Asianet Suvarna News Asianet Suvarna News

ಕೃತಕ ಅಭಾವ ಸೃಷ್ಟಿಸುವ ಮಾಫಿಯಾ: 3.5 ಕೋಟಿ ಮೌಲ್ಯದ ಬಿತ್ತನೆ ಬೀಜ ವಶ

600 ಮೆಟ್ರಿಕ್‌ ಟನ್‌ ಬಿತ್ತನೆ ಬೀಜ ಅನಧಿಕೃತವಾಗಿ ಸಂಗ್ರಹಿಸಿಟ್ಟಿದ್ದ ಹಿನ್ನೆಲೆ| ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ಕೋಲ್ಡ್‌ ಸ್ಟೋರೇಜ್‌ ಮೇಲೆ ಅಧಿಕಾರಿಗಳ ದಾಳಿ| ಸೂರ್ಯ ಕೋಲ್ಡ್‌ ಸ್ಟೋರೇಜ್‌ ಮೇಲೆ ದಾಳಿ| ಎರಡು ಕೋಲ್ಡ್‌ ಸ್ಟೋರೇಜ್‌ಗಳಿಂದ 600 ಮೆಟ್ರಿಕ್‌ ಟನ್‌ಗೂ ಅಧಿಕ ಬಿತ್ತನೆ ಬೀಜ ವಶ| 

Officials Raid on Unofficially stored Seeds in Gowdown in Byadagi in Haveri district
Author
Bengaluru, First Published Apr 25, 2020, 8:07 AM IST

ಬ್ಯಾಡಗಿ(ಏ.25): ಪಟ್ಟಣದಲ್ಲಿ ವಿವಿಧ ಕೋಲ್ಡ್‌ ಸ್ಟೋರೇಜ್‌ಗಳ ಮೇಲೆ ಶುಕ್ರವಾರ ದಾಳಿ ನಡೆಸಿದ ಕೃಷಿ ಅಧಿಕಾರಿಗಳ ತಂಡ ಅನಧಿಕೃತವಾಗಿ ಸಂಗ್ರಹಿಸಿ ಇಡಲಾಗಿದ್ದ ಸುಮಾರು 3.5 ಕೋಟಿ ಮೌಲ್ಯದ ಗೋವಿನಜೋಳ ಇನ್ನಿತರ ಬಿತ್ತನೆ ಬೀಜಗಳನ್ನು ವಶಕ್ಕೆ ಪಡೆದಿದ್ದಾರೆ.

"

ಉಪವಿಭಾಗಾಧಿಕಾರಿ ದಿಲೀಷ್‌, ಜಂಟಿ ಕೃಷಿ ನಿರ್ದೇಶಕ ಡಾ. ಬಿ. ಮಂಜುನಾಥ, ತಹಸೀಲ್ದಾರ್‌ ಶರಣಮ್ಮ ಹಾಗೂ ಸಿಪಿಐ ಭಾಗ್ಯವತಿ ನೇತೃತ್ವದ ತಂಡವು ಪಟ್ಟಣದ ವೀರಶೈವ ಮುಕ್ತಿಧಾಮಕ್ಕೆ ಹೊಂದಿಕೊಂಡಿರುವ ಸೂರ್ಯ ಕೋಲ್ಡ್‌ ಸ್ಟೋರೇಜ್‌ ಹಾಗೂ ತಾಲೂಕಿನ ಛತ್ರ ಗ್ರಾಮದ ಬಳಿಯಿರುವ ವಕ್ರತುಂಡ ಕೋಲ್ಡ್‌ ಸ್ಟೋರೇಜ್‌ಗಳ ಮೇಲೆ ದಾಳಿ ನಡೆಸಿತು.

ಕೊರೋನಾ ವಿರುದ್ಧ ಹೋರಾಟ: ಮೇ. 3 ರವರೆಗೆ APMC ಬಂದ್‌

600 ಮೆಟ್ರಿಕ್‌ ಟನ್‌ ಬೀಜ ವಶಕ್ಕೆ:

ಬೆಳಗ್ಗೆ ಸೂರ್ಯ ಕೋಲ್ಡ್‌ ಸ್ಟೋರೇಜ್‌ ಮೇಲೆ ದಾಳಿ ನಡೆಸಿದ ತಂಡ, ಎರಡು ಕೋಲ್ಡ್‌ ಸ್ಟೋರೇಜ್‌ಗಳಿಂದ 600 ಮೆಟ್ರಿಕ್‌ ಟನ್‌ಗೂ (ಸುಮಾರು 18 ಸಾವಿರ ಚೀಲ) ಅಧಿಕ ಬಿತ್ತನೆ ಬೀಜಗಳನ್ನು ವಶಪಡಿಸಿಕೊಂಡಿರುವುದಾಗಿ ಪ್ರಾಥಮಿಕ ಹಂತದ ತನಿಖೆಯಿಂದ ತಿಳಿದು ಬಂದಿದೆ.

