life
By ಜಿಬಿ ಸರಗೂರು ಕೆಂಡಗಣ್ಣ | 06:49 PM January 03, 2018
ಎಫ್'ಬಿಗೂ ಗೊತ್ತಾಗದ ಗುಟ್ಟುಗಳು

Highlights

‘ಜಗತ್ತಿನಲ್ಲಿ ಸಾಮಾನ್ಯವಾಗಿ ಮೂರು ರೀತಿಯ ಸಂಗತಿಗಳಿರುತ್ತವೆ. ಒಂದು- ಎಲ್ಲರ ಜೊತೆಗೂ ಹೇಳಿಕೊಳ್ಳುವಂತವು. ಎರಡು- ಕೆಲವೇ ಕೆಲವು ವ್ಯಕ್ತಿಗಳ ಬಳಿ ಹೇಳಿಕೊಳ್ಳುವಂತವು. ಮೂರು- ಯಾರಿಗೂ ಹೇಳದೇ ಉಳಿದು ಬಿಡುವಂತವು’.

ಮೊನ್ನೆ ಗೆಳತಿ ಕಾವ್ಯ ಫೋನ್ ಮಾಡಿ ‘ಹ್ಯಾಪಿ ನ್ಯೂ ಇಯರ್’ ಎಂದ ತಕ್ಷಣಕ್ಕೆ ವಿಶ್ ಮಾಡಿದ್ದು ಯಾರು ಎಂದು ತಿಳಿಯಲಿಲ್ಲ. ಒಂದು ಕಾಲದಲ್ಲಿ ಅಪ್ರತಿಮ ಸ್ನೇಹಿತರಾಗಿ, ಸ್ನೇಹ ಪ್ರೀತಿಗೆ ತಿರುಗುವ ಹಂತದಲ್ಲಿಯೇ ಬೇರೆಯಾದ ನಾವುಗಳು ಒಂದು ಲಾಂಗೆಸ್ಟ್ ಗ್ಯಾಪಿನ ನಂತರ ಮಾತಿಗೆ ಸಿಕ್ಕಿದ್ದು. ಅದಕ್ಕೆ ಹೊಸ ವರ್ಷ ನವವಾಗಿ ಬಂದದ್ದು ಸಹಜ ಖುಷಿಗೆ ಕಾರಣವಾಗಿತ್ತು.

ಹೊಸ ವರ್ಷದ ಶುಭಾಷಯಕ್ಕಷ್ಟೇ ಕಾಲ್ ಮಾಡಿದ್ದ ಅವಳು ಅದನ್ನೂ ಮೀರಿ ಮನದಾಳವನ್ನು ನಿವೇದಿಸಿಕೊಂಡಿದ್ದಳು. ಅವಳಾಡಿದ ಮಾತುಗಳು ಕಿವಿಯಲ್ಲಿ ನಾಟಿ, ಮನದಾಳಕ್ಕೆ ಇಳಿದು ಶುರು ಮಾಡಿದ ಕೊರೆತ ಇನ್ನೂ ನಿಂತಿಲ್ಲ. ಮೊದಲಿಗೆ ಯಾವುದೇ ಗುಟ್ಟು ಬಿಟ್ಟುಕೊಡದೇ ಲೋಕಾರೂಢಿಯಾಗಿ ಹೇಗಿದ್ದೀಯಾ? ಫೋನ್ ಚೇಂಜ್ ಮಾಡಿದ ಮೇಲೆ ನಿನ್ನ ನಂಬರ್ ಹೋಯಿತು. ಅದಕ್ಕೆ ಕಾಲ್ ಮಾಡೋಕೆ ಆಗಿರಲಿಲ್ಲ. ನಿನ್ನೆ ತಾನೆ ಸಿಂಧು ಸಿಕ್ಕಿದ್ದಳು. ಅವಳ ಹತ್ತಿರವೇ ನಿನ್ನ ನಂಬರ್ ತೆಗೆದುಕೊಂಡು ಕಾಲ್ ಮಾಡಿದೆ. ಒನ್ಸ್ ಎಗೇನ್ ವಿಶ್ ಯು ಹ್ಯಾಪಿ ನ್ಯೂ ಇಯರ್ ಎಂದು ಕೇಳಿ ಸುಮ್ಮನೆ ಉತ್ತರಕ್ಕೆ ಕಾದಿದ್ದಳು.

