Asianet Suvarna News Asianet Suvarna News

ಶಿವಮೊಗ್ಗದಲ್ಲಿ ಗ್ಯಾಂಗ್‌ವಾರ್‌ಗೆ ಮೂವರು ಬಲಿ; ರಕ್ಷಣೆ ಕೊಡಲಾಗದಿದ್ದರೆ ಜಾಗ ಖಾಲಿ ಮಾಡಿ: ಶಾಸಕ ಚನ್ನಬಸಪ್ಪ

ಶಿವಮೊಗ್ಗ ನಗರದಲ್ಲಿ ಗ್ಯಾಂಗ್‌ವಾರ್ ನಡೆದು ಮೂರು ಮೂರು ಕೊಲೆಗಳಾಗಿವೆ. ಕಾಂಗ್ರೆಸ್ ಮಾನಸಿಕತೆಗೆ ತಕ್ಕಂತೆ ನಡೆದುಕೊಳ್ಳುತ್ತಾ ಜನರಿಗೆ ರಕ್ಷಣೆ ಕೊಡಲಾಗದವರು ಇಲ್ಲಿದ್ದು ಪ್ರಯೋಜನವಿಲ್ಲ, ನೀವು ಜಾಗ ಖಾಲಿ ಮಾಡಿ ಎಂದು ಶಾಸಕ ಚನ್ನಬಸಪ್ಪ ಆಗ್ರಹಿಸಿದರು.

Shivamogga Gang war three killed MLA Channabasappa outraged about Police department negligence sat
Author
First Published May 9, 2024, 12:00 PM IST

ಶಿವಮೊಗ್ಗ (ಮೇ 09): ಶಿವಮೊಗ್ಗ ನಗರದಲ್ಲಿ ಗ್ಯಾಂಗ್‌ವಾರ್ ನಡೆದು ಮೂರು ಮೂರು ಕೊಲೆಗಳಾಗಿವೆ. ಈ ಬಗ್ಗೆ ಮೊದಲೇ ಮಾಹಿತಿ ನೀಡಿದರೂ ತಡೆಯಲು ಮುಂದಾಗದ ಪೊಲೀಸ್ ಇಲಾಖೆ ಕಾಂಗ್ರೆಸ್ ಸರ್ಕಾರದ ಮಾನಸಿಕತೆಗೆ ತಕ್ಕಂತೆ ನಡೆದುಕೊಳ್ಳುತ್ತಿದೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಿಲ್ಲದವರು, ಜನರಿಗೆ ರಕ್ಷಣೆ ಕೊಡಲಾಗದವರು ಇಲ್ಲಿದ್ದು ಪ್ರಯೋಜನವಿಲ್ಲ. ನೀವು ಜಾಗ ಖಾಲಿ ಮಾಡಿ ಎಂದು ಶಿವಮೊಗ್ಗ ಶಾಸಕ ಚನ್ನಬಸಪ್ಪ ಕಿಡಿಕಾರಿದ್ದಾರೆ.

ಶಿವಮೊಗ್ಗ ನಗರದಲ್ಲಿ ಗುರುವಾರ ಸುದ್ದೊಗೋಷ್ಠಿಯೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಗ್ಯಾಂಗ್‌ವಾರ್ ನಡೆದು ಮೂರು ಕೊಲೆಗಳಾಗಿದೆ. ಇದಕ್ಕೆ ಪೊಲೀಸ್ ಇಲಾಖೆ ನೇರ ಕಾರಣ. ಪೊಲೀಸರಿಗೆ ಮಾಹಿತಿ ಕೊಟ್ಟರೂ ಕ್ರಮ ಕೈಗೊಂಡಿಲ್ಲ. ಶಿವಮೊಗ್ಗಕ್ಕೆ ಇಂತಹ ಬೇಜವಾಬ್ದಾರಿ ರಕ್ಷಣಾಧಿಕಾರಿಗಳ ಅವಶ್ಯಕತೆ ಇಲ್ಲ. ಸಾಲು ಸಾಲು ಕೊಲೆಗಳನ್ನು ಮಾಡಲು ರಕ್ಷಣೆ ಇಲಾಖೆಯ ಕುಮ್ಮಕ್ಕು ಇದೆ. ಕರ್ತವ್ಯದಲ್ಲಿ ಬೇಜವಾಬ್ದಾರಿ ನೆಪವೊಡ್ಡಿ ಕೂಡಲೇ ಶಿವಮೊಗ್ಗ ನಗರದ ಕೋಟೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅವರನ್ನು ತಕ್ಷಣ ಅಮಾನತ್ತು ಮಾಡಬೇಕು. ಇಂತಹ ಹಾಡ ಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡುವಂತಹ ತಂಡ ಶಿವಮೊಗ್ಗದಲ್ಲಿ ಬೆಳೆಯುವುದಕ್ಕೆ ನೇರವಾಗಿ ಪೊಲೀಸ್ ಇಲಾಖೆ ಕಾರಣವಾಗಿದೆ ಎಂದು ಆಕ್ರೋಶ ಹೊರಹಾಕಿದರು.

