ನಿದ್ರೆ ಕಾಣದ ಕಣ್ಣು, ಚೈತನ್ಯ ಕಳೆದುಕೊಂಡ ದೇಹಗಳು: ಇದು ಪೊಲೀಸರ ಬವಣೆ..!
ಬಳ್ಳಾರಿ(ಏ.15): ಮುಖ ಕಪ್ಪಿಟ್ಟಿದೆ, ನಗು ಮಾಯವಾಗಿದೆ. ನಿದ್ರೆ ಕಾಣದ ಕಣ್ಣುಗಳು ವಿಶ್ರಾಂತಿಗೆ ಹಾತೊರೆಯುತ್ತಿವೆ. ದೇಹ ಚೈತನ್ಯ ಕಳೆದುಕೊಂಡಿದ್ದರೂ ವಿಧಿಯಿಲ್ಲದೆ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಲಾಕ್‌ಡೌನ್ ಬಳಿಕ ಬಿಸಿಲ ಬೇಗುದಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪೊಲೀಸರ ಕಡೆ ದೃಷ್ಟಿ ಹರಿಸಿದರೆ ಅವರ ಮುಖಭಾವ ‘ಇನ್ನೆಷ್ಟು ದಿನ ಈ ಸಂಕಟ’ ಎಂದು ಪ್ರಶ್ನಿಸುವಂತೆ ಇರುತ್ತದೆ.
ರಸ್ತೆ, ವೃತ್ತಗಳು, ಚೆಕ್‌ಪೋಸ್ಟ್‌ಗಳು, ಆರ್‌ಆರ್‌ಟಿ ಸೇರಿದಂತೆ ವಿವಿಧೆಡೆ ಕಾರ್ಯನಿರ್ವಹಿಸುವ ಪೊಲೀಸ್ ಪೇದೆಗಳಷ್ಟೇ ಅಲ್ಲ; ಹೆಗಲ ಮೇಲೆ ನಕ್ಷತ್ರ ಹೊತ್ತಿರುವ ಅಧಿಕಾರಿಗಳಿಗೂ ಕೋರೊನಾ ವೈರಸ್ ನೆಮ್ಮದಿಯಿಂದ ಇರಲು ಬಿಟ್ಟಿಲ್ಲ.
ಬೆಳಗ್ಗೆ 8 ರಿಂದ ಮಧ್ಯಾಹ್ನ 2ರ ವರೆಗೆ ಡ್ಯೂಟಿ ಮಾಡಬೇಕು. ಇದು ನಮ್ಮ ಪೊಲೀಸ್ ಸೇವಾವಧಿಯ ನಿಯಮ. ಹಾಗಂತ ಬೆಳಗ್ಗೆ 8 ಗಂಟೆಗೆ ಬರುವಂತಿಲ್ಲ. ಕೆಲಸ ಮುಗೀತು ಅಂತ 2 ಗಂಟೆಗೆ ಮನೆಗೆ ತೆರಳುವಂತಿಲ್ಲ. ಮಧ್ಯಾಹ್ನದ ಬಳಿಕ ಮತ್ತೊಂದು ಕಡೆಗೆ ಡ್ಯೂಟಿ ರೆಡಿಯಾಗಬೇಕು. ಸಮಯ ಸಿಕ್ಕಾಗ ಕೆಲಸ ಮಾಡುವ ಜಾಗದಲ್ಲಿಯೇ ನೆರಳು ಹುಡುಕಿಕೊಡು ಒಂದಷ್ಟು ವಿಶ್ರಮಿಸಬೇಕು. ಲಾಕ್‌ಡೌನ್ ಬಳಿಕ ಕೆಲಸದ ಸಮಯ ಮಿತಿಗಳಿಲ್ಲ. 18 ತಾಸು ಡ್ಯೂಟಿಯಲ್ಲಿ ಇರಲೇಬೇಕು ಎನ್ನುತ್ತಾರೆ ಪೇದೆ ರವಿಕುಮಾರ್.
ನಗರಗಳಿಗೆ ಸೀಮಿತವಾಗುತ್ತಿರುವ ದಾನಿಗಳು: ಮಾಸ್ಕ್, ಸ್ಯಾನಿಟೈಜರ್ ಹಳ್ಳಿಗರಿಗೆ ಬೇಕಿಲ್ವಾ?
ಸೋಂಕಿತ ಪ್ರದೇಶಗಳು ಹಾಗೂ ಚೆಕ್‌ಪೋಸ್ಟ್‌ಗಳಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಸಿಬ್ಬಂದಿ ಸೋಂಕು ಹರಡುವ ಭೀತಿಯಿಂದ ವಾರಕ್ಕೊಮ್ಮೆ ಮನೆಗೆ ಹೋಗುತ್ತಿದ್ದು, ಪೊಲೀಸ್ ಠಾಣೆಗಳಲ್ಲಿಯೇ ವಸತಿ ಮಾಡುತ್ತಿದ್ದಾರೆ.