ಅವಳು ನಾನು ಒಂದು ಕಾಲದ ಗಾಡಿ ಸ್ನೇಹಿತರು. ಬಹುತೇಕ ಎಲ್ಲಾ ವಿಚಾರಗಳನ್ನೂ ಪರಸ್ಪರ ಹೇಳಿಕೊಳ್ಳುತ್ತಿದ್ದ ಕಾರಣಕ್ಕೆ ಅಷ್ಟೊಂದು ಗಾಢತೆ ಸಾಧ್ಯವಾಗಿತ್ತೋ ಏನೋ? ಅವಳು ಕೇಳಿದ ಪ್ರಶ್ನೆಗಳಿಗೆಲ್ಲಾ ಉತ್ತರ ನೀಡಿಯಾದ ಮೇಲೆ ನಾನೊಂದಷ್ಟು ಪ್ರಶ್ನೆಗಳನ್ನೆಸೆದು ಕಾದು ಕೂರವಷ್ಟರಲ್ಲೇ ಅವಳ ಮಾತಿನಲ್ಲಿ ಹಿಂಜರಿಗೆ ಮಾಯವಾಗುತ್ತಿದೆ. ಏನೋ ಹೇಳಲು ಬಯಸುತ್ತಿದ್ದಾಳೆ ಅನ್ನಿಸತೊಡಗಿತು.

ಸುಮ್ಮನೆ ಅವಳ ಮಾತಿಗೆ ಕಿವಿಯಾಗಿ ಕೂರೋಣ ಎಂದುಕೊಂಡೆ. ಪೂರ್ವ ನಿರ್ಧರಿತ ಕೆಲಸಗಳು ಕೆಲವಷ್ಟಿವೆ. ಆದರೆ ನಾನು ಬ್ಯುಸಿ, ಆಮೇಲೆ ಮಾಡುತ್ತೇನೆ ಎಂದರೆ ಏನೆಂದುಕೊಂಡಾಳು. ಅದೂ ಅಲ್ಲದೇ ಇದು ಭಾನುವಾರ. ಒಂದಷ್ಟು ಮಟ್ಟಕ್ಕೆ ಫ್ರೀ ಇರುವ ದಿನ. ಅದೂ ಅಲ್ಲದೇ ಹೊಸ ವರ್ಷಕ್ಕೆ ವಿಶ್ ಮಾಡಲು ನಂಬರ್ ಹುಡುಕಿ ಕಾಲ್ ಮಾಡಿದ್ದಾಳೆ. ಬೇರೆಲ್ಲಾ ಕೆಲಸಗಳು ಹಾಳಾಗಲಿ. ಮಾತನಾಡಲೇಬೇಕು ಎಂದು ಇನ್ನಷ್ಟು ಮಾತು ಆರಂಭಿಸಿದೆ.

