Asianet Suvarna News Asianet Suvarna News

ನಿರುದ್ಯೋಗದ ಬೀಡಾದ ಪಾವಗಡ! ಮಹಾನಗರದತ್ತ ವಲಸೆ ಹೊರಟ ರೈತರು, ಯುವಕರು

ಕುಂಟುತ್ತಾ ಸಾಗಿರುವ ಅಭಿವೃದ್ಧಿ ಕಾಮಗಾರಿಗಳು | ಹೊಟ್ಟೆ ಪಾಡಿಗಾಗಿ ನಗರಗಳತ್ತ ವಲಸೆ ಹೊರಟ ರೈತರು, ಯುವಕರು | ಜನಪ್ರತಿನಿಧಿಗಳು ಪಕ್ಷಭೇದ ಮರೆತು ಹೋರಾಡದಿದ್ದರೆ ಉಳಿಗಾಲವಿಲ್ಲ ಎಂದ ಸ್ಥಳೀಯರು| ಮೊದಲು ಕುಡಿಯಲಿಕ್ಕೆ ನೀರು ನಂತರ ಅಂರ್ಜಜಲ ಹೆಚ್ಚಳದತ್ತ ಗಮನ ಹರಿಸಬೇಕಿದೆ| ರೈಲ್ವೆ ಹಾಗೂ ಕೈಗಾರಿಕೆಗಳು ಸ್ಥಾಪನೆಯಾದರೆ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ| 

No Jobs in Pavagada Taluk in Tumakuru District
Author
Bengaluru, First Published Sep 27, 2019, 2:52 PM IST

ಜೆ.ನಾಗೇಂದ್ರ

ಪಾವಗಡ:(ಸೆ.27) ಸೌರಶಕ್ತಿ ನಾಡೆಂದೇ ವಿಶ್ವ ಮಟ್ಟದಲ್ಲಿ ಹೆಗ್ಗಳಿಕೆ ಪಡೆದಿರುವ ಬಯಲು ಸೀಮೆಯ ಪಾವಗಡ ತಾಲೂಕಿನಲ್ಲಿ ಅಕ್ಷರಶಃ ನಿರುದ್ಯೋಗ ಸಮಸ್ಯೆ ತಾಂಡವಾಗುತ್ತಿದೆ. ಕುಡಿವ ನೀರಿನ ಅಭಾವ ಒಂದೆಡೆಯಾದರೆ, ಕೊಳವೆ ಬಾವಿಗಳು ಬತ್ತಿದ ಪರಿಣಾಮ ನೀರಾವರಿ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಜೀವನೋಪಾಯ ಅರಸಿ, ಈಗಾಗಲೇ ಶೇ.60ರಷ್ಟು ವಿದ್ಯಾವಂತ ಯುವಕರು, ರೈತರು ಹಾಗೂ ಕೃಷಿ ಕಾರ್ಮಿಕರು ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದು, ಗ್ರಾಮೀಣ ಪ್ರದೇಶಗಳು ವೃದ್ಧಾಶ್ರಮಗಳಾಗಿವೆ. 

ನಂಜುಂಡಪ್ಪ ವರದಿ ಪ್ರಕಾರ ಪಾವಗಡ ತಾಲೂಕು ಬರಪೀಡಿತ ಪ್ರದೇಶ ವ್ಯಾಪ್ತಿಗೆ ಒಳಪಟ್ಟಿದ್ದು, ಕಸಬಾ ಸೇರಿದಂತೆ ವೈಎನ್.ಹೊಸಕೋಟೆ, ನಾಗಲಮಡಿಕೆ, ನಿಡಗಲ್ ಹೋಬಳಿಗಳನ್ನು ಒಳಗೊಂಡಿದ್ದು, ಇಲ್ಲಿ 37671 ಕುಟುಂಬಗಳು ಕೃಷಿ ಅವಲಂಬಿತ.ಮತ್ತು 52,244 ಮಂದಿ ಕ್ಕೃಷಿ ಕಾರ್ಮಿಕರಿದ್ದಾರೆ. 1,35,849 ಭೌಗೋಳಿಕ ವಿಸ್ತೀರ್ಣ ಹೊಂದಿದ್ದು, 76,698 ಒಟ್ಟು ಸಾಗುವಳಿ ಪ್ರದೇಶ ಹೊಂದಿದ್ದು, 11,494 ನೀರಾವರಿ ಪ್ರದೇಶ 81,128 ಹೆಕ್ಟೇರು ಖುಷ್ಕಿ ಜಮೀನು ಹೊಂದಿದೆ. 1981 ಹೆಕ್ಟೇರ್ ಪ್ರದೇಶ ವ್ಯಾಪ್ತಿಯಲ್ಲಿ ತಾಲೂಕಿನಾದ್ಯಂತ ಸುಮಾರು 125  ಕೆರೆಗಳಿದ್ದು 1,3821 ಕೊಳವೆ ಹಾಗೂ 4806  ತೆರೆದ ಬಾವಿಗಳಿವೆ.

