Asianet Suvarna News Asianet Suvarna News

ರಾಮನಗರದಲ್ಲಿ ಅನಿತಾ ಓಟ ತಡೆಗೆ ಬಿಜೆಪಿ ಗುಪ್ತ ರಾಜಕೀಯ

ರಾಜ್ಯದ ವಿವಿಧೆಡೆ ಉಪ ಚುನಾವಣಾ ಕಣ ರಂಗೇರಿದೆ. ಇನ್ನೇನು ಚುನಾವಣಗೆ 2 ದಿನವಷ್ಟೇ ಬಾಕಿ ಉಳಿದಿದೆ. ಇದೀಗ ರಾಮನಗರದಲ್ಲಿ ಬಿಜೆಪಿ ಸೀಕ್ರೇಟ್ ಪಾಲಿಟಿಕ್ಸ್ ಆರಂಭವಾಗಿದೆ.

BJP Secret Politics In Ramanagara By Election
Author
Bengaluru, First Published Oct 31, 2018, 9:24 AM IST

ರಾಮನಗರ :  ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ತವರು ಜಿಲ್ಲೆಯೂ ಆಗಿರುವ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಅವರ ಪತ್ನಿ ಜೆಡಿಎಸ್‌ ಅಭ್ಯರ್ಥಿಯಾಗಿರುವುದರಿಂದ ಸಹಜವಾಗಿಯೇ ಈ ಕ್ಷೇತ್ರ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

ಆದರೆ, ಕಾಂಗ್ರೆಸ್‌ ಪಕ್ಷದ ಬೆಂಬಲದೊಂದಿಗೆ ಜೆಡಿಎಸ್‌ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದ ರೋಚಕ ಹೋರಾಟ ಇಲ್ಲಿ ಕಾಣುತ್ತಿಲ್ಲ. ಒಂದು ವೇಳೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳು ಪ್ರತ್ಯೇಕವಾಗಿ ಕಣದಲ್ಲಿ ಇದ್ದಿದ್ದರೆ ಉಪಚುನಾವಣೆಯ ಚಿತ್ರಣವೇ ಬೇರೆ ಇರುತ್ತಿತ್ತು. ಉಭಯ ಪಕ್ಷಗಳ ಹೊಂದಾಣಿಕೆಯ ಅಭ್ಯರ್ಥಿಯನ್ನು ಇದೀಗ ಕಾಂಗ್ರೆಸ್‌ನಿಂದ ವಲಸೆ ಬಂದ ಬಿಜೆಪಿ ಅಭ್ಯರ್ಥಿ ಎದುರಿಸಲು ಹರಸಾಹಸ ಮಾಡುತ್ತಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆ ವೇಳೆ ರಾಮನಗರ ಹಾಗೂ ಚನ್ನಪಟ್ಟಣ ಕ್ಷೇತ್ರಗಳಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಎರಡೂ ಕಡೆ ಜಯಭೇರಿ ಬಾರಿಸಿದ್ದರು. ಆದರೆ, ಚನ್ನಪಟ್ಟಣ ಕ್ಷೇತ್ರ ಉಳಿಸಿಕೊಂಡು ರಾಮನಗರ ಕ್ಷೇತ್ರವನ್ನು ತೊರೆದಿದ್ದರು. ಈ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆಯುತ್ತಿದೆ.

ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಧರ್ಮ ಪಾಲನೆ ಮಾಡಿಕೊಂಡಿವೆ ಎಂದಾಕ್ಷಣಕ್ಕೆ ಉಭಯ ಪಕ್ಷಗಳಲ್ಲಿ ಎಲ್ಲವೂ ಸರಿಯಿದೆ ಎನ್ನುವಂತಿಲ್ಲ. ಪಕ್ಷಗಳ ವರಿಷ್ಠರು ಹಾಗೂ ರಾಜ್ಯ ನಾಯಕರು ಹಸ್ತಲಾಘವ ಮಾಡಿಕೊಂಡು ಒಬ್ಬರ ಮೇಲೊಬ್ಬರು ಹೆಗಲ ಮೇಲೆ ಕೈ ಹಾಕಿಕೊಂಡು ತಿರುಗಾಡುತ್ತಿದ್ದಾರೆ. ಅಂತಹ ವಾತಾವರಣ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಕಂಡು ಬರುತ್ತಿಲ್ಲ.

