Asianet Suvarna News Asianet Suvarna News

ದುಬೈನಲ್ಲಿ ಕನ್ನಡ ಕಂಪು...! ವಾರದ ರಜೆಯಲ್ಲಿ ಕುಳಿತು ಕನ್ನಡ ಕಲೀತಾರೆ ಪುಟ್ಟ ಮಕ್ಕಳು

ವಾರಾಂತ್ಯದಲ್ಲಿ 303 ಮಕ್ಕಳಿಗೆ ಕನ್ನಡ ಕಲಿಸುವ ಕಾಯಕ | ಹೊರದೇಶದಲ್ಲಿ ಕನ್ನಡ ಮಿತ್ರರ ಭಾಷಾ ಪ್ರೇಮ

Weekend kannada classes in Dubai dpl
Author
Bangalore, First Published Nov 1, 2020, 9:13 AM IST

ಮಂಡ್ಯ ಮಂಜುನಾಥ

ಕನ್ನಡ ನಾಡಿನಲ್ಲೇ ಕನ್ನಡ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಮುಖ ತಿರುಗಿಸುತ್ತಿರುವ ಸನ್ನಿವೇಶದಲ್ಲಿ ದೂರದ ದುಬೈನಲ್ಲಿ ಕನ್ನಡ ಶಾಲೆ ಹೇಗಪ್ಪಾ ಅಂತೀರಾ. ದುಬೈನಲ್ಲಿರುವ ಕನ್ನಡಿಗರೆಲ್ಲರೂ ಸೇರಿಕೊಂಡು ಕನ್ನಡ ಮಿತ್ರರು ಎಂಬ ಸಂಘಟನೆ ರಚಿಸಿಕೊಂಡು ಅನಿವಾಸಿ ಭಾರತೀಯ ಮಕ್ಕಳಿಗೆ ವಾರಾಂತ್ಯದಲ್ಲಿ ಉಚಿತವಾಗಿ ಕನ್ನಡ ಕಲಿಸುವ ಕಾಯಕವನ್ನು ಕಳೆದ ಆರು ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ.

ಉದ್ಯೋಗವನ್ನು ಅರಸಿ ದೂರದ ಅರಬ್‌ ಗಣತಂತ್ರ ರಾಷ್ಟ್ರಕ್ಕೆ ಬಂದಿರುವ ಕನ್ನಡಿಗರ ಮಕ್ಕಳಿಗೆ ಮಾತೃಭಾಷಾ ಸಾಕ್ಷರತೆ ಪ್ರತಿಯೊಬ್ಬ ಕಂದನ ಹಕ್ಕು ಎಂಬ ಘೋಷಣೆಯೊಂದಿಗೆ ಕನ್ನಡ ಮಕ್ಕಳಿಗೆ ಮಾತೃಭಾಷಾ ಶಿಕ್ಷಣ ನೀಡುತ್ತಾ ಬಂದಿದ್ದಾರೆ.

303 ಮಕ್ಕಳು ದಾಖಲು

2014ರಲ್ಲಿ 40 ಮಕ್ಕಳಿಗೆ ವಾರಾಂತ್ಯದಲ್ಲಿ ಕನ್ನಡ ಕಲಿಸುವ ಮೂಲಕ ಆರಂಭಗೊಂಡ ಈ ಶಾಲೆಗೆ ಈ ಬಾರಿ ಆನ್‌ಲೈನ್‌ ತರಗತಿಗೆ ಪ್ರವೇಶ ಕೋರಿ 303 ಮಕ್ಕಳು ತಮ್ಮ ಹೆಸರು ದಾಖಲಿಸಿರುವುದು ವಿಶೇಷ. ಕೊರೋನಾ ಸೋಂಕು ತಡೆಯುವ ನಿಟ್ಟಿನಲ್ಲಿ ಈ ಬಾರಿ ತರಗತಿಗಳನ್ನು ಆನ್‌ಲೈನ್‌ ಮೂಲಕವೇ ನಡೆಸಲು ಕನ್ನಡ ಮಿತ್ರರು ನಿರ್ಧರಿಸಿದ್ದಾರೆ.

ಕನ್ನಡ ವರ್ಣಮಾಲೆಯಿಂದ ಮೊದಲುಗೊಂಡು ಕನ್ನಡ ವಾಕ್ಯ ರಚನನೆಯವರೆಗೂ ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಎಂಬ ವಿವಿಧ ತರಗತಿಗಳಲ್ಲಿ ಮಕ್ಕಳ ಕಲಿಕಾ ಮಟ್ಟಕ್ಕೆ ಅನುಸಾರವಾಗಿ ಕನ್ನಡವನ್ನು ಕಲಿಸಲಾಗುತ್ತಿದೆ. ಅರಬ್ಬರ ನಾಡಲ್ಲಿ ಕನ್ನಡ ಕಲಿಸುವ ಕನ್ನಡ ಮಿತ್ರರ ಆಸೆಗೆ ಜೊತೆಯಾಗಿ ತಮ್ಮ ಒಂದು ರಜಾದಿನವನ್ನು ಉಚಿತವಾಗಿ ಕನ್ನಡ ಕಲಿಸಲು ಮುಡಿಪಾಗಿಟ್ಟಿರುವ ಕನ್ನಡತಿಯರೇ ಇಲ್ಲಿನ ಶಿಕ್ಷಕಿಯರು ಎನ್ನುವುದು ಮತ್ತೊಂದು ಹೆಮ್ಮೆಯ ವಿಚಾರವಾಗಿದೆ.