Breaking: ಶಿವಮೊಗ್ಗದಲ್ಲಿ ಜೋಡಿ ಕೊಲೆ: ಅನ್ಯಕೋಮಿನ ಇಬ್ಬರು ಯುವಕರ ಬರ್ಬರ ಹತ್ಯೆ

ಕಳೆದ ತಿಂಗಳು ಏಪ್ರಿಲ್ 6ರಂದು ಸರ್ಕಾರಿ ನೌಕರ ಬಸ್ ಚಾಲಕ ಶರವಣ್ಣನ ಮೇಲೆ ರೌಡಿಗಳ ಗುಂಪು ಅಟ್ಯಾಕ್ ಮಾಡಿದೆ. ಆದರೆ, ಇದುವರೆಗೂ ಪೊಲೀಸರು ಈ ರೌಡಿಗಳನ್ನು ಬಂಧಿಸುವ ಕೆಲಸ ಮಾಡಿಲ್ಲ. ಜಿಲ್ಲೆಯಲ್ಲಿ ಓಸಿ, ಅಫೀಮು, ಗಾಂಜಾ ಸಾಗಣೆ ಮೊದಲಾದ ಕೃತ್ಯಗಳಿಗೆ ಪೊಲೀಸರ ಸಹಕಾರವಿದೆ ಎಂಬುದನ್ನೂ ನಾನು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದೆನು. ಇದಕ್ಕೆ ಸಾಕ್ಷಿ ಕೇಳಿದ್ದರು, ಸಾಕ್ಷಿ ಇಲ್ಲದೆ ನಾವು ಕ್ರಮ ತೆಗೆದುಕೊಳ್ಳುವ ಹಾಗಿಲ್ಲ ಎಂದಿದ್ದರು. ಕೆಲವೇ ದಿನಗಳಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಜೂಜಾಟ ಓಸಿ ನಡೆಸುವವರಿಂದ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ನಿಮ್ಮ ಮೂಗಿನ ಕೆಳಗೆ ಸಾಕ್ಷಿ ಇದೆ, ಇನ್ನು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ? ಎಂದು ಕಿಡಿಕಾರಿದರು.

ಶಿವಮೊಗ್ಗ ಜಿಲ್ಲಾ ಪೊಲೀಸರು ಕಾಂಗ್ರೆಸ್ಸಿನ ಮಾನಸಿಕತೆಗೆ ತಕ್ಕಂತೆ ಆಟ ಆಡಬೇಡಿ. ಸಾಗರದಲ್ಲಿ ಅಮಾಯಕ ಹಿಂದೂ ಕಾರ್ಯಕರ್ತ  ವಿನೋದ್ ರಾಜ್ ಮೇಲೆ ಸುಳ್ಳು ಕೇಸ್ ಹಾಕಿ ಗಡಿಪಾರು ಮಾಡಿದ್ದೀರಾ? ಸುಖಾ ಸುಮ್ಮನೆ ಹಿಂದೂಗಳನ್ನು ಗಡಿಪಾರು ಮಾಡುವ ಕೆಲಸ ಮಾಡುತ್ತೀರಾ? ಊರಿನಲ್ಲಿ ಇಲ್ಲದವರ ಹೆಸರುಗಳನ್ನು ಚಾರ್ಜ್ ಶೀಟ್ ನಲ್ಲಿ ಸೇರಿಸಿದ್ದೀರಾ? ಚುನಾವಣೆಗೆ ಮುಂಚೆ ರೌಡಿಗಳ ಪೆರೇಡ್ ಮಾಡಿಸಿದ್ದರು. ಈ ವೇಳೆ ಹಿಂದೂ ಕಾರ್ಯಕರ್ತ ಆಟೋ ನಾಗನ ಮನೆಗೆ ನುಗ್ಗಿ ತಲವಾರ್ ಇದೆ ಎಂದು ಚೆಕ್ ಮಾಡಿದ್ದೀರಾ? ಯಾಕೆ ನಿನ್ನೆ ಗ್ಯಾಂಗ್ ವಾರ್ ನಡಿತಲ್ಲ ಆಗ ನಿಮಗೆ ತಲವಾರು ಸಿಗಲಿಲ್ವಾ? ಚುನಾವಣೆ ನಡೆಯುವ ದಿನ ಈ ರೀತಿ ಘಟನೆಗಳು ನಡೆದಿವೆಯಲ್ಲ ನೀವೆಷ್ಟು ಚೆನ್ನಾಗಿ ಕೆಲಸ ಮಾಡಿದ್ದೀರಾ ಎಂದು ಗೊತ್ತಾಯಿತು ಎಂದರು.

ಶಿವಮೊಗ್ಗ ಗಂಡನ ಸಾವಿಗೆ ಮತದಾನ ಸಮರ್ಪಿಸಿದ ಹೆಂಡತಿ; ಶವ ಬಿಟ್ಟುಬಂದು ಮತ ಹಾಕಿದ ಮಹಿಳೆ

ಶಿವಮೊಗ್ಗದಲ್ಲಿ ನಡೆದ ಘಟನೆಯ ಬಳಿಕ ಜಿಲ್ಲಾ ರಕ್ಷಣಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡುತ್ತೇನೆ. ನಿಮ್ಮ ಬೇಜವಾರಿತನಕ್ಕೆ ತಕ್ಕ ಶಿಕ್ಷೆ ಆಗಬೇಕು . ಗೃಹ ಸಚಿವರು ಇದರ ಬಗ್ಗೆ ಗಂಭೀರವಾಗಿ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಗೃಹ ಇಲಾಖೆ ಬದುಕಿದೆಯೋ? ಸತ್ತಿದೆಯೋ ? ಎಂದು ಜನತೆಗೆ ತಿಳಿಸಿ. ಯಾರ ಬಳಿ, ಎಲ್ಲಿ ತಲವಾರುಗಳು ಇದೆ ಎಂಬುದನ್ನು ಪೊಲೀಸರಿಗೆ ತಿಳಿಸಿದರೂ ಅದನ್ನು ಹುಡುಕುವುದಿಲ್ಲ. ನಿಮ್ಮಂತವರು ಇಲ್ಲಿದ್ದು ಏನು ಪ್ರಯೋಜನವಿಲ್ಲ ಜಾಗ ಖಾಲಿ ಮಾಡಿ ಎಂದು ಸ್ಥಳೀಯ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Follow Us:
Download App:
  • android
  • ios