ದಾಳಿ ಸಂದರ್ಭದಲ್ಲಿ ಸಂಸ್ಕರಿಸಿದ (ಟ್ರೀಟ್‌ಮೆಂಟ್‌ ಸೀಡ್‌) ಖುಲ್ಲಾ ಬಿತ್ತನೆ ಬೀಜಗಳ ದೊಡ್ಡ ಲಾಟ್‌ಗಳು ಪತ್ತೆಯಾಗಿವೆ. ಈ ಚೀಲಗಳ ಮೇಲೆ ಬ್ಯಾಡ್ಜ್‌ ನಂಬರ್‌, ಮೊಳಕೆ ಒಡೆಯುವ ಪ್ರಮಾಣ (ಜೆರ್ಮಿಶನ್‌ ಪರ್ಸೆಂಟೇಜ್‌), ದರಪಟ್ಟಿ, ಮುಕ್ತಾಯದ ಅವಧಿ ಹಾಗೂ ಕೃಷಿ ಇಲಾಖೆ ಅನುಮತಿ ನೀಡಿದ ಇಂತಹ ಇನ್ಯಾವುದೇ ಅಧಿಕೃತ ಮೊಹರುಗಳು ಇರದಿರುವುದು ಸಾಕಷ್ಟುಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.

ಕೃತಕ ಅಭಾವ ಸೃಷ್ಟಿಸುವ ಮಾಫಿಯಾ:

ಹಾವೇರಿ ಜಿಲ್ಲೆಯು ಏಷ್ಯಾದಲ್ಲೇ ಅತಿ ಹೆಚ್ಚು ಬೀಜೋತ್ಪಾದನೆ ಮಾಡುವ ಕೇಂದ್ರವಾಗಿದೆ. ಅದರಲ್ಲೂ ರಾಣಿಬೆನ್ನೂರು ತಾಲೂಕು ವ್ಯಾಪ್ತಿಯಲ್ಲಿ ಸಾವಿರಾರು ಬೀಜೋತ್ಪಾದನೆ ಕೇಂದ್ರಗಳಿವೆ. ಬೀಜ ಸಂಗ್ರಹದ ಹಿಂದೆ ಪ್ರಸ್ತುತ ವರ್ಷವೇ ರೈತರಲ್ಲಿ ಕೃತಕ ಅಭಾವ ಸೃಷ್ಟಿಸುವ ದೊಡ್ಡ ಹುನ್ನಾರ ಅಡಗಿರುವುದಾಗಿ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ತಿರಸ್ಕೃತ ಬೀಜ:

ಪ್ರತಿವರ್ಷವೂ ಸರ್ಕಾರ ಹಾಗೂ ಕೃಷಿ ಇಲಾಖೆಯಿಂದ ಬೀಜಗಳ ಮೊಳಕೆ ಪ್ರಮಾಣದ (ಜೆರ್ಮಿಶನ್‌ ಕೌಂಟ್‌) ಪ್ರಯೋಗ ಪರೀಕ್ಷೆ (ಲ್ಯಾಬ್‌ ಟೆಸ್ಟಿಂಗ್‌) ನಡೆಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ತಿರಸ್ಕೃತ ಬೀಜಗಳನ್ನು ಸರ್ಕಾರದ ಕಣ್ತಪ್ಪಿಸಿ ಕಡಿಮೆ ದರಕ್ಕೆ ಮಾರಾಟ ಮಾಡುವ ಮಾಫಿಯಾದ ಕೈವಾಡವಿದ್ದು, ಅವರಿಂದ ಸಂಗ್ರಹಿಸಿದ ಬೀಜಗಳಿರಬಹುದು ಎಂಬ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಕೃಷಿ ಇಲಾಖೆ ಉಪನಿರ್ದೇಶಕಿ ಜಿ.ಎಸ್‌. ಸ್ಫೂರ್ತಿ, ಜಾಗೃತ ಕೋಶದ ಪ್ರಾಣೇಶ, ಸ್ಥಳೀಯ ಕೃಷಿ ಇಲಾಖೆಯ ಬಸವರಾಜ ಮರಗಣ್ಣವರ, ಆರ್‌. ಮಂಜುನಾಥ, ರಕ್ಷಣಾ ಇಲಾಖೆ ಎಸ್‌.ಜಿ. ಕಂಬಳಿ, ಬಸವರಾಜ ಅಂಜುಟಗಿ, ಗಡಿಯಪ್ಪಗೌಡ್ರ, ಬೀರಪ್ಪ, ಅಶೋಕ ಬಾರ್ಕಿ, ಅನುವುಗಾರರಾದ ಅಣ್ಣಪ್ಪ ದ್ಯಾಮನಗೌಡ್ರ, ಮಾರುತಿ ದೊಡ್ಮನಿ, ಪ್ರಭು ಚಿಕ್ಕನಗೌಡ್ರ ದಾಳಿ ನಡೆಸಿದ ತಂಡದಲ್ಲಿದ್ದರು.

ಕೊರೋನಾದಂತಹ ಸಂದಿಗ್ಧ ಸ್ಥಿತಿಯಲ್ಲೂ ಇಡೀ ವಿಶ್ವಕ್ಕೆ ರೈತರು ಅನ್ನ ಹಾಕಿದ್ದಾರೆ. ಆದರೆ ಕಳಪೆ ಬೀಜ ಮಾರಾಟಕ್ಕೆ ಮುಂದಾಗಿರುವುದು ದುರಂತದ ಸಂಗತಿ. ಯಾವುದೇ ಒತ್ತಡಕ್ಕೆ ಮಣಿಯದೇ ಕೂಡಲೇ ಎರಡೂ ಕೋಲ್ಡ್‌ ಸ್ಟೋರೇಜ್‌ಗಳನ್ನು ವಶಕ್ಕೆ ಪಡೆದುಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ರೈತ ಮುಖಂಡ ಗಂಗಣ್ಣ ಎಲಿ ಅವರು ಹೇಳಿದ್ದಾರೆ. 

Follow Us:
Download App:
  • android
  • ios