ಕೈಕೊಟ್ಟ ಮಳೆ, ಊರು ಬಿಟ್ಟ ಜನರು: 

15  ವರ್ಷಗಳಿಂದ ಮಳೆಯ ಕೊರತೆಯಿಂದ ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಹೋಗಿ ತೆಂಗು, ಅಡಿಕೆ ವೀಳ್ಯದೆಲೆ, ದಾಳಿಂಬೆ ಹಾಗೂ ಪಪ್ಪಾಯಿ ಸೇರಿದಂತೆ ತೋಟಗಾರಿಕೆ ಬೆಳೆಗಳು ಪೂರ್ಣ ಪ್ರಮಾಣದಲ್ಲಿ ಒಣಗಿ ಹೋಗಿವೆ. ಮಳೆಗಾಲದ ಶೇಂಗಾ ಈ ಭಾಗದ ಪ್ರಧಾನ ಖುಷ್ಕಿ ಬೆಳೆಯಾಗಿದ್ದು, ಮಳೆಯ ಕಣ್ಣಾಮುಚ್ಚಾಲೆಯಿಂದ ಸಕಾಲಕ್ಕೆ ಮಳೆ ಬಾರದೆ ಪ್ರತಿವರ್ಷ ಶೇಂಗಾ ನಷ್ಟಕ್ಕೀಡಾಗುವ ಕಾರಣ, ವಿಶ್ವಾಸ ಕಳೆದುಕೊಂಡ ರೈತರು ಈ ಬಾರಿ ಬಹುತೇಕ ಶೇಂಗಾ ಕೈಬಿಟ್ಟು ಮಳೆಯಾಶ್ರಿತ ಪರ್ಯಾಯ ಬೆಳೆಗಳಿಗೆ ಮುಂದಾಗಿ ಬಿತ್ತನೆ ಮಾಡಿದ್ದರು. ಆದರೂ ಪ್ರಯೋಜನವಾಗದ ಕಾರಣ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಪರ್ಯಾಯವಾಗಿ ಬದುಕಲು ಅಶ್ರಯವಿಲ್ಲದೇ ಇದರಿಂದ ನೊಂದಿರುವ ಇಲ್ಲಿನ ಬಹುತೇಕ ರೈತರು, ವಿದ್ಯಾವಂತ ಯುವಕರು, ಕೃಷಿ ಕಾರ್ಮಿಕರು ಉದ್ಯೋಗ ಅರಸಿ, ಬೆಂಗಳೂರು, ಬಳ್ಳಾರಿ, ಹೈದರಾಬಾದ್ ಸೇರಿದಂತೆ ಮತ್ತಿತರ ವಾಣಿಜ್ಯ ನಗರಗಳಿಗೆ ಈಗಾಗಲೇ ವಲಸೆ ಹೋಗುತ್ತಿದ್ದಾರೆ. 

