Asianet Suvarna News Asianet Suvarna News

ಉದುರುವ ಚಾವಣಿ: ಈ ಶಾಲೆಯಲ್ಲಿ ಮಕ್ಕಳ ಜೀವಕ್ಕಿದೆ ಭಯ!

ಜೀವಭಯದಲ್ಲೇ ನಡೆಯುತ್ತಿದೆ ಸರ್ಕಾರಿ ಶಾಲೆಯಲ್ಲಿನ ನಿತ್ಯದ ಕಲಿಕಾ ಚಟುವಟಿಕೆ|  ಜೀವಭಯದಲ್ಲೇ ಪಾಠ ಕಲಿಯುವ ಹಾಗೂ ಪಾಠ ಮಾಡುವ ಪರಿಸ್ಥಿತಿ ಉದ್ಭವವಾಗಿದೆ|  ನಿರಂತರ ಮಳೆಗೆ ಕೋಣೆಗಳ ಚಾವಣಿ ಸೋರುತ್ತಿದೆ| ಯಾವಾಗ ಮಕ್ಕಳು, ಶಿಕ್ಷಕರ ತಲೆಮೇಲೆ ಬಿದ್ದು ಅನಾಹುತ ಸಂಭವಿಸುತ್ತದೆ ಎಂಬ ಭೀತಿ ಉಂಟಾಗಿದೆ| ಮಳೆ ಬಂದರೆ ಈ ಶಾಲೆಯಲ್ಲಿನ ಪರಿಸ್ಥಿತಿ ಅಧೋಗತಿ| 

Siddapura's Government School Condition is not Good
Author
Bengaluru, First Published Sep 28, 2019, 9:04 AM IST

ಡಿ.ಬಿ.ವಡವಡಗಿ 

ಮುದ್ದೇಬಿಹಾಳ:(ಸೆ.28) ತಾಲೂಕಿನ ಗಡಿಭಾಗದ ಸಿದ್ದಾಪುರ ಪಿಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು, ಶಿಕ್ಷಕರು ಜೀವಭಯದಲ್ಲೇ ಪಾಠ ಕಲಿಯುವ ಹಾಗೂ ಪಾಠ ಮಾಡುವ ಪರಿಸ್ಥಿತಿ ಉದ್ಭವವಾಗಿದೆ. ಇತ್ತೀಚೆಗೆ ನಿರಂತರ ಮಳೆಗೆ ಕೋಣೆಗಳ ಚಾವಣಿ ಸೋರುತ್ತಿರುವುದು ಒಂದು ಸಮಸ್ಯೆ ಆಗಿದ್ದರೆ, ಒಂದೆರಡು ಕೋಣೆಗಳು ಮತ್ತು ಕಾರಿಡಾರ್ ಚಾವಣಿ ಸಿಮೆಂಟ್ ಪ್ಲಾಸ್ಟರ್ ಸಮಯ ಸಿಕ್ಕಾಗೆಲ್ಲ ಉದುರಿ ಬೀಳುತ್ತಿರುವುದು ಮತ್ತೊಂದು ಸಮಸ್ಯೆ ಆಗಿದೆ. ಯಾವಾಗ ಮಕ್ಕಳು, ಶಿಕ್ಷಕರ ತಲೆ ಮೇಲೆ ಬಿದ್ದು ಅನಾಹುತ ಸಂಭವಿಸುತ್ತದೆ ಎಂಬ ಭೀತಿ ಉಂಟಾಗಿದೆ. 