ಜೆಡಿಎಸ್‌ ಅಭ್ಯರ್ಥಿಯಾಗಲು ಸ್ಥಳೀಯರಿಗೆ ಅವಕಾಶ ನೀಡದೆ ಕುಟುಂಬ ರಾಜಕಾರಣಕ್ಕೆ ಒತ್ತು ನೀಡಿರುವುದು ಹಾಗೂ ಕಾಂಗ್ರೆಸ್‌ ಅಭ್ಯರ್ಥಿಯನ್ನು ಕಣಕ್ಕಿಳಿಸದಿರುವುದು ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿನ ಬೇಸರಕ್ಕೆ ಕಾರಣವಾಗಿದೆ. ಮೇಲ್ಮಟ್ಟಕ್ಕೆ ಒಗ್ಗಟ್ಟು ಪ್ರದರ್ಶನವಾಗುತ್ತಿದ್ದರೂ ಒಳಗೊಳಗೆ ವರಿಷ್ಠರ ನಿರ್ಧಾರದ ವಿರುದ್ಧ ಅಸಮಾಧಾನವಿದೆ. ಇದು ಮೈತ್ರಿ ಅಭ್ಯರ್ಥಿ ಅನಿತಾಗೆ ಒಳೇಟು ನೀಡಬಹುದು ಎಂಬ ಆತಂಕ ವರಿಷ್ಠರಿಗೆ ಕಾಡುತ್ತಿದ್ದರೆ, ಇದನ್ನೇ ಲಾಭವಾಗಿಸಿಕೊಳ್ಳಲು ಕಮಲ ಪಾಳಯ ತಂತ್ರ ರೂಪಿಸುತ್ತಿದೆ.

ಈ ಕಾರಣದಿಂದಾಗಿಯೇ ಮೈತ್ರಿ ಅಭ್ಯರ್ಥಿ ಅನಿತಾ ಪರ ಚುನಾವಣಾ ಪ್ರಚಾರ ಉಸ್ತುವಾರಿಯನ್ನು ಉಭಯ ಪಕ್ಷಗಳ ವರಿಷ್ಠರು ಸಂಸದ ಡಿ.ಕೆ.ಸುರೇಶ್‌ ಹೆಗಲಿಗೆ ವಹಿಸಿದ್ದಾರೆ. ಸದ್ಯಕ್ಕೆ ಉಭಯ ಪಕ್ಷಗಳಲ್ಲಿನ ಅಸಮಾಧಾನದ ಬೇಗುದಿ ಸ್ವಲ್ಪ ಮಟ್ಟಿಗೆ ಶಮನಗೊಂಡಿದೆ. ಆದರೆ, ಈಗಲೂ ಕೆಲ ಭಾಗಗಳಲ್ಲಿ ಕಾಂಗ್ರೆಸ್ಸಿಗರು ಬಹಿರಂಗವಾಗಿಯೇ ಬಿಜೆಪಿ ಅಭ್ಯರ್ಥಿ ಎಲ್‌.ಚಂದ್ರಶೇಖರ್‌ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ.

ಕುಮಾರಸ್ವಾಮಿ ಸರ್ಕಾರಕ್ಕೆ ಮುಖಭಂಗ ಮಾಡಬೇಕೆಂಬುದು ಬಿಜೆಪಿ ಉದ್ದೇಶ. ಆದ್ದರಿಂದಲೇ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ರುದ್ರೇಶ್‌ ಹೆಗಲಿಗೆ ಜವಾಬ್ದಾರಿ ವಹಿಸಲಾಗಿದೆ. ಇವರೆಲ್ಲರೂ ಬಹಿರಂಗ ಪ್ರಚಾರಕ್ಕಿಂತ ಹೆಚ್ಚಾಗಿ ಕಾಂಗ್ರೆಸ್‌-ಜೆಡಿಎಸ್‌ನಲ್ಲಿನ ಅಸಮಾಧಾನಿತ ಮುಖಂಡರನ್ನು ಗುಪ್ತವಾಗಿ ಭೇಟಿಯಾಗಿ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಗ್ರಾಮಗಳಿಗೆ ಮೂಲ ಸೌಕರ್ಯ ಕಲ್ಪಿಸಲಿಲ್ಲವೆಂದು ಕುಮಾರಸ್ವಾಮಿ ಬಗೆಗೆ ಮತದಾರರಲ್ಲಿ ಸ್ವಲ್ಪ ಮಟ್ಟಿನ ಬೇಸರವೂ ಇದೆ. ಚುನಾವಣಾ ಪ್ರಚಾರಕ್ಕೆ ತೆರಳಿದಾಗ ಅನಿತಾ ಅವರಿಗೆ ಅದರ ಅನುಭವವೂ ಆಗಿದೆ.

ಮಾವ, ಪತಿ ಮತ್ತು ತಂದೆಯೇ ಶ್ರೀರಕ್ಷೆ:

ಅನಿತಾ ಮತ್ತು ಚಂದ್ರಶೇಖರ್‌ಗೆ ಹೇಳಿಕೊಳ್ಳುವಷ್ಟರ ಮಟ್ಟಿಗೆ ವೈಯಕ್ತಿಕ ವರ್ಚಸ್ಸಿಲ್ಲ. ಅನಿತಾರವರು ತಮ್ಮ ಮಾವ ಮಾಜಿ ಪ್ರಧಾನಿ ದೇವೇಗೌಡ ಮತ್ತು ಪತಿ ಕುಮಾರಸ್ವಾಮಿ ಹೆಸರಿನಲ್ಲಿ ಮತಯಾಚನೆ ಮಾಡುತ್ತಿದ್ದಾರೆ.