ಜಾನುವಾರುಗಳ ಸ್ಥಿತಿ ಚಿಂತಾಜನಕ: 

ಪ್ರಸಕ್ತ ಸಾಲಿಗೆ ಬಿತ್ತನೆ ಮಾಡಿದ ಶೇಂಗಾ ಹಾಗೂ ನವಣೆ, ಸಜ್ಜೆ ಮತ್ತು ಇತರೆ ದಿವ್ವಳ ಧಾನ್ಯಗಳ ಬೆಳೆಗಳು ಒಣಗಿದ್ದು, ಕುಡಿವ ನೀರಿಗೆ ಪರಿತಪ್ಪಿಸುವ ಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನಾದ್ಯಂತ ಸಾಕು ಪ್ರಾಣಿಗಳ ಅವಲಂಬಿತ ರೈತರಿದ್ದು, ಈಗಾಗಲೇ ಎತ್ತು, ಎಮ್ಮೆ ಕುರಿ ಮೇಕೆಗಳಿಗೆ ಮೇವಿನ ಅಬಾವ ಸೃಷ್ಟಿಯಾಗಿದೆ.

ಇದರ ಜತೆಗೆ ದೊಣೆ, ಚಿಲುಮೆ, ಬೆಟ್ಟಗುಡ್ಡಗಳ ಕೆಳಗೆ ಜಮೀನಿನುಗಳಲ್ಲಿರುವ ಕೆರೆ, ಕುಂಟೆ ಮತ್ತು ಕೃಷಿ ಹೊಂಡಗಳು ಬತ್ತಿ ಹೋಗಿದ್ದು, ನೀರಿಗೆ ಹಾಹಾಕಾರ ಶುರುವಾಗಿದೆ. ಜಾನುವಾರುಗಳ ಸ್ಥಿತಿ ಚಿಂತಾಜ ನಕವಾಗಿದೆ. ಇದರ ಜತೆಗೆ ಕಾಡು ಪ್ರಾಣಿಗಳು, ಪಕ್ಷಿಗಳ ಗೋಳು ಮುಗಿಲು ಮುಟ್ಟಿದೆ. ಒಟ್ಟಾರೆ ತಾಲೂಕಿನ ಜ್ವಲಂತ ಸಮಸ್ಯೆಗಳ ನಿವಾರಣೆ ಸದ್ಯದ ಮಟ್ಟಿಗೆ ಬಗೆಹರಿಯುವ ಯಾವುದೇ ಸೂಚನೆಗಳು ಕಂಡುಬರುತ್ತಿಲ್ಲ.

ಶಾಸಕ, ಸಂಸದರು ಮತ್ತು ಇತರೆ ಜನಪ್ರತಿನಿಧಿಗಳು ಪಕ್ಷ ಭೇದ ಹಾಗೂ ಸ್ವಾರ್ಥ ಮರೆತು ಮುನ್ನುಗ್ಗಿದ್ದರೆ ಖಂಡಿತ ಬರಪೀಡಿತ ಪಟ್ಟಿಯಿಂದ ಪಾವಗಡ ತಾಲೂಕು ಹೊರ ತೆಗೆಯಲು ಸಾಧ್ಯವಾಗಲಿದ್ದು, ಮೊದಲು ಕುಡಿಯಲಿಕ್ಕೆ ನೀರು ನಂತರ ಅಂರ್ಜಜಲ ಹೆಚ್ಚಳದತ್ತ ಗಮನ ಹರಿಸಬೇಕಿದೆ. ರೈಲ್ವೆ ಹಾಗೂ ಕೈಗಾರಿಕೆಗಳು ಸ್ಥಾಪನೆಯಾದರೆ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ. 