ಪ್ಲಾಸ್ಟರ್ ಉದುರಿ ಬೀಳುವ ಕಾರಿಡಾರ್, ಕೋಣೆಗಳ ವ್ಯಾಪ್ತಿಯಲ್ಲಿ ಮಕ್ಕಳು ತಿರುಗಾಡದಂತೆ ನೋಡಿ ಕೊಳ್ಳುವ ಜವಾಬ್ದಾರಿಯನ್ನು ಶಿಕ್ಷಕರು ನಿರ್ವಹಿಸಿದರೂ ಕೆಲ ಮಕ್ಕಳು ಆ ಕಡೆ ಸುಳಿದಾಡುವುದನ್ನು ನಿಲ್ಲಿಸುತ್ತಿಲ್ಲ. 1 ರಿಂದ 8 ನೇ ತರಗತಿವರೆಗೆ 6-7 ಕೊಠಡಿಗಳಿರುವ ಶಾಲೆಯಲ್ಲಿ ಅಂದಾಜು 250ಕ್ಕೂ ಹೆಚ್ಚು ಮಕ್ಕಳು, 8-9 ಶಿಕ್ಷಕರು ಇದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ತುಂಬಾ ಹಳೆಯ ಕಟ್ಟಡ ಆಗಿರುವದರಿಂದ ಸಂಪೂರ್ಣ ಜೀರ್ಣಾವಸ್ಥೆಗೊಳಗಾಗಿ ಕಟ್ಟಡ ಸತ್ವ ಕಳೆದುಕೊಳ್ಳುತ್ತಿದೆ. ಮೊದಲೇ ಕೊಠಡಿಗಳ ಕೊರತೆ, ಇಂಥ ಪರಿಸ್ಥಿತಿಯಲ್ಲಿ ಬಿಸಿಯೂಟಕ್ಕೆಂದು ಒಂದು ಕೊಠಡಿ ಬಳಸಿಕೊಂಡರೆ ಉಳಿಯುವ ಕೆಲವೇ ಕೊಠಡಿಗಳಲ್ಲಿ ಪಾಠ ಪ್ರವಚನ ನಡೆಯಬೇಕು. ಸೋರುವ ಚಾವಣಿ ಪ್ಲಾಸ್ಟರ್ ಕುಸಿಯುವ ಕೋಣೆಗಳನ್ನು ಕೈಬಿಟ್ಟರೆ ಮಕ್ಕಳಿಗೆ ಬಯಲಲ್ಲೇ ಪಾಠ ಕಲಿಸುವ ಅನಿವಾರ್ಯತೆ. 

ಮಳೆ ಬಂದರೆ ಈ ಶಾಲೆಯಲ್ಲಿನ ಪರಿಸ್ಥಿತಿ ಅಧೋಗತಿ. ಮಧ್ಯಾಹ್ನದ ಬಿಸಿಯೂಟ ಸೇವಿಸುವ ಸಮಯ ತಟ್ಟೆಯಲ್ಲಿ ಅನ್ನ ಬಡಿಸಿಕೊಂಡು ಕಾರಿಡಾರ್‌ನಲ್ಲಿ ಕುಳಿತು ಊಟ ಮಾಡಬೇಕು. ಇಂಥ ಸಂದರ್ಭ ಚಾವಣಿ ಪದರು ಉದುರಿ ಮಕ್ಕಳ ತಲೆಮೇಲೆ ಬಿದ್ದರೆ ಉಂಟಾಗುವ ಅನಾಹುತಕ್ಕೆ ಯಾರು ಹೊಣೆ. ಮಕ್ಕಳನ್ನು ಅಲ್ಲಿ ಕೂಡಬೇಡಿ ಎಂದು ಎಷ್ಟು ಬೆದರಿಸಿದರೂ, ಕಣ್ಗಾವಲು ಹಾಕಿದರು ಹೇಗೋ ಕಣ್ಣು ತಪ್ಪಿಸಿ ಅಲ್ಲೇ ಊಟಕ್ಕೆ ಕೂಡುತ್ತಾರೆ. ಬೇರೆ ದಾರಿ ಇವರಿಗೆ ಇಲ್ಲವಾಗಿದೆ. ಇದು ಕೂಡ ಅಪಾ ಯವನ್ನು ಮೈಮೇಲೆ ಎಳೆದುಕೊಳ್ಳಲು ಅವಕಾಶವಾದಂತಾಗಿದೆ ಎನ್ನುವುದು ಶಿಕ್ಷಕರ ಅಳಲು. 