ಅಕ್ಕಿ ತೊಳೆದ ನಂತರ ನೀರಲ್ಲಿದೆ ಸೌಂದರ್ಯಕ್ಕೆ ಮದ್ದು!

ಇಲ್ಲಿನ ಮಕ್ಕಳಿಗೂ ಈ ಶಾಲೆ ಎಂದರೆ ಅಚ್ಚುಮೆಚ್ಚು. ಕೇವಲ ಮಾತೃಭಾಷೆ ಮಾತನಾಡಲು ಬರುತ್ತಿದ್ದ ಮಕ್ಕಳು ಇಂದು ಕನ್ನಡ ಓದಲು, ಬರೆಯಲು ಶುರು ಮಾಡಿರುವುದೇ ಶಾಲೆಗೆ ಸಂದ ನಿಜವಾದ ಯಶಸ್ಸು ಎಂದು ಕನ್ನಡ ಮಿತ್ರರು ಹೇಳುತ್ತಾರೆ.

ಶಾಲೆಯ ಅಚ್ಚುಕಟ್ಟುತನ

ಅರಬ್‌ ರಾಷ್ಟ್ರದಲ್ಲಿರುವ ಕನ್ನಡ ಶಾಲೆ ರಾಜ್ಯದಲ್ಲಿರುವ ಸರ್ಕಾರಿ ಕನ್ನಡ ಶಾಲೆಗಳಿಗೆ ಮಾದರಿಯಾಗುವ ರೀತಿಯಲ್ಲಿದೆ. ಪ್ರತಿಯೊಂದು ಮಗುವಿಗೂ ಪ್ರತ್ಯೇಕ ಬೆಂಚು, ಕುರ್ಚಿಯನ್ನು ನೀಡಲಾಗಿದೆ. ಶಾಲೆಯೊಳಗೆ ಪ್ರಾಣಿ-ಪಕ್ಷಿಗಳನ್ನು ಗುರುತಿಸುವುದಕ್ಕೆ ಅನುಕೂಲವಾಗುವಂತೆ ಚಿತ್ರಪಟಗಳನ್ನು ಹಾಕಿ ಕನ್ನಡದಲ್ಲಿ ಹೆಸರು ಬರೆಯಲಾಗಿದೆ. ಶಾಲೆಯಲ್ಲಿ ಎಲ್ಲರೂ ಕನ್ನಡದಲ್ಲೇ ಮಾತನಾಡುವ ಮಕ್ಕಳು ಮನೆಯಲ್ಲಿಯೂ ಪೋಷಕರೊಂದಿಗೆ ಕನ್ನಡದಲ್ಲೇ ಮಾತನಾಡುವುದನ್ನು ರೂಢಿಸಿಕೊಂಡಿದ್ದಾರೆ.

ಶಾಲೆಯಲ್ಲಿ ಕನ್ನಡ ಕಲಿಸುವುದು ಮಾತ್ರವಲ್ಲದೆ, ಇತರೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಕನ್ನಡಮಿತ್ರರು ನಡೆಸುತ್ತಾರೆ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸುತ್ತಿದ್ದಾರೆ.

6ನೇ ತರಗತಿವರೆಗೆ ಶಿಕ್ಷಣ

ಈ ಶಾಲೆಯಲ್ಲಿ 6 ನೇ ತರಗತಿಯವರೆಗೂ ಶಿಕ್ಷಣ ಪಡೆಯುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕದ ಸರ್ವಶಿಕ್ಷಣ ಅಭಿಯಾನದ ಸಿಲಬಸ್‌ನ್ನೇ ಇಲ್ಲಿಯ ಮಕ್ಕಳಿಗೂ ಕಲಿಸಲಾಗುತ್ತಿದೆ. ಇದಕ್ಕೆ ಪ್ರಮಾಣಪತ್ರವನ್ನೂ ನೀಡಲಾಗುತ್ತಿದೆ. ಆದರೆ, ಆ ಪ್ರಮಾಣಪತ್ರಕ್ಕೆ ಕರ್ನಾಟಕ ಸರ್ಕಾರ ಮಾನ್ಯತೆ ದೊರಕಿಸಲು ಕನ್ನಡ ಮಿತ್ರರು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ.