ಮಂದಗತಿಯಲ್ಲಿ ಸಾಗುತ್ತಿದೆ ರೈಲ್ವೆ ಯೋಜನೆ

ರೈಲ್ವೆ ಯೋಜನೆ ಕೇಂದ್ರದ ಮಹತ್ತರ ಯೋಜನೆ 90 ಕೋಟಿ ರು. ವೆಚ್ಚದ ರಾಯದುರ್ಗ ಹಾಗೂ ತುಮಕೂರು ರೈಲ್ವೆ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದ್ದು ರೈತರ ಭೂಸ್ವಾಧೀನ ಇನ್ನಿತರೆ ಪ್ರಕ್ರಿಯೆಗಳು ಪೂರ್ಣಗೊಂಡಿವೆ. 2  ವರ್ಷಗಳಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೂ ಪೂರ್ಣ ಪ್ರಮಾಣದಲ್ಲಿ ಪ್ರಗತಿ ಸಾಧಿಸಿಲ್ಲ. ಇತ್ತೀಚೆಗಷ್ಟೆ ನಾಗಲಾಪುರ ಪಾವಗಡ ಗಡಿ ರೈಲ್ವೆ ಮಾರ್ಗದ ಕಾಮಗಾರಿಗೆ ಶಾಸಕ ವೆಂಕಟರಮಣಪ್ಪ ಭೂಮಿ ಪೂಜೆ ನೆರೆವೇರಿಸಿದ್ದಾರೆ. ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು ಈ ಕಾಮಗಾರಿ ಪ್ರಗತಿ ಕಾಣಲು ಇನ್ನೂ ಎಷ್ಟು ವರ್ಷ ಕಳೆಯಬೇಕೋ ಗೊತ್ತಿಲ್ಲ. 

2350 ಕೋಟಿ ವೆಚ್ಚದಲ್ಲಿ  ತುಂಗಭದ್ರಾ ಹಿನ್ನೀರು ಯೋಜನೆ 

ಫ್ಲೋರೈಡ್ ರಹಿತ ಶುದ್ಧ ನೀರು ಕಲ್ಪಿಸುವ ಸಲುವಾಗಿ 2350 ಕೋಟಿ ವೆಚ್ಚದಲ್ಲಿ ತುಂಗಭದ್ರಾ ಹಿನ್ನೀರು ಯೋಜನೆ ಪ್ರಗತಿಯಲ್ಲಿದೆ. ಈ ಸಂಬಂಧ ಸುಮಾರು 5 ಕೋಟಿ ವೆಚ್ಚದ ಟ್ಯಾಂಕ್‌ಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದು, ಈಗಾಗಲೇ ತಾಲೂಕಿನ 15  ಕಡೆ 200 ಲಕ್ಷ ಸಾಮರ್ಥ್ಯವಿರುವ ನೀರು ಸಂಗ್ರಹ ಟ್ಯಾಂಕ್‌ಗಳ ನಿರ್ಮಾಣ ಮತ್ತು ಪೈಪ್‌ಲೈನ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ, ಕೆಲಸ ಮಂದಗತಿ ಯಲ್ಲಿ ಸಾಗುತ್ತಿದ್ದು, ಈ ಯೋಜನೆ ಜಾರಿಗೆ ಇನ್ನೂ ಬಹಳಷ್ಟ ಕಾಲಾವಕಾಶಕ್ಕೆ ಕಾಯಬೇಕಿದೆ. 

ಈ ಬಗ್ಗೆ ಮಾತನಾಡಿದ ರೈತ ಮುಖಂಡ ದೊಟ್ಟಹಟ್ಟಿ ಪೂಜಾರಪ್ಪ ಅವರು, ಮಹಿಳಾ ಕೈಗಾರಿಕೆಗಳತ್ತ ಒಲವು ವ್ಯಕ್ತಪಡಿಸಬೇಕು. ನಗರ ಪ್ರದೇಶಗಳಿಗೆ ತೆರಳಿದ ವಲಸಿಗರನ್ನು ವಾಪಸು ಕರೆ ತರಬೇಕು. ತಾಂತ್ರಿಕ ಕೋರ್ಸ್ ಹಾಗೂ ಉನ್ನತಾ ಶಿಕ್ಷಣ ಕೇಂದ್ರಗಳನ್ನು ತೆರೆಯುವತ್ತ ಆಸಕ್ತ ವಹಿಸಿದರೆ ಖಂಡಿತ ತಾಲೂಕು ಪ್ರಗತಿ ಕಾಣಲು ಸಾಧ್ಯವಿದೆ ಎಂದು ತಿಳಿಸಿದ್ದಾರೆ. 

Follow Us:
Download App:
  • android
  • ios