ಅವಳೂ ಹತ್ತಿರದ ಗೆಳೆಯ ವರ್ಷಗಳ ನಂತರ ಸಿಕ್ಕಿದ್ದಾನೆ ಎನ್ನುವ ಖುಷಿಯಲ್ಲಿಯೇ ಮಾತು ಮುಂದುವರೆಸಿ ನಿಧಾನವಾಗಿ ಮನದಾಳವನ್ನು ಬಿಚ್ಚಿಡಲು ಶುರುವಿಟ್ಟಳು. ಧ್ವನಿ ನಿಧಾನವಾಯಿತು. ಯಾಕೋ ಲೈಫ್ ಬೇಜಾರ್ ಅನ್ನಿಸ್ತಿದೆ. ಬದುಕೋಕೆ ಇಷ್ಟವಿಲ್ಲ ಎಂದುಬಿಟ್ಟಳು. ಯಾವುದೋ ನೋವನ್ನು ತೋಡಿಕೊಳ್ಳಲು ಸಿದ್ಧಳಿದ್ದಾಳೆ. ಅದಕ್ಕೆ ಪೀಠಿಕೆ ಹಾಕುತ್ತಿದ್ದಾಳೆ ಎಂದುಕೊಂಡದ್ದೇ, ಯಾಕೇ ಏನಾಯಿತು. ಒಳ್ಳೆಯ ಮನೆಗೆ ಮದುವೆಯಾಗಿದ್ದೀಯ. ಒಳ್ಳೆಯ ಗಂಡನೇ ಸಿಕ್ಕಿದ್ದಾನೆ. ಇನ್ನೇನು ಸಮಸ್ಯೆ ಎಂದು ಹೇಳಿದರೂ ಕೂಡ ಅವಳ ಆಂತರ್ಯದಲ್ಲಿ ಏನೋ ಅಡಗಿದೆ ಎಂದು ಮಾತಿನ ಏರಿಳಿತದಲ್ಲೇ ಗೊತ್ತಾಯಿತು. ಒಳ್ಳೆಯ ಗಂಡ ಸಿಕ್ಕಿದ್ದಾನೆ. ಆದರೆ ನಾನೇ ಪಾಪಿ. ಮದುವೆಯಾಗಿ ಎರಡು ವರ್ಷ ಕಳೆದರೂ ಇನ್ನೂ ಒಂದು ಮಗುವಿಗೆ ತಾಯಿಯಾಗಲಿಲ್ಲ. ಎಲ್ಲಾ ದೇವರನ್ನೂ ಸುತ್ತಿದ್ದಾಯಿತು. ತೋರಿಸದೇ ಇರುವ ಡಾಕ್ಟರ್ ಇಲ್ಲ. ಎಲ್ಲಾ ಕಡೆ ಏನೂ ಸಮಸ್ಯೆ ಇಲ್ಲ, ಏನೂ ಸಮಸ್ಯೆ ಇಲ್ಲ ಎನ್ನುತ್ತಾರೆ. ಆದರೆ ಏನೂ ಪ್ರಯೋಜನವಿಲ್ಲ ಎಂದಳು. ಮಾತನಾಡಿ ವರ್ಷಗಳೇ ಉರುಳಿದ್ದರಿಂದ ಈ ರೀತಿಯ ವಿಚಾರಗಳಲ್ಲಿ ಮುಕ್ತವಾಗಿ ಮಾತನಾಡಲು ನನಗೆ ಅಂಜಿಕೆಯಾದರೂ ಸುಮ್ಮನೆ ಇದ್ದೆ. ಅವಳೇ ಮಾತು ಮುಂದುವರೆಸಿದಳು. ನೀನು ಸುಮ್ಮನೆ ಕೇಳು. ನನ್ನೊಳಗಿನ ಕಹಿಯನ್ನೆಲ್ಲಾ ಹೊರ ಹಾಕುತ್ತೇನೆ ಎನ್ನುವ ರೀತಿಯಲ್ಲಿ.

ವಾರದ ಹಿಂದೆ ನನ್ನ ವಾರಗಿತ್ತಿ, ಅದೇ ನಮ್ಮ ಮನೆಯವರ ತಮ್ಮನ ಹೆಂಡತಿ ಶಿಲ್ಪಗೆ ಗಂಡು ಮಗುವಾಯಿತು. ಅವಳು ಬಸಿರಾದಾಗಲೇ ನನ್ನ ಹೊಟ್ಟೆಗೆ ಕಿಚ್ಚು ಬಿದ್ದಿತ್ತು. ಅವಾಗಿಂದ ನಮ್ಮತ್ತೆ ನನ್ನ ಕೆಲಸದವಳ ತರ ಕಾಣುತ್ತಾಳೆ. ಅವಳು ತವರಿಗೆ ಹೋಗೋ ಮೊದಲು ನಾನೇ ಅವಳ ಸೇವೆ ಮಾಡಬೇಕಿತ್ತು. ನೀನೇ ಹೇಳು ನಾನೊಂದು ಹೆಣ್ಣಾಗಿ ಹೇಗೆ ಅವಳ ಸೇವೆ ಮಾಡಲಿ. ಇದೇ ವಿಷಯಕ್ಕೆ ಮನೆಯಲ್ಲಿ ದಿನಾ ಜಗಳ. ಸೂಸೈಡ್ ಅಟೆಂಪ್ಟ್ ಮಾಡಿದ್ದೆ. ಹೇಗೋ ಬದುಕುಳಿದೆ. ಅವಳು ಅವಳ ತವರು ಮನೆಗೆ ಹೋದ ಮೇಲೆ ಹೇಗೂ ನೆಮ್ಮದಿಯಾಗಿದ್ದೆ. ಆದರೆ ಈಗ ಅವಳಿಗೆ ಗಂಡು ಮಗುವಾಗಿದೆ. ನನಗೆ ಸಹಿಸಲು ಆಗುತ್ತಿಲ್ಲ. ಏನು ಮಾಡಬೇಕೋ ಒಂದೂ ಗೊತ್ತಾಗುತ್ತಿಲ್ಲ. ಲೈಫ್ ಫುಲ್ ಬೋರ್, ಇಟ್ಸ್ ನಾಟ್ ಫಾರ್ ಮಿ.ಎಂದೆಲ್ಲಾ ಹೇಳಿ ಕಣ್ಣೀರಾಕುತ್ತಿದ್ದಾಗಲೇ ನಾನೊಂದಷ್ಟು ಸಮಾಧಾನ ಮಾಡಿ ಸುಮ್ಮನಾದೆ.

