚಿಸಬೇಕು. ಇದಾದ ಬಳಿಕ ಲಿಖಿತ ರೂಪದಲ್ಲಿ ಅನುಮತಿ ಪಡೆಯಬೇಕು. ಪರವಾನಿಗೆ ಇಲ್ಲದೇ ಯಾವೊಬ್ಬ ಅಧಿಕಾರಿಗೂ ರಾಜ್ಯದೊಳಗೆ ಪ್ರವೇಶಿಸಲು ಬಿಡುವುದಿಲ್ಲ' ಎಂದು ಸ್ಪಷ್ಟಪಡಿಸಿದೆ.

ಈ ವಾರದಲ್ಲಿ ಜಾರಿಗೊಳಿಸಿರುವ ಈ ಆದೇಶ ಪ್ರತಿಗೆ ಸಂಬಂಧಿಸಿದಂತೆ ದಿಲ್ಲಿ ಸ್ಪೆಷಲ್ ಪೊಲೀಸ್ ಎಷ್ಟಾಬ್ಲಿಷ್‌ಮೆಂಟ್ ಆ್ಯಕ್ಟ್ 1946ನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿದೆ. ಸಿಬಿಐಯು ದಿಲ್ಲಿ ಸ್ಪೆಷಲ್ ಪೊಲೀಸ್ ಎಷ್ಟಾಬ್ಲಿಷ್‌ಮೆಂಟ್ ಆ್ಯಕ್ಟ್ 1946ರ ಅಡಿಯಲ್ಲಿ ರಚಿಸಲಾಗಿದೆ ಎಂಬುವುದು ಗಮನಾರ್ಹ.

ಸಿಬಿಐಗೆ ಸಂಬಂಧಿಸಿದಂತೆ ಇತ್ತೀಚೆಗೆ ಕೇಳಿ ಬಂದ ಅರೋಪದ ಬಳಿಕ ಆಂಧ್ರ ಸರ್ಕಾರ ಇಂತಹ ಆದೇಶ ಹೊರಡಿಸಿದೆ ಎಂಬುವುದು ಗಮನಾರ್ಹ. ಇತ್ತೀಚೆಗಷ್ಟೇ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಹಾಗೂ ತನಿಖಾ ತಂಡದ ನಂಬರ್ 2 ರಾಕೇಶ್ ಅಸ್ಥಾನಾ ವಿರುದ್ಧ ವಂಚನೆ ಆರೋಪ ಕೇಳಿ ಬಂದಿತ್ತು. ಇದಾದ ಬಳಿಕ ಇಬ್ಬರು ಅಧಿಕಾರಿಗಳನ್ನು ಅಧಿಕಾರದಿಂದ ಕೆಳಗಿಳಿಸಿ ರಜೆಯ ಮೇಲೆ ಕಳುಹಿಸಲಾಗಿತ್ತು. ತನಿಖೆ ಮುಗಿಯುವವರೆಗೂ ನಾಗೇಶ್ವರ್‌ರಾವ್‌  ಅವರಿಗೆ ನಿರ್ದೇಶಕರ ಸ್ಥಾನವನ್ನು ನೀಡಲಾಗಿದೆ.

ಆಂಧ್ರ ಪ್ರದೇಶ ಸರ್ಕಾರದ ಮೂಲಗಳಿಂದ ಲಭ್ಯವಾದ ಮಾಹಿತಿ ಅನ್ವಯ ಸಿಬಿಐ ಮೇಲೆ ಕೇಳಿ ಬಂದ ಆರೋಪದ ಬಳಿಕ ಅಲ್ಲಿನ ಸರ್ಕಾರವು ತನಿಖಾ ತಂಡದ ಮೇಲಿದ್ದ ವಿಶ್ವಾಸ ಕಳೆದುಕೊಂಡಿದೆ ಎಂದು ತಿಳಿದು ಬಂದಿದೆ. 

Follow Us:
Download App:
  • android
  • ios