ಮುಖ್ಯಾಧ್ಯಾಪಕ ಎ.ವಿ.ಇದಿರುಮನಿ, ಶಾಲೆಗೆ ಬರುವ ಅನುದಾನ ಬಳಸಿ ಆಗಾಗ ದುರಸ್ತಿ ಮಾಡಿಸಿದರೂ ಕೆಲಸ ಮಾಡುವವರ ಕಳಪೆ ಕಾಮಗಾರಿ ಯಿಂದಾಗಿ ನಿರುಪಯುಕ್ತ ಎನ್ನಿಸಿಕೊಳ್ಳತೊಡಗಿದೆ. ಈಗೀಗ ಸುರಿಯುತ್ತಿರುವ ಮಳೆಗೆ ಕೆಲ ಕೋಣೆಗಳು ಸೋರುತ್ತಿದ್ದರೂ, ಚಾವಣಿ ಪದರು ಉದುರಿ ಬೀಳುತ್ತಿದ್ದರೂ ಇದನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಗಮ ನಕ್ಕೆ ತರುವಲ್ಲಿ ಮುಖ್ಯಾಧ್ಯಾಪಕರು ವಿಫಲರಾಗಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ. 

ಈಗಲಾದರೂ ಸಂಬಂಧಿಸಿದವರು ಎಚ್ಚೆತ್ತು ಶಾಲೆ ದುರಸ್ತಿಗೆ ಮುಂದಾಗಬೇಕು. ಇಲ್ಲವೇ ಮಕ್ಕಳ ಕಲಿಕಾ ಚಟುವಟಿಕೆ ಆತಂಕ ರಹಿತವಾಗಿ ನಡೆಯಲು ಪರ್ಯಾಯ ವ್ಯವಸ್ಥೆ ಒದಗಿಸಿಕೊಡಬೇಕು ಎನ್ನುವುದು ಪಾಲಕರ ಒತ್ತಾಯವಾಗಿದೆ. 
ಈ ಬಗ್ಗೆ ಮಾತನಾಡಿದ ಸಿದ್ದಾಪುರ ಗ್ರಾಮಸ್ಥರಾದ ಬಾಬು ವಾಲಿಕಾರ, ಪರಶುರಾಮ, ಲಕ್ಷ್ಮಣ, ಚಂದ್ರಶೇಖರ, ಮಲ್ಲು ಅವರು, ಶಾಲಾ ಕೊಠಡಿ ಜೀರ್ಣಾವಸ್ಥೆಗೆ ತಲುಪಿವೆ. ಚಾವಣಿ ಪದರು ಉದುರಿ ಮಕ್ಕಳ ತಲೆಮೇಲೆ ಬೀಳುವ ಆತಂಕ ಇದೆ. ಇದನ್ನು ಸರಿಮಾಡಿ ಸಂಭವನೀಯ ಅಪಾಯ ತಪ್ಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ. ಈಗಲಾದರೂ ಶಿಕ್ಷಣ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಕ್ರಮ ಕೈಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. 

ಇನ್ನು ಈ ಬಗ್ಗೆ ಮಾಹಿತಿ ನೀಡಿದ ಮುದ್ದೇಬಿಹಾಳ ಬಿಇಒ ಎಸ್.ಡಿ.ಗಾಂಜಿ ಅವರು, ಶಾಲಾ ದುಸ್ಥಿತಿ ಗಮನಿಸಿ 4  ಹೆಚ್ಚುವರಿ ಕೊಠಡಿ ಮಂಜೂರು ಮಾಡಿಸಲು ಪ್ರಸ್ತಾವನೆ ಕಳಿಸಲಾಗಿದ್ದು, ಮಂಜೂರಾತಿ ಹಂತದಲ್ಲಿದೆ. ಹೊಸ ಕೋಣೆ ನಿರ್ಮಾಣದ ತನಕ ಮಕ್ಕಳು ಅಪಾಯಕಾರಿ ಸ್ಥಳಗಳಲ್ಲಿ ತಿರುಗಾಡದಂತೆ, ಕೂಡದಂತೆ, ಕಲಿಕಾ ಚಟುವಟಿಕೆ ನಡೆಸದಂತೆ ನೋಡಿಕೊಳ್ಳಲು ಮುಖ್ಯಾಧ್ಯಾಪಕರಿಗೆ ತಿಳಿಸುತ್ತೇನೆ. ಆದಷ್ಟು ಶೀಘ್ರ ಕೋಣೆ ಕಾಮಗಾರಿಗೆ ಚಾಲನೆ ದೊರಕುವ ಆಶಾಭಾವ ಇದೆ ಎಂದು ತಿಳಿಸಿದ್ದಾರೆ. 

Follow Us:
Download App:
  • android
  • ios