ಈ ಸಂಬಂಧ ಕರ್ನಾಟಕದ ಸಚಿವರು, ಶಾಸಕರು ಸೇರಿದಂತೆ ಹಲವರನ್ನು ದುಬೈಗೆ ಕರೆಸಿಕೊಂಡು ಕನ್ನಡ ಶಾಲೆಯನ್ನು ತೋರಿಸಿ ಸರ್ಕಾರದ ಮಾನ್ಯತೆಗೆ ಮೊರೆ ಇಡಲಾಗುತ್ತಿದೆ. ಆದರೆ, ಕನ್ನಡ ಶಾಲೆಯನ್ನು ನೋಡಿ ಬೆನ್ನುತಟ್ಟುತ್ತಿದ್ದಾರೆಯೇ ಹೊರತು ಪ್ರಮಾಣಪತ್ರ ದೊರಕಿಸಿಕೊಡಬೇಕೆಂಬ ಮನವಿಗೆ ಯಾರೂ ಸ್ಪಂದಿಸದಿರುವುದು ಕನ್ನಡ ಮಿತ್ರರ ಬೇಸರಕ್ಕೆ ಕಾರಣವಾಗಿದೆ.

ದಪ್ಪ ಹೊಟ್ಟೆ, ಸ್ಟ್ರೆಚ್ ಮಾರ್ಕ್‌ ಎಲ್ಲವನ್ನೂ ಒಪ್ಪಿಕೊಳ್ಳುವೆ; ದರ್ಶನ್ ನಟಿ ಕನಿಕಾ!

ವಾರಾಂತ್ಯ ಬಂದರೆ ಮಕ್ಕಳ ಜೊತೆಗೆ ಹೊರಗೆ ಹೋಗಲು ಯೋಚಿಸುವವರೇ ಇರುವಾಗ ಆ ದಿನ ತಮ್ಮ ಮಕ್ಕಳಿಗೆ ಮಾತೃಭಾಷೆ ಕನ್ನಡ ಕಲಿಸುವ ದುಬೈನ ಕನ್ನಡ ಪಾಠಶಾಲೆಗೆ ಮಕ್ಕಳನ್ನು ಕರೆತರುತ್ತಿರುವ ಪೋಷಕರು ಎಲ್ಲರಿಗೂ ಮಾದರಿಯಾಗಿದ್ದಾರೆ.

ಆನ್‌ಲೈನ್‌ ತರಗತಿಗೆ ಸಿದ್ಧತೆ

ದುಬೈ ಕನ್ನಡ ಮಿತ್ರರು ಸಂಘಟನೆಯಿಂದ ಪ್ರಸಕ್ತ ವರ್ಷದಿಂದ ಆನ್‌ಲೈನ್‌ ತರಗತಿ ಪ್ರಾರಂಭಿಸಲು ಸಿದ್ಧತೆ ನಡೆಸಲಾಗಿದೆ ಎಂದು ಕನ್ನಡ ಮಿತ್ರರು ಸಂಘಟನೆ ಅಧ್ಯಕ್ಷ ಶಶಿಧರ ನಾಗರಾಜಪ್ಪ ತಿಳಿಸಿದ್ದಾರೆ.

ನ.6ರಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರರು ಆನ್‌ಲೈನ್‌ ಮೂಲಕ ತರಗತಿಗಳಿಗೆ ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ, ಕಾರ್ಯದರ್ಶಿ ಡಾ.ಮುರಳೀಧರ್‌, ಖ್ಯಾತ ವಾಗ್ಮಿ ಪ್ರೊ.ಕೃಷ್ಣೇಗೌಡ ಅವರು ಭಾಗವಹಿಸುವರು ಎಂದು ಶಾಲೆಯ ಪ್ರಕಟಣೆ ತಿಳಿಸಿದೆ.

ಪಾರ್ಶ್ವವಾಯು: ನರ ಸಮಸ್ಯೆ ತಪ್ಪಿಸಲು ಸೇವಿಸಿ ಈ ಆಹಾರ

ಕನ್ನಡದ ಮಕ್ಕಳು ಕನ್ನಡ ಕಲಿಯಬೇಕೆನ್ನುವುದು ನಮ್ಮ ಆಸೆ. ಅರಬ್‌ ರಾಷ್ಟ್ರದಲ್ಲಿ ಶೇಕಡಾವಾರು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಪ್ರಾದೇಶಿಕ ಭಾಷೆ ಕಲಿಕೆಗೆ ಅವಕಾಶವಿದೆ. ಕನ್ನಡದ ಮಕ್ಕಳು ಅಷ್ಟೊಂದು ಸಂಖ್ಯೆಯಲ್ಲಿ ಇಲ್ಲದಿರುವುದು ಕನ್ನಡ ಭಾಷೆ ಕಲಿಕೆಗೆ ಅಡ್ಡಿಯಾಗಿದೆ. ಹಾಗಾಗಿ ನಾವೇ ಕನ್ನಡ ಶಾಲೆ ತೆರೆದು ಮಕ್ಕಳಿಗೆ ಕನ್ನಡ ಕಲಿಸುತ್ತಿದ್ದೇವೆ ಎನ್ನುತ್ತಾರೆ ಕನ್ನಡ ಮಿತ್ರರು ಮಾಧ್ಯಮ ಸಂಚಾಲಕ ಭಾನುಕುಮಾರ್‌.

Follow Us:
Download App:
  • android
  • ios