ಬರೋಬ್ಬರಿ ನಲವತ್ತು ನಿಮಿಷದ ಮಾತಿನ ನಂತರ ಫೋನ್ ಇಟ್ಟಾಗ ಸಾಕಷ್ಟು ಸಂಗತಿಗಳು ಮನದಲ್ಲಿ ಸುಳಿದಾಡ ಹತ್ತಿದವು. ಒಟ್ಟಿಗೆ ಇದ್ದಾಗ ಅವಳೇ ಹೇಳಿದ ಲೋಕ ಸತ್ಯ? ನೆನಪಾಯಿತು. ‘ಜಗತ್ತಿನಲ್ಲಿ ಸಾಮಾನ್ಯವಾಗಿ ಮೂರು ರೀತಿಯ ಸಂಗತಿಗಳಿರುತ್ತವೆ. ಒಂದು- ಎಲ್ಲರ ಜೊತೆಗೂ ಹೇಳಿಕೊಳ್ಳುವಂತವು. ಎರಡು- ಕೆಲವೇ ಕೆಲವು ವ್ಯಕ್ತಿಗಳ ಬಳಿ ಹೇಳಿಕೊಳ್ಳುವಂತವು. ಮೂರು- ಯಾರಿಗೂ ಹೇಳದೇ ಉಳಿದು ಬಿಡುವಂತವು’.

ಅವಳು ಕೆಲವೇ ವ್ಯಕ್ತಿಗಳ ಬಳಿ ಹೇಳಿಕೊಳ್ಳಬಹುದಾದ ಸಂಗತಿಯನ್ನು ನನಗೆ ಹೇಳಿದ್ದಾಳೆ. ಅಂದರೆ ನಾನು ಅವಳಿಗೆ, ಅವಳ ನೋವುಗಳಿಗೆ ಸ್ಪಂದಿಸುವವನು ಎಂದಾಯಿತು. ಆದರೆ ಯಾರಿಗೂ ಹೇಳಿಕೊಳ್ಳಲಾಗದ ಸಂಗತಿಗಳೂ ಇದ್ದಾವೆ. ಅಂದರೆ ಅವಳ ಮನಸ್ಸಿನಲ್ಲಿ ಯಾರಿಗೂ ಹೇಳಲಾಗದೇ ಇರುವ ಸಂಗತಿಗಳಿವೆ ಅನ್ನಿಸಿತು. ಅವುಗಳಿಗೆ ಅವಳು ಮಾತ್ರವೇ ಕಿವಿ. ನಾವು ಹಾಗೇ ಅಲ್ಲವೇ ಎಲ್ಲರಿಗೂ ಹೇಳುವ ಸಂಗತಿಗಳಿದ್ದರೆ ಅವನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿಕೊಂಡು, ಕೆಲವರಿಗೆ ಹೇಳುವುದನ್ನು ವಾಟ್ಸಪ್‌ನಲ್ಲಿ ಹೇಳಿಕೊಂಡು, ಯಾರಿಗೂ ಹೇಳಲಾಗದ್ದನ್ನು ಒಳಗೇ ಬಚ್ಚಿಟ್ಟುಕೊಂಡು ಉಳಿದುಬಿಡುತ್ತೇವೆ. ?

 

 

 

 

Show Full Article


Recommended


bottom right ad