‘ವಾರಕ್ಕೊಮ್ಮೆ ಮನೆಗೆ ಹೋದರೂ ಪತ್ನಿ, ಮಕ್ಕಳ ಜೊತೆಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದೇವೆ. ಮನೆಗೆ ಬೇಕಾದ ರೇಷನ್ ಮತ್ತಿತರ ಸಮಸ್ಯೆಗಳಿಗೆ ಸ್ಪಂದಿಸಿ ಮತ್ತೆ ಮನೆಯಿಂದ ಹೊರ ಬೀಳುತ್ತೇವೆ. ಅಪ್ಪಾ ಎಂದು ಓಡಿ ಬರುವ ಮಕ್ಕಳನ್ನು ಸಹ ಮುದ್ದಾಡಲೂ ಆಗದ ಸ್ಥಿತಿಯಲ್ಲಿ ನಮ್ಮ ಪೊಲೀಸರಿದ್ದಾರೆ’ ಎಂದು ಲಾಕ್‌ಡೌನ್ ಬಳಿಕ ಕರ್ತವ್ಯದಲ್ಲಿರುವ ಪೊಲೀಸರ ಸದ್ಯದ ಸ್ಥಿತಿಯನ್ನು ಬಿಚ್ಚಿಟ್ಟರು ಹಿರಿಯ ಪೊಲೀಸ್ ಪೇದೆ ಹನುಮಂತಪ್ಪ.
ಉಪವಾಸ ಸಹಜ
ನಗರ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಸಕಾಲಕ್ಕೆ ಉಪಹಾರ, ಊಟ ಸಿಗುತ್ತಿಲ್ಲ. ಹೋಟೆಲ್‌ಗಳಿಲ್ಲ. ಸ್ವಯಂ ಸೇವಕರು ನೀಡುವ ಊಟದ ಪೊಟ್ಟಣವನ್ನು ಎತ್ತಿಟ್ಟುಕೊಂಡು ಹಸಿವು ನೀಗಿಸಿಕೊಳ್ಳುವ ಪೊಲೀಸರು, ಅನೇಕ ಬಾರಿ ಊಟ ಸಿಗದ ಸ್ಥಿತಿಯನ್ನು ಎದುರಿಸಿದ್ದೂ ಇದೆ.
ನನಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಒಂದು ಮಗು ನಾಲ್ಕು ವರ್ಷದ್ದು. ಮತ್ತೊಂದು ಒಂದೂವರೆ ವರ್ಷದ್ದು. ನಾನು ಬೆಳಗ್ಗೆಯೇ ಮನೆಯಿಂದ ಹೊರ ಬೀಳುವಾಗ, ವಾಪಸ್ ಮನೆ ಸೇರುವಾಗ ಮಕ್ಕಳು ಮಲಗಿರ್ತಾರೆ. ಮಕ್ಕಳ ನಗು, ಅಳು, ಆಟ, ತುಂಟಾಟಗಳನ್ನು ನೋಡಿಯೇ ಬಹಳ ದಿನಗಳಾಯಿತು. ಮನೆ ಕೆಲಸದವರು ಮಕ್ಕಳನ್ನು ಜೋಪಾನ ಮಾಡುತ್ತಿದ್ದಾರೆ. ಮನೆಯಲ್ಲಿ ಸಿಸಿ ಕ್ಯಾಮೆರಾ ಇದೆ. ಮೊಬೈಲ್ ಮೂಲಕವೇ ಕೆಲಸದ ಒಂದಷ್ಟುಬಿಡುವಿನಲ್ಲಿ ಮನೆಯಲ್ಲಿರುವ ಮಕ್ಕಳ ನಗು, ಅಳು ನೋಡುತ್ತೇನೆ. ಜನರ ಸುರಕ್ಷತೆಯ ಜವಾಬ್ದಾರಿ ನಮ್ಮ ಮೇಲಿದ್ದು ದೇಶ ಸಂಕಷ್ಟದ ಇಂತಹ ಸಂದರ್ಭದಲ್ಲಿ ನಾವು ಕೆಲಸ ಮಾಡಬೇಕಿದೆ ಎನ್ನುತ್ತಾರೆ ಇಲ್ಲಿನ ಗಾಂಧಿ ನಗರ ಠಾಣೆ ಪಿಎಸ್‌ಐ ಗಾಯತ್ರಿ ರೊದ್ದಂ.
ನಮಗೂ ಜೀವದ ಭಯವಿದೆ
ನಮಗೂ ಜೀವದ ಭಯವಿದೆ. ಯಾರಲ್ಲಿ ವೈರಸ್ ಇದೆಯೋ ಏನೋ ಹೇಗೆ ಗೊತ್ತಾಗುತ್ತೆ. ಸೋಂಕಿತ ಪ್ರದೇಶದಲ್ಲಿ ಕೆಲಸ ಮಾಡ್ತೀವಿ. ಬೈಕ್ ಸೀಜ್ ಮಾಡ್ತೀವಿ. ಶಂಕಿತರನ್ನು ಕರ್ಕೊಂಡು ಬರ್ತೀವಿ. ವೈದ್ಯರ ಜೊತೆ ಇರ್ತೀವಿ. ದೇವರ ಮೇಲೆ ಭಾರ ಹಾಕಿ ಕೆಲಸ ಮಾಡ್ತಾ ಇದ್ದೀವಿ ಎಂದು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಆತಂಕದಿಂದ ಹೇಳುತ್ತಾರೆ.