ಇನ್ನು ಚಂದ್ರಶೇಖರ್‌, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಯೋಜನೆಗಳಿಗಿಂತ ಹೆಚ್ಚಾಗಿ ತಮ್ಮ ತಂದೆ ಸಿ.ಎಂ.ಲಿಂಗಪ್ಪ ಶಾಸಕರಾಗಿದ್ದ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳಿಗೆ ಮತ ಭಿಕ್ಷೆ ಕೇಳುತ್ತಿದ್ದಾರೆ. ಸ್ವಾಭಿಮಾನದ ಅಸ್ತ್ರವನ್ನು ಮತದಾರರ ಮೇಲೆ ಪ್ರಯೋಗ ಮಾಡುತ್ತಿದ್ದಾರೆ.

ಮತಗಳ ವಿಭಜನೆಗೆ ಪ್ರಯತ್ನ:

ಕ್ಷೇತ್ರದಲ್ಲಿ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆ ಮತಗಳನ್ನು ಸೆಳೆಯುವ ಸಲುವಾಗಿಯೇ ಬಿಜೆಪಿ ಆಪರೇಷನ್‌ ಕಮಲಕ್ಕೆ ಕೈ ಹಾಕಿತು. ಕಾಂಗ್ರೆಸ್‌ ನಾಯಕರಾದ ವಿಧಾನ ಪರಿಷತ್‌ ಸದಸ್ಯ ಸಿ.ಎಂ.ಲಿಂಗಪ್ಪ ಪುತ್ರ ಎಲ್‌.ಚಂದ್ರಶೇಖರ್‌ ಬಿಜೆಪಿ ಗಾಳಕ್ಕೆ ಸಿಲುಕಿ ಅಭ್ಯರ್ಥಿ ಕೂಡ ಆಗಿದ್ದಾರೆ.

ಒಕ್ಕಲಿಗ ಜನಾಂಗಕ್ಕೆ ಸೇರಿದವರೇ ಅಭ್ಯರ್ಥಿಯಾಗಿರುವುದು ಆ ಸಮುದಾಯದ ಮತಗಳು ವಿಭಜನೆಗೊಳ್ಳುತ್ತವೆ ಎಂಬುದು ಬಿಜೆಪಿ ಲೆಕ್ಕಾಚಾರ. ಇಷ್ಟೇ ಅಲ್ಲದೆ, ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ದಲಿತ ಮತ್ತು ಅಲ್ಪಸಂಖ್ಯಾತ ಮತಗಳನ್ನೂ ಕಸಿದುಕೊಳ್ಳಲು ಮೈತ್ರಿ ಪಕ್ಷಗಳು ಹಾಗೂ ಬಿಜೆಪಿ ರಣತಂತ್ರ ಹೆಣೆಯುತ್ತಿವೆ.

ಕಳೆದ ಚುನಾವಣೆಯಲ್ಲಿ ಚದುರಿ ಹೋಗಿದ್ದ ಅಲ್ಪಸಂಖ್ಯಾತ ಮತ್ತು ದಲಿತ ಮತಗಳನ್ನು ಒಗ್ಗೂಡಿಸಲು ಕಾಂಗ್ರೆಸ್‌ - ಜೆಡಿಎಸ್‌ ನಾಯಕರು ಶ್ರಮಿಸುತ್ತಿದ್ದಾರೆ.

ರಾಮನಗರ ವಿಧಾನಸಭಾ ಕ್ಷೇತ್ರದ ಮತದಾರರ ವಿವರ

- ಒಟ್ಟು ಮತದಾರರು    207005

- ಪುರುಷರು    102948

- ಮಹಿಳೆಯರು    104032

- ಇತರರು    25

ಜಾತಿವಾರು ಲೆಕ್ಕಾಚಾರ:

ಒಕ್ಕಲಿಗರು: 99572

ಎಸ್ಸಿ/ ಎಸ್ಟಿ: 45953

ಮುಸ್ಲಿಂ: 35990

ಲಿಂಗಾಯಿತರು: 16900

ಇತರರು: 8590

ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ: ಅನಿತಾ ಕುಮಾರಸ್ವಾಮಿ

ಬಿಜೆಪಿ ಅಭ್ಯರ್ಥಿ: ಎಲ್‌.ಚಂದ್ರಶೇಖರ್‌

ಪೂರ್ವಾಂಚಲ ಮಹಾಪಂಚಾಯತ್‌ ಪಾರ್ಟಿ ಅಭ್ಯರ್ಥಿ: ಎಚ್‌.ಡಿ.ರೇವಣ್ಣ

ಪಕ್ಷೇತರರು: ಕುಮಾರ ನಾಯ್ಕ, ಸುರೇಂದ್ರ, ಡಿ.ಎಂ.ಮಾದೇಗೌಡ, ಮುನಿಯಾ ಬೋವಿ

1.ಜೆಡಿಎಸ್‌ - ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ

2.ಬಿಜೆಪಿ ಅಭ್ಯರ್ಥಿ ಎಲ್‌.ಚಂದ್ರಶೇಖರ್‌

ವರದಿ : ಅಫ್ರೋಜ್ ಖಾನ್

Follow Us:
Download App:
